ವಿರಾಜಪೇಟೆ, ಡಿ. 08: ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ, ಇಲಾಖೆಯ ಅಂಕಿ ಅಂಶದ ಪ್ರಕಾರ ಸುಮಾರು ಒಂದು ಲಕ್ಷದ ಹತ್ತು ಸಾವಿರ ಕಿಲೋಮೀಟರ್ ರಸ್ತೆ ಇದ್ದು, ಮತ್ತಷ್ಟು ಹೊಸ ರಸ್ತೆಗಳು ಈ ಪಟ್ಟಿಗೆ ಸೇರಲಿವೆ. ರಸ್ತೆಗಳ ಅಭಿವೃದ್ದಿ ಕಾಮಗಾರಿಯೂ ಈಗಾಗಲೇ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಿದೆ. ಸಾರ್ವಜನಿಕರೂ ಕೂಡ ನಮ್ಮೊಂದಿಗೆ ತಾಳ್ಮೆಯಿಂದ ಕೈ ಜೋಡಿಸಿದರೆ ಕೆಲವೇ ಸಮಯದಲ್ಲಿ ಕೊಡಗಿನಲ್ಲಿ ಸಮರ್ಪಕ ರಸ್ತೆ ನಿರ್ಮಾಣ ಸಾಧ್ಯವಾಗಲಿದೆ ಎಂದು ಶಾಶಕದ್ವಯರಾದ ಅಜ್ಜಿಕುಟ್ಟಿರ ಪೊನ್ನಣ್ಣ ಹಾಗೂ ಡಾ. ಮಂಥರ್ ಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ.
ನಡುಬಾಡೆ ನ್ಯೂಸ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮಾಹಿತಿ ಹಂಚಿಕೊಂಡ ಶಾಸಕದ್ವಯರು, ಕೊಡಗಿನ ಬಹುತೇಕ ರಸ್ತೆಗಳು ಹತ್ತಾರು ವರ್ಷಗಳಿಂದ ದುರಸ್ತಿಯೇ ಆಗಿಲ್ಲ ಎನ್ನುವುದು ನಮ್ಮ ಕಛೇರಿಗೆ ಬರುವ ಮನವಿ ಪತ್ರಗಳಿಂದ ತಿಳಿಯುತ್ತದೆ. ಇಷ್ಟು ವರ್ಷ ಕೊಡಗಿನ ರಸ್ತೆಗಳನ್ನೇ ಅಭಿವೃದ್ದಿ ಪಡಿಸದ ಕಾರಣ ಪ್ರಶ್ನಾರ್ಹವಾಗಿದೆ ಎಂದರು.
ಇದೀಗ ಜವಾಬ್ದಾರಿ ನಮ್ಮ ಮೇಲಿದ್ದು, ಕಳೆದ ಒಂದೂಮುಕ್ಕಾಲು ವರ್ಷದಲ್ಲಿ ಸುಮಾರು 210 ಕೋಟಿಗೂ ಹೆಚ್ಚಿನ ಅನುದಾನ, ಕೇವಲ ಕೊಡಗಿನ ರಸ್ತೆಗಳಿಗೆ ಮಾತ್ರ ವಿವಿಧ ಬಾಪ್ತಿನಲ್ಲಿ ಮಂಜೂರಾಗಿದ್ದು, ಕೆಲವು ಕಾಮಗಾರಿಗಳು ಮುಗಿದಿದ್ದರೆ, ಮತ್ತಷ್ಟು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಲವು ರಸ್ತೆಗಳ ಪಟ್ಟಿ ಅನುಮೋದನಾ ಹಂತದಲ್ಲಿದೆ. ನಡುವೆ ಬಂದ ಚುನಾವಣೆ ಮತ್ತು ವಾಡಿಕೆಗಿಂತ ಹೆಚ್ಚಿನ ಮಳೆಯ ಕಾರಣದಿಂದಲೂ, ಕಾಮಗಾರಿಗಳು ನಾವು ಅಂದುಕೊಂಡಷ್ಟು ವೇಗವಾಗಿ ಮುಗಿಸಲು ಸಾದ್ಯವಾಗಿಲ್ಲ. ಆದರೆ ಇದೀಗ ವೇಗ ಪಡೆದುಕೊಂಡಿದ್ದು, ಮುಂದೆ ಎಲ್ಲವನ್ನೂ ಹಂತ ಹಂತವಾಗಿ ಸರಿಪಡಿಸಲಾಗುವುದು ಎಂದರು.
ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸಿದರೆ ಕೆಲ ಸಮಯದಲ್ಲಿ ಕೊಡಗಿನಲ್ಲಿ ಸಮರ್ಪಕ ರಸ್ತೆ ನಿರ್ಮಾಣಕ್ಕೆ ಶ್ರಮಿಸುತ್ತೇವೆ ಎಂದ ಶಾಸಕರು, ಈಗಾಗಲೇ ಇಲಾಖೆಯ ಪಟ್ಟಿಯಲ್ಲಿರುವ ರಸ್ತೆಗಳ ಜೊತೆಗೆ ಗ್ರಾಮೀಣ ಭಾಗದಲ್ಲಿ ಇನ್ನೂ ರಸ್ತೆಗಳೇ ಕಂಡಿಲ್ಲದಂತ ಮತ್ತಷ್ಟು ಪ್ರದೇಶಗಳಿಗೂ ನಾವು ಪಕ್ಕಾ ರಸ್ತೆ ಸೌಲಭ್ಯ ಒದಗಿಸಲು ಬದ್ದರಾಗಿದ್ದು, ಸರ್ಕಾರಕ್ಕೂ ವಿಶೇಷ ಪ್ಯಾಕೆಜ್ನೊಂದಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದೇವೆ. ಸಾರ್ವಜನಿಕರು ಅಗತ್ಯ ರಸ್ತೆಗಳ ಮನವಿ ಪತ್ರಗಳನ್ನು ನೇರವಾಗಿ ಶಾಸಕರ ಕಛೇರಿಗೆ ಸಲ್ಲಿಸಿದರೆ, ಆದ್ಯಾತಾ ಅನುಸಾರ, ರಸ್ತೆ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲೆಯ ಜನರ ಕನಿಷ್ಟ ಮೂಲಭೂತ ಸೌಲಭ್ಯ ಪೂರೈಕೆಯೊಂದಿಗೆ, ಸಮಗ್ರ ಅಭಿವೃದ್ದಿಯೇ ನಮ್ಮ ಸರ್ಕಾರದ ಧ್ಯೇಯ ಎಂದ ಶಾಸಕದ್ವಯರು, ನಾಗರೀಕರ ಕನಿಷ್ಟ ಮೂಲಭೂತ ವ್ಯವಸ್ಥೆಗಳಾದ ರಸ್ತೆ, ಕುಡಿಯುವ ನೀರು ಮತ್ತು ವಿಧ್ಯುತ್ ಸೌಲಭ್ಯವನ್ನೂ ಸಂಪೂರ್ಣ ವ್ಯವಸ್ಥಿತವಾಗಿ ಕಲ್ಪಿಸಲು ಎಲ್ಲಾ ರೀತಿಯ ಯೋಜನೆಗಳು ಸಿದ್ದವಾಗಿದ್ದು, ಅಗತ್ಯ ಅನುದಾನವೂ ಬರುತ್ತಿದೆ. ಆದಷ್ಟು ತ್ವರಿತವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು.
ಇದರೊಂದಿಗೆ ಪಂಚ ಗ್ಯಾರಂಟಿಯ ಲಾಭವೂ ಕೂಡ ಎಲ್ಲಾ ನಾಗರೀಕರಿಗೂ ದೊರಕುತಿದ್ದು ಸಮರ್ಥ ಸಮಾಜದತ್ತ ತೆರಳುತಿದ್ದೇವೆ, ಸಾರ್ವಜನಿಕರು ಸರ್ಕಾರದ ಅರ್ಹ ಪ್ರತಿಫಲ ಹೊಂದಿಕೊಳ್ಳಲು ಏನೇ ಅಡಚಣೆಗಳಾದರೂ ನೇರವಾಗಿ ಶಾಸಕರ ಕಛೆರಿಯನ್ನು ಸಂಪರ್ಕಿಸಲು, ಇಬ್ಬರೂ ಶಾಸಕರು ಕೋರಿದ್ದಾರೆ.