ವಿರಾಜಪೇಟೆ, ಡಿ.09: ಸರ್ಕಾರದ ಎಲ್ಲಾ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಈ ವಿಚಾರದಲ್ಲಿ ಅನಗತ್ಯ ವಿಳಂಬ ಮಾಡುವ ಅಧಿಕಾರಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರಾಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಎಚ್ಚರಿಕೆ ನೀಡಿದ್ದಾರೆ.
ಕೊಡಗಿನಲ್ಲಿ, ಅಕಾಲಿಕ ಮಳೆ ಮತ್ತಿತರ ಅಡಚಣೆಗಳ ನಡುವೆಯೂ, ಈಗಾಗಲೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿದ್ದು, ಎಲ್ಲಾ ಇಲಾಖೆಗಳಿಗೂ, ಸಂಬಂಧ ಪಟ್ಟ ಯೋಜನೆಯ ಅನುಸಾರ ಅನುದಾನ ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಆಯಾ ಅಧಿಕಾರಿಗಳು ಮಾಡಬೇಕು.
ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ಸಾರ್ವಜನಿಕ ಸ್ಪಂದನೆಗೆ ವಿನಾ ಕಾರಣ ವಿಳಂಬ ಮಾಡುತ್ತಿರುವ ದೂರುಗಳು ಬರುತ್ತಿದ್ದು, ಸಂಬಂಧಿಸಿದರವರಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ, ಅಂತವರ ತಲೆದಂಡ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಯಾವುದೇ ಯೋಜನೆಗಳು, ಅದರಲ್ಲೂ, ರಸ್ತೆ, ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಸೇರಿದಂತೆ, ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳನ್ನೂ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ತರವಾದದ್ದು. ಸಾರ್ವಜನಿಕರನ್ನ ವಿನಾಕಾರಣ ಅಲೆಸುವುದನ್ನು ಸಹಿಸುವುದಿಲ್ಲ. ಅಂತ ಸಂದರ್ಭಗಳು ಬಂದರೆ, ಸಾರ್ವಜನಿಕರು ದಾಖಲೆ ಸಮೇತ ಲಿಖಿತ ದೂರು ನೀಡಿದರೆ, ಆಲಕ್ಷಿತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಹಾಗೇ ಸಾರ್ವಜನಿಕರೂ ಕೂಡ, ನಿಯಮಿತ ಅವಧಿಯಲ್ಲಿ, ಅಗತ್ಯ ಧಾಖಲಾತಿಗಳನ್ನು ಒದಗಿಸಿ, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕರು ಕೋರಿದ್ದಾರೆ.