Nadubadenews, ಅ.11: (ಸಂಪಾದಕೀಯ) ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೀಡಿಯೋ, ಇಮೇಜ್, ಪೋಸ್ಟ್‌ಗಳನ್ನ ನಾವೆಲ್ಲರೂ ಗಮನಿಸ್ತೇವೆ. ಅದರಲ್ಲಿ ಸಾಕಷ್ಟು ಸಂದರ್ಭಗಳಲ್ಲಿ, ಯಾರೋ ಹಾಕಿದ ಕಂಟೆಂಟ್ ಗಳನ್ನ, ಎಡಿಟೆಡ್ ವರ್ಷನ್‌ಗಳನ್ನ ಹಾಗೆ ಶೇರ್ ಅಥವಾ ಫಾರ್ವರ್ಡ್ ಮಾಡೋದು ಇತ್ತೀಚಿಗೆ ಒಂದು ಖಯಾಲಿಯಾಗಿದೆ.
ಯಾವುದೇ ಒಂದು ಪೋಸ್ಟ್ ಇಲ್ಲಾ ವಿಚಾರ ಬಂದಾಗ, ಅದನ್ನು ಕೂಲಂಕುಶವಾಗಿ ಪರಿಶೀಲಿಸದೆ, ಅದರ ಸತ್ಯಾಸತ್ಯತೆಯನ್ನು ತಿಳಿಯದೆ, ಹಾಗೆ ಮುಂದಕ್ಕೆ ಕಳಿಸುವುದರಿಂದ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಅದರಲ್ಲೂ ರಾಜಕೀಯ ನಾಯಕರ, ಪಕ್ಷಗಳ, ಸರ್ಕಾರಗಳ, ಅಧಿಕಾರಿಗಳ ಹೇಳಿಕೆಗಳನ್ನು, ಭಾವಚಿತ್ರಗಳನ್ನು, ವೀಡಿಯೋಗಳನ್ನು ಎಡಿಟ್ ಮಾಡಿ, ತಮಗೆ ಬೇಕಾದ ಹಾಗೆ ಪ್ರಕಟಿಸುವ, ಖದೀಮರ ಜಾಲ, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿದೆ.
ತಾವು ನೋಡಿದ ವಿಷಯದ ಸತ್ಯತೆಯನ್ನು ತಿಳಿಯದೆ, ಯಥಾವತ್ತಾಗಿ ಶೇರ್ ಮಾಡಿ, ಫಾರ್ವರ್ಡ್ ಮಾಡಿ, ನಾವೇ ಏನೋ ಸಾಧನೆ ಮಾಡಿದ ಹಾಗೆ, ಯಾರದೋ ವಿರುದ್ದ ಶೇಡು ತೀರಿಸಿಕೊಂಡ ಸಮಾಧಾನದಲ್ಲಿ, ನಿರಾಳಾಗಿಬಿಡುತ್ತೇವೆ.
ಆದರೆ ಇದರ ವಾಸ್ತವ ಸತ್ಯವನ್ನ ಪರಿಶೀಲಿಸಿ, ಅದು ನಕಲಿ ವಿಚಾರವಾದಾಗ, ಸಂಬಂಧಪಟ್ಟ ಸೈಬರ್ ಕ್ರೈಂ ಡಿಪಾರ್ಟ್ಮೆಂಟ್, ನಕಲಿ ಪೋಸ್ಟ್ ತಯಾರಕರು, ಅದನ್ನ ಶೇರ್ ಮಾಡಿದವರನ್ನೂ ಸೇರಿಸಿ ರುಬ್ಬಿ, ಬಟ್ಟೆಬಿಚ್ಚಿ, ಕಂಬಿ ಹಿಂದೆ ಕುಕ್ಕರಿಸಿದಾಗ, ಕಂಟೆಂಟ್ ಕ್ರಿಯೇಟರ್ ಆಗಲಿ, ನಾವು ಬೆಂಬಲಿಸುವ ಪಕ್ಷ ಅಥವಾ ನಾಯಕರಾಗಲಿ ಯಾರೂ ಬರುವುದಿಲ್ಲ.
ಆಗ ನಮ್ಮ ಹಿಂದೆ ನಿಲ್ಲುವವರು, ಆರ್.ಟಿ.ಸಿ ಹಿಡಿದು ವಕೀಲರೊಂದಿಗೆ ಬಂದು, ನಮ್ಮನ್ನು ಬಿಡಿಸುವವರು ನಮ್ಮ ಸಂಸಾರದವರೇ ಹೊರತು ನಮ್ಮ ಪಕ್ಷಗಳಲ್ಲ. ಹಾಗಾಗಿ ಯಾವುದೇ ವಿಚಾರವನ್ನು, ಸುಖಾಸುಮ್ಮನೆ ಕಣ್ಣು ಮುಚ್ಚಿ, ಫಾರ್ವರ್ಡ್ ಮಾಡುವ ಮುನ್ನ, ನಿಮ್ಮ ಮನೆಯಲ್ಲಿರುವ ವಯಸ್ಸಾದ ತಂದೆ, ತಾಯಿಯರನ್ನ, ಪತ್ನಿ ಮಕ್ಕಳನ್ನು ಅಥವಾ ನಿಮ್ಮ ಅವಲಂಬಿತರನ್ನು ಒಮ್ಮೆ ನೆನೆಸಿಕೊಳ್ಳಿ. ಮುಂದಿನ ಪರಿಣಾಮಗಳ ಪರಾಮರ್ಶೆ ಮಾಡಿ ಮುಂದುವರೆದರೆ, ಸ್ವಾಸ್ಥ್ಯ ಸಮಾಜಕ್ಕೆ ನಮ್ಮದು ಅಳಿಲು ಸೇವೆ ಸಿಗಬಹುದು…. ಯೋಚಿಸಿ… ಯೋಜಿಸಿ…. ಹಾಗೇ ಈ ವಿಚಾರವನ್ನ ಶೇರ್ ಮಾಡೋದನ್ನ ಮರೀಬೇಡಿ….