
ಹಾಕತ್ತೂರು; ಜು.15;(nadubadenews): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯದ ಹಾಕತ್ತೂರು ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ತೊಂಬತ್ತುಮನೆ ತ್ರಿನೇತ್ರ ಯುವಕ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ವಿಮಲ ವಹಿಸಿದ್ದರು. ತ್ರಿನೇತ್ರ ಯುವಕ ಸಂಘದ ಅಧ್ಯಕ್ಷರಾದ ಪಿ. ಪಿ. ಸುಕುಮಾರರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಮಹಿಳೆಯರು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಈ ಜ್ಞಾನ ವಿಕಾಸ ಕೇಂದ್ರ ಸಹಕಾರಿ ಆಗಿದೆ ಎಂದು ತಿಳಿಸಿದರು. ಹೆಚ್ಚು ಮಹಿಳೆಯರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಅವರು ಈ ಸಂದರ್ಭ ಕರೆಯಿತ್ತರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕು ಯೋಜನಾಧಿಕಾರಿಯವರಾದ ಪುರುಷೋತ್ತಮ ಅವರು ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಅವರವರ ಜೀವನದಲ್ಲಿ ಮತ್ತು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಬೆಳೆಸುತ್ತಾ ಬರುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವ ಬಗ್ಗೆ, ಸ್ವ ಉದ್ಯೋಗ ತರಬೇತಿಗಳನ್ನು ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವ ಬಗ್ಗೆ ತಿಳಿಸಿದರು.
ಕೇಂದ್ರದ ವಾರ್ಷಿಕ ವರದಿಯನ್ನು ಹಾಕತ್ತೂರು ಒಕ್ಕೂಟದ ಕಾರ್ಯದರ್ಶಿ ಹರಿಣಿ ಮಂಡನೆ ಮಾಡಿದರು. ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಹರಿಣಿ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಾಲಿನಿ, ಮೇಲ್ವಿಚಾರಕಿ ವಿದ್ಯಾ, ಸೇವಾಪ್ರತಿನಿಧಿ ಕವಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಪಂದನ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಡಿಕೇರಿ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾಲಿನಿಯವರು ನೆರವೇರಿಸಿ, ಸೇವಾಪ್ರತಿನಿಧಿ ಕವಿತಾ ಸ್ವಾಗತಿಸಿ, ವಂದಿಸಿದರು.