ವಿರಾಜಪೇಟೆ, ನ.09: ಕೇರಳದಿಂದ ಮಾಕುಟ್ಟ ಮಾರ್ಗವಾಗಿ, ವಿರಾಜಪೇಟೆ ಸೇರಿದಂತೆ ಕೊಡಗಿನ ನಾನಾ ಭಾಗಗಳಿಗೆ ಸರಬರಾಜಾಗುವ, ವಿವಿಧ ತಿನಿಸುಗಳಲ್ಲಿ, ಬಹುತೇಕ ಪದಾರ್ಥಗಳು ನಿಯಮ ಬಾಹಿರವಾಗಿ ತಯಾರಾಗುತಿದ್ದು, ತಯಾರಿಕಾ ಕಂಪೆನಿಗಳ ಹೆಸರನ್ನು ಕಂಡು ಹಿಡಿಯುವುದೇ ಇಲಾಖೆಗೆ ಸವಾಲಾಗಿ ಮಾರ್ಪಟ್ಟಿದೆ.
ಇತ್ತೀಚೆಗೆ ಸುದ್ದಿಯಲ್ಲಿರುವ ಈ ರೀತಿಯ ಆಹಾರ ಪದಾರ್ಥಗಳಲ್ಲಿ, ಕೇರಳದಿಂದ ಬರುವ, ಚೆಕ್ಕುಲಿ, ಚಿಪ್ಸ್, ಪರೋಟ, ಸಿಹಿ ತಿಂಡಿಗಳು ಸೇರಿದಂತೆ ಸುಮಾರು 110 ಆಹಾರ ಪದಾರ್ಥಗಳನ್ನು ತನಿಖೆಗೆ ಒಳಪಡಿಸಲಾಯಿತು. ಅದರಲ್ಲಿ ಸುಮಾರು 20 ಪದಾರ್ಥಗಳನ್ನು ಆರಂಭದಲ್ಲಿಯೇ ಯೋಗ್ಯವಲ್ಲದವೆಂದು ನಿರ್ಣಯಿಸಿ, 90+ ವಿಧದ ಆಹಾರ ಪೊಟ್ಟಣಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಹಿತು. ಪ್ರಯೋಗಲಯದ ವರದಿಯಲ್ಲಿ 35 ಪದಾರ್ಥಗಳೂ ತಿನ್ನಲು ಯೋಗ್ಯವಲ್ಲದವು ಎಂದು ಸಾಬೀತಾಗಿದ್ದು, ಇವುಗಳನ್ನು ಈಗಾಗಲೇ ಸಂಪೂರ್ಣ ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯದೆಲ್ಲಡೆ ಮಾರದಂತೆ ಆದೇಶಿಸಲಾಗಿದೆ. ಇದಾದ ನಂತರ ಮತ್ತೆ 12 ಪದಾರ್ಥಗಳನ್ನು ನಿನ್ನೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮುಂದಿನ 15ದಿನಗಳಲ್ಲಿ ಅವುಗಳ ಗುಣಮಟ್ಟ ತಿಳಿಯಲಿದೆ ಎಂದು ಆಹಾರ ಗುಣಮಟ್ಟ ಮಾಪನಾಧೀಕಾರಿ, ಅನಿಲ್ ಧವನ್ ಅವರು ತಿಳಿಸಿದ್ದಾರೆ.
ನಡುಬಾಡೆಯೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ದೂರು ಬರುತಿದ್ದು, ಇಲಾಖೆಕೂಡ ನಿರಂತರ ತನಿಖೆಯನ್ನು ಕೈಗೋಂಡಿದೆ. ಪ್ರಯೋಗಾಲಯದ ವರದಿಯ ಆಧಾರದಲ್ಲಿ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಸೂಚನೆಯ ಮೇರೆ, ಎಲ್ಲಾ ಅಸುರಕ್ಷಿತ ಪದಾರ್ಥಗಳ ಸಾಗಾಣೆಯನ್ನು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಮಾಕುಟ್ಟ ಚೆಕ್ ಪೋಸ್ಟಿನಲ್ಲಿಯೇ ತಡೆದು ಹಿಮ್ಮೆಟ್ಟಿಸುತಿದ್ದು, ಅಂತರಾಜ್ಯದ ಪ್ರಕರಣ ಆದ್ದರಿಂದ ಅಲ್ಲಿಯ ಕಂಪೆನಿಳ ವಿರುದ್ದ ನಾವು ಕ್ರಮ ತೆಗೆದು ಕೊಳ್ಳಲು ಅವಕಾಶ ಇಲ್ಲ. ಆದರೂ ಈಗಾಗಲೇ ಕೇರಳ ರಾಜ್ಯದ ಸಂಬಂದಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ ಮತ್ತು ಕರ್ನಾಟಕ ರಾಜ್ಯ ಆಹಾರ ಸುರಕ್ಷಾ ಆಯುಕ್ತರು ಕೂಡ, ಕೇರಳ ರಾಜ್ಯದ ಆಯುಕ್ತರಿಗೆ ಈಗಾಗಲೇ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೇರಳದಿಂದ ಬರುವ ನಿಷೇದಿತ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಎಲ್ಲಾ ವ್ಯಾಪಾರಿಗಳಿಗೂ ಸೂಚಿಸಲಾಗಿದೆ. ಆದರೂ ಈ ರೀತಿಯ ಆಹಾರ ತಯಾರಿಕಾ ಕಂಪೆನಿಗಳ ಹೆಸರುಗಳನ್ನು ಗುರುತಿಸುವುದೇ ಸವಾಲಿನ ಕಾರ್ಯವಾಗಿದೆ. ತಿನಿಸು ಪೊಟ್ಟಣಗಳ ಮೇಲೆ ಸರಿಯಾದ ಹೆಸರು ನಮೂದಿಸಲಾಗಿಲ್ಲ. ಬಹುಪಾಲು ತಯಾರಿಕರ ಹೆಸರೇ ಇಲ್ಲ. ದೂರವಾಣಿ ಮತ್ತು ನೋಂದಣಿ ಸಂಖ್ಯೆಗಳೂ ನಖಲಿಯಾಗಿದ್ದು, ಆ ಮೂಲಕವೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದರ ಪತ್ತೆ ಹಚ್ಚುವಿಕೆಗಾಗಿ, ಕಾನೂನು ಮಾಪನ ಇಲಾಖೆಯ ನೆರವು ಪಡೆಯುತಿದ್ದು, ಕೆಲವೇ ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಸಮರ್ಪಕ ತಯಾರಕರ ವಿವರ ಇಲ್ಲದ ವಸ್ತುಗಳನ್ನು ಮಾರಾಟ ಮಾಡಿದರೆ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈ ಗೊಳ್ಳಲಾಗುವುದು ಎಂದು ಅನಿಲ್ಧವನ್ ಹೇಳಿದ್ದಾರೆ.
ಇದು ಆಹಾರ, ಮತ್ತು ಆರೋಗ್ಯಕ್ಕೆ ಸಂಭಂದಿಸಿದ ಪ್ರಕರಣವಾದ್ದರಿಂದ, ಇಂತ ದುಷ್ಟಕೂಟದ ವಿರುದ್ದದ ಹೋರಾಟದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದ್ದು, ಅಂಗಡಿಗಳಲ್ಲಿ ಆಹಾರ ಪೊಟ್ಟಣಗಳನ್ನು ಕೊಳ್ಳುವಾಗ, ಎಚ್ಚರಿಕೆಯಿಂದ ಪರಿಶೀಲಸಬೇಕು ಮತ್ತು ಸಂಶಯಾಸ್ಪದ ವಸ್ತುಗಳು ಕಂಡುಬಂದರೆ ತಕ್ಷಣ ದೂರು ನೀಡಬೇಕೆಂದು ಅವರು ಕೋರಿದ್ದಾರೆ.