
ವಿರಾಜಪೇಟೆ; ಜು.09(nadubadenews): ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ ಈಗಾಗಲೇ 100ಕೋಟಿಯ ಕ್ರಿಯಾಯೋಜನೆ ಸಿದ್ದವಾಗಿದೆ, ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ 50ಕೋಟಿ ಅನುದಾನ ಮಂಜೂರು ಮಾಡಿದ್ದು, ಮಳೆ ನಿಂತ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಭರವಸೆ ನೀಡಿದರು.
ಇತ್ತೀಚೆಗೆ ಕ್ಷೇತ್ರಪ್ರವಾಸ ಮತ್ತು ಗೃಹಕಛೇರಿಯಲ್ಲಿ ಸಾರ್ವಜನಿಕರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಬಹುಪಾಲು ಮನವಿಗಳು ರಸ್ತೆಯ ಬಗ್ಗೆಯೇ ಬರುತಿದ್ದು, ಬಂದ ಎಲ್ಲಾ ಮನವಿಗಳ ಆದ್ಯತಾ ಪಟ್ಟಿ ತಯಾರಿಸಿ, ನೂರು ಕೋಟಿ ವೆಚ್ಚದ ರಸ್ತೆಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷೇಶ ಕಾಳಜಿಯಿಂದ 50ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದು, ಅದರ ಕ್ರಿಯಾ ಯೋಜನೆ ನಡೆಯುತ್ತಿದೆ. ಮಳೆ ನಿಂತ ತಕ್ಷಣ ನೂರೈವತ್ತು ಕೋಟಿಯ ಕಾಮಗಾರಿ ಗೈಗೆತ್ತಿಕೊಂಡು, ಉಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭೀವೃದ್ದಿ ಪಡಿಸಲಾಗುವುದು ಎಂದರು.
ಸಾರ್ವಜನಿಕರಿಗೆ ಉತ್ತಮ ರಸ್ತೆ ಸೇರಿದ ಮೂಲಭೂತ ಸೌಲಭ್ಯ ಒದಗಿಸುವು ಸರ್ಕಾರದ ಕರ್ತವ್ಯವಾಗಿದ್ದು, ನಮ್ಮ ಆದ್ಯತೆಯೂ ಆಗಿದೆ. ಈ ವರ್ಷ ಅನಿಯಮಿತ ಮತ್ತು ಅಕಾಲಿಕ ಮಳೆಯಿಂದಾಗಿ ಯೋಜಿತ ರಸ್ತೆಗಳನ್ನು ನಿಗಧೀತ ಅವಧಿಯಲ್ಲಿ ಪೂರೈಸಲು ಸಾದ್ಯವಾಗಿಲ್ಲ. ಮಳೆ ನಿಂತ ತಕ್ಷಣ ಕಾಮಗಾರಿ ಪ್ರಾರಂಬಿಸಲಾಗುವುದು. ಈಗಾಗಲೇ ರಸ್ತೆಗಾಗಿ ಅರ್ಜಿ ಕೊಟ್ಟಿರುವವರು ಮರು ಮನವಿ ಸಲ್ಲಿಸುವ ಅವಶ್ಯಕತೆ ಇಲ್ಲ. ಎಲ್ಲಾ ಅರ್ಜಿಗಳನ್ನು ಪಟ್ಟಿಮಾಡಲಾಗಿದೆ. ಮನವಿ ಪತ್ರ ಕೊಡದವರು ಕಛೇರಿಗೆ ಮನವಿ ಸಲ್ಲಿಸಿದರೆ ಆದ್ಯತೆಯನುಸಾರ ಕಾಮಗಾರಿ ಪೂರೈಸುವುದಾಗಿ ಭರವಸೆ ನೀಡಿದರು.