ವಿರಾಜಪೇಟೆ, ನ.26: ತರಗತಿ ಪಠ್ಯದೊಳಗೆ ಹುದುಗಿರುವ ವಿದ್ಯಾರ್ಥಿಗಳನ್ನು ಪಠ್ಯೇತರವಾಗಿ ನವೊಲ್ಲಾಸದೊಂದಿಗೆ ಹೊಸ ಹುರುಪು ತುಂಬುವ ಉದ್ದೇಶದಿಂದ, ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್ 27 ರಂದು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಾವೇರಿ ಕಾರ್ನಿವಾಲ್ ಜಿಲ್ಲಾಮಟ್ಟದ ಪೆಸ್ಟ್ ನಡೆಸಲಾಗುವುದು, ಎಂದು ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ ತಿಳಿಸಿದರು.
ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಿ ತರಗತಿ , ಪರೀಕ್ಷೆ , ಪಾಠದ ವಿಚಾರದಲ್ಲಿ ಹುದುಗಿ ಹೋಗಿರುವ ವಿದ್ಯಾರ್ಥಿಗಳಿಗೆ ನವೊಲ್ಲಾಸ ನೀಡುವುದರೊಂದಿಗೆ ಜಿಲ್ಲಾಧ್ಯಂತ ಪ್ರೌಢಶಾಲಾ ವಿಭಾಗದಲ್ಲಿರುವ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಸೃಷ್ಟಿಸುವ ಉದ್ದೇಶವನ್ನು ಈ ಕಾರ್ಯಕ್ರಮವು ಹೊಂದಿದ್ದು. ಫ್ರೌಡ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಈ ರೀತಿಯ ಫೆಸ್ಟ್ ಗಳು ನಡೆಯುವುದು ತೀರ ಅಪರೂಪ, ಜಿಲ್ಲಾ ಮಟ್ಟದಲ್ಲಿರುವ ಹೆಚ್ಚಿನ ಪ್ರತಿಭೆಗಳನ್ನು ಒಂದಡೆ ಸೇರಿಸುವ ಹಾಗೂ ವಿದ್ಯಾರ್ಥಿಗಳು ಒತ್ತಡದಿಂದ ಹೊರಬಂದು ಸಂಭ್ರಮದಿಂದ ಪಾಲ್ಗೊಳ್ಳುವಂತೆ ಮಾಡಲು , ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು ಕಳೆದ 5 ವರ್ಷಗಳಿಂದ ಸತತವಾಗಿ ‘ಕಾವೇರಿ ಕಾರ್ನಿವಾಲ್ ಫೆಸ್ಟ್’ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ವರ್ಷವೂ ನವೆಂಬರ್ 27ರಂದು ಪೆಸ್ಟ್ ನಡೆಸಲು ತೀರ್ಮಾನಿಸಲಾಗಿದ್ದು, ಜಿಲ್ಲಾಧ್ಯಂತ ಎಲ್ಲಾ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಫೆಸ್ಟ್ ಯಶಸ್ವಿಗೊಳಿಸಿಕೊಡಬೇಕೆಂದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕರಾದ ಶ್ರೀಮತಿ ದಮಯಂತಿ ಅವರು ಮಾತನಾಡಿ ಈ ವರ್ಷ ಕಾವೇರಿ ಕಾರ್ನಿವಾಲ್ ಪ್ರಯುಕ್ತ ಫ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಸಂಸ್ಕೃತಿಕ ಸ್ಪರ್ದೇಯನ್ನೂ ನಡೆಸುತಿದ್ದು, ಗುಂಪು ನೃತ್ಯ, ಪ್ರತಿ ಶಾಲೆಯಿಂದ 8 ಸದಸ್ಯರನ್ನ ಒಳಗೊಂಡ ಒಂದು ತಂಡ, ಜಾನಪದ ಗೀತೆ ಸಮೂಹ ಗಾಯನ ಪ್ರತಿ ಶಾಲೆಯಿಂದ 6 ಸದಸ್ಯರ ಒಂದು ತಂಡ . ಮಾದರಿ ತಯಾರಿ, ಪ್ರತಿ ಶಾಲೆಯಿಂದ 4 ಸದಸ್ಯರನ್ನು ಒಂದು ತಂಡ. ಬಾಲಕರಿಗೆ ಹಾಕಿ 5 ಸದಸ್ಯರ ಒಂದು ತಂಡ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಪ್ರತಿ ಶಾಲೆಯಿಂದ 9 ಸದಸ್ಯರ ತಲಾ ಒಂದೊಂದು ತಂಡಕ್ಕೆ ಅವಕಾಶವನ್ನು ನೀಡಲಾಗಿದ್ದು, ಯಾವುದೇ ರೀತಿಯ ನೊಂದಣಿ ಶುಲ್ಕವಿಲ್ಲದೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ವಿಜೇತರಿಗೆ ಆಕರ್ಷಕವಾದ ಪಾರಿತೋಷಕಗಳನ್ನು ನೀಡಲಾಗುತ್ತದೆ ಎಂದರು.
ಇದರೊಂದಿಗೆ ನಮ್ಮ ಕಾಲೇಜಿನ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳು ತಿಂಡಿ ತಿನಿಸು ತಂಪು ಪಾನೀಯಗಳ ಒಟ್ಟು 23 ಮಳಿಗೆಗಳನ್ನು ಇರಿಸುತ್ತಿದ್ದು. “ಕಲಿಕೆಯೊಂದಿಗೆ ಗಳಿಕೆ”, ಎಂಬ ದ್ಯೇಯದೊಂದಿಗೆ ಕೊಡಗಿನ ಸಾಂಪ್ರದಯಿಕ ತಿನಿಸುಗಳನ್ನು ಮಾರಲು ಆದ್ಯತೆಯನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಲ್ಲಿ ವ್ಯಾಪಾರ ವಹಿವಾಟಿನ ಬಗ್ಗೆ ಜ್ಞಾನವನ್ನು ಪಡೆದು ಮುಂದೆ ಸ್ವಾವಲಂಬಿಗಳಾಗಿ ಜೀವನವನ್ನು ನಡೆಸಲಿ ಎಂಬ ಉದ್ದೇಶದಿಂದ, ವಿದ್ಯಾರ್ಥಿಗಳಿಂದ ಈ ಅಂಗಡಿ ಮಳಿಗೆಗಳನ್ನು ಇರಿಸಲಾಗುತ್ತಿದೆ. ಪೋಷಕರು ಸಾರ್ವಜನಿಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರಯಕ್ರಮಕ್ಕೆ ಉತ್ತೇಜನ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಡಯಾನ ಸೋಮಯ್ಯ ಶ್ರೀಮತಿ ಗಾಯತ್ರಿ ತಿಮ್ಮಯ್ಯ, ಶ್ರೀಮತಿ ಅನುಪಮ ತಿಮ್ಮಯ್ಯ ಉಪಸ್ಥಿತರಿದ್ದರು.