ಬೇಕೆನ್ನುವ ಛಲವೊಂದಿದ್ದರೆ, ಬಡತನ, ಅಂಗವಿಕಲತೆ ಇನ್ಯಾವುದೇ ಕೊರತೆಗಳಿದ್ದರೂ, ಸಾಧಿಸಸಾಧಿಸಬಹುದು ಎಂಬುದನ್ನ, ಎಡಕಾಲಿನ ಸ್ವಾದೀನವನ್ನ ಪೋಲಿಯೋದಿಂದ ಕಳೆದು ಕೊಂಡರೂ, ತನ್ನ ಬುಜಬಲವನ್ನು ಬಳಸಿ, ಸಾಧಿಸಿ, ಮಾದರಿಯ ಹಾದಿಯಲ್ಲಿದ್ದಾರೆ, ಈ ಪಂಜಪೈಲ್ವಾನ್.
ಅಂಗವಿಕತೆಯ ಜೊತೆಗೆ, ಇರುವ ಸಣ್ಣ ಕೆಲಸದಲ್ಲಿ ಸಂಸಾರ ನಿರ್ವಹಿಸುವುದಲ್ಲದೆ, ತನ್ನ ಕನಸಾದ, ಕ್ರೀಡಾ ಸಾಧನೆಗೆ, ತನ್ನ ದುಡಿಮೆಯ ಅಲ್ಪ ಹಣವನ್ನೇ ವ್ಯಯಿಸುತ್ತಾ ಸಾಧನೆಯ ಮೆಟ್ಟಿಲೇರುತ್ತಿರುವ, ಈ ಬಹುಮುಖ ಕ್ರೀಡಾಪಟುವಿಗೆ, ಜನ ಸಹಾಯದ ಜೊತೆಗೆ ಧನ ಸಹಾಯವೂ ದೊರೆತರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗರಿಮೆ ಕೊಡಗಿನ ಹೆಸರಿಗೆ ಸೇರಿಕೊಳ್ಳಬಹುದು.
ಇವರು ಮಡಿಕೇರಿ ತಾಲೂಕು, ಸಿದ್ದಾಪುರ ಸಮೀಪದ, ಅರೆಕಾಡು ಗ್ರಾಮದ ನಿವಾಸಿ ಹಸ್ಸನ್ ಕೆ.ಎಂ. ಬಡತನದಲ್ಲಿದ್ದರೂ ಸ್ವಂತ ಖರ್ಚಿನಲ್ಲಿ ವಿಶೇಷಚೇತನರ ರಾಷ್ಟ್ರಮಟ್ಟದ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದು, ಇದೀಗ ಅಂತರಾಷ್ಟ್ರೀಯ ಸಾಧನೆಗೆ ಹೊರಟು ನಿಂತಿದ್ದಾರೆ.
ಕೆ. ಕೆ. ಮೊಹಮ್ಮದ್ ಮತ್ತು ಕದೀಜ ಕೆ. ಕೆ. ವಂಪತಿಯ ಪುತ್ರನಾದ ಕೆ. ಎಂ. ಹಸನ್ 20.06.1988ರಂದು ಜನಿಸಿದ ಹಸ್ಸನ್, ಪೋಲಿಯೊದಿಂದ ಎಡಗಾಲಿನ ಸ್ವಾಧೀನ ಕಳೆದುಕೊಂಡಿದ್ದರೂ, ತನ್ನ ಪ್ರಾಥಮಿಕ ಶಿಕ್ಷಣವನ್ನ ಅರೆಕಾಡು ಸರಕಾರಿ ಶಾಲೆಯಲ್ಲಿ,ರೌಡ ಶಿಕ್ಷಣವನ್ನ ಎಮ್ಮೆಮಾಡು ಪ್ರೌಢಶಾಲೆಯಲ್ಲಿ ಮುಗಿಸಿ, ಬೆಂಗಳೂರಿನಲ್ಲಿ ಅರ್ಥೋಟಿಕ್ಸ್ ಪ್ರಾಸ್ಪೆಟಿಕ್ಸ್ ಫಿಸಿಯೋ ಥೆರಪಿಯಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ.
2014ರಿಂದ ಬೆಂಗಳೂರಿನ ತರಬೇತುದಾರ, ದೀಪಕ್ ಅವರ ಸಹಾಯದಿಂದ, ಆನ್‌ಲೈನ್ ಮೂಲಕ ಪಂಜಕುಸ್ತಿ ಕಲಿತು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹಲವು ಪದಕಗಳನ್ನು ತನ್ನದಾಗಿಸಿ ಕೊಂಡಿರುವ ಹಸ್ಸನ್ ಕೆ.ಎಂ., 19-03-2023ರಲ್ಲಿ ಹಾಸನದಲ್ಲಿ ನಡೆದ 9ನೇ ರಾಜ್ಯ ಮಟ್ಟದ ಪಂಜಕುಸ್ತಿಯಲ್ಲಿ ಭಾಗವಹಿಸಿ ಚಿನ್ನದ ಪದಕ, 1-06-2023ರಿಂದ 06.06.2023 ರವರೆಗೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ 1ನೇ ರಾಷ್ಟ್ರ ಮಟ್ಟದ ಪಂಜಕುಸ್ತಿಯಲ್ಲಿ ಕಂಚಿನ ಪದಕವನ್ನು: 56 ಕೆ.ಜಿ. ವಿಭಾಗದಲ್ಲಿ ಪಡೆದಿರುತ್ತಾರೆ. 18-10-2023 ರಂದು ಮೈಸೂರಿನಲ್ಲಿ ನಡೆದ 7ನೇ ವಿಶೇಷಚೇತನ ಪುರುಷರ ಪಂಜಕುಸ್ತಿಯಲ್ಲಿ, 3ನೇ ಸ್ಥಾನಗಳಿಸಿ, ಕಂಚಿನ ಪದಕ ಗಳಿಸಿದ್ದಾರೆ. 7-01-2024 ರಂದು ನಡೆದ ವಿಕಲಚೇತನರ ಪ್ಯಾರಾಪಂಜ ಕುಸ್ತಿಯಲ್ಲಿ ಭಾಗವಹಿಸಿ ಬಲಗೈ ಮತ್ತು ಎಡಗೈ ವಿಭಾಗದಲ್ಲಿ ಒಂದು ಚಿನ್ನದ ಪದಕ, 6-06-2024 ರಿಂದ 10.6.2024ರವರೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ಯಾರಾ ಪಂಜಕುಸ್ತಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಡಗೈ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಹಸ್ಸನ್ ಅವರು ಕೇವಲ ಪಂಜ ಕುಸ್ತಿಯಲ್ಲದೆ ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲೂ ಭಾಗವಹಿಸಿ, ಚಿನ್ನದ ಪದಕ ಗಳಿಸಿದ್ದಾರೆ. ವಿಕಲಚೇತನರ ಭಾರದಗುಂಡು ಎಸೆತದ ಸ್ಪರ್ಧೆಯಲ್ಲೂ ಸ್ಪರ್ಧಿಸಿ ತೃತೀಯ ಸ್ಥಾನಗಳಿಸಿರುತ್ತಾರೆ.
ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಅರೆಕಾಡಿನಲ್ಲಿ ವಾಸ ಮಾಡುವ ಹಸ್ಸನ್ ಅವರು, ಗ್ರಾಮೀಣ ಅಂಗವಿಕಲರ ಪುನರ್ ವಸತಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ, ತನ್ನ ಕನಸಿನ ಸಾಧನೆಯ ಹಾದಿಯಲ್ಲಿ ಬಡತನದ ಬೇಗೆಯಲ್ಲಿಯೂ ಮುನ್ನುಗ್ಗುತ್ತಿದ್ದಾರೆ.
ದಿನಾಂಕ 19/10/24 ರಿಂದ 26/10/24ರವರೆಗೆ ಮುಂಬೈನಲ್ಲಿ ನಡೆಯುವ ಅಂತರರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ದೆಗೆ ಆಯ್ಕೆಯಾಗಿರುವ, ಹಸ್ಸನ್ ಅವರು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ದಾನಿಗಳ ನಿರೀಕ್ಷೆಲ್ಲಿದ್ದಾರೆ.
ಬಡತನ, ಅಂಗವೈಕಲ್ಯವನ್ನೂ ಮೆಟ್ಟಿ ಸಾಧನೆಯ ಹೆಜ್ಜೆಯಿಡುತ್ತಿರುವ ಗ್ರಾಮೀಣ ಛಲಗಾರ, ಹಸ್ಸನ್ ಕೆ.ಎಂ. ಅವರಿಗೆ ದಾನಿಗಳು ನೆರವಾಗಿ ಪ್ರೋತ್ಸಾಹಿಸಿದರೆ, ಕೊಡಗು ಮತ್ತೊಂದು ಕ್ರೀಡಾ ತಾರೆಯನ್ನು ದೇಶಕ್ಕೆ ಅರ್ಪಿಸಲು ಸಹಕಾರಿ ಆಗಬಹುದು.
ಸಮಸ್ಯೆಗೇ ಸವಾಲಾಗಿ ಸಾಗುತ್ತಿರುವ, ಹಸ್ಸನ್‌ರ ಬಾಳು ಹಸನಾಗಿ, ಕಂಡ ಕನಸು ನನಸಾಗಿ, ಕ್ರೀಡಾ ಇತಿಹಾಸ ಪುಟದಲ್ಲಿ ಅಜರಾಮರವಾಗಿರಲಿ ಎಂದು ನಡುಬಾಡೆನ್ಯೂಸ್‌ನ ಹಾರೈಕೆ.
ಹಸ್ಸನ್ ಕೆ. ಎಂ. ಅವರಿಗೆ ಸಹಾಯ ಮಾಡಲಿಚ್ಚುಸುವವರು, 81052088682 ಸಂಖ್ಯೆಯಲ್ಲಿ ಅವರನ್ನ ಸಂಪರ್ಕಿಸಬಹುದು.