Site icon nadubadenews.com

ವನ್ಯಜೀವಿ ಸಂಘರ್ಷಕ್ಕೆ ಅರಣ್ಯಾಧಿಕಾರಿಗಳೇ ನೇರ ಹೊಣೆ, ಇನ್ನೂ ಎಷ್ಟು ಹೆಣ ಲೆಕ್ಕ ಹಾಕಬೇಕು..?! ಸಂಕೇತ್ ಪೂವಯ್ಯ ಆಕ್ರೋಶ …

ವನ್ಯಜೀವಿ ಸಂಘರ್ಷಕ್ಕೆ ಅರಣ್ಯಾಧಿಕಾರಿಗಳೇ ನೇರ ಹೊಣೆ, ಇನ್ನೂ ಎಷ್ಟು ಹೆಣ ಲೆಕ್ಕ ಹಾಕಬೇಕು..?! ಸಂಕೇತ್ ಪೂವಯ್ಯ ಆಕ್ರೋಶ …
Spread the love
ವನ್ಯಜೀವಿ ಸಂಘರ್ಷಕ್ಕೆ ಅರಣ್ಯಾಧಿಕಾರಿಗಳೇ ನೇರ ಹೊಣೆ, ಇನ್ನೂ ಎಷ್ಟು ಹೆಣ ಲೆಕ್ಕ ಹಾಕಬೇಕು..?! ಸಂಕೇತ್ ಪೂವಯ್ಯ ಆಕ್ರೋಶ …

            ವಿರಾಜಪೇಟೆ, ಮೇ.23: (NadubadeNews):  ಕೊಡಗಿನಲ್ಲಿ ವನ್ಯಪ್ರಾಣಿ ಮತ್ತು ಮಾನವನ ನಡುವಿನ ಸಮಸ್ಯೆಗೆ ಅರಣ್ಯಾಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರವೇ ನೇರ ಕಾರಣ ಎಂದು, ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಆಕ್ರೋಷ ಹೊರಹಾಕಿದ್ದಾರೆ.

            ಕಾಂಗ್ರೆಸ್‌ನ ಹಿರಿಯ ನಾಯಕರೂ ಆಗಿರುವ, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ತಮ್ಮದೇ ಇಲಾಖೆ ಅಧಿಕಾರಿಗಳ ವಿರುದ್ದ ಆರೋಪ ಮಾಡಿರುವುದು ಸಂಚಲನ ಮೂಡಿಸಿದೆ.

            ನಿನ್ನೆ ಮಡಿಕೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಂಕೇತ್ ಪೂವಯ್ಯ ನಂತರ ನಡುಬಾಡೆಯೊಂದಿಗೆ ಮಾತನಾಡಿ ತಮ್ಮ ಅಸಮಾಧಾನ ಹೊರಹಾಕಿದರು.  ಇಡೀ ರಾಜ್ಯದಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ನಡುವೆ ಸಂಘರ್ಷದಲ್ಲಿ ಕೊಡಗು ಮುಂಚೂಣಿಯಲ್ಲಿದೆ. ಒಂದುತಿಂಗಳಿಗೆ ಮೂರು ಅಮಾಯಕರ ಸಾವಾಗುತ್ತಿದೆ. ಜಾನುವಾರಗಳ ಸಾವಿಗೆ ಲೆಕ್ಕವೇ ಇಲ್ಲದಾಗಿದೆ.  ಪ್ರತೀ ಬಾರಿ ಸಾವು-ನೋವು ಸಂಭವಿಸಿದಾಗ, ಪರಿಹಾರದ ಚೆಕ್ ಹಿಡಿದು ಬರುವ ಅಧಿಕಾರಿಗಳು, ಸಾವಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ಸತ್ತಿರುವ ಜೀವವನ್ನು ಹಣದಿಂದ ಅಳೆಯುವ ಮೂಲಕ, ಅದಕ್ಕೆ ಪರಿಹಾರದ ರೂಪದಲ್ಲಿ ಬೆಲೆಕಟ್ಟಲಾಗುತ್ತದೆ. ಇಷ್ಟಕ್ಕೇ ಅಧಿಕಾರಿಗಳ ಜವಾಬ್ದಾರಿ ಮುಗಿಯಿತು ಎಂಬಂತಾಗಿದೆ. ಆದರೆ ತಮ್ಮ ಕುಟುಂಬದ ಆಸರೆಯನ್ನೋ, ಅವಲಂಬಿತರನ್ನೋ ಕಳೆದುಕೊಂಡವರ ಮಾನಸಿಕ ಯಾತನೆ ಅರಣ್ಯರೋಧನೆಯಾಗಿದೆ ಎಂದು ಸಂಕೇತ್ ಪೂವಯ್ಯ  ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದರು. 

ತಾನೂ ಪ್ರತಿಭಾರಿಯೂ ಘಟನಾ ಸ್ಥಳಕ್ಕೆ, ಸಾವಿನ ಮನೆಗೆ, ಆಸ್ಪತ್ರೆಗೆ ಭೇಟಿ ನೀಡುತ್ತೇನೆ, ಅಲ್ಲಿಯ ವಾಸ್ತವ ಪರಿಸ್ಥಿತಿ ನನಗೆ ಅರಿವಿದೆ. ಅಮಾಯಕ ಮುಗ್ದ ನಾಗರೀಕರನ್ನು ಸರ್ಕಾರ ಪ್ರತೀ ಭಾರಿಯೂ ಅಣಕಿಸಿದ ಅನುಭವ ಆಗುತ್ತದೆ. ಯಾವುದೇ ಸರ್ಕಾರ, ಪ್ರತಿನಿಧಿಗಳು ಅಧಿಕಾರಕ್ಕೆ ಬಂದರೂ, ಕಾರ್ಯಾಂಗದ ಭಾಗವಾಗಿರುವ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ.  ಕೆಲವೊಂದಿಷ್ಟು ಅಧಿಕಾರಿಗಳನ್ನು ಎತ್ತಂಗಡಿ ಮಾಡದೇ ಇಲಾಖೆಗೆ ಉಳಿಗಾಲವಿಲ್ಲ, ಇವೆಲ್ಲ ನಡೆಯಬೇಕಾದರೆ ಇನ್ನೂ ಎಷ್ಟು ಸಾವುನೋವುಗಳು ಸಂಭವಿಸಬೇಕು  ಎಂದು ಹರಿಹಾಯ್ದರು.

            ಮುಂದುವರೆದು ಮಾತನಾಡಿದ ಅವರು, ಕಳೆದ 28 ವರ್ಷಗಳಿಂದ ಸಾಮಾಜಿಕ ಬದುಕಿನಲ್ಲಿ ಇರುವ ತಾನು, ಅರಣ್ಯ ಇಲಾಖೆಯ ಸಂಪೂರ್ಣ ಹೊರ-ಹೊರಗನ್ನು ಅರಿತಿದ್ದೇನೆ, ಅಧಿಕಾರಿಗಳ ಭ್ರಷ್ಟಾಚಾರದ ಮೂಲ ತಿಳಿದಿದೆ. ವಿಪರೀತ ವನ್ಯ ಜೀವಿ ಹಾವಳಿ ಇರುವ ಕೊಡಗಿಗೆ  ಹೆಚ್ಚುವರಿ ಅನುದಾನವೂ ಬರುತ್ತಿದೆ. ಆದರೆ ಆ ಅನುದಾನದ ಸಮರ್ಪಕ ಬಳಕೆ ಆಗುತಿಲ್ಲ. ಸೋಲಾರ್ ಬೇಲಿ ಮತ್ತು ರೈಲ್ವೇ ಬ್ಯಾರಿಕೇಡ್ ಅಳವಡಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಜಿಲ್ಲೆಯಲ್ಲಿ ಒಂದು ಕೋಟಿ ಸಸಿ ನೆಟ್ಟಿರುವುದಾಗಿ ದಾಖಲೆಯಲ್ಲಿ ತೋರಿಸಲಾಗಿದೆ,  ಆದರೆ ಅಷ್ಟೊಂದು ಗಿಡ ನೆಡಲು ಕೊಡಗಿನಲ್ಲಿ ಸ್ಥಳಾವಕಾಶ ಎಲ್ಲಿದೆ ಎನ್ನುವುದನ್ನುಅರಣ್ಯ ಅಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ. ಅರಣ್ಯದೊಳಗೆ ನೀರಿನ ಕೊಳ  ನಿರ್ಮಿಸಿರುವ, ವನ್ಯ ಪ್ರಾಣಿಗಳ ಮೇವಿನ ಸಸ್ಯಗಳನ್ನು ಬೆಳೆಸಿರುವ  ಕುರಿತು ದಾಖಲೆಗಳಿವೆ ಆದರೆ ಎಲ್ಲಿ ಯಾವಾಗ ಮಾಡಲಾಗಿದೆ ಎಂಬುದರ ಕುರಿತು ಸ್ಥಳ ಮಹಜರು ನಡೆಯಬೇಕು. ಆಂತರಿಕ ಆಡಿಟ್ ನಡೆಯಬೇಕು ಎಂದು ಆಗ್ರಹಿಸಿದ ಸಂಕೇತ್ ಪೂವಯ್ಯ ಅವರು ಮುಂದಿನ ವನ್ಯಜೀವಿ ಮಂಡಳಿಸಭೆಯಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸಿ, ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು. ನಂತರ ಲೋಕಾಯುಕ್ತಕ್ಕೆ ದೂರು ನೀಡಿ, ಉಚ್ಚನ್ಯಾಯಾಲಯದಲ್ಲಿ ಧಾವೆ ಹೂಡುವುದಾಗಿ ಹೇಳಿದರು. 

            ಸಂಕೇತ್ ಪೂವಯ್ಯ ಅವರು, ತಮ್ಮದೇ ಸರ್ಕಾರದಲ್ಲಿ, ತಾವೇ ಪ್ರತಿನಿಧಿಸುವ ಇಲಾಖೆಯ ಬಗ್ಗೆ ತಾವೇ ಅಸಮಧಾನ ಹೊರಹಾಕಿದ್ದು, ಸರ್ಕಾರಕ್ಕೋಂದು ದಿಟ್ಟ ಪ್ರಶ್ನೆಯಾಗಿದೆ. ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಮತ್ತು ಸರ್ಕಾರ ಇಲಾಖೆಯೊಳಗಿನ ಭ್ರಷ್ಟಾಚಾರಕ್ಕೆ ಛಾಟಿ ಬೀಸಲಿದೆಯಾ ಕಾದು ನೋಡಬೇಕಿದೆ.

Exit mobile version