Nadubadenews, ಬೆಂಗಳೂರು ಅ.22: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು, ಅಕ್ರಮ ಪಡಿತರ ಚೀಟಿಗಳನ್ನು ಗುರುತಿಸಿ ರದ್ದು ಮಾಡುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ 13,87,639 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಿಕಾಸಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 13,87,639 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಆರು ತಿಂಗಳಿನಿಂದ ಪಡಿತರ ಪಡೆಯದ 2,75,667, ಆದಾಯ ತೆರಿಗೆ ಪಾವತಿ ಮಾಡುವ 98,485, ಆದಾಯ ಮಿತಿ ಹೆಚ್ಚಿರುವ 10,09,478 ಪಡಿತರ ಚೀಟಿಗಳು ಸೇರಿವೆ ಎಂದರು.
2023-24ನೆ ಸಾಲಿನಲ್ಲಿ ಹೊಸ ಪಡಿತರ ಚೀಟಿ ಕೋರಿ 2,95,986 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 2,30,549 ಅರ್ಹ ಅರ್ಜಿಗಳಿದ್ದವು. 1,48,533 ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಿದ್ದೇವೆ. 65,437 ಅರ್ಜಿಗಳನ್ನು ತಿರಸ್ಕರಿಸಿದ್ದೇವೆ. 82,016 ವಿತರಣೆಗೆ ಬಾಕಿಯಿವೆ. ಇವುಗಳನ್ನು ಪರಿಶೀಲಿಸಿದರೆ ಕನಿಷ್ಠ 10 ರಿಂದ 12 ಲಕ್ಷ ಅನರ್ಹ ಪಡಿತರ ಚೀಟಿ ಪತ್ತೆಯಾಗಬಹುದು. ಆನಂತರ ಅನರ್ಹ ಕಾರ್ಡುಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಕಾರ್ಡುಗಳನ್ನು ನೀಡಲು ಮುಂದಿನ ದಿನಗಳಲ್ಲಿ ಹೊಸ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯಾ ಅಂತ ಈ ರೀತಿ ಚೆಕ್ ಮಾಡಿಕೊಳ್ಳಿ
ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ
ಮೆನು ಪಟ್ಟಿಯಿಂದ, “e-Services” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
“e-Ration card” ಲಿಂಕ್ ಮೇಲೆ ಕ್ಲಿಕ್ ಮಾಡಿ.
“Village list” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ಮಾಹಿತಿಯನ್ನು ಆಯ್ಕೆಮಾಡಿ-
ಜಿಲ್ಲೆ
ತಾಲ್ಲೂಕು
ಗ್ರಾಮ ಪಂಚಾಯತ್
ಗ್ರಾಮ
“ಗೋ” ಬಟನ್ ಕ್ಲಿಕ್ ಮಾಡಿ.
ಪಡಿತರ ಚೀಟಿದಾರರ ಪಟ್ಟಿ ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.