ವಿರಾಜಪೇಟೆ, ಅ. 08: (ಕಿಶೋರ್ ಕುಮಾರ್ ಶೆಟ್ಟಿ) : ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ 14 ವರ್ಷ ಒಳಗಿರುವ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸಿದ ಕೊಡಗು ಜಿಲ್ಲಾ 14 ವರ್ಷ ಒಳಗಿರುವ ಬಾಲಕರ ತಂಡವು ತನ್ನ ಎದುರಾಳಿ ಹಾಸನ ತಂಡವನ್ನು ಮಣಿಸಿ ವಿಜಯ ಮಾಲೆಗೆ ಕೊರಳೊಡ್ಡಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ 14 ವರ್ಷ ಒಳಗಿರುವ ಮತ್ತು 17 ವರ್ಷ ಒಳಗಿರುವ ಬಾಲಕರ ಕ್ರಿಕೆಟ್ ಪಂದ್ಯಾಟಗಳು ಉಡುಪಿ ಜಿಲ್ಲೆಯ ಬ್ರಹ್ಮಾವರ ಶಾರದಾ ಶಾಲೆಯ ಮೈದಾನದಲ್ಲಿ ಅಯೋಜಿಸಿತು.
ತಾ 07 ಮತ್ತು 08 ರಂದು ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರತೀ ಜಿಲ್ಲೆಯ ತಂಡಕ್ಕೆ 10 ಓವರ್ ನೀಡಲಾಗಿತ್ತು. ಪ್ರತಿ ತಂಡಕ್ಕೆ ಮೂರು ಸುತ್ತುಗಳ ಪಂದ್ಯಾಟ ನಿಗದಿಗೊಳಿಸಲಾಗಿತ್ತು. ಕೊಡಗು ಜಿಲ್ಲಾ ತಂಡವು ತನ್ನ ಮೊದಲ ಸುತ್ತಿನಲ್ಲಿ ಮಂಡ್ಯ ತಂಡವನ್ನು ಸೋಲಿಸಿ, ಎರಡನೆ ಸುತ್ತಿಗೆ ಆರ್ಹತೆ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ತನ್ನ ಎದುರಾಳಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ, ಉಡುಪಿ ಜಿಲ್ಲಾ ತಂಡವನ್ನು ಮಣಿಸಿ, ಫೈನಲ್ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟ ಹಾಸನ ಜಿಲ್ಲಾ ತಂಡ ಮತ್ತು ಕೊಡಗು ಜಿಲ್ಲಾ ತಂಡದ ಮಧ್ಯೆ ನಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡ ಕೊಡಗು ಜಿಲ್ಲಾ ತಂಡವು ನಿಗದಿತ 10 ಓವರುಗಳಲ್ಲಿ, ಮೂರು ವಿಕೆಟ್ ಕಳೆದುಕೊಂಡು 145 ರನ್ ಪಡೆದುಕೊಂಡಿತು. ತಂಡದ ಪರವಾಗಿ ವೃತುನ್ 24 ಬಾಲ್ ನಲ್ಲಿ 70 ರನ್, ಯಶಸ್ಸ್ 16 ಬಾಲ್ ನಲ್ಲಿ 36 ರನ್ ಮತ್ತು ಸೋಮಣ್ಣ 17 ಬಾಲ್ಗಳಲ್ಲಿ 16 ರನ್ ಭಾರಿಸಿ ಉತ್ತಮ ಪ್ರದರ್ಶನ ನೀಡಿದರು.
ಹಾಸನ ತಂಡದ ಪರವಾಗಿ ಗೌತಮ್ 41, ಹರ್ಷ 31ಮತ್ತು ರುಷೀಲ್ 30 ರನ್ ಗಳಿಸಿದರು. ಕೊಡಗು ತಂಡ ತನ್ನ ಕರಾರುವಾಕ್ಕಾದ ಧಾಳಿ ನಡೆಸಿ, 10 ಓವರ್ ಗಳಲ್ಲಿ 04 ವಿಕೆಟ್ ಪಡೆದು 113 ರನ್ ನೀಡಿ, 32ರನ್ಗಳ ವಿಜಯ ಪತಾಕೆ ಹಾರಿಸಿತು.