
ಮಡಿಕೇರಿ ಏ.25 : ಆರಂಭದಿಂದಲೇ ಕುತೂಹಲ ಮೂಡಿಸಿದ ಮುದ್ದಂಡ ಕಪ್ ಹಾಕಿ ಉತ್ಸವ ಅಂತಿಮ ಘಟ್ಟವನ್ನು ಪ್ರವೇಶಿಸಿದೆ. ಇಂದಿನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನೆಲ್ಲಮಕ್ಕಡ, ಮಂಡೇಪಂಡ, ಚೇಂದಂಡ ಮತ್ತು ಕುಪ್ಪಂಡ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ತೀವ್ರ ಪೈಪೋಟಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 3-1 ಗೋಲುಗಳ ಅಂತರದಿಂದ ಬಲಿಷ್ಠ ಕೂತಂಡ ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೇರಿತು. ನೆಲ್ಲಮಕ್ಕಡ ತಂಡದ ವೀಕ್ಷಿತ್ ಸೋಮಯ್ಯ ಒಂದು ಗೋಲು ಗಳಿಸಿದರೆ, ಸಚಿನ್ 2 ಗೋಲುಗಳನ್ನು ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯಿದ್ದರು. ಕೂತಂಡ ಪರವಾಗಿ ಸಜನ್ ದೇವಯ್ಯ ಅವರು ಒಂದು ಗೋಲು ಗಳಿಸಿದರು. ಪಂದ್ಯದಲ್ಲಿ ಕೂತಂಡ ಬೋಪಣ್ಣ ಪಂದ್ಯ ಪುರುಷೋತ್ತಮ ಗೌರವವನ್ನು ಪಡೆದುಕೊಂಡರು.
ಮಂಡೇಪಂಡ-ಕರವಂಡ-ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಡೇಪಂಡ ತಂಡ 6-0 ಗೋಲುಗಳ ಭಾರೀ ಅಂತರದಿಂದ ಕರವಂಡ ತಂಡವನ್ನು ಮಣಿಸಿ, ಸೆಮಿಫೈನಲ್ ಹಂತಕ್ಕೇರಿತು. ಮಂಡೇಪಂಡ ತಂಡ ಒಟ್ಟು ಪಂದ್ಯದ ಮೇಲೆ ಪೂರ್ಣ ಮೇಲುಗೈ ಸಾಧಿಸಿತಲ್ಲದೆ, ತಂಡದ ದಿಲನ್ ದೇವಯ್ಯ ಮತ್ತು ಗೌತಮ್ ಗಳಿಸಿದ ತಲಾ ಒಂದು ಗೋಲು ಹಾಗೂ ಚಂಗಪ್ಪ ಮತ್ತು ಸಜನ್ ಅಚ್ಚಯ್ಯ ಗಳಿಸಿದ ತಲಾ 2 ಗೋಲುಗಳ ನೆರವಿನಿಂದ ಗೆಲುವಿನ ನಗು ಬೀರಿತು. ಕರವಂಡ ತಂಡದ ಹುಲನ್ ತಿಮ್ಮಯ್ಯ ಪಂದ್ಯ ಪುರುಷೋತ್ತಮರಾಗಿ ಆಯ್ಕೆಯಾದರು.
ಚೇಂದಂಡ-ಚೆಪ್ಪುಡಿರ- ದಾಳಿ ಪ್ರತಿದಾಳಿಗಳಿಂದ ಕೂಡಿ, ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸಿದ ತೃತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ಟೈಬ್ರೇಕರ್ ಮೂಲಕ ಎದುರಾಳಿ ಚೆಪ್ಪುಡಿರ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿ ನಿಟ್ಟುಸಿರು ಬಿಟ್ಟಿತು. ನಿಗದಿತ ಅವಧಿಯ ಆಟದಲ್ಲಿ ಚೇಂದಂಡ ತಂಡದ ನಿಕಿನ್ ತಿಮ್ಮಯ್ಯ 1 ಗೋಲು ಬಾರಿಸಿದರೆ, ಇದಕ್ಕೆ ಪ್ರತಿಯಾಗಿ ಚೆಪ್ಪುಡಿರ ತಂಡದ ಗಗನ್ ತಿಮ್ಮಯ್ಯ 1 ಗೋಲು ಗಳಿಸುವುದರೊಂದಿಗೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ವಿಜೇತ ತಂಡವನ್ನು ನಿರ್ಧರಿಸುವ ಟೈಬ್ರೇಕರ್‌ನಲ್ಲಿ ಚೇಂದಂಡ ವಿಜಯಿಯಾಗಿ ಹೊರ ಹೊಮ್ಮಿ ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿತು. ಪರಾಜಿತ ತಂಡದ ಚೆಪ್ಪುಡಿರ ನರೇನ್ ಕಾರ್ಯಪ್ಪ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.
ಕುಪ್ಪಂಡ-ಪುದಿಯೊಕ್ಕಡ-ಪಂದ್ಯಾವಳಿಯ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕುಪ್ಪಂಡ ತಂಡ 2-1 ಗೋಲುಗಳ ಅಂತರದಿಂದ ಪುದಿಯೊಕ್ಕಡ ತಂಡವನ್ನು ಪರಾಭವಗೊಳಿಸಿತು. ಕುಪ್ಪಂಡ ತಂಡ ಸೋಮಯ್ಯ ಅವರ ಮೂಲಕ 2 ಗೋಲುಗಳನ್ನು ಮತ್ತು ಎದುರಾಳಿ ತಂಡದ ಸುಮನ್ ಮುತ್ತಣ್ಣ ಅವರು 1 ಗೋಲು ಗಳಿಸಿದರು. ಪುದಿಯೊಕ್ಕಡ ಗೋಲಿನ ನಿರೀಕ್ಷೆಯಿಂದ ಯಶಸ್ವಿಯಾಗದೆ ವೀರೋಚಿತ ಸೋಲಿಗೆ ತಲೆ ಬಾಗಿತು. ಈ ಪಂದ್ಯದ ಪಂದ್ಯ ಪುರುಷೋತ್ತಮರಾಗಿ ಪುದಿಯೊಕ್ಕಡ ಸುಮನ್ ಮುತ್ತಣ್ಣ ಅವರು ಗೌರವಿಸಲ್ಪಟ್ಟರು.