
✍-ಚೆಪ್ಪುಡೀರ ಕಾರ್ಯಪ್ಪ
ಹಾಕಿ ರಾಷ್ಟ್ರೀಯ ಕ್ರೀಡೆ ಅಂದರೆ ಒಲಂಪಿಕ್ಸ್ ನಲ್ಲಿ 8 ಚಿನ್ನ, 1 ಬೆಳ್ಳಿ, 3 ಕಂಚು ಪಡೆದ ಭಾರತದ ಹಾಕಿ ರಾಷ್ಟ್ರೀಯ ಕ್ರೀಡೆಯೇ ಸರಿ.1975ನೇ ಹಾಕಿ ವಿಶ್ವಕಪ್ ಗೆದ್ದ ಕೊಡಗಿನ ಕಣ್ಮಣಿ ಕಾಳಯ್ಯ. ಅವರು 49 ವರ್ಷದ ಹಿಂದೆ ಪ್ರಥಮ ಬಾರಿಗೆ ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದ ಗಂಡುಗಲಿ. 1951ನೇ ಇಸವಿ ಮಡಿಕೇರಿಯಲ್ಲಿ ಪೈಕೇರ ಈರಪ್ಪ ಹಾಗೂ ಅಕ್ಕವ್ವ ದಂಪತಿಯರ ಪುತ್ರನಾಗಿ ಜನಿಸುತ್ತಾರೆ.
ಬಾಲ್ಯದಿಂದಲೇ ಕ್ರೀಡೆಯಲ್ಲಿ ಉತ್ಸಾಹ, 12ನೇ ವಯಸ್ಸಿನಲ್ಲಿ ವಾಂಡರ್ಸ್ ಕ್ಲಬ್ ಹಾಗೂ ಶಂಕರ್ ಸ್ವಾಮಿಯ ಶಿಷ್ಯರಾಗುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಸೆಂಟ್ರಲ್ ಸ್ಕೂಲ್ ಮಡಿಕೇರಿಯಲ್ಲಿ, ಪಿಯುಸಿ ಸೇಂಟ್ ಎಲೋಶಿಸ್ ಮಂಗಳೂರು, ಹಾಗೂ ಬಿ.ಎ ಪದವಿಯನ್ನು ಕ್ರಿಶ್ಚಿಯನ್ ಕಾಲೇಜು ಮದ್ರಾಸ್ ನಲ್ಲಿ ಪಡೆಯುತ್ತಾರೆ.
ಅಪ್ಪಟ ಕ್ರೀಡಾಪಟು
ಕ್ರಿಕೆಟ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡನ್ನು ಕಿರಿಯರ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಅದ್ಬುತ ಮುನ್ನಡೆ ಆಟಗಾರನಾಗಿ ಹಾಕಿಯನ್ನು ಮದ್ರಾಸ್ ಯುನಿವರ್ಸಿಟಿಗೆ ಆಡಿ ಸಂಯುಕ್ತ ವಿಶ್ವವಿದ್ಯಾನಿಲಯಕ್ಕೆ ಆಯ್ಕೆಯಾಗುತ್ತಾರೆ, ಅಲ್ಲಿಂದ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳುತ್ತಾರೆ.
ಹಾಕಿ ಆಯ್ಕೆ ಶಿಬಿರ
1971ನೇ ವಿಶ್ವಕಪ್ ಆಯ್ಕೆ ಶಿಬಿರ, 1972ನೇ ಮ್ಯೂನಿಚ್ ಒಲಂಪಿಕ್ಸ್, 1975 ವಿಶ್ವಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. 1972 ರಲ್ಲಿ ಟಾಟಾಸ್ ಮುಂಬೈಗೆ ಸೇರ್ಪಡೆಗೊಳ್ಳುತ್ತಾರೆ. 24 ವರ್ಷ ಸುಧೀರ್ಘ ಸೇವೆಯ ಬಳಿಕ ನಿವೃತ್ತಿ ಹೊಂದುತ್ತಾರೆ.
ಅಖಂಡ ಭಾರತ
ವಿಶ್ವಕಪ್ ಅನ್ನು 1971ರಲ್ಲಿ ಪಾಕಿಸ್ತಾನದ ಏರ್ ಮಾರ್ಷಲ್ ಅವರು ವಿನ್ಯಾಸಗೊಳಿಸುತ್ತಾರೆ. ಬೇಸ್ ಸೇರಿದಂತೆ, ಟ್ರೋಫಿ 650 ಮಿಲಿ ಮೀಟರ್ ನಿಂತಿದೆ. ಇದು 895 ಗ್ರಾಂ ಚಿನ್ನ, 6,815 ಗ್ರಾಂ ಬೆಳ್ಳಿ, 350 ಗ್ರಾಂ ದಂತ ಮತ್ತು 3,500 ಗ್ರಾಂ ತೇಗ ಸೇರಿದಂತೆ 11,560 ಗ್ರಾಂ ತೂಗುತ್ತದೆ. ಈ ಕಪ್ ನ ಮೇಲೆ ವಿಶ್ವಕಪ್ ಭೂಪಟವನ್ನು ಮುದ್ರಿಸಲಾಗಿತ್ತು, ಆದರೆ ಜಮ್ಮ ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲಾಗಿತ್ತು. ಇದನ್ನು ವಿಜಯೋತ್ಸವದಂದು ಭಾರತ ತಂಡವು ವಿರೋಧಿಸಿತು.
ಭಾರತ VS ಪಾಕಿಸ್ತಾನ –ಫೈನಲ್
ವಿಶ್ವ ಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ರೋಚಕ ಪಂದ್ಯಾಟ ನಡೆಯಿತು. ಪ್ರಥಮ ಗೋಲನ್ನು ಪಾಕಿಸ್ತಾನದ ಸೈಯದ್ ಅವರು ಬಾರಿಸಿದರು. ಸುರ್ಜಿತ್ ಸಿಂಗ್ ಅವರು ಇದನ್ನು ಸಮ ಮಾಡಿದರು. ಅಶೋಕ್ ಕುಮಾರ್ ಅವರ ಗೋಲಿನಿಂದ ಭಾರತವು ಜಯಶಾಲಿಯಾಯಿತು. ಅಂದು ರೇಡಿಯೋದಲ್ಲಿ ಪಂದ್ಯಾಟವನ್ನು ಖ್ಯಾತ ವೀಕ್ಷಕ ವಿವರಣೆಗಾರರಾದ ಜಸ್ಜಿತ್ ಸಿಂಗ್ ನವರ ಸಿರಿಕಂಠದಿಂದ ಪ್ರಸಾರವಾಗಿ ಕೇಳುಗರ ಮನಸೂರೆಗೊಂಡಿತು. ಇದು ಭಾರತದಲ್ಲಿ ಯುದ್ಧ ಗೆದ್ದಷ್ಟು ಸಂಭ್ರಮ ತಂದಿತ್ತು.
Vampire Stick
Vampire Stick ನಲ್ಲಿ 1975 ನೇ ವಿಶ್ವಕಪ್ ಆಡಿ ಭಾರತ ಗೆದ್ದಿತ್ತು. 16 ಆಟಗಾರರ ಸಹಿ ಆ ಸ್ಟಿಕ್ ನ ಮೇಲೆ ದಾಖಲೆಯಾಗಿದೆ. ಅದು ಇಂದು ವಿಶ್ವ ಸಂಗ್ರಹಾಲಯದಲ್ಲಿ ಭದ್ರವಾಗಿದೆ.
ವಿಜೇತರಿಗೆ ಸ್ಕೂಟರ್ ಬಹುಮಾನ
ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಹುಗುಣ ಅವರು ಎಲ್ಲಾ ಹಾಕಿ ಆಟಗಾರರಿಗೆ ವಿಜಯ್ ಸ್ಕೂಟರನ್ನು ಹಾಗೂ I.H.F ನ ಅಧ್ಯಕ್ಷರಾದ ಎಂ.ಎ.ಎಂ.ರಾಮಸ್ವಾಮಿ ಹಾಗೂ ಕೆಲವು ರಾಜ್ಯದವರು ಸೇರಿ ಅಂದಾಜು ಒಬ್ಬ ಆಟಗಾರರಿಗೆ 50,000 ರೂಪಾಯಿಯನ್ನು ಉಡುಗೊರೆಯಾಗಿ ನೀಡಿದರು. ಇಂದಿನ ಕಾಲಘಟ್ಟಕ್ಕೆ ಈ ಮೊತ್ತ ಕಮ್ಮಿಯೆನಿಸಬಹುದು. ಆದರೆ ಅವರ ಹಾಕಿ ಹಾಗೂ ದೇಶ ಪ್ರೇಮಕ್ಕೆ ಬೆಲೆ ಕಟ್ಟಲಾಗದು.
ಹಾಕಿಯ ಕಲೆಯ ನರ್ತಕರು(Dribblers)
ಪಾಕಿಸ್ತಾನದ ಅಕ್ತರ್ ರಸೂಲ್, ಅನೀಫ್ ಖಾನ್, ಹಸನ್ ಸರ್ದಾರ್ ಹಾಗೂ ಭಾರತದ ಅಜಿತ್ ಪಾಲ್, ಅಶೋಕ್ ಕುಮಾರ್ ಇವರುಗಳ ಕೈಯಲ್ಲಿ ಚೆಂಡು ಸಿಕ್ಕರೆ ಕಲೆಯ ನರ್ತಕರಾಗಿಬಿಡುವರು (Dribblers). ಇದೆಲ್ಲವೂ ಇಂದು ಏಷ್ಯಾ ಖಂಡದಿಂದ ಮಾಯವಾಗಿ ಹೋಗಿದೆ. ಇಂತಹ ಆಟ 1975ನೇ ವಿಶ್ವಕಪ್ ನಲ್ಲಿ ನೋಡಲು ಸಾಕ್ಷಿ ಆಯಿತು.
ಭಾರತ ವಿಶ್ವ ಕಪ್ ಗೆಲ್ಲಬಹುದೇ?
ಮುಂದೆಂದಾದರು ಭಾರತ ವಿಶ್ವ ಕಪ್ ಗೆಲ್ಲಬಹುದೇ ಎಂಬುದು ಯಕ್ಷಪ್ರಶ್ನೆ. ಆದರೆ ಅಲ್ಲಿಯವರೆಗೆ ಹಾಕಿಯ ಭೂಪಟದಲ್ಲಿ ಕಾಳಯ್ಯ ಹಾಗೂ ಗೋವಿಂದ ಅವರ ಹೆಸರು ಅಜರಾಮರ. ವಿಶ್ವಕಪ್ ಗೆದ್ದ ಮೇಲೆ ಭಾರತದ ಎಲ್ಲೆಡೆ ಪ್ರದರ್ಶನ ಪಂದ್ಯಾವಳಿ ಆಡಿದರು.
Time’s of India ಸನ್ಮಾನ
ಇದೇ ಫೆಬ್ರವರಿ 23ರಂದು ಲಕ್ನೋದಲ್ಲಿ ಪ್ರತಿಭಾವಂತ ಆಟಗಾರರಿಗೆ ಸನ್ಮಾನವಿದ್ದು, 1975ನೇ ವಿಶ್ವಕಪ್ ಗೆದ್ದ ಎಲ್ಲಾ ಆಟಗಾರರನ್ನು ಆಹ್ವಾನಿಸಲಾಯಿತು.
ಶಿಸ್ತಿನ ಆಟಗಾರ
ಎಲ್ಲಿಯೂ ಹಾಕಿಗೆ ಕಳಂಕ ತರದಂತೆ ,ಹಾಕಿ ಕೂರ್ಗ್ ನ ಅಧ್ಯಕ್ಷರಾಗಿ, ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಬಾಳುವಂತಹ ಅದ್ಭುತ ಆಟಗಾರ, ಪ್ರಸ್ತುತ ಇವರ ಪತ್ನಿ ಕೋಳೇರ ವಿನಿತ ಹಾಗೂ ಮಗ ನಂಜಪ್ಪ ಅವರೊಂದಿಗೆ ಮಡಿಕೇರಿಯಲ್ಲಿ ನೆಲೆಸಿದ್ದಾರೆ. ಪ್ರತಿನಿತ್ಯ ಗಾಲ್ಫ್ ಅನ್ನು ಆಡುತ್ತಾ ತಮ್ಮ ದೇಹದಾಡ್ಯತೆಯನ್ನು ಕಾಪಾಡಿಕೊಂಡಿದ್ದಾರೆ.
ಕ್ರೀಡಾಭಿಮಾನಿಗಳ ಅನಿಸಿಕೆ
ಎಂದಾದರೂ ಒಂದು ದಿನ ಕಾಳಯ್ಯ ಹಾಗೂ ಗೋವಿಂದ ಅವರಂತಹ ಆಟಗಾರರು ಕೊಡಗಿನಲ್ಲಿ ಜನಿಸಿ, ವಿಶ್ವಕಪ್ ಮರುಕಳಿಸಲಿ ಎಂಬುದು ಹಾಕಿ ಆಟಗಾರರ ಬಯಕೆ. ವಿಶ್ವಕಪ್ ವಿಜೇತರಾಗಿದ್ದಕ್ಕೆ ಸರ್ಕಾರದಿಂದ ಸಿಗಬೇಕಾದ ಪುರಸ್ಕಾರಗಳು ಹಾಗೂ ಸವಲತ್ತುಗಳು ಇವರಿಗೆ ಸಿಗಲಿಲ್ಲವೆಂಬುದು ಕೆಲವರ ಅನಿಸಿಕೆ. ಇವರಿಗೆ ಕ್ರೀಡಾಭಿಮಾನಿಗಳ ಪರವಾಗಿ ಕೋಟಿ ನಮನ.
ವಿಶ್ವಕಪ್ ಗೆದ್ದು 50ರ ಸಂಭ್ರಮ
2025ಕ್ಕೆ ವಿಶ್ವ ಕಪ್ ಗೆದ್ದು 50 ವರ್ಷಗಳು ತುಂಬಿದೆ. ಆದ್ದರಿಂದ ಕೌಟುಂಬಿಕ ಹಾಕಿ ಹಬ್ಬದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ, ಮುದ್ದಂಡ ಕೌಟುಂಬಿಕ ಹಾಕಿ ಹಬ್ಬದಲ್ಲಿ ಕೊಡಗಿನ ತಾಯ್ನಾಡಾದ ಮಡಿಕೇರಿಯಲ್ಲಿ ಕಾಳಯ್ಯ ಅವರನ್ನು ಕರೆಸಿ ಗೌರವ ಕೊಡುತ್ತಿರುವುದು ಹಾಕಿ ಕ್ರೀಡೆಗೆ ಹೆಮ್ಮೆಯ ವಿಷಯ.