
ಮಡಿಕೇರಿ ಏ.27 : ಕೊಡವ ಕೌಟುಂಬಿಕ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಅಂತಿಮ ಪಂದ್ಯ ಮಳೆಯಿಂದ ಬಾಧಿತವಾಗಿ, ನಿಯಮಗಳಂತೆ ಪಂದ್ಯ ನಿಲುಗಡೆಗೂ ಮುನ್ನ ಏಕೈಕ ಗೋಲಿನ ಮುನ್ನಡೆ ಪಡೆದಿದ್ದ ‘ಮಂಡೇಪಂಡ’ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಬೆಳ್ಳಿ ಮಹೋತ್ಸವದ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ಮಂಡೇಪಂಡ ಅಲಂಕರಿಸಿತು.
ಕಾರ್ಮೋಡಗಳು ಕವಿದ ವಾತಾವರಣದ ನಡುವೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಹರ್ಷೋದ್ಘಾರಗಳ ನಡುವೆ ಮಂಡೇಪಂಡ ಮತ್ತು ಚೇಂದಂಡ ನಡುವಿನ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿ ಆರಂಭಗೊಂಡಿತು. ಪಂದ್ಯದ ಆರಂಭಿಕ ಕ್ಷಣಗಳಲ್ಲೆ ಚೇಂದಂಡ ತಂಡ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಇದನ್ನು ಗೋಲಾಗಿಸುವಲ್ಲಿ ತಂಡದ ಪ್ರಮುಖ ಮುನ್ನಡೆ ಆಟಗಾರ, ಒಲಂಪಿಯನ್ ನಿಕಿನ್ ತಿಮ್ಮಯ್ಯ ವಿಫಲರಾದರು.
ದಾಳಿಗೆ ಪ್ರತಿ ದಾಳಿ ನಡೆಸಿದ ಮಂಡೇಪಂಡ ತಂಡ, ಆಕರ್ಷಕ ಶಾರ್ಟ್ ಪಾಸ್‌ಗಳ ಮೂಲಕ ಎದುರಾಳಿ ಚೇಂದಂಡ ತಂಡದ ಗೋಲು ಆವರಣವನ್ನು ಪ್ರವೇಶಿಸಿ ಗೋಲು ಗಳಿಕೆಯ ಪ್ರಯತ್ನ ನಡೆಸಿ ಗೋಲು ಗಳಿಸುವ ಪ್ರಯತ್ನದಲ್ಲಿ ವಿಫಲವಾಯಿತು. ಹೀಗಿದ್ದೂ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಇದರಲ್ಲಿ ಮಂಡೇಪಂಡ ಗೌತಮ್ ಮಿಂಚಿನ ಗೋಲು ಸಿಡಿಸುವ ಮೂಲಕ ಮೊದಲ ಕ್ವಾರ್ಟರ್‌ನಲ್ಲಿ ಮಂಡೇಪಂಡ ತಂಡ ಮೂರು ಬಾರಿಯ ಚಾಂಪಿಯನ್ ಚೇಂದಂಡ ತಂಡದ ವಿರುದ್ಧ 1-0 ಗೋಲಿನ ಮುನ್ನಡೆಯನ್ನು ಸಾಧಿಸಿತು.
ಕುತೂಹಲದ ಆಟಕ್ಕೆ ಮಳೆರಾಯನ ಮುನಿಸು…
ದ್ವಿತೀಯ ಕ್ವಾರ್ಟರ್‌ನಲ್ಲಿ ಚೇಂದಂಡ ತಂಡ ಸಮಬಲದ ಗೋಲಿಗಾಗಿ ಆರಂಭಿಕ ಹಂತದಿಂದಲೆ ದಾಳಿಗೆ ಇಳಿಯಿತಲ್ಲದೆ ದ್ವಿತೀಯ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತಾದರು, ಇದರ ಬೆನ್ನಲ್ಲೆ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯುತ್ತಿರುವಂತೆಯೆ ಮೋಡಗಳು ಮಳೆ ಸುರಿಸಲಾರಂಭಿಸಿತು. ಸಿಡಿಲು ಗುಡುಗಿನ ಮಳೆಯ ನಡುವೆಯೇ ನಡೆದ ಪೆನಾಲ್ಟಿ ಕಾರ್ನರ್‌ನಲ್ಲಿ ಚೇಂದಂಡ ಗೋಲು ಗಳಿಸುವಲ್ಲಿ ವಿಫಲವಾಯಿತು.
ಮಳೆಯ ಹಿನ್ನೆಲೆಯಲ್ಲಿ ಪಂದ್ಯವನ್ನು ನಿಲ್ಲಿಸಲಾಯಿತು. ಧಾರಾಕಾರ ಸುರಿದ ಮಳೆಯಿಂದ ಮೈದಾನದ ಅಲ್ಲಲ್ಲಿ ನೀರು ತುಂಬಿ ಕೊಂಡಿತು. ಸುಮಾರು ಅರ್ಧಗಂಟೆಗಳ ಕಾಲ ಸುರಿದ ಮಳೆ ನಿಂತ ಬಳಿಕ, ಭಾರೀ ಪ್ರಯತ್ನಗಳಿಂದ ಮೈದಾನದಲ್ಲಿ ನಿಂತಿದ್ದ ನೀರನ್ನು ತೆಗೆದು ಆಟಕ್ಕೆ ಅಣಿಗೊಳಿಸಲಾಯಿತು.
ಮತ್ತೆ ಪಂದ್ಯ ಆರಂಭಗೊಳ್ಳುತ್ತಿದ್ದಂತೆಯೇ ಚೇಂದಂಡ ತಂಡ ಮತ್ತೆ ದಾಳಿಯನ್ನು ಸಂಘಟಿಸಿ ಇನ್ನೇನು ಮಂಡೇಪಂಡ ತಂಡದ ವಿರುದ್ಧ ಸಮಬಲದ ಗೋಲು ದಾಖಲಿಸಿತು ಎನ್ನುವಷ್ಟರಲ್ಲೆ, ಮಂಡೇಪಂಡ ತಂಡ ಯುವ ಪ್ರತಿಭೆ, ಗೋಲ್ ಕೀಪರ್ ದ್ಯಾನ್ ಬೋಪಣ್ಣ ಆಕರ್ಷಕವಾಗಿ ಚೆಂಡನ್ನು ತಡೆಗಟ್ಟಿ, ಮಂಡೇಪಂಡ ತಂಡದ ಮುನ್ನಡೆಯನ್ನು ಅಬಾಧಿತವಾಗಿ ಉಳಿಯುವಂತೆ ಮಾಡಿದರು. ಈ ಹಂತದಲ್ಲಿ ಮತ್ತೆ ಆರಂಭಗೊಂಡ ಮಳೆ ಮೈದಾನವನ್ನು ಅಕ್ಷರಶಃ ಹೊಳೆಯನ್ನಾಗಿಸುವುದರೊಂದಿಗೆ ಪಂದ್ಯ ಸ್ಥಗಿತಗೊಂಡಿತು.
ನಿಯಮದಂತೆ ಮಂಡೇಪಂಡಕ್ಕೆ ಗೆಲುವು–
ಮಳೆಯ ಆರ್ಭಟ ಇಳಿಮುಖವಾದರು ಮೈದಾನ ಮಳೆಯ ನೀರಿನಿಂದ ಆವರಿಸಿಕೊಂಡು ಸರಿಪಡಿಸಲಾಗದ ಹಂತವನ್ನು ಮುಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೊಡವ ಹಾಕಿ ಅಕಾಡೆಮಿ, ಆಯೋಜಕರು, ತೀರ್ಪುಗಾರರು ಮತ್ತು ಇತ್ತಂಡಗಳ ವ್ಯವಸ್ಥಾಪಕರು ಪರಸ್ಪರ ಚರ್ಚಿಸುವುದರೊಂದಿಗೆ, ಮಂಡೇಪಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಎರಡು ಭಾರಿ ಸುರಿದ ಭಾರೀ ಮಳೆಗೆ ಪ್ರೇಕ್ಷಕ ವರ್ಗ ತೋಯ್ದು ತೊಪ್ಪೆಯಾಯಿತು. ಹೀಗಿದ್ದೂ ಅವರಲ್ಲಿನ ಕ್ರೀಡಾ ಉತ್ಸಾಹ ಬತ್ತಿರಲಿಲ್ಲ, ಮೈದಾನದ ನಾಲ್ಕು ಮೂಲೆಗಳಿಂದ ವಾಲಗಕ್ಕೆ ಗ್ಯಾಲರಿಯಲ್ಲೆ ನಿಂತುಕೊಂಡು ನೃತ್ಯ ಮಾಡುತ್ತಿದ್ದುದು ವಿಶೇಷ. ಹೀಗಿದ್ದೂ ಬೆಳ್ಳಿ ಮಹೋತ್ಸವದ ಫೈನಲ್ಸ್ ಪೂರ್ಣ ಪ್ರಮಾಣದಲ್ಲಿ ನಡೆಯದ ಬೇಸರ ಕ್ರೀಡಾ ಪ್ರೇಮಿಗಳ, ಆಯೋಜಕರ ಮನದಲ್ಲಿ ಮೂಡಿತು.
ನೆರವಂಡಕ್ಕೆ ತೃತೀಯ ಸ್ಥಾನ- ಅಂತಿಮ ಪಂದ್ಯಕ್ಕೂ ಮುನ್ನ ನಡೆದ ತೃತೀಯ ಸ್ಥಾನದ ಪಂದ್ಯದಲ್ಲಿ ನೆರವಂಡ ತಂಡ 2-1 ಗೋಲುಗಳ ಅಂತರದಿಂದ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿತು. ನೆರವಂಡ ಮೂರನೇ ಹಾಗೂ ಕುಪ್ಪಂಡ (ಕೈಕೇರಿ) ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.