
✍–ಚೆಪ್ಪುಡೀರ ಕಾರ್ಯಪ್ಪ
ಬಿಳಿಮಗ್ಗರ ಪುಟ್ಟಸ್ವಾಮಿ ಹಾಗೂ ಲಕ್ಷ್ಮಮ್ಮ ದಂಪತಿಗಳ ಪುತ್ರನಾಗಿ ಸೋಮವಾರಪೇಟೆಯಲ್ಲಿ 4-3-1951ರಂದು ಗೋವಿಂದ ಜನಿಸುತ್ತಾರೆ.ಇವರು ಒಬ್ಬ ಅಣ್ಣ ಮೂರು ತಮ್ಮಂದಿರೊಂದಿಗೆ ಬಾಲ್ಯದಿಂದಲೂ ಹಾಕಿ ಆಡುತ್ತಿದ್ದರು. ಸೋಮವಾರಪೇಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದರು.ಇವರಿಗೆ ಬಾಲ್ಯದಿಂದಲೂ ಹಾಕಿಯತ್ತ ಒಲವು ಇತ್ತು. ವಿರಾಜಪೇಟೆಯ ಕಡಂಗ ಮರೂರು ಯೂತ್ ಕ್ಲಬ್ ನಲ್ಲಿ ಪ್ರಥಮವಾಗಿ ಹಾಕಿ ಆಡಿದರು. ಆಮ್ಮಂಡ ವಾಸು, ಮನೆಯಪಂಡ ಬೋಪಣ್ಣ ಮುಂತಾದವರ ಜೊತೆ ಇವರು ಆಟವಾಡುತ್ತಿದ್ದರು. ನಂತರ ಮಡಿಕೇರಿಯ ವಾಂಡರ್ಸ್ ಕ್ಲಬ್ ನಲ್ಲಿ, ಶಂಕರ್ ಸ್ವಾಮಿಯ ಶಿಷ್ಯನಾಗಿ ಬೆಳೆಯುತ್ತಾರೆ. ಕೊಡಗಿನವರಾದ ಎಂ. ಡಿ. ಮುತ್ತಪ್ಪನವರು 1967ನೆ ಇಸವಿಯಲ್ಲಿ ಮೋಹನ್ ಬಗಾನ್ ಕಲ್ಕತ್ತಾ ಹಾಕಿ ಕ್ಲಬ್ ಗೆ ಇವರನ್ನು ಸೇರಿಸುತ್ತಾರೆ. ಅಲ್ಲಿ ಅವರು ನೇರವಾಗಿ ಇಂಡಿಯನ್ ಲೈಟ್ ಬ್ಲೂ ಸೇರುತ್ತಾರೆ. ನಂತರ ಭಾರತ ತಂಡಕ್ಕೆ ಆಯ್ಕೆಯಾದರು. 1970ರಲ್ಲಿ ಬ್ಯಾಂಕಾಕ್, ಏಷಿಯನ್ ಗೇಮ್ಸ್, 1972ರಲ್ಲಿ ನ್ಯೂನಿಚ್ ಹಾಗೂ ವರ್ಲ್ಡ್ 11, 1973ರಲ್ಲಿ ಯಾಂಸಿಡಂ,1974ರಲ್ಲಿ ತೇರಾನ್, 1975ರಲ್ಲಿ ವರ್ಲ್ಡ್ ಕಪ್ ವಿನ್ನರ್ಸ್, 1976ರಲ್ಲಿ ಮೊಂಟ್ರೆಲ್ ಒಲಂಪಿಕ್ಸ್ ಮುಂತಾದ ಪಂದ್ಯಾವಳಿಗಳಲ್ಲಿ ಕಲಾತ್ಮಕವಾಗಿ ಆಟವಾಡಿ ಕ್ರೀಡಾ ಕ್ಷೇತ್ರದಲ್ಲಿ ದೇಶದ ಗಮನ ಸೆಳೆದು ಅರ್ಜುನ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಇವರು ಎರಡು ಒಲಂಪಿಕ್ಸ್, ಎರಡು ವರ್ಲ್ಡ್ ಕಪ್, ಮೂರು ಏಷಿಯನ್ ಗೇಮ್ಸ್ ಆಡಿದ್ದಾರೆ. ಬಹಳ ವರ್ಷಗಳಿಂದ ಆಯ್ಕೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಇವರ ಅಣ್ಣನ ಮಗಳು ಹೇಮಲತಾ ಭಾರತ ತಂಡದಲ್ಲಿ ಅಡಿರುತ್ತಾರೆ. ಪ್ರಸ್ತುತ ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರನ್ನೇ ಹೋಲುವ ಇವರ ತಮ್ಮ ಬಿ. ಪಿ. ರಾಜು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮದ್ರಾಸ್ ತಂಡದಲ್ಲಿ ಆಡಿದರು. ಇವರು ಕೂಡ ಭಾರತದ ಆಯ್ಕೆ ಶಿಬಿರದಲ್ಲಿ ಇದ್ದರು.ಗೋವಿಂದರವರು ಇಂಡಿಯನ್ ಏರ್ಲೈನ್ಸ್ ತಂಡದಲ್ಲಿ ಆಡುವಾಗ ಬಹುತೇಕ ಭಾರತದಲ್ಲಿ ಎಲ್ಲಾ ಟೂರ್ನಮೆಂಟ್ಗಳನ್ನು ಗೆದ್ದರು. 1975ರಲ್ಲಿ ವಿಶ್ವ ಕಪ್ ನಲ್ಲಿ ಆಡುವಾಗ ಕೊಡಗಿನ ಕಾಳಯ್ಯನವರು ಕೂಡ ಇದ್ದರು. ಭಾರತ ವಿಶ್ವ ಕಪ್ ಗೆದ್ದಿದು ಒಂದು ದಂತಕತೆಯೇ ಸರಿ. ಇವರ ಜೊತೆ ಆಡಿದ ಬಾಲ್ಯದ ಸ್ನೇಹಿತ ಹಾಲಪ್ಪ ಅವರನ್ನು ಗೋವಿಂದರವರು ಆಗಾಗ ನೆನಪಿಸಿಕೊಳ್ಳುತ್ತಾರೆ. ಕೊಡಗಿನ ಎಂ. ಪಿ. ಗಣೇಶ್ ಹಾಗೂ ಗೋವಿಂದ ಅವರ ಸ್ನೇಹ ರಾಮ-ಲಕ್ಷ್ಮಣರಂತೆ ಎಂದು ಇಂದು ಸಹ ಜನ ಸ್ಮರಿಸಿಕೊಳ್ಳುತ್ತಾರೆ. 1973ರ ವಿಶ್ವಕಪ್ ನಲ್ಲಿ ನಡೆದ ಕತೆ ರೋಚಕವಾಗಿದೆ. ಇವರಿಗೆ ಕೊಡಗಿನ ಪಿತಾಮಹ ಶಂಕರ್ ಸ್ವಾಮಿಯವರು ಕೊಡಗಿನ ಸಿಡಿಲು ಮರಿ ಎಂದು ನಾಮಕರಣ ಮಾಡುತ್ತಾರೆ. ಏಕೆಂದರೆ ಮಿಂಚು ಹೇಗೆ ಮೋಡಗಳ ಮಧ್ಯೆ ಮುನ್ನುಗ್ಗುತ್ತದೋ ಹಾಗೆ ಗೋವಿಂದ ರವರು ಎಂಬ ಅರ್ಥ.ಇವರು ಇಂಡಿಯನ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದ ಸ್ಟಿಫಿನ್ ಎಂಬುವವರನ್ನು ಮದುವೆಯಾಗುತ್ತಾರೆ. ಅವರ ಮಗ ಬಿರೇನ್ ಪಾಲ್ ಗೋವಿಂದ ಅವರು ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೋವಿಂದರವರು ಅದ್ಭುತ ಆಟಗಾರ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಇಂತಹ ಮಹಾನ್ ವ್ಯಕ್ತಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ನಿಡಬೇಕೆಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
ವಿಶ್ವಕಪ್ ಗೆದ್ದು 50ರ ಸಂಭ್ರಮ
2025 ವಿಶ್ವ ಕಪ್ ಗೆದ್ದು 50 ವರ್ಷಗಳು ತುಂಬಿದೆ. ಆದ್ದರಿಂದ ಕೌಟುಂಬಿಕ ಹಾಕಿ ಹಬ್ಬದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ, ಮುದ್ದಂಡ ಕೌಟುಂಬಿಕ ಹಾಕಿ ಹಬ್ಬದಲ್ಲಿ ಕೊಡಗಿನ ತಾಯ್ನಾಡಾದ ಮಡಿಕೇರಿಯಲ್ಲಿ ಗೋವಿಂದ ಅವರನ್ನು ಕರೆಸಿ ಗೌರವ ಕೊಡುತ್ತಿರುವುದು ಹಾಕಿ ಕ್ರೀಡೆಗೆ ಹೆಮ್ಮೆಯ ವಿಷಯ.