
ಮಡಿಕೇರಿ ಏ.26 : ಕೊಡವ ಒಕ್ಕಡೊಕ್ಕಡ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಪ್ರಥಮ ಬಾರಿಗೆ ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್‌ನಲ್ಲಿ ಕಂಬೀರಂಡ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯಭೇರಿ ಬಾರಿಸಿತು.
ಕಂಬೀರಂಡ ಪರ ಪೊನ್ನಮ್ಮ 2 ಗೋಲು ದಾಖಲಿಸಿದರು. ಕೇಚೆಟ್ಟಿರ ಪರ ತೇಜಸ್ವಿ ಹಾಗೂ ಪಾರ್ವತಿ ತಲಾ 1 ಗೋಲು ಬಾರಿಸಿದರು. ಕೇಚೆಟ್ಟಿರ ಪಾರ್ವತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಏ.21 ರಿಂದ ನಡೆದ ಮಹಿಳೆಯರ 5ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 56 ಕೊಡವ ಮಹಿಳಾ ತಂಡಗಳು ಪಾಲ್ಗೊಂಡಿದ್ದು ಕೊಡವ ಹಾಕಿ ಇತಿಹಾಸದಲ್ಲಿ ಅಳಿಸಲಾಗದ ದಾಖಲೆಯಾಗಿ ಹೊರಹೊಮ್ಮಿದೆ.