ಸೋಮವಾರಪೇಟೆ. ಅ.07: (ವರದಿ: ಬಿ.ಪಿ. ಸುಮತಿ) ನಾವೆಲ್ಲೇ ಇದ್ದರೂ ನಮ್ಮ ತಾಯಿಯಷ್ಟೇ ಮಹತ್ವವನ್ನು, ತಾಯಿ ಭಾಷೆ ಮತ್ತು ತಾಯಿ ನೆಲಕ್ಕೆ ನೀಡಬೇಕು. ನಮ್ಮಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾತೃಭಾಷಭೀಮಾನ ಕಡಿಮೆಯಾಗುತ್ತಿದ್ದು, ನಾವು ಪಕ್ಕದ ರಾಜ್ಯಗಳನ್ನು ನೋಡಿ ಈ ವಿಚಾರವನ್ನು ಕಲಿಯಬೇಕು ಎಂದು, ಸೋಮವಾರಪೇಟೆಯ ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಮಹಿಳಾಸಮಾಜದ ಸಭಾಂಗಣದಲ್ಲಿ ಶುಕ್ರವಾರ ಕನ್ನಡಸಿರಿ ಸ್ನೇಹಬಳಗದ ಜಿಲ್ಲಾ ಮತ್ತು ತಾಲ್ಲೂಕು ಘಟಕದಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಕನ್ನಡ ಸಿರಿ ಸ್ನೇಹಬಳಗದ ತಾಲ್ಲೂಕು ಘಟಕದ ”ಶರದೃವಿನ ಐಸಿರಿ” ಕವಿಗೋಷ್ಠಿ ಮತ್ತು ಜಾನಪದ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡಿದ ಅವರು ಶಿಕ್ಷಣವು ಮೌಲ್ಯ ಕಳೆದುಕೊಂಡು ವ್ಯಾಪಾರೀಕರಣಗೊಳ್ಳುತ್ತಿದೆ.ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ತಿಳಿಸಬೇಕಿದೆ. ಶಾಲೆಯಲ್ಲಿ ಶಿಕ್ಷಕರು ಪಾಠದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ತಿಳಿಸಿಕೊಡಬೇಕು.ಮಕ್ಕಳು ಸಹ ಸಂಸ್ಕಾರವನ್ನು ಕಲಿಯಬೇಕಾದ್ದು ಅವಶ್ಯಕವಾಗಿದೆ.ಎಲ್ಲರೂ ಮೌಲ್ಯವರ್ಧಿತ ಶಿಕ್ಷಣಕ್ಕೆ ಒತ್ತುನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಂಸ್ಕಾರದ ಬಗ್ಗೆ ಗಮನ ಹರಿಸದೆ ಮೊಬೈಲ್ ಫೋನುಗಳಲ್ಲಿ ಫೋಟೋ ತೆಗೆದುಕೊಳ್ಳುವುದು,ಸಲ್ಲದವಿಚಾರಗಳಲ್ಲಿ ತೊಡಗುವುದು ಹೆಚ್ಚಾಗಿದೆ.ಇದರಿಂದ ಅವರಲ್ಲಿ ಬಂಧು ಬಳಗದವರೊಂದಿಗೆ ಒಡನಾಟವೇ ಇಲ್ಲದಂತಾಗಿದೆ.ವಿದ್ಯಾರ್ಥಿಗಳು ದಿನದಲ್ಲಿ 10 ನಿಮಿಷವಾದರೂ ಕಥೆ,ಕವನ,ಸಾಹಿತಿಗಳ ಬಗ್ಗೆ ತಿಳಿದುಕೊಳ್ಳುವುದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಕುಶಾಲನಗರದ ನಿವೃತ್ತ ಕಲಾಶಿಕ್ಷಕ ಉ.ರಾ.ನಾಗೇಶ್ ರವರು ಮಾತನಾಡಿ, ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿದ್ದು, ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದ್ದಲ್ಲಿ ಮಾತ್ರ ಅವರು ಸಮಾಜದಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯ ನಾವು ಮಕ್ಕಳಿಗೆ ಓದುವುದನ್ನು ಮಾತ್ರ ಕಲಿಸಿದ್ದೇವೆ.ಕಲಿಕಾ ಕ್ರಮವನ್ನು ತಿಳಿಸಿಲ್ಲ.ಕೇವಲ ಪರೀಕ್ಷೆಗಾಗಿ ಮಾತ್ರ ವಿದ್ಯಾರ್ಥಿಗಳು ಕಳಿಯುತ್ತಿರುವುದರಿಂದ ಅವರಲ್ಲಿ ಸಂಸ್ಕಾರದ ಅರಿವಿಲ್ಲ ಎಂದರು.
ಕನ್ನಡ ಸಿರಿ ಜಿಲ್ಲಾಘಟಕದ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ರವರು ಅಧ್ಯಕ್ಷತೆವಹಿಸಿ ಮಾತನಾಡಿ ಕನ್ನಡ ಸಂಘ ಸಂಸ್ಥೆಗಳು ಹೆಚ್ಚಾದಂತೆ ಭಾಷಪರ ಚಟುವಟಿಕೆಗಳು ಹೆಚ್ಚಾಗುವ ಮೂಲಕ ಕನ್ನಡ ಬೆಳವಣಿಗೆ ಸಾಧ್ಯ. ಕಲೆ ಮತ್ತು ಸಂಸ್ಕೃತಿಯನ್ನು ಉಳಿದಿಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕು ಘಟಕವನ್ನು ಪ್ರಾರಂಭಿಸಲಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿಕನ್ನಡಪರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ವಿದ್ಯಾ ನರ್ಸಿಂಗ್ ಸಂಸ್ಥೆಯ ವ್ಯವಸ್ಥಾಪಕರಾದ ಸುಲೈಮಾನ್,ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಸಿ.ಕೆ.ಮಲ್ಲಪ್ಪನವರು,ಮಾಜಿ ಅಧ್ಯಕ್ಷರಾದ ಹಾಲೆಬೇಲೂರು ನಿರ್ವಾಣ ಶೆಟ್ಟಿ,ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್,ಹಿರಿಯ ಸಾಹಿತಿಗಳಾದ ಭಾರದ್ವಾಜ್ ಕೆ ಆನಂದ ತೀರ್ಥರು,ಹಿರಿಯ ಕವಿಗಳಾದ ನ. ಲ.ವಿಜಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಜವರಪ್ಪ,ಎಲ್. ಎಂ .ಪ್ರೇಮ ಉಪಸ್ಥಿತರಿದ್ದರು.
ಸಾಹಿತಿ ಕಾಜೂರು ಸತೀಶ್ ರವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.ಕವಿಗೋಷ್ಠಿಯಲ್ಲಿ ಜಿಲ್ಲೆಯ 21, ಕವಿಗಳು ಕವನವನ್ನು ವಾಚಿಸಿದರು.ಜಾನಪದ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಕೌರವ ವಂಶದ ಧೃತರಾಷ್ಟ್ರನ ನೂರು ಪುತ್ರರು ಹಾಗೂ ಓರ್ವಪುತ್ರಿಯ ಹೆಸರನ್ನು 54 ಸೆಕೆಂಡ್ ಗಳಲ್ಲಿ ಹೇಳುವ ಮೂಲಕ 2024 ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ 4 ನೆಯ ತರಗತಿಯ ವಿದ್ಯಾರ್ಥಿನಿ ಹೆಚ್. ಪ್ರೇಕ್ಷಾ ಅವರು ಬಾಲಪ್ರತಿಭೆ ಪ್ರದರ್ಶನ ಮಾಡಿದರು.