https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮನಸ್ಸಿನ ಅರಿವು-ವಿವರಣೆ-ವಿಶ್ಲೇಷಣೆ : ಕೊ. ಮಾಳೇಟಿರ ಸೀತಮ್ಮ ವಿವೇಕ್

ಮನಸ್ಸಿನ ಅರಿವು-ವಿವರಣೆ-ವಿಶ್ಲೇಷಣೆ : ಕೊ. ಮಾಳೇಟಿರ ಸೀತಮ್ಮ ವಿವೇಕ್

Uncategorized
31/12/202431/12/2024nadubadenews@gmail.comLeave a Comment on ಮನಸ್ಸಿನ ಅರಿವು-ವಿವರಣೆ-ವಿಶ್ಲೇಷಣೆ : ಕೊ. ಮಾಳೇಟಿರ ಸೀತಮ್ಮ ವಿವೇಕ್
Spread the love
ಮನಸ್ಸಿನ ಅರಿವು-ವಿವರಣೆ-ವಿಶ್ಲೇಷಣೆ : ಕೊ. ಮಾಳೇಟಿರ ಸೀತಮ್ಮ ವಿವೇಕ್

ಜೀವ ಜಗತ್ತು ಅಸ್ತಿತ್ವದಲ್ಲಿ ಇರುವುದು, ಜಗತ್ತಿನ ಜೀವಂತಿಕೆಯಿಂದ. ಆದರೆ ಮನುಷ್ಯ ತನ್ನ ಅನುಕೂಲಕ್ಕೆ ಅನುಗುಣವಾಗಿ ನಿರ್ಮಿಸಿಕೊಂಡು ಬಂದಿರುವ ಅಲೌಕಿಕತೆ ಮತ್ತು ಗ್ರಂಥ ಕಟ್ಟುಪಾಡುಗಳಿಂದಾಗಿ ಲೋಕದ ಅಸ್ತಿತ್ವದ ಕುರಿತು ವಾಸ್ತವ ವಿಚಾರಗಳ ಮಂಥನ ಮಾಡುವುದಕ್ಕಿಂತ ಮೂಢ ನಂಬಿಕೆಗಳಿಗೆ ಶರಣಾಗುತ್ತಾ ಬಂದಿದ್ದಾನೆ. ಬುದ್ಧ, ಮಹಾವೀರ, ಚಾರ್ವಕ, ಸಿದ್ಧ ಸಾಧಕರು ಭೂಮಿಯಲ್ಲಿ ಆರೋಗ್ಯಕರವಾಗಿ ಬದುಕುವಂತೆ ಮಾಡಲು  “ಬದುಕು ಬದುಕಲು ಬಿಡು”, “ಕೊಲ್ಲುವವರಿಗಿಂತ ಕಾಯುವವನು ಮೇಲು” “ಅಹಂ ಬ್ರಹ್ಮಾಸ್ಮಿ” ಇತ್ಯಾದಿಯಾಗಿ ನೈಜ ವಿಚಾರಗಳನ್ನು ಪ್ರಚಾರ ಪಡಿಸಿದ್ದರೂ, ಜೀವ ಜೀವನದ ತಳಪಾಯವಾದ ಮನಸ್ಸು ಮತ್ತು ಶರೀರವನ್ನು ಭೂಮಿಯ ಜೀವಂತಿಕೆ ಉಳಿಸಿಕೊಳ್ಳಲು ಬಳಸಿಕೊಳ್ಳುವುದಕ್ಕಿಂತ, ಮನುಜ ಮಾನವ ಮಾನವನ ನಡುವೆಯೇ ಕದನ ಏರ್ಪಡುವಂತಹ ಅತಿಯಾಸೆ ಮತ್ತು ನಂಬಿಕೆಗಳನ್ನು ಬೆಳೆಸುವುದಕ್ಕೆ ಬಳಸುತ್ತ ಬಂದಿದ್ದಾನೆ. ಹೀಗಾಗಿ ಭೂಮಿಯಲ್ಲಿ ಜೀವಸಂಕುಲಗಳಲ್ಲಿ ಒಂದಾದ ಮಾನವಕುಲ ತುಸು ಹೆಚ್ಚಿನ ಬುದ್ಧಿಶಕ್ತಿ ಪಡೆದಿದ್ದರೂ ಅರಿವಿನ ಕೊರತೆ ಮತ್ತು ಅನುಭವ ಬದ್ಧತೆಯಲ್ಲಿರದೆ  ಯುದ್ಧ ಕ್ಲೇಷಗಳಲ್ಲಿ ತೊಡಗಿ ಭೂಮಿಯನ್ನೇ ನಾಶ ಗೈಯುವಂತಹ ಕೃತ್ಯ ನಡೆಸುತ್ತಾ ಬಂದಿದ್ದಾನೆ.

ಇಂದಿನ ಆಧುನಿಕ ಯುಗದಲ್ಲಿ ವ್ಯವಸ್ಥೆಗಳು ಸಾಕಷ್ಟು ಸುಧಾರಣೆ ಕಂಡಿದ್ದರೂ ತಮ್ಮ ಜೀವನ ತಾವೇ ನಡೆಸಬೇಕು ಎಂಬುದನ್ನು ಗಮನಿಸದೆ ವಿದ್ಯೆಯ ಉತ್ತುಂಗ ಪದವಿ ಪಡೆದಿದ್ದರೂ “ಬುದ್ಧಿ ಇದೆ ಆದರೆ ಅರಿವಿಲ್ಲದ ಸ್ಥಿತಿ”ಯಲ್ಲಿ ಜನರು ಜೀವನ ಸಾಗಿಸುತ್ತಿದ್ದಾರೆ.

ಡಿ.ವಿ.ಜಿ.ಯವರ ಕಗ್ಗದಲ್ಲಿ ಬರೆಯಲಾಗಿರುವಂತೆ…,

“ಸೌಂದರ್ಯದೊಳ್‌ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ|

ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ||

ಮುಂದೆ ನೀನಾನು ಭಯಗಳ ದಾಟಿ ಸಾಗುತಿರೆ|

ಬಂಧ ಮೋಚನೆ‌ ನಿನಗೆ ಮಂಕುತಿಮ್ಮ||

ಹೀಗೆ ದ್ವಂದ್ವಗಳಿಂದ ಕೂಡಿದ ಧನಾತ್ಮಕ ಮತ್ತು ಋಣಾತ್ಮಕ ಹೋರಾಟ ನಡೆಸುವ ಮನಸ್ಸನ್ನು ಅರಿಯದೆ ಮತ್ತು ಸಮತೋಲನ ಕಾಯ್ದುಕೊಳ್ಳುವ  ಮಾರ್ಗವಿರುವುದನ್ನು ಅರ್ಥ ಮಾಡಿಕೊಳ್ಳದೆ, ಮನಸ್ಸಿನ  ಇಬ್ಬಂದಿತನಕ್ಕೆ ಸಿಲುಕಿ ಮೂಢನಂಬಿಕೆಗಳನ್ನು ಆಯ್ದುಕೊಂಡು ಮಾನವನೆಂಬ ಬುದ್ಧಿಜೀವಿ ಬದುಕನ್ನು ಕಷ್ಟಪಟ್ಟು ದೂಡುತ್ತಿದ್ದಾನೆ.

ಸಹಜವಾಗಿರದ ಇಂತಹ ಸ್ಥಿತಿಗೆ ಸಾರ್ವತ್ರಿಕವಾಗಿ ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಪ್ರಪಂಚದ  ಪ್ರತಿಯೊಬ್ಬರ ಒಳಗೂ ಇರುವ ಮನಸ್ಸಿನ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಆಧುನಿಕ ಯುಗದ ಮೊಬೈಲ್ ಅಥವಾ ಜಂಗಮವಾಣಿ ಪ್ರಪಂಚ, ಜನರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಲೋಕ ಸೂಕ್ತಿಗಳನ್ನು ತಲುಪಿಸುತ್ತಿದೆ. ಆದರೂ ಜನರ ಸಂಕಟಗಳು ಅಳಿಸಿಲ್ಲ ಕಾರಣ ತಮ್ಮದೇ ತನುಮನದ ಅರಿಯುವ ನಿಟ್ಟಿನಲ್ಲಿ ಯಾರು ಆಳವಾಗಿ ಗಮನ ಹರಿಸುತ್ತಿಲ್ಲ.  ನಮ್ಮಲ್ಲೇ ಇರುವ ಮನಸ್ಸು ಎಂಬ ವಿಷಯದ ಬಗ್ಗೆ ಸಾಹಿತ್ಯ ಲೋಕ ಹೆಚ್ಚೆಚ್ಚು ಗಮನ ಹರಿಸಿದ್ದರೆ, ಈವರೆವಿಗೆ ಜೀವನದ ಮೌಲ್ಯವನ್ನು ಕುಂಠಿತಗೊಳಿಸುತ್ತ ಬಂದಿರುವ ಅದೆಷ್ಟೋ ಕ್ರೂರ ವಿಪರ್ಯಾಸಗಳು ಮರೆಯಾಗಿರುತ್ತಿದ್ದವು. ಹೋಮರ್, ಷೇಕ್ಸ್‌ಪಿಯರ್, ಟಾಲ್ಸ್‌ಟಾಯ್‌ ಭಾರತೀಯರಾದ ಕಾಳಿದಾಸ, ವಾಲ್ಮೀಕಿ, ವ್ಯಾಸ ಮಹರ್ಷಿ ಆದಿಯಾಗಿ ಪ್ರತಿಯೊಬ್ಬರೂ ಅವರು ಅವರ ಸಾಹಿತ್ಯದಲ್ಲಿ ತಮ್ಮ ವ್ಯಕ್ತಿತ್ವವನ್ನು ತೋರ್ಪಡಿಸಿಕೊಂಡಿಲ್ಲ. ಆದರೆ ತಮ್ಮ ಸಾಹಿತ್ಯದಲ್ಲಿ ಜೀವನಕ್ಕೆ ಗೌರವ ನೀಡುವುದನ್ನು‌ ಮರೆಯದೆ‌ ಬದುಕಿಗೆ ನಿಷ್ಠರಾಗಿದ್ದರು. ಅವರು ತಮ್ಮ ಹೊರಗಿನ‌ ಪಾತ್ರ‌ ಸೃಜಿಸಿ‌ ರಚಿಸಿದ ಪಾತ್ರಗಳಲ್ಲಿ‌ ವ್ಯಕ್ತಿತ್ವ ಸೃಷ್ಟಿಸಿದರಲ್ಲದೆ‌ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶನಕ್ಕಿಡಲಿಲ್ಲ. ಈ ಕಾರಣದಿಂದಾಗಿಯೇ  ಸಾಹಿತ್ಯಗಳಲ್ಲಿ‌ ವ್ಯಕ್ತಿ ನೈಜತೆ ಸಂಪೂರ್ಣವಾಗಿ ತಿಳಿಯುವುದಿಲ್ಲ. ವಾಸ್ತವದಲ್ಲಿ ಅವರು‌ ವ್ಯಕ್ತಪಡಿಸಿದ ಭಾವನೆಯಂತೆ ಅವರು ಇರುವುದಿಲ್ಲ. ಆದರೂ ಕೆಲವು ಸಾಹಿತ್ಯಗಳು ಮಹೋಪಮೆಯಿಂದಲೇ ಮಾನವನ ಮನಸ್ಸಿನಲ್ಲಿ  ಅಳಿಸಲಾಗದ ಛಾಪನ್ನು ಮೂಡಿಸಿಬಿಟ್ಟಿವೆ. ಇವುಗಳ ಆಕರ್ಷಣೆಯಿಂದಾಗಿ‌ ಮೌಢ್ಯ ಮತ್ತು ವಾಸ್ತವದ ನಡುವೆ‌ ವ್ಯತ್ಯಾಸ ಗುರುತಿಸಲಾಗದ ಮನಸ್ಥಿತಿ ಬೆಳೆಯುತ್ತ ಬಂದಿದೆ. ಹಣ ಗಳಿಕೆಗೆ ಶ್ರಮ ಪಡಬೇಕು ಕೂಡಿಟ್ಟು ಬಳಸಿ ಉಳಿಸುವುದು ಕಷ್ಟ, ಆದರೆ ಸುಮ್ಮನೆ ವ್ಯಯಿಸುವುದು ಸುಲಭ ಅದು ಹೆಚ್ಚಿನ ಆನಂದ ನೀಡುತ್ತದೆ. ಈ ರೀತಿಯ ತದ್ವಿರುದ್ಧ ಮನಸ್ಸು ವಾಸ್ತವ ಮತ್ತು ಸತ್ಯದ ಜೊತೆ ನಿಲ್ಲದೆ ಆಕರ್ಷಣೆಯನ್ನು ಆಯ್ದುಕೊಳ್ಳುತ್ತಿರುವುದರಿಂದ ನಂಬಿಕೆಗಳನ್ನು ಅವಲಂಭಿಸುತ್ತವೆ. ಈ ಎಲ್ಲ ವಿಷಯಗಳ ಆಂತರ್ಯ ಮನಸ್ಸೇ ಆಗಿದೆ. ಇಂತಹ ಮನಸ್ಸಿಗೆ ಬಾಲ್ಯದಿಂದಲೇ ವಾಸ್ತವಗಳ ಕುರಿತು ತರಬೇತಿ ನೀಡಿದರೆ ಜೀವನದ ಬಗ್ಗೆ ಸ್ಪಷ್ಟತೆ ಕಾಯ್ದುಕೊಳ್ಳುತ್ತದೆ. ಹಾಗೆ ಮನಸ್ಸನ್ನು ಕಷ್ಟಪಟ್ಟು ಹತೋಟಿಗೆ ತರದೆ ಮತ್ತು ಶಿಕ್ಷೆ ನೀಡಿ ನಿಗ್ರಹಿಸದೆ ಸಹಜ  ಏಕಾಗ್ರತೆಯಿಂದಿರಿಸುವ ತರಬೇತಿಯನ್ನು ನೀಡಿ ಸಾಧನೆಯ ಹಾದಿ ಕಾಣುವ ಅತ್ಯಂತ ಶ್ರೇಷ್ಠ ವಿಧಾನ ಎಂದರೆ ಧ್ಯಾನ. ಧ್ಯಾನವನ್ನು ಪರಿಪಾಲಿಸಿದ ವಿವೇಕಾನಂದರು, ಮಹಾತ್ಮ ಗಾಂಧೀಜಿ, ಯೇಸು, ಮಹಮ್ಮದ್ ಪೈಗಂಬರ್, ಬಸವಣ್ಣರಾದಿಯಾಗಿ ಮಹಾನ್ ಸಾಧನೆ ಮಾಡಿದವರೆಲ್ಲರು ಜ್ಞಾನ ಸಂಪಾದನೆ, ಕೀರ್ತಿ, ಪ್ರೀತಿ ಗಳಿಸಿರುವುದು‌ ಧ್ಯಾನ ಪ್ರಕ್ರಿಯೆಯಿಂದಲೆ. ಮನಸ್ಸಿನ ಮೂಲ ಗುಣ ಶಾಂತಿ ಮತ್ತು ಖುಷಿಯಿಂದ ಇರುವುದು. ಮಾಡಬೇಕಾದ ಕೆಲಸಗಳನ್ನು ಮಾಡಲೇಬೇಕು ತನ್ನಿಂದ ಸಾಧ್ಯವಿರುವ ಅಷ್ಟನ್ನೂ ಪ್ರೀತಿಯಿಂದ, ಬದ್ಧತೆಯಿಂದ ಮತ್ತು ಏಕಾಗ್ರತೆಯಿಂದ ಮಾಡಿ ಮುಗಿಸಿ ಯಶಸ್ಸು ಪಡೆಯುವುದೂ ಧ್ಯಾನದ ರೂಪವಾಗಿದೆ. ವಿಜ್ಞಾನದಲ್ಲಿ ತಿಳಿಯಲ್ಪಡುವ ಪ್ರೋಟಾನ್ ಎಲೆಕ್ಟ್ರಾನ್ ಕಣಗಳ ಮಾದರಿಯಲ್ಲಿಯೇ ಮನಸ್ಸು ಧನ ಮತ್ತು ಋಣ ಕ್ರಿಯೆಗಳ ಚಲನೆಯಲ್ಲಿ ನಿತ್ಯ ನಿರಂತರವಾಗಿದೆ‌. ಆ ಮನಸ್ಸನ್ನು ನ್ಯೂಟ್ರಾನ್‌ನಂತ ತಟಸ್ಥ ಸ್ಥಾನಕ್ಕೆ ತಲುಪಿಸುವ ಕೆಲಸವನ್ನೇ ಕೆಲವಡೆ ದೈವಾರಾಧನೆ ಆದಿಯಾಗಿ ನಾನಾ ನಂಬಿಕೆಗಳು ಮತ್ತು ಧರ್ಮ ಸಿದ್ಧಾಂತಗಳು ಮಾಡುತ್ತ ಬಂದಿವೆ. ಅದರಂತೆ ಶಾಂತಿ, ಪ್ರೀತಿ ಮತ್ತು ಆರೋಗ್ಯಕರವಾಗಿ ಜೀವಿಸಲು ಸತ್ಯ ಮಾರ್ಗದಲ್ಲಿರುವಂತೆ ಹೇಳಿವೆ. ಅಂದರೆ ಸಕಾರಾತ್ಮಕವಾಗಿ ಇರುವುದರಿಂದ ಮೋಕ್ಷ ಸಿದ್ಧಿಸುತ್ತವೆ ಎಂದು ಸಂತ ಮಾರ್ಗಗಳನ್ನು ಸೂಚಿಸಿವೆ. ಆದರೆ ಮೂಢನಂಬಿಕೆಗಳು ಅತಿಯಾಗಿ ಆಕ್ರಮಿಸಿಕೊಂಡಿರುವುದು ಅಷ್ಟ ಸಿದ್ಧಿಗಳನ್ನು ಪವಾಡ ಎಂಬಂತೆ ಬಳಸಿಕೊಳ್ಳುತ್ತಿರುವುದು ಜೀವ ಜಗತ್ತಿನ ನೈಜತೆಯನ್ನು ಮಾಯವಾದದೊಳಗೆ ಇರಿಸಿದೆ. ಭೂಮಿಯಲ್ಲಿ ಬದುಕಲು ಮತ್ತು ಭೂಮಿಯ ಜೀವಂತಿಕೆಯನ್ನು ಕಾಪಾಡಲು ಪ್ರತಿಯೊಬ್ಬರು ಒಂದಲ್ಲ ಒಂದು ಕರ್ತವ್ಯ ನಿರ್ವಹಿಸಲೇಬೇಕು. ಅದರಿಂದ ಕಷ್ಟ ನಷ್ಟ ಸಹಜವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ಒತ್ತಡಕ್ಕೆ ಒಳಗಾಗದೆ ಇರುವ ಜ್ಞಾನ ರೂಪವನ್ನು ಮನಸ್ಸಿಗೆ ತಿಳಿಸಬೇಕು.  ಮತ್ತೊಂದು ಧ್ಯಾನ ರೀತಿ ಕಲೆಯಲ್ಲಿ, ಕೆಲಸದಲ್ಲಿ  ಉತ್ತಮಗೊಳ್ಳುವುದು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ತಮಗೆ ಇಷ್ಟವಾದ ಕಲೆಯನ್ನು ಕರತಲಾಮಲಕ ಮಾಡಿಕೊಂಡು ಸಮಾಜಕ್ಕೆ ಅದನ್ನು ಪೂರಕವಾಗಿ ನೀಡುವುದು ಜೀವನದ ಬಹು ದೊಡ್ಡ ಸಾರ್ಥಕತೆ ಆಗಿರುತ್ತದೆ. ಚಿಕ್ಕದೇ ಆಗಲಿ ದೊಡ್ಡದೇ ಆಗಲಿ ಪ್ರತಿಯೊಬ್ಬರ ಪ್ರತಿಯೊಂದು ಕಾರ್ಯವು ಪ್ರಕೃತಿಗೆ ಬೇಕಿರುವುದು ಮತ್ತು ಅದು ತಮ್ಮ ಪಾಲಿನ ಸಾಧನೆ ಆಗಿರುತ್ತದೆ.

ಅದಕ್ಕೆ ಉದಾಹರಣೆಯಾಗಿ ಹೇಳುವುದಾದರೆ‌ ನಾಸಾ ಬಾಹ್ಯಾಕಾಶ ಸಂಶೋಧನಾ ಕೇಂದ್ರವು ಸೆಪ್ಟೆಂಬರ್ 05, 1977ರಲ್ಲಿ ವೋಯೇಜರ್ 1 ಮತ್ತು 2 ಎಂಬ ಅವಳಿ ಪ್ರಪ್ರಥಮ ಮಾನವ ನಿರ್ಮಿತ ಗಗನ ನೌಕೆಯನ್ನು ಸೌರಮಂಡಲ ಅಧ್ಯಯನಕ್ಕಾಗಿ ಫ್ಲೋರಿಡಾದಿಂದ ಅಂತರಿಕ್ಷಕ್ಕೆ ಉಡಾವಣೆ ಮಾಡಿತ್ತು. 1990ರಲ್ಲಿ ಅದು ತನ್ನ 3.7 ಮಿಲಿಯನ್(24.7 ಬಿ.ಕಿ.ಮೀ) ಮೈಲಿ ದೂರದ ಕಕ್ಷೆಯನ್ನು ತಲುಪಿ ಭೂಮಂಡಲದ  ಛಾಯಾಚಿತ್ರವನ್ನು  ಭೂಮಿಯಲ್ಲಿದ್ದ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಿತ್ತು. ಈ ಚಿತ್ರವು ಮನುಕುಲದ ಪಾಲಿಗೆ ಐತಿಹಾಸಿಕ ಚಿತ್ರವಾಗಿ ಉಳಿಯಿತು. ಪ್ರಥಮ ಬಾರಿಗೆ ನಮಗೆ ಹತ್ತಿರದಿಂದ ಇಷ್ಟು ಬೃಹದಾಕಾರವಾಗಿ ಕಾಣುವ ಭೂಮಿಯು ಸೌರಮಂಡಲದ ಕಕ್ಷೆಯಿಂದ ಚುಕ್ಕಿಯಂತೆ ಕಾಣುತ್ತಿರುವ ದೃಶ್ಯವನ್ನು ಅದು ಸೆರೆ ಹಿಡಿದು ಕಳುಹಿಸಿ ವಿಶ್ವದ ಅನಂತತೆಯನ್ನು  ಸಾಕ್ಷೀಕರಿಸಿ ದೃಢೀಕರಿಸಿತ್ತು. ಇದು ಒಂದೆಡೆ ನಮ್ಮ ಅಸ್ತಿತ್ವ ಭೂಮಿಯಲ್ಲಿ ಧೂಳಿನ ಕಣದ ಕಣದಷ್ಟೂ ಇಲ್ಲ ಎಂಬುದನ್ನು ತಿಳಿಸಿದರೆ,  ನಮ್ಮ ಜೀವನ ಮಟ್ಟದಲ್ಲಿ ಅರಿಷಡ್ವರ್ಗಗಳ ದಾಸರಾಗಿ ತಮ್ಮೊಳಗೇ ಸಮರ ನಡೆಸುತ್ತ ಸಿಕ್ಕಿರುವ ಎಂತಹ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನೂ ತಿಳಿಸಿದಲ್ಲದೆ, ನಿಷ್ಠೆಯಿಂದ  ಯಾರೇ ಮಾಡುವ ಯಾವುದೇ ಕೆಲಸ ಯಾವಾಗ ಬೇಕಾದರೂ ಇತಿಹಾಸ ನಿರ್ಮಿಸಬಹುದು ಎಂಬುದನ್ನೂ ತೋರಿಸಿದಂತಿತ್ತು. ೨೦೧೨ರಲ್ಲಿ ಸೌರಮಂಡಲದ ಹೊರ ಕಕ್ಷೆಯ ಮತ್ತಷ್ಟು ಚಿತ್ರಗಳನ್ನು ಡೀಪ್ ಸ್ಪೇಸ್ ನೆಟ್ ವರ್ಕ್ ಮೂಲಕ ರವಾನಿಸಿ ಹೊಸ ಚಂದ್ರ, ಸಾಟರ್ನ್, ಜೋವಿಯನ್ ಮುಂತಾದ ಗ್ರಹ ಉಪಗ್ರಹಗಳ ಇರುವಿಕೆಗೆ ಪುರಾವೆ ಒದಗಿಸಿದೆ. ಕಾರು ಗಾತ್ರದ ಈ ಗಗನ ನೌಕೆ ಅಂತರಿಕ್ಷದಲ್ಲಿ ಈವರೆವಿಗೂ ಕಾರ್ಯ ನಿರ್ವಹಿಸುತ್ತಲೇ ಇದೆ.

      ಹಾಗಾಗಿ ಎಚ್ಚರವಾಗಿರುವ ಮನಸ್ಸು ಮತ್ತು ಭಾವನೆಗಳಿರುವ ಮಾನವ ಶರೀರದ ಆಯಸ್ಸು ಮುಗಿದ ಮೇಲೆ ಸ್ವಾಭಾವಿಕವಾಗಿ ಸಾಯಲೇ ಬೇಕು. ಹಾಗಿರುವಾಗ ಅರಿವು ಬೆಳೆಸಿಕೊಳ್ಳದೆ ಅರ್ಧ ಆಯಸ್ಸನಷ್ಟೇ ಜೀವಿಸುವುದು ಏಕೆ? ಕರ್ತವ್ಯ ಮತ್ತು ಕರ್ಮ ಬಲಿದಾನಗಳನ್ನು ತಡೆಯುವ ಶಕ್ತಿ ಮನಸ್ಸಿಗಿದೆ. ಹಾಗಾಗಿ ಸಹಜ ಬುದ್ಧಿವಂತಿಕೆ ಬೆಳೆಸಿಕೊಂಡು ಸರಳ ಜೀವನ ನಡೆಸುವವರಿಗೆ ಹುಟ್ಟು ಸಾವಿನ ನಡುವೆ ಬದುಕಿದ್ದೇಗೆ ಎಂಬುದಷ್ಟೇ ಮುಖ್ಯವಾಗಿರುತ್ತದೆ.

ಪ್ರಕೃತಿಗೆ ಕೆಟ್ಟದು ಒಳ್ಳೆಯದರ ಲೆಕ್ಕಾಚಾರ ಇಲ್ಲ. ಪ್ರಕೃತಿ ದೃಷ್ಟಿಯಲ್ಲಿ ಎಲ್ಲವೂ ಒಂದೇ. ಹಾಗಾಗಿಯೇ ಪ್ರಕೃತಿ ಜೀವಂತವಾಗಿರುವುದು. ಮನುಷ್ಯ ತಾನು ಚೆನ್ನಾಗಿ ಬದುಕಲಿಕ್ಕಾಗಿ ತನಗೆ ಸಿಕ್ಕಿದ ಶರೀರ ಮತ್ತು ಮನಸ್ಸಿನ ಬಗ್ಗೆ ತಿಳಿದುಕೊಂಡರೆ, ತಮ್ಮಂತೆ ಜೀವ ಇರುವ ಆದರೆ ಅವರ ಪರಿಸ್ಥಿಗೆ ಪೂರಕವಾಗಿ ಬದುಕುತ್ತಿರುವ ಮತ್ತೊಬ್ಬರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರನ್ನು ಯಾರು ಹೇಗಿದ್ದಾರೋ ಹಾಗೇ ಸ್ವೀಕರಿಸುತ್ತಾನೆ. ಯಾವುದು ಸರಿ ಯಾವುದು ತಪ್ಪು ಗುರುತಿಸಲು ತಿಳಿಯುತ್ತಾನೆ. ತಪ್ಪಾಗುತ್ತಿರುವುದಕ್ಕೆ ಮಾರ್ಗದರ್ಶನ ನೀಡುತ್ತಾನೆ. ಆಗದಿದ್ದರೆ ಸುಮ್ಮನಾಗುತ್ತಾನೆ. ತಪ್ಪನ್ನು ತಿದ್ದಲು ಹೋಗಿ ತಾನೇ ಕೂಗಾಡುವುದು ಚೀರಾಡುವುದು ಮಾಡಿದರೆ ಆತನೇ ದೊಡ್ಡ ತಪ್ಪು ಮಾಡಿದಂತೆ.

ಎಲ್ಲರು ಅವರ ಶರೀರಕ್ಕೆ ಹೊಂದಾಣಿಕೆ ಆಗುವಂತಹ ಮನಃಸ್ಥಿತಿಯನ್ನೇ ಹೊಂದಿರುತ್ತಾರಲ್ಲದೆ ಇನ್ನೊಬ್ಬರ ಶರೀರದ ಮನಸ್ಥಿತಿಯನ್ನಲ್ಲ. ಹಾಗಾಗಿ ಸಕಾರಾತ್ಮಕವಾಗಿ ಯೋಚಿಸುವುದು ಸಕಾರಾತ್ಮಕವಾಗಿ ಬದುಕುವುದೇ ನಮ್ಮ ಅಸ್ತಿತ್ವ ರಹಸ್ಯ ಮತ್ತು ಸೃಷ್ಟಿ ರಹಸ್ಯ ತಿಳಿದುಕೊಳ್ಳಲಿಕ್ಕಿರುವ ರಹದಾರಿ. ಎಲ್ಲರಿಗಿರುವ ಮನಸ್ಸಿನ ಮೂಲಗುಣ ಕುಷಿಯಾಗಿರುವುದು. ಸಾರಾಯಿ ಕುಡಿಯುವವನೂ ಆನಂದ ಬಯಸಿಯೇ ಸುರ ಸೇವನೆ ಮಾಡುವುದು, ಪೂಜೆ ಆರಾಧನೆ ಮಾಡುವವನೂ ಮನಶಾಂತಿ ಕುಷಿ ನೆಮ್ಮದಿ ಬಯಸಿ ಭಕ್ತಿ ರೂಪದಲ್ಲಿ ಕ್ರಿಯೆ ಮಾಡುವುದು. ಇದನ್ನು ಸಾತ್ವಿಕತೆ ಎನ್ನುತ್ತಾರೆ ಅಷ್ಟೇ. ಹೆಚ್ಚು ಜನರಿಗೆ ಮನಸ್ಸಿನ ಬಗ್ಗೆ ತಿಳುವಳಿಕೆ ಇಲ್ಲದಿರುವುದರಿಂದ ಪ್ರೀತಿಯಿಂದ ಸ್ವೀಕರಿಸಿದ ಸತ್ಯ, ಶ್ರಮ ನಿಷ್ಠೆ, ಬದ್ಧತೆಯಲ್ಲಿ ಇರುವುದರಿಂದ  ಕುಷಿ, ನೆಮ್ಮದಿ ಯಥೇಚ್ಛವಾಗಿ ಒಲಿಯುತ್ತದೆ ಎಂಬ ಅರಿವಿಲ್ಲ. ಅದಕ್ಕೆ ಮನಸ್ಸು ಮೆಚ್ಚುಗೆ, ಸಾಂತ್ವಾನ ಬಯಸಿ ಅಲ್ಲಿ ಇಲ್ಲಿ ಅಲೆಯುತ್ತದೆ. ಈ ಪ್ರಪಂಚದಲ್ಲಿ ಎಲ್ಲ ರೀತಿಯ ವಿದ್ಯೆ ಸಿಗುತ್ತದೆ ಆದರೆ ನಮ್ಮನ್ನು, ನಮ್ಮ ಸುತ್ತಮುತ್ತಲಿನಲ್ಲಿ ಇರುವವರನ್ನು ಅರ್ಥ  ಮಾಡಿಕೊಳ್ಳುವ ವಿದ್ಯೆ ಸಿಗುವುದಿಲ್ಲ ಅದನ್ನು ನಾವಾಗಿಯೇ ಕಲಿಯಬೇಕು. ಜೀವನದಲ್ಲಿ ನಾವು ತಿಳಿಯದೆ ಮಾಡಿದ ತಪ್ಪನ್ನು ನಾವೇ ಕ್ಷಮಿಸಿಕೊಳ್ಳಬೇಕು. ಮುಂದೆ ಯಾವುದೇ ತಪ್ಪಾಗದಂತೆ ಎಚ್ಚರವಹಿಸಬೇಕು. ಇತರರನ್ನು ಕ್ಷಮಿಸುವುದನ್ನು ಕಲಿತರೆ ಮಾತ್ರ ನಮ್ಮ ಮನಸ್ಸಿಗೂ ನೆಮ್ಮದಿ ಒದಗುವುದು.

ಈ ಜೀವಂತ ವಿಶ್ವಕ್ಕೆ ಕೃತಜ್ಞರಾಗಿರುವುದು,

ನಮ್ಮನ್ನು ನಾವು ನಾವಿರುವಂತೆ‌  ಸ್ವೀಕರಿಸುವುದು ಮತ್ತು ಇನ್ನೊಂದು ಜೀವ ಚೇತನ ಇರುವಿಕೆಯನ್ನು  ಇರುವಂತೆ ಸ್ವೀಕರಿಸುವುದು ಹಾಗೂ ಗೌರವಿಸುವುದನ್ನು ಕಲಿತರೆ‌, ಪುರುಷ ಪ್ರಧಾನ ಸಮಾಜದ ಅಸಮಾನ ಮನಸ್ಥಿತಿ, ಹೆಣ್ಣು ಮಕ್ಕಳು ಮುಖ ಮುಚ್ಚಿಕೊಂಡು ಜೀವಿಸುವ ಪರಿಸ್ಥಿತಿ ಇವುಗಳಿಂದೆಲ್ಲ ಮುಕ್ತಿ ಪಡೆಯ ಬಹುದು. ಸಿಕ್ಕಿದ ಜೀವವು ಸುಂದರವಾಗಿರುವ ಭೂಮಿ ಎಂಬ ಸ್ವರ್ಗದಲ್ಲಿ ಆನಂದವಾಗಿ ಜೀವಿಸಿ, ಭೂ ಜೀವಂತಿಕೆ ಕಾಯುವ  ವಂಶಾಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಜೀವನದ ಆನಂದವನ್ನು ಅನುಭವಿಸುತ್ತ ಮನಸ್ಸಿಗೆ ಮತ್ತು ಮನಸ್ಸುಗಳಿಗೆ ಸಂತೋಷ ನೀಡುತ್ತ ಭೂಮಿಯಿಂದ ಸಹಜವಾದ ಮೋಕ್ಷವನ್ನು ಪಡೆಯಬಹುದು.  ಕೊನೆಯದಾಗಿ ಈ ಲೇಖನವನ್ನು ಮನಸಾ ಅರ್ಥೈಸಿಕೊಂಡ ಎಲ್ಲರಿಗೂ, ಎಲ್ಲರೊಳಗಿರುವ ಒಡೆಯ ಮನಸ್ಸು ಎಂಬುದಾಗಿ  ಬರೆದ ನನ್ನದೊಂದು ಕವನವನ್ನು  ಪ್ರಸ್ತುತ ಪಡಿಸುತ್ತ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಸರ್ವರೊಳಿಹ ಇನ ಮನವಯ್ಯ

ಮನಸು ಮಲಿನವಾದರೆ‌

ನರನು ಸುಖವ ಕಾಣನಯ್ಯ|

ಮನಸು‌ ಮೃಗೀಯವಾದರೆ‌

ಯಾರ‌ ನೋವು ಅರಿಯದಯ್ಯ‌|

ಬೇಧಭಾವ ಮಾಡುವ ಮನ‌

ಮೂಢತೆಗೆ ಸಿಲುಕಿದುದಯ್ಯ|

ಶಾಪ‌ ತಾಪವ ಚಿಂತಿಪ‌ ಮನ‌

ಹಟ‌ ಚಟಗಳ ಅಡಿಯಾಳಯ್ಯ|

ಮನವ ತೀಡಿ‌ ನಡೆಯುತಿರೆ

ರೋಗ‌ ರುಜಿನ‌ ದೂರವಯ್ಯ|

ಮನವ ಅರಿತು‌ ಬಾಳುತಿರೆ

ಬುವಿಯೇ‌ ಸ್ವರ್ಗ ಕಾಣಯ್ಯ‌|

ಗಂಡು‌ ಹೆಣ್ಣು‌ ಎಂದಿರದ‌

ಸರ್ವರೊಳಿಹ‌ ಇನ ಚಿತ್ತವಯ್ಯ|

ಮನವೇ‌ ತನುವಿನ ಒಡೆಯ‌

ಜೀವ ಜೀವನಕೆ‌ ಮೂಲವಯ್ಯ|

ಕಲ್ಯಾಣ ಕಾರ್ಯ‌ ಗೈದವರೆಲ್ಲ

ಚಿತ್ತಭ್ಯುದಯಕೆ‌ ಶ್ರಮಿಸಿರುವುದಯ್ಯ‌|

ಸತ್ಯ ವಾಸ್ತವದಿ‌ ಸಾಗಿದ ಮನ ಅದಕೇ

ಜ್ಞಾನೋದಯವಾಗಿರುವುದಯ್ಯ|

ಮನಸ್ಸಿನ ಕುರಿತು ಇನ್ನಷ್ಟು ಆಳವಾದ ವಿಚಾರಗಳನ್ನು ತಿಳಿಯಲು ನಾನು ಬರೆದಿರುವಂತಹ ಮನಸ್ಸು ಅಥವಾ The mind ಪುಸ್ತಕವನ್ನು ಕೊಂಡು ಓದಿ, ಜೀವನ ಶೈಲಿಯನ್ನು, ಆಲೋಚನೆಯನ್ನು ಬದಲಿಸಿಕೊಂಡು ಭೂಮಿಯಲ್ಲಿ ಆನಂದವಾಗಿ ಕರ್ತವ್ಯ ನಿರ್ವಹಿಸಿ ಹೋಗುವ ರಹಸ್ಯವನ್ನು ತಿಳಿದುಕೊಳ್ಳಿ.

Post navigation

ನಡುಬಾಡೆ ದ್ವಿಭಾಷಾ ಕ್ಯಾಲೆಂಡರ್‌ ಅನಾವರಣ ಮಾಡಿದ, ಎಲ್.ಎ.ಸಿ. & ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ
ಭಾಗವಧ್ವಜದ ಎದುರು ಕುಪ್ಯಚಾಲೆಗೆ ಅವಮಾನ :  ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ ಬಿದ್ದಂಡ ಪ್ರಥಮ್‌ ಕರುಂಬಯ್ಯ

Related Posts

ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

01/10/2024nadubadenews@gmail.com
ಮಡಿಕೇರಿಯಲ್ಲಿ ನಡೆದ ಅರೆಭಾಷೆ ಜನಾಂಗದ ಬೃಹತ್‌ ಪ್ರತಿಭಟನೆ.

ಮಡಿಕೇರಿಯಲ್ಲಿ ನಡೆದ ಅರೆಭಾಷೆ ಜನಾಂಗದ ಬೃಹತ್‌ ಪ್ರತಿಭಟನೆ.

20/01/202520/01/2025nadubadenews@gmail.com
ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

27/09/202427/09/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version