
ಬೆಂಗಳೂರು, ಜು.08;(nadubade news): ಕೊಡಗು ಜಿಲ್ಲೆ ಸೂರ್ಲಬ್ಬಿ ಬಳಿಯ ಭಕ್ತಿ ಮೂಲದ, ಹವ್ಯಾಸಿ ಮ್ಯಾರಥಾನ್ ಓಟಗಾರ ಕೂತಿರ ಬಿದ್ದಪ್ಪ, ಅಮೇರಿಕಾದ ಬೋಸ್ಟನ್‌ನಲ್ಲಿ ಈ ವರ್ಷ ನಡೆದ ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ಮುಂಜಾನೆಯ ಜಾಗಿಂಗ್‌ನಿಂದ ಪ್ರಾರಂಭವಾದ ಕೂತಿರ ಬಿದ್ದಪ್ಪ ಅವರ ಓಟವು ಜಾಗತಿಕ ಮಟ್ಟದವರೆಗೂ ಕರೆದೊಯ್ದಿದೆ. ಫೆಬ್ರವರಿ 2025 ರಲ್ಲಿ ನಡೆದ ಚಂಡೀಗಢ ಮ್ಯಾರಥಾನ್‌ನಲ್ಲಿ 2 ಗಂಟೆ 59 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಪ್ರತಿಷ್ಟಿತ ಬೋಸ್ಟನ್ ಮ್ಯಾರಥಾನ್‌ಗಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಐಟಿ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕರ್ತವ್ಯದಲ್ಲಿರುವ ಕೂತಿರ ಬಿದ್ದಪ್ಪ ತಮ್ಮ ವೃತ್ತಿಯ ಜೊತೆಗೆ ಮ್ಯಾರಥಾನ್‌ನಲ್ಲಿಯೂ ಸಾಧನೆ ಮಾಡುತ್ತಿರುವುದು ಶ್ಲಾಘನೀಯ.
2016ರಲ್ಲಿ ತಮ್ಮ ಪತ್ನಿಯೊಂದಿಗೆ ದಿನನಿತ್ಯದ ವ್ಯಾಯಾಮಕ್ಕಾಗಿ ಓಡಲು ಪ್ರಾರಂಭಿಸಿದರೂ, 2018ರಲ್ಲಿ ಮ್ಯಾರಾಥಾನ್‌ನನ್ನು ಗಂಭೀರವಾಗಿ ಪರಿಗಣಿಸಿ, ಅಂದಿನಿಂದ, 10,000 ಕಿ.ಮೀಗಿಂತಲೂ ಹೆಚ್ಚು ದೂರ ಓಡಿದ್ದಾರೆ. ವಾರದಲ್ಲಿ ಆರು ದಿನಗಳನ್ನು ತಮ್ಮ ತರಬೇತಿಗಾಗಿ ಮೀಸಲಿಟ್ಟಿರುವ ಬಿದ್ದಪ್ಪ ಅವರ ಈ ಶಿಸ್ತು ಬದ್ದತೆಯು ಸಾಧನೆಯ ಮೆಟ್ಟಿಲಾಗಿದೆ.
ಜಾಗತಿಕ ರಾಷ್ಟ್ರೀಯ ಮತ್ತು ಸ್ಥಳೀಯವಾಗಿಯೂ ಸಾಧನೆಯ ಉತ್ತುಂಗವನ್ನು ತಲುಪಿರುವ ಕೂತಿರ ಬಿದ್ದಪ್ಪ ಅವರು, ಇದೇ ವರ್ಷದ ಏಪ್ರಿಲ್ 21ರಂದು ಅಮೇರಿಕ ಬೋಸ್ಟನ್ ಮ್ಯಾರಥಾನ್, ಏಪ್ರಿಲ್ 27ರಂದು ನಡೆದ ಲಂಡನ್ ಮ್ಯಾರಥಾನ್ 2025 (ಯುಕೆ), ಭಾರತದ ಪ್ರಮುಖ ಮ್ಯಾರಥಾನ್‌ಗಳಾದ ಮುಂಬೈ, ಹೈದರಾಬಾದ್,ಚೆನ್ನೈ, ದೆಹಲಿ ಮತ್ತು ಚಂಡೀಗಢ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. TCS ವಿಶ್ವ ಮಟ್ಟದ 10ಕಿಮಿ ಮತ್ತು ಕಠಿಣವಾದ 72 ಕಿ.ಮೀ. ದಕ್ಷಿಣ ಕೊಡಗು ಅಲ್ಟ್ರಾದಲ್ಲಿ ಸ್ಪರ್ಧಿಸಿದ್ದಾರೆ.
ಮೈಸೂರಿನಲ್ಲಿ ನಡೆದ 10ಕಿ.ಮಿ ಮ್ಯರಾಥಾನ್‌ನಲ್ಲಿ ವಿಜೇತರಾಗಿರು ಇವರು, ಬೆಂಗಳೂರಿನಲ್ಲಿ ನಡೆದ 10 ಕಿ.ಮಿ ಚಾಲೆಂಜ್‌ನಲ್ಲಿ 12,000 ಓಟಗಾರ ಪೈಕಿ, ತಮ್ಮ ವಯೋಮಾನದ ವಿಭಾಗದಲ್ಲಿ 3ನೇ ಸ್ಥಾನ ಗಳಿಸಿದ್ದಾರೆ. ಅಲ್ಲದೆ ಮಿಡ್‌ನೈಟ್ ಹಾಫ್ ಮ್ಯಾರಥಾನ್‌ನಲ್ಲಿ ಪ್ರಥಮ, MAFI ರಾಷ್ಟ್ರೀಯ ಮಾಸ್ಟರ್ಸ್ನಲ್ಲಿ ದ್ವಿತೀಯ, ಬೆಂಗಳೂರು ಮತ್ತು ಕೊಡಗು ಅಲ್ಟ್ರಾ ಮ್ಯಾರಥಾನ್‌ಗಳಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
ಅವಿಭಜಿತ ಅಖಂಡ ವಿಶಾಲಕೊಡಗಿನ ಕಾಲಘಟ್ಟದಲ್ಲಿ ಪ್ರಮುಖ ಕೇಂದ್ರಸ್ಥಾನವಾಗಿದ್ದ, ಪ್ರಸ್ತುತ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ತಪ್ಪಲು ಸಾಲಿನಲ್ಲಿ ಬರುವ, ಕೈಬಿಡಲಾಗಿ ಕುಂಬಾರಗಡಿಗೆ ಗ್ರಾಮದೊಂದಿಗೆ ವಿಲೀನ ವಾಗಿರುವ ಐತಿಹಾಸಿಕ ಭಕ್ತಿಯ ಮೂಲದವರಾದ ಕೂತಿರ ಪೊನ್ನಪ್ಪ, ಭಾರತಿ(ತಾಮನೆ: ಮೈಂದಪಂಡ) ದಂಪತಿಯ ಪುತ್ರರಾಗಿರುವ ಕೂತಿರ ಬಿದ್ದಪ್ಪ ಅವರು, ಪತ್ನಿ ಪಾವನ(ತಾಮನೆ: ಮುಂಡುಮಾಡ) ಹಾಗೂ ಪುತ್ರಿಯರಾದ ಪ್ರೇಕ್ಷ ಹಾಗೂ ತನಿಷ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.