ಗೋಣಿಕೊಪ್ಪ,ಮೇ 19(Nadubade News): ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ದೇವರಪುರ ಗ್ರಾಮ ಪಂಚಾಯ್ತಿಗೆ ಸೇರುವ ದೇವರಪುರ ಗ್ರಾಮದಲ್ಲಿ ಅಯ್ಯಪ್ಪ ಮತ್ತು ಭದ್ರಕಾಳಿ ಹೆಸರಿನಲ್ಲಿ ಕುಂಡೆ-ಬೇಡು ಹಬ್ಬ (ಕುದುರೆ ಹಬ್ಬ) ಎಂಬ ಹಬ್ಬವನ್ನು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು ಅದರಂತೆ ಈ ವರ್ಷ ದಿನಾಂಕ:21/05/2025 ಮತ್ತು 22/05/2025 ರಂದು ಆಚರಿಸುತ್ತಿದ್ದು, ಕುಂಡೆ-ಬೇಡು ಹಬ್ಬದಂದು ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೋಕಿನ ತಿತಿಮತಿ, ದೇವರಪುರ, ಪಾಲಿಬೆಟ್ಟ, ಸಿದ್ದಾಪುರ, ಗೋಣಿಕೊಪ್ಪ, ಕಾನೂರು, ಪೊನ್ನಂಪೇಟೆ, ಬಾಳೆಲೆ, ಕುಟ್ಟ ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಪ್ರದೇಶಗಳಲ್ಲಿ ವಾಸಿಸುವ ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ ಮತ್ತು ಎರವ ಹಾಗೂ ಇತರೆ ಜನಾಂಗದ ಪುರುಷರು 5-6 ಜನರ ಗುಂಪು ಸೇರಿಕೊಂಡು ಕೈಗಳಲ್ಲಿ ಸಾಂಪ್ರದಾಯಿಕ ವಸ್ತುಗಳಾದ ದೊಣ್ಣೆ ಮತ್ತು ಇತರೇ ಆಟಿಕೆ ವಸ್ತುಗಳನ್ನು ಹಿಡಿದುಕೊಂಡು ತಮ್ಮ ಮುಖಗಳಿಗೆ ಬಣ್ಣವನ್ನು ಬಳಿದುಕೊಂಡು ಮದ್ಯಪಾನ ಮಾಡಿಕೊಂಡು ಕುಣಿದು ಕುಪ್ಪಳಿಸಿ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ನಿಲ್ಲಿಸಿ ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಮಾಡುವುದಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಸಾರ್ವಜನಿಕರಿಂದ ಬಲವಂತವಾಗಿ ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡುವ, ಸಾರ್ವಜನಿಕ ಸ್ಥಳದಲ್ಲಿ ವೇಷಧರಿಸಿ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ಬಯ್ಯುವುದನ್ನು ಮತ್ತು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ತಡೆದು ನಿಲ್ಲಿಸಿ ದೇವರಿಗೆ ನೀಡಬೇಕಾದ ಕಾಣಿಕೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವುದಾಗಿ ತಿಳಿದುಬಂದಿರುತ್ತದೆ.
ಆದ್ದರಿಂದ ಅಯ್ಯಪ್ಪ ಮತ್ತು ಭದ್ರಕಾಳಿ ಹೆಸರಿನಲ್ಲಿ ಕುಂಡೆ-ಬೇಡು ಹಬ್ಬಕ್ಕೆ(ಕುದುರೆ ಹಬ್ಬ) ಆಗಮಿಸುವ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ, ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿರುತ್ತದೆ. ಬಲವಂತವಾಗಿ ವಾಹನಗಳನ್ನು ತಡೆದು ಹಣವನ್ನು ನೀಡುವಂತೆ ಸಾರ್ವಜನಿಕರಿಗೆ ಒತ್ತಾಯ ಮಾಡಿದರೆ ಹಾಗೂ ವಿನಾಕಾರಣ ದೇವರ ಹೆಸರಿನಲ್ಲಿ ಸಾರ್ವಜನಿಕರಿಗೆ ಹಣವನ್ನು ನೀಡುವಂತೆ ಒತ್ತಾಯ ಮಾಡಿ ತೊಂದರೆ ನೀಡಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಭಕ್ತಾದಿಗಳು ಮತ್ತು ಸಾರ್ವಜನಿಕರಲ್ಲಿ ಈ ಮೂಲಕ ತಿಳಿಯಪಡಿಸಲಾಗಿದೆ ಎಂದು ಗೋಣಿಕೊಪ್ಪ ಪೋಲಿಸ್ ಠಾಣೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.