ಇವತ್ಯಕೋ ಎಂದಿಗಿಂತ ಹೆಚ್ಚು ತಳಮಳ ಆಗುತ್ತಿದೆ, ಒಂತರಾ ಕುಸಿದು ಬಿದ್ದ, ಬದಿಗೆ ಒರಗಿ ಹೋದ ಅನುಭವ ಆಗುತ್ತಿದೆ. ಅದರಿಂದ ಹೊರಬರಲು ಏನೆಲ್ಲೋ ಮಾಡಲು, ವಿಷಯಾಂತರ ಮಾಡಲು, ಬೇರೆ ಕೆಲಸ ಮಾಡಲು ಹೊರಟೆನಾದರು, ಮನಸ್ಸು ಯಾಕೋ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಒಳಗೇ ಓಡುತ್ತದೆ. ಮನಸ್ಸಿನ ಒಳಗಿನ ದುಗುಡವನ್ನು ಹೊರಹಾಕಿಬಿಡೋಣ ಎಂದು ಎಂದು ಬರೆಯಲು ಕುಳಿತೆ. ನನ್ನ ಅನುಭವದಲ್ಲಿ ಇದೇ ಮೊದಲು ಕೀ ಪ್ಯಾಡ್ ಒತ್ತಲು ಕೈ ನಡಗುತ್ತಿದೆ, ಅಕ್ಷರಗಳನ್ನು ಹುಡುಕಲು ಕಣ್ಣು ಮಂಜಾಗುತ್ತಿದೆ, ಬಾಯಿ ಒಣಗಿದಂತೆ, ಹೊಟ್ಟೆ ಬಿರಿದೇ ಹೋಯಿತು ಎನ್ನುವಷ್ಟು ಏನೋ ಅಸಾಧ್ಯ ನೋವು ಕಾಡುತ್ತಿದೆ. ಆದರೂ ನನ್ನೊಳಗಿನ ಹೆಪ್ಪುಗಟ್ಟಿದ ಬೇನೆಯನ್ನು ಹೊರಹಾಕುವ ಪ್ರಯತ್ನ ಮಾಡುತ್ತೇನೆ.
ಅಂದು 20220ರ ನವೆಂಬರ್ 22ನೇ ತಾರೀಕು, ಮೈಸೂರಿನಿಂದ ಮನೆಗೆ ವಾರಕೊಮ್ಮೆ ಬರುತಿದ್ದೆ, ಅಪ್ಪ ಒಬ್ಬರೇ ಇರುತಿದ್ದರೆಂದು, ಅಂದು ಅಣ್ಣನೂ ಇರಲಿಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಲಿಂಗಾಯತ ಅಭಿವೃದ್ದಿ ನಿಗಮ ಘೋಷಿಸಿದ್ದರು. ನಾನು ಅಂದಿನ ಶಾಸಕ ಸುನಿಲ್ ಸುಬ್ರಮಣಿ ಅವರಿಗೆ ಕರೆ ಮಾಡಿ ಕೊಡವರಿಗೆ ಯಾಕಿಲ್ಲ, ತಾವೇಕೆ ಒತ್ತಡ ಹಾಕಬಾರದು ಎಂದೆ. ಅದಕ್ಕವರು ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡೋಣ ನೀನು ಮನವಿ ಕೊಡು, ಆಮೇಲೆ ಎಲ್ಲಾ ಕೊಡವ ಸಮಾಜಗಳನ್ನೂ ಸೇರಿಸಿಕೊಂಡು ಒಂದು ನಿಯೋಗ ಹೋಗೋಣ ಎಂದರು. ನಾನು ತಕ್ಷಣ ಮುಖ್ಯಮಂತ್ರಿಗಳಿ ಈ ಮೈಲ್ ಮೂಲಕ ಮನವಿ ಪತ್ರ ಕಳಿಸಿ ಪತ್ರಿಕಾ ಹೇಳಿಕೆಯನ್ನೂ ನೀಡಿದೆ. ಕೆಲ ರಾಜ್ಯ ಮಟ್ಟದ ಟಿವಿ ಮಾದ್ಯಮಗಳು ನನ್ನ ಬೈಟ್ ಬೇಕು ಮಡಿಕೇರಿಗೆ ಬನ್ನಿ ಎಂದರು. ಅದಕ್ಕಾಗಿ ನಂವೆಂಬರ್ 23ರಂದು ಮಡಿಕೇರಿಗೆ ಹೊರಡುವಾಗ, ಅದಾಗಲೇ ಅಮ್ಮ ಇಲ್ಲದೆ ಖಿನ್ನತೆಯಲ್ಲಿದ್ದ ಪಪ್ಪನ ಬಾ ಒಂದು ರೌಂಡ್ ಹಾಕಿ ಬರೋಣ ಎಂದೆ. ಅಪ್ಪ ಮರು ಮಾತನಾಡದೆ, ಮಗುವಿನಂತೆ ಕುಶಿಯಿಂದ ಹೊರಟರು. ಮಡಿಕೇರಿಯಲ್ಲಿ ನನ್ನ ಕೆಲಸ ಮುಗಿಸಿದ ತಕ್ಷಣ, ಟಿವಿಯವರೊಂದಿಗೆ ನಾನು ಮಾತಾಡಿದ ಕಂಡು, ನಡಿ ಬೇಗ ಮನೇಗೆ ಹೋಗೋಣ ನೀನು ನ್ಯೂಸಲ್ಲಿ ಬರೋದನ್ನ ನೋಡಬೇಕು ಎಂದರು. ಆದರೆ ನನಗ್ಯಾಕೋ ಅಪ್ಪನ್ನ ಒಮ್ಮೆ ಡಾಕ್ಟರಿಗೆ ತೋರಿಸಬೇಕು ಎನಿಸಿತು, ಕಾರಣ ಅಮ್ಮ ಹೋದಮೇಲೆ ಅಪ್ಪ ವಿಪರೀತ ಅಂದರೆ ದಿನಕ್ಕೆ ಸುಮಾರು 40ರಿಂದ 60 ಬೀಡಿ ಸೇದುತಿದ್ದರು. ಅದಕ್ಕಿಂತ ಒಂದು ವಾರದ ಹಿಂದೆ ಅಪ್ಪನ ಆಪ್ತ ಸ್ನೇಹಿತರಾದ ಸೋಮವಾರಬೇಟೆಯ ಡಾ. ಶೆಟ್ಟಿಯವರಲ್ಲಿ ಅಪ್ಪನ್ನ ತೋರಿಸಿದ್ದೆ, ಡಾಕ್ಟರ್ ಸಲುಗೆಯಿಂದಲೇ ಅಪ್ಪನಿಗೆ, “ಬೀಡಿ ಬಿಟ್ಟಿಲ್ಲಂದ್ರೆ ಮಕ್ಕಳನ್ನ ಮತ್ತೆ ತಬ್ಬಲಿ ಮಾಡಿಬಿಡುತ್ತೀಯ. ಈಗಾಗಲೇ ಅಗಿದ್ದು ಸಾಕಲ್ವಾ” ಎಂದು ಎಚ್ಚರಿಸಿದ್ದರು.(ನನಗೂ ಒಳಕರೆದು ಅಪ್ಪನ್ನ ಚೆನ್ನಾಗಿ ನೋಡಿಕೋ, ಹೆಚ್ಚು ಸಮಯ ಇರಲ್ಲ. ಆಸ್ಪತ್ರೆ ಅಂತೆಲ್ಲ ದುಡ್ಡು ಕರ್ಚಿಗೆ ಹೋಗ್ಬೇಡ ಅಂದಿದ್ದರು) ವೈದ್ಯರ ಮಾತಿಗೆ ಅಪ್ಪ, “ನಾನೂ ಸತ್ತು ನಾಲಕ್ಕು ತಿಂಗಳಾಗಿದೆ, ಬದುಕಿ ಏನೂ ಆಗಬೇಕಿಲ್ಲ” ಎಂದರು. ಕಾರಣ ಅಮ್ಮ ಹೋದಮೇಲೆ ಅಪ್ಪ ಅಕ್ಷರಶಃ ತನ್ನೆಲ್ಲ ಬಲವನ್ನೂ ಕಳೆದುಕೊಂಡಿದ್ದರು. ಅಪ್ಪ ಎಷ್ಟೇ ಬಲಿಷ್ಟ ಎಂದು ತೋರಿಸಿಕೊಂಡರೂ ಅಮ್ಮನಿಲ್ಲದೆ ಅಪ್ಪ ಏನೂ ಇಲ್ಲ ಎನ್ನುವಷ್ಟು ಇಬ್ಬರೂ ಅವಲಂಬಿತರಾಗಿಬಿಟ್ಟಿದ್ದರು. ಮನೆಯಲ್ಲಿ ಇಬ್ಬರೂ ಹಾವು ಮುಂಗೂಸಿಯಂತೆ ಎಷ್ಟೇ ಕಿತ್ತಾಡಿದರೂ, ಒಬ್ಬರನೊಬ್ಬರು ಬಿಟ್ಟು ಇದ್ದವರಲ್ಲ. ಎಲ್ಲೇ ಹೋದರೂ ಓಡೋಡಿ ಬಂದುಬಿಡುತಿದ್ದರು. 2018ರಲ್ಲಿ ಜಲಪ್ರಳಯವಾಗಿ ನಮ್ಮ ಮನೆಯ ಪಕ್ಕದಲ್ಲೇ ಕುಸಿಯುತಿದ್ದಾಗ, ಊರಿಗೆ ಊರೇ ಖಾಲಿಯಾದರೂ, ಅಪ್ಪ ಅಮ್ಮ ಮಾತ್ರ ಸತ್ತರೂ ಇಲ್ಲೇ, ಬದುಕಿದರೂ ಇಲ್ಲೇ ಎಂದು ಹಟಹಿಡಿದು ಕೂತಿದ್ದ ಅಚಲ ಆತ್ಮ ವಿಶ್ವಾಸಿ ಜೀವಗಳು. ಹಾಗಿದ್ದ ಜೋಡಿ ಒಂಟಿಯಾದಾಗ ಮಾನಸೀಕವಾಗಿ ಕುಸಿಯುವುದು ಸಾಮಾನ್ಯ ಕೂಡ. ಹೇಗೂ ಬಂದಿದ್ದೇ ಇತ್ತಲ್ಲ ಅಂತ ಆಶ್ವಿನಿ ಆಸ್ಪತ್ರೆಗೆ ತೋರಿಸಿದಾಗ ವೈದ್ಯರು, ಕೆಲ ಟೆಸ್ಟ್ಗಳಿಗೆ ಬರೆದು ವೈವಸಿಗೆ ಕಳಿಸಿದರು. ಅದರ ವರದಿ ಬರೋದು ಮಾರನೆ ದಿನ ಆಗುತ್ತೆ ಅಂದಾಗ ನಾವಿಬ್ಬರೂ ಮನೆಗೆ ಬಂದೆವು. ಬಹುಷಃ ಅಪ್ಪನಿಗೆ ತನ್ನ ಆರೋಗ್ಯಕ್ಕಿಂತ ಮಗ ಟಿವಿಯಲ್ಲಿ ಬರುತ್ತಾನೆ ಎಂಬ ಕುತೂಹಲ ಇತ್ತು. ಬೇಗ ಬೇಗ ಹೋಗು ಎಂದರು ದಾರಿಯಲ್ಲಿ ಹೋಗುತ್ತಲೇ ಟಿವಿ ರಿಚಾರ್ಜ್ ಇದೆಯಾ ಚೆಕ್ ಮಾಡಿಸಿದರು. ಮನೆಗೆ ಹೋದವರೇ ಬಟ್ಟೆಯನ್ನೂ ಬದಲಾಯಿಸದೇ ತಡರಾತ್ರಿಯವರೆಗೂ ಟಿವಿ ಮುಂದೆ ಕೂತಿದ್ದರು ಅಪ್ಪ.
ಯಾಕೋ ಗೊತ್ತಿಲ್ಲ ಅಪ್ಪನ್ನಿಗೆ ನನ್ನನ್ನ ತುಂಬಾ ಎತ್ತರದಲ್ಲಿ ನೋಡುವ ಅಗಾಧ ಹಂಬಲ ಇತ್ತು. ಎದುರಿಗೆ ಯಾವತ್ತೂ ನನ್ನನ್ನು ಹೊಗಳಿದವರಲ್ಲ, ಸದಾ ಏನಾದರೂ ಒಂದು ತಪ್ಪು ಹುಡುಕಿ ಬಯ್ಯುತಿದ್ದರು. ಆಗಾಗ ಈ ವಿಚಾರದಲ್ಲಿ ನಮ್ಮಿಬ್ಬರಿಗೂ ವಾಗ್ವಾದ ಆಗಿದ್ದೂ ಇದೆ. ಆದರೆ ಅಪ್ಪನಿಗೆ ನಾನೆಂದರೆ ಪ್ರಾಣ ಏನೋ ಒಂದು ಸಾಧಿಸುತ್ತಾನೆ, ಎತ್ತರಕ್ಕೆ ಬೆಳೆದು ನಿಲ್ಲುತ್ತಾನೆ ಎಂಬ ಹಂಬಲ ಅಗಾಧವಾಗಿತ್ತು. ಇದನ್ನು ಅಪ್ಪನ ಕೆಲ ಆತ್ಮೀಯರಲ್ಲಿ ಹೇಳಿಕೊಂಡಿದ್ದರು ಕೂಡ. ಆದರೂ ನನಗೆಂದೂ ಆ ರೀತಿ ಹೇಳಲೇ ಇಲ್ಲ. ಕೋಪದಲ್ಲಿಯೇ, ಹುರಿದುಂಬಿಸುವಂತೆ ಗದರುವುದೇ, ಅಪ್ಪನ ಚಪ್ಪಾಳೆಯಂತಿರುತಿತ್ತು.
ಮಾರನೇಯ ದಿನ ನವೆಂಬರ್ 24/2020 ರಂದು ನಾನು, ಅಪ್ಪ ಮತ್ತೆ ವೈದ್ಯರ ರಿಪೋರ್ಟ್ ಪಡೆಯಲು, ಮಡಿಕೇರಿಗೆ ಹೊರಟೆವು. ಅಪ್ಪನ ದುರಾದೃಷ್ಟ, ಅಪ್ಪ ಕಾದ ಸುದ್ದಿ, ನಾವು ಹೊರಟಮೇಲೆ ಟಿ.ವಿಯಲ್ಲಿ ಪ್ರಸಾರವಾಗಿತ್ತು. ದಾರಿಮದ್ಯ ಅಪ್ಪ ಎಂದೂ ಮಾತನಾಡದಷ್ಟು ನನ್ನೊಂದಿಗೆ ಮಾತನಾಡಿದರು. ಮನೆಕಡೆ, ಇತರ ಎಲ್ಲಾ ವಿಚಾರಗಳಲ್ಲಿ ನೀನೇ ಮುಂದೆ ನಿಲ್ಲಬೇಕು, ಏನಾದರು ಹೆದರಬೇಡ, ಎಚ್ಚರಿಕೆಯಿಂದ ಹೋಗು ಎಂದರು. ನಡು ನಡುವೆ ಹಾಸ್ಯ ಮಾಡಿದರು. ಮಕ್ಕಳನ್ನು ಚೆನ್ನಾಗಿ ನೋಡಿಕೋ ಬೈಬೇಡ ಎಂದಾಗ, ನೀನ್ಯಾಕೆ ನನ್ನ ಅಟ್ಟಾಡಿಸಿ ಹೊಡೆಯುತಿದ್ದೆ ಎಂದೆ. ಅದಕ್ಕವರು ಅಷ್ಟು ಮಾಡಿಯೇ ನಿನ್ನ ತಡೆಯಲಾಗುತಿಲ್ಲ, ಬಿಟ್ಟಿದ್ದರೆ ಏನೇನು ಮಾಡುತಿದ್ದೋ ಎಂದರು. ನನ್ನ ಪತ್ನಿ ಎರಡನೇ ಮಗುವಿಗೆ ತುಂಬು ಗರ್ಭಿಣಿ, ಹಸು ಒಂದು ಕೂಡ ತುಂಬು ಗಬ್ಬವಾಗಿತ್ತು ಅಮ್ಮ ಹೋಗಿದಕ್ಕೆ ಇಬ್ಬರು ಬರುತ್ತಾರೆ ಎನ್ನುತಾ, ನೀನು ಹೇಗೆ ಇದನೆಲ್ಲ ನಿಭಾಯಿಸುತ್ತೀಯ, ಒಬ್ಬನೇ ಕಷ್ಟ ಆಗಬಹುದು ಎಚ್ಚರ ಎಂದರು. ನನಗಾಗ ಅವರ ಮಾತಿನ ಮರ್ಮ ಅರಿಯಲೇ ಇಲ್ಲ. ಯಾಕೆಂದೆರೆ ಅಮ್ಮ ಇರಲಿಲ್ಲ ಆದರೆ, ಅಣ್ಣ, ಅಪ್ಪ ಎಲ್ಲಾ ಇದ್ದರು. ಆದರೂ ಅಪ್ಪ ಯಾಕೆ ಒಬ್ಬನೇ ಎಂದು ಒತ್ತಿ ಹೇಳಿದ್ದರೂ ಎನ್ನುವುದು ನನಗೇ ಎರಡನೇ ಮಗುವಾದ ದಿನ ಗೊತ್ತಾಯಿತು. ಮಡಿಕೇರಿಗೆ ಬಂದು ವೈವಸಿನಲ್ಲಿ ರಿಪೋರ್ಟ್ ಪಡೆದು, ಅಶ್ವಿನಿ ಆಸ್ಪತ್ರೆಗೆ ತೆರಳುವ ಮುನ್ನ ಹೊಟೇಲ್ ಒಂದರಲ್ಲಿ ಊಟ ಮಾಡಿದೆವು. ಅಂದಿನವರೆಗೂ ಅಪ್ಪ ಖರ್ಚುಮಾಡಲು ಸ್ವಲ್ಪ ಹಿಂಜರಿಯುತಿದ್ದವರು, ಅಂದೇಕೋ ಏನು ಬೇಕೋ ತಗೋ ಎಂದರು, ನಾನು ಸುಮ್ಮನಾದಾಗ ಅಪ್ಪನೇ ನನಗೆ ಮತ್ತು ವಿನುಗೆ ಪಂದಿ ಕರಿ ಆರ್ಡರ್ ಮಾಡಿ, ಅವರು ಚಿಕನ್ ತಿಂದರು.
ಪರಿಚಯದವರನೆಲ್ಲ ಮಾತಾಡಿಸಿಕೊಂಡು ಅಶ್ವಿನಿ ಆಸ್ಪತ್ರೆ ತಲುಪಿದಾಗ , ರಿಪೋರ್ಟ್ ನೋಡಿದ ವೈದ್ಯರು, “ಒಳಗೇನೋ ತೊಂದರೆ ಕಾಣುತ್ತಿದೆ, ಒಂದು ದಿನ ಅಡ್ಮಿಟ್ ಆಗಿ” ಎಂದರು. ಅಪ್ಪ “ನನಗೇನೂ ಆಗಿಲ್ಲ, ನಾನು ಮನೆಗೆ ಹೋಗುತ್ತೇನೆ” ಎಂದು ಹಠ ಹಿಡಿದರು. ನನ್ನೊಂದಿಗೆ ಜಗಳಕ್ಕೂ ನಿಂತರು ಹೇಗೆಲ್ಲೋ ಮಾಡಿ, ಒಪ್ಪಿಸಿ ಅಡ್ಮಿಟ್ ಮಾಡಿದ್ದಾಯಿತು. ಅಪ್ಪನನ್ನ ಅಶ್ವಿನಿ ಆಸ್ಪತ್ರೆಯ ಎರಡನೇ ಮಹಡಿಯ ವಾರ್ಡಿನಲ್ಲಿ ಮಲಗಲು ಹೇಳಿದರು. ಅಪ್ಪ ನನ್ನನ್ನ ದುರುಗುಟ್ಟಿ ನೋಡುತ್ತಾ ಏನೇನೋ ಗೊಣಗುತ್ತಾ ಬೆಡ್ಡಿನ ಮೇಲೆ ಕೂತರು. ಅಲ್ಲಿಗೆ ಬಂದ ಬೇರೊಬ್ಬ ವೈದ್ಯರು ಪಪ್ಪನನ್ನೇ, “ನಿಮ್ಮ ಕಡೆ ಪೇಷೆಂಟ್ ಯಾರು” ಎಂದು ಕೇಳಿದರು. ಅಪ್ಪ “ನಾನೇ ಪೇಷೆಂಟ್ ಅಂತೆ” ಎಂದಾಗ ವೈದ್ಯರೂ ನಗುತ್ತಾ “ನಿಮಗೇನಾಯಿತು, ಇಷ್ಟು ಚೆನ್ನಾಗಿದ್ದೀರಿ” ಎಂದರು.
ರಾತ್ರಿ ನನಗೂ ಅಪ್ಪನ ಬೆಡ್ಡಿನ ಪಕ್ಕದಲೇ ಒಂದು ಕಾಲಿ ಬೆಡ್ ಸಿಕ್ಕಿತು, ನಾನು ಮಲಗಿದವನೇ ನಿದ್ರಿಸಿಬಿಟ್ಟೆ. ಅಪ್ಪ ರಾತ್ರಿ ಇಡೀ ನಿದ್ರೆ ಮಾಡಲಿಲ್ಲ ಅನ್ನಿಸುತ್ತದೆ. ಬೆಳಗ್ಗೆ ನನಗೆ ಎಚ್ಚರಾದಾಗ ಅಪ್ಪ, “ಇದು ರೋಗಿಯನ್ನ ನೋಡೋ ರೀತಿನ ನನ್ನ ಬಿಟ್ಟು ಒಬ್ಬನೇ ನಿದ್ರೆ ಮಾಡಿದೆ” ಎಂದು ಬೈದರು. ಮತ್ತೇ ರಾತ್ರಿ ಇಡೀ ವಾರ್ಡಿನಲ್ಲಿ ಇದ್ದವರೆಲ್ಲ ಏನೇನು ಮಾಡುತಿದ್ದರು ಅಂತ ಅವರನ್ನು ಅಣಕಿಸಿ ಅಣಕಿಸಿ ನಕ್ಕರು. ಬಹುಷಃ ಅಮ್ಮ ಹೋದಮೇಲೆ ಅಪ್ಪ ಇಷ್ಟೊಂದು ನಕ್ಕಿದ್ದು ಇದೇ ಮೊದಲು, ಅದೇ ಕೊನೆ ಅಂತ ನನಗೆ ಆಗ ಅರಿವಾಗಲೇ ಇಲ್ಲ. ಹೀಗೇ ನಗುತ್ತಿದ್ದಾಗ ಒಮ್ಮೆಲೆ ಕೆಮ್ಮು ಬಂತು, ಯಾವ ಮಟ್ಟಕ್ಕೆ ಎಂದರೆ ಕೆಮ್ಮಿ ಕೆಮ್ಮಿ ಅಪ್ಪ ಒಂದೆಡೆಗೆ ಒರಗಿ ಹೋದರು. ನಾನು ಬೆನ್ನಿಗೆ ಗುದ್ದಿ, ಎದೆಯನ್ನೆಲ್ಲ ಉಜ್ಜಿದೆ. ಸ್ಡಲ್ಪ ಸವಾರಿಸಿಕೊಂಡವರೇ ಕಣ್ಣು ತೆರೆದು, “ನೀನೀಗ ಇಲ್ಲಿರದಿದ್ದರೆ ನಾನು ಹೋಗಿಬಿಡುತಿದ್ದೆ” ಎಂದರು. ನನಗೆ ತಡೆಯಲಾರದು ಸಿಟ್ಟು ಬಂದು ಅಪ್ಪನಿಗೆ ಗದರಿದೆ ಬಹುಷಃ ಅದೇ ಮೊದಲು ಅಪ್ಪನಿಗೆ ನಾನು ಬೈದು, ಅಪ್ಪ ಬಾಯಿಮುಚ್ಚಿಕೊಂಡು ಕೂತಿದ್ದು.
ಅದೇಕೋ ಅಪ್ಪನಿಗೆ ಕಾಲನ ಕರೆ ಕೇಳಿಸಿತು ಅನಿಸುತ್ತದೆ, “ಪ್ರಿಯನ, ಮಗೂನ ಬರಲಿಕ್ಕೆ ಹೇಳು, ನೆನಪಾಗುತಿದ್ದಾರೆ ಎಂದರು. ಇವರಿಬ್ಬರೂ ಅಪ್ಪನಿಗೆ ನಮ್ಮೆಲ್ಲರಿಗಿಂತ ಅಚ್ಚುಮೆಚ್ಚು. ನಮಗೆ ಎಷ್ಟೇ ಬೈದರೂ ಅಪ್ಪ, ಸೊಸೆಗೆ ಮೊಮ್ಮಗಳಿಗೆ ಒಂದಿನಾನೂ ಬೈದಿರಲಿಲ್ಲ. ಅಣ್ಣ ಸಂಭಂದಿಕರ ಮದುವೆಗೆ ಹೋಗಿದ್ದ, ಅವನ್ನನೂ ಬೇಗ ಬರಲಿಕ್ಕೆ ಹೇಳು ಎಂದರು. ಪತ್ನಿ ಮಗು ಮೈಸೂರಿನಿಂದ ಬರುವಷ್ಟರಲ್ಲಿ, ಅಣ್ಣನೂ ಬಂದ. ಪ್ರಿಯ ಮತ್ತು ಮೊಮ್ಮಗಳ ಕೈಯಿಂದ ಎಳನೀರು ಕೇಳಿ ಕುಡಿದರು. ನನ್ನ ಕರೆದು, “ಆ ಪಟ್ಟಂಗೋರ್ ಫೋನ್ ಮಾಡ್ ನಾಕೆನ್ನೋ ಡೌಟಾಯಂಡುಂಡ್” ಅಂದರು. ಅಪ್ಪನಿಗೆ ಪರಿಚಯವಿದ್ದ ಬ್ರಾಹ್ಮಣರ ಬಗ್ಗೆ ಕೇಳಿದ್ದರು. ನಾನವರಿಗೆ ಕರೆ ಮಾಡಿದಾಗ, ಹೊರಗಿದ್ದೇನೆ ಬರೋದು ಮೂರು ದಿನ ತಡ ಎಂದರು, ಅದನ್ನಕೇಳಿದ ಅಪ್ಪ “ಅಲ್ಲಿವರೆಗೆ ಇರೋರ್ಯಾರು” ಎಂದುಬಿಟ್ಟರು.
ಅದು ಕೋವಿಡ್ ಸಮಯ ಆದ್ದರಿಂದ ಆಸ್ಪತ್ರೆಯಲ್ಲಿ, ಹೆಚ್ಚು ಹೊತ್ತು ಮಕ್ಕಳನ್ನ ಬಿಡುತ್ತಿರಲಿಲ್ಲ. ಪತ್ನಿ ಗರ್ಭಿಣಿ ಬೇರೆ, ಹಾಗಾಗಿ ನಾನವರನ್ನ ಬಿಟ್ಟು ಬರುತ್ತೇನೆ ಎಂದೆ, ಅಷ್ಟರಲ್ಲಾಗಲೇ ಅಪ್ಪನ ಮುಖ ಬಹುಪಾಲು ಸೊರಗಿತ್ತು. ನಾನೂ ಬರುತ್ತೇನೆ ಮನೆಗೆ ಎಂದರು. ಉಸಿರಾಟಕ್ಕೆ ತೊಂದರೆ ಇರೋದ್ರಿಂದ ವೈದ್ಯರು ಇವತ್ತು ಕಳಿಸಲ್ಲ ಎಂದರು, ಅಪ್ಪ ಮತ್ತಷ್ಟು ಕುಗ್ಗಿಬಿಟ್ಟರು. ನಡುವೆ ಉಸಿರಾಡಲು ಆಗುತಿಲ್ಲ ಎನ್ನುತಿದ್ದರು, ಬೇಗ ಬಂದುಬಿಡು, ಅಣ್ಣನಿಗೆ ಒಬ್ಬನಿಗೇ ಕಷ್ಟ ಆಗುತ್ತೇ, ಅವನೀಗೇನೂ ಗೊತ್ತಾಗಲ್ಲ ಎಂದರು. ಅಪ್ಪ ಕೊಟ್ಟ ಸೂಚನೆಗಳು ಯಾವುದೂ, ನನಗಾಗ ಅರ್ಥನೇ ಆಗಲಿಲ್ಲ.
ನಾನು ಮಾದಾಪುರ ತಲುಪುವಾಗ, ಅಣ್ಣ ಕರೆ ಮಾಡಿ, ಸುಸ್ತು ಎನ್ನುತಿದ್ದಾರೆ ಎಂದ, ಡಾಕ್ಟರ್ ಬರುತ್ತಾರೆ ಅಂತ ಹೇಳು ಅಂದೆ. ಗರ್ವಾಲೆ ತಲುಪುವಷ್ಟರಲ್ಲಿ, ಅಜ್ಜಮಕ್ಕಡ ವಿನು ಪರಿಸ್ಥಿತಿ ಕೈ ಮೀರುತ್ತದೆ ವಾಪಸ್ ಬಂದುಬಿಡು ಎಂದ. ನನಗೆ ಧರ್ಮ ಸಂಕಟ, ಅಪ್ಪನಿಗೆ ಏನೂ ಆಗಲ್ಲ ಜೊತಯಲ್ಲೇ ದೇವರಿದ್ದಾನೆ ಎನ್ನುವ ದೈರ್ಯ. ಮಗಳು ಮತ್ತು ಗರ್ಭಿಣಿಯಾದ ಪ್ರಿಯಳನ್ನ ಮನೆಗೆ ಬಿಡದೇ ಹೋದರೆ, ಮತ್ತೆ ಆಸ್ಪತ್ರೆಲಿ ಸಮಸ್ಯೆ ಆಗುತ್ತದೆ. ಏನಾದರಾಗಲಿ ಮನೆಗೆ ಬಿಟ್ಟೇ ಹೋಗುತ್ತೇನೆ ಎಂದು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಕಾರ್ ಚಲಾಯಿಸಿದೆ. ಇನ್ನೇನು ನಮ್ಮ ಮನೆಯ ಬಳಿ ತಲುಪಿದೆ ಎನ್ನುವಷ್ಟರಲ್ಲಿ ಮತ್ತೆ ವಿನು ಪೋನ್ ಮಾಡಿದ, ಪ್ರಿಯ ಫೋನ್ ಎತ್ತಿದಾಗ ಆ ಕಡೆಯಿಂದ ಏನೋ ಹೇಳಿದ್ದು ಕೇಳಿಸಿತು, ಪ್ರಿಯ ಏನೂ ಮಾತನಾಡದೇ ಹಾಗೇ ಫೊನು ಕೈ ಕೈಬಿಟ್ಟಳು. ನನಗೆ ಅರ್ಥ ಆಯಿತು. ಬೆಳಿಗ್ಗೆ ಹೋಗಿ ಬಿಡುತ್ತಿದ್ದೆ ಎಂದ ಅಪ್ಪ, ಸಂಜೆಯಷ್ಟರಲ್ಲಿ ಹೊರಟೇ ಬಿಟ್ಟಿದ್ದರು. ಏನೂ ಸಮಸ್ಯೆ ಇಲ್ಲದೆ ಸುಮ್ಮನೆ ಮಡಿಕೇರಿ ಸುತ್ತಲು ಬಂದ ಅಪ್ಪ, ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿ, ಉಸಿರಾಟದ ಸಮಸ್ಯೆ ಕಂಡು, ಅಡ್ಮಿಟ್ ಆದವರು ಹೃದಯಾಘಾತಕ್ಕೆ ಬಲಿಯಾದರು.
ಹೇಳಿಕೊಳ್ಳದೆಯೇ ನನ್ನ ಅತೀ ಹೆಚ್ಚು ಪರೀತಿಸುತಿದ್ದ, ನನ್ನ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಪ್ಪ, ನನ್ನದಲ್ಲದ ತಪ್ಪಿಗೆ ನಾನು ಬಲಿಯಾದಾಗ, ನನ್ನ ಬದಲು ಬರೋಬ್ಬರಿ 20ದಿನ ಸೆರೆವಾಸ ಅನುಭವಿಸಿಯೂ ನನ್ನನ್ನ ಸಮರ್ಥಿಸಿದ್ದರು. ಮತ್ತೆ ನಾವು ಆ ಪ್ರಕರಣ ಗೆದ್ದೆವು ಕೂಡ. ಆದರೆ ಅಪ್ಪ ನನ್ನ ಮೇಲೆ ಕಂಡ ಕನಸು ನನಸಾಗುವ ಮುನ್ನವೇ ಹೊರಟು ಹೋದರು. ಅಂದು ನನ್ನ ಮತ್ತು ನನ್ನ ಮನೆಯ ಭಾವನಾತ್ಮಕ ಸಂಬಂಧವೂ ಅಪ್ಪನೊಂದಿಗೆ ಆರಿ ಹೋಯಿತು. ಅಮ್ಮ, ಅಪ್ಪ ಇದ್ದಾಗ ಕನಿಷ್ಟ ತಿಂಗಳಿಗೆ ಒಂದೆರಡು ಭಾರಿಯಾದರೂ ಮನೆಗೆ ಹೋಗುತಿದ್ದ ನಾನು, ಆಮೇಲೆ ಕಾಟಚಾರಕ್ಕ ಒಂದಷ್ಟು ದಿನ ಹೋದೆನಾದರೂ, ಇಂದು ಆ ದಿಕ್ಕಿಗೆ ಹೋಗಬೇಕು ಅನ್ನಿಸೋದೇ ಇಲ್ಲ. ಎಷ್ಟೇ ಯೋಚಿಸಿ ಹೊರಟರೂ, ಏನೋ ಶೂನ್ಯ ಭಾವ, ನನ್ನನ್ನ ಕಾಡುತ್ತಿದೆ. ಯಾರಿಗಾಗಿ ಮತ್ತೆ ಎಲ್ಲಿಗೆ ಹೋಗಲೀ ಎನ್ನೋ ಪ್ರಶ್ನೆ ಮೂಡುತ್ತಿದೆ. ನಿರ್ಭಾವುಕನಾಗಿ, ನಿಶ್ಚಲನಾಗಿ, ಒಂತರಾ ಅಲೆಮಾರಿಯಾಗಿದ್ದೇನೆ.
ಇಂದಿಗೆ ನಾಲ್ಕು ವರ್ಷಗಳ ಹಿಂದೆ ಸರಿಸುಮಾರು ಸಂಜೆ 5.30ರ ಸಮಯಕ್ಕೆ ಅಪ್ಪ ನಮ್ಮನ್ನ ಅಗಲಿದ್ದರು. ಕಾಕತಾಳೀಯ ಎಂದರೆ ಇಂದು ಬೆಳಿಗ್ಗೆಯಿಂದಲೇ ಇದನ್ನು ನಾನು ಬರೆಯಲು ಕೂತೆನಾದರೂ, ಮುಗಿಯುವಷ್ಟರಲ್ಲಿ ಸಂಜೆ 5.30 ಆಗಿದೆ. ಅಪ್ಪ ನನ್ನ ಬಳಿ ಕುಳಿತು ಬೀಡಿಯ ಹೊಗೆ ಬಿಡುತ್ತಾ ಇದನೆಲ್ಲ ಓದುತಿದ್ದಾರೆ, ಓದಿ, “ಓ ಇಂವೊ ಇದನೆ ಹೊಲಾಕಿಂಜ ಕೊಟಕೊಟಾ ಕುಟ್ಟಿಯದಾ” ಎಂದು ಗೊಣಗಿ ಎದ್ದು ಹೋದಂತೆ ಭಾಸವಾಗುತ್ತಿದೆ. ಅಮ್ಮ ಹೋಗಿದ್ದು ದುಃಖವೇ ಆದರೂ, ಸತತ 14 ವರ್ಷ ಅನಾರೋಗ್ಯದಿಂದ ಬಳಲುತಿದ್ದ ಅಮ್ಮನ ತೊಳಲಾಟ, ಕೊನೆ ಕೊನೆಗೆ ಅಮ್ಮ ಅನುಭವಿಸುತಿದ್ದ ಯಾತನೆ, ಹತ್ತಿರದಿಂದ ನೋಡಿದ್ದೆ. ನಾನಿದ್ದಾಗ ದಿನಾ ನಾನೇ ಇನ್ಸುಲಿನ್ ಚುಚ್ಚುತಿದ್ದೆ, ಆಗ ಅಮ್ಮ ಅನುಭವಿಸುತ್ತಿದ್ದ ನೋವು, ನನ್ನನ್ನ ಡಯಾಲಿಸಿಸ್ ಮಾಡಿಸದಂತೆ ತಡೆದುಬಿಟ್ಟಿತ್ತು. ಅದಕ್ಕಿಂತ ಅಮ್ಮ ಹೋಗುವ ವಿಚಾರ ನನಗೆ ಮತ್ತು ಪಪ್ಪನಿಗೆ ಮೂರು ದಿನ ಮೊದಲೇ ಸ್ಪಷ್ಟವಾಗಿತ್ತು. ನಾವಿಬ್ಬರೂ ಸದ್ದಿಲ್ಲದೆ ಇತರರಿಗೆ ಅರಿಯದಂತೆ ತಯಾರಿಯನ್ನೂ ಮಾಡಿಕೊಂಡಿದ್ದೆವು. ಹಾಗಾಗಿ ಅದೊಂತರ ಪೂರ್ವ ನಿಯೋಜಿತ ಸಾವು. ಆದರೆ ಅಪ್ಪ ಮಾತ್ರ ಇಂದಿಗೂ ನಂಬಲಸಾದ್ಯವಾದ ವಿರಹ….
ಅಪ್ಪನ ಸಾವು ಕೇವಲ ಸಾವಲ್ಲ. ಅದೊಂದು ದುರಂತ ಅಂತ್ಯ. ಬಂಧುಗಳು, ಸಂಭಂದಿಕರು ಯಾರೇ ಕರೆದರೂ ಹೋಗಿ ಒಂದು ಪೆಗ್ಗ್ ಹಾಕುವ ಅಭ್ಯಾಸ ಪಪ್ಪನಿಗಿತ್ತು. ಈ ಮೂರು ತಿಂಗಳ ಮೊದಲೂ ಅಪ್ಪ ತೀರ ಹತ್ತಿರದ ಸಂಬಂಧಿಯ ಮನೆಗೆ ಹೋಗಿ ಕುಡಿದಿದ್ದರು. ಆದರೆ ಅಂದು ಮನೆಗೆ ಬರುವಷ್ಟರಲ್ಲಿ ಅಪ್ಪ ಸುಸ್ತಾಗಿದ್ದರು. ಒಂದು 90ಗೆಲ್ಲ ಬಗ್ಗೋರಲ್ಲ ಅಪ್ಪ, ಆದರೂ ಅವತ್ತು ಅಪ್ಪ ರಕ್ತ ವಾಂತಿ ಮಾಡಿದ್ದರು. ಕುಡಿದಿದ್ದ ಕಾರಣ ನಾವೂ ಅಷ್ಟೊಂದು ಗಂಬೀರವಾಗಿ ತೆಗೆದು ಕೊಳ್ಳಲಿಲ್ಲ. ಅಂದಿನಿಂದ ಅಪ್ಪ ದಿನಾ, ದಿನ ಕುಗ್ಗುತ್ತಾ ಬಂದರೂ, ನಾವು ಅಮ್ಮ ಇಲ್ಲದಕ್ಕೆ ಅಪ್ಪ ಕುಗ್ಗುತಿದ್ದಾರೆ ಎಂದು ಯೋಚಿಸಿದೆವೇಯೇ ಹೊರತು, ದೇಹದೊಳಕ್ಕೆ, ಹೆಂಡದಲ್ಲಿ ಸ್ಲೋಪಾಯಿಸನ್ ಸೇರಿಸಿ ನಮ್ಮ ಅಪ್ಪನನ್ನ ಕೋಂದೇ ಬಿಟ್ಟರು, ಎಂದು ತಿಳಿಯುವಷ್ಟರಲ್ಲಿ ತಿಂಗಳುಗಳು ಕಳೆದು ಬಹುಷ ಅಪ್ಪನ ದೇಹ ಬಹುಪಾಲು ಕೊಳತೇ ಹೋಗಿತ್ತೇನೋ… ಆದರೂ ಯಾರು ಆ ಘನಕಾರ್ಯ ಮಾಡಿ, ನಮ್ಮ ಕಣ್ಣೀರ ನೋಡಿ, ಸಂಭ್ರಮಿಸಿದರೋ ಅವರನ್ನ, ಅಪ್ಪ ಯಾರನ್ನ ಆರಾಧಿಸಿ, ಸತತ 34 ವರ್ಷ ತನ್ನ ದೇಹದಲ್ಲಿ ಮೆರೆಸಿದ್ದರೋ ಆ ಶಕ್ತಿಯ ಪಾದಕ್ಕೆ ಬಿಟ್ಟುಬಿಡುತ್ತೇನೆ.
ಈಗೇಕೋ ಸುದೀರ್ಘ ನಿಟ್ಟುಸಿರು, ಮನಸ್ಸಿನಲ್ಲಿದ್ದ ಸಾವಿರ ಕೆಜಿ ಭಾರವನ್ನು ಈ ಬರಹದ ರೂಪದಲ್ಲಿ ಇಳಿಸಿದ, ಒಂತರಾ ನಿರಮ್ಮಳತೆಯಿದೆ. ಅಪ್ಪ ಎಂದೂ ಯಾರಿಗೂ ತಲೆಬಾಗದೇ ತಾನಂದುಕೊಂಡಂತೇ ಬದುಕಿ, ರಾಜನಂತಿದ್ದು, ಮಾರಾಜನಂತೇ ಹೊರಟು ಹೋದರು. ಆದರೆ ಅಪ್ಪ ಬಾಲ್ಯದಲ್ಲಿಯೇ ಕಲಿತು ತಾತನಿಗೂ ಅಂಜದೆ ಧೈರ್ವಾಗಿ ಸೇದುತಿದ್ದ ಕಾಕಿಬೀಡಿ, ಎಷ್ಟೇ ದುಬಾರಿ ಮದ್ಯವಿದ್ದರೂ, ಅಪ್ಪನ ಪ್ರೀತಿಯ ಬ್ರಾಂಡ್, ಪ್ರೆಸ್ಟೀಜ್ ವಿಸ್ಕಿ ಮಾತ್ರ ಅಪ್ಪನ ಕೊನೇ ಎರಡುದಿನ ಸಿಗಲಿಲ್ಲ, ಅನ್ನೋದಕ್ಕಿಂತ ನಾನು ಕೊಡಲಿಲ್ಲ ಅನ್ನೋ ಕೊರಗು ನಾನು ಇರೋವರೆಗೂ ನನ್ನ ಕಾಡುತ್ತಲೇ ಇರುತ್ತದೆ.
ಪಪ್ಪ…., ನೀನಿಲ್ಲಿಯೇ ಉಳ್ಳಿಯ ಗೊತ್ತ್, “ಇಂವೊಬ್ಬ ಕ್ಯಾಮೆ ಇಲ್ಲತಂವೊ…”ಂದ್ ಬಜ್ಜಂಡೇ ಇರ್ ಪ್ಲೀಸ್……