
-ಮಾಳೇಟಿರ ಸೀತಮ್ಮ ವಿವೇಕ್, ಹಾಸನ
Nadubade New̧̧s ಮೇ 20: ಪ್ರಪಂಚದ ಅತೀ ಎತ್ತರದ ತುಂಗನಾಥ ಶಿವ ದೇವಾಲಯವು ಪಂಚ ಕೇದಾರ ದೇವಾಲಯಗಳಲ್ಲಿ ಪರ್ವತ ಉತ್ತುಂಗದಲ್ಲಿರುವ ದೇವಾಲಯವಾಗಿದೆ. ಇದು ೩,೬೮೦ಮೀಟರ್ ಎತ್ತರ ಅಂದರೆ ಹನ್ನೆರಡು ಸಾವಿರದ ಎಪ್ಪತ್ತ ಮೂರು ಅಡಿ ಎತ್ತರದ್ದಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಜಗದ್ಗುರು ಶಂಕರಾಚಾರ್ಯರು ೫-೬ನೇ ಶತಮಾನದಲ್ಲಿ ಇಲ್ಲಿ ಅನೇಕ ಆರಾಧ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಐದನೇ ಶತಮಾನಕ್ಕಿಂತಲು ಮೊದಲೆ ಈ ಸ್ಥಳವು ಪವಿತ್ರ ಕ್ಷೇತ್ರವಾಗಿತ್ತು, ಅದಕ್ಕೆ ಪೂರಕ ಎಂಬಂತೆ ಕಂಡು ಬರುವ ಕೆಲವು ಶಿಲಾ ಮೂರ್ತಿಗಳು ಮತ್ತು ಪಾಂಡವರು ಶಿವನನ್ನು ಪೂಜೆಗೈದ ಸ್ಥಳ ಪುರಾಣ ಕಥೆಗಳನ್ನು ಇಲ್ಲಿನ ಸ್ಥಳೀಯರು ಭಕ್ತಿ ಭಾವದಿಂದ ಹೇಳುತ್ತಿರುತ್ತಾರೆ.
ಈ ವಿಷಯವನ್ನು ಪ್ರಸ್ತಾಪಿಸಲು ಪ್ರಮುಖ ಕಾರಣ ಇದೇ ಮೇ ತಿಂಗಳಿನಲ್ಲಿ ಕೊಡಗಿನ ಹದಿನಾರು ಉತ್ಸಾಹಿ ಕೊಡವತಿಯರು ಆ ಅತೀ ಎತ್ತರದ ಶಿವಾಲಯವಾದ ತುಂಗನಾಥ ಹಾಗೂ ದೇವಿ ಪ್ರತಿರೂಪದ ಚಂದ್ರಶಿಲೆ ಇರುವ ಶಿಖರ ತುದಿಯನ್ನು ಮುಟ್ಟಿ ಹಿಂತಿರುಗಿದಲ್ಲದೆ, ಚಂದ್ರಶಿಲೆಯ ನೆರಳು ಬೀಳುವ ಸಾರಿ ಎಂಬ ಹಳ್ಳಿಗೆ ಅಂಟಿದ ಮತ್ತೊಂದು ಪರ್ವತ ದಿಯೋರಿತಾಲ್ ತುದಿಯಲ್ಲಿರುವ ಸರೋವರಕ್ಕೆ ಎರಡನೆಯ ದಿನದ ಚಾರಣ ಗೈದು ಯಶಸ್ವೀ ಸಾಧನೆ ಮಾಡಿದ್ದಾರೆ. ಕಲ್ಲುಹಾಸಿನ ಚಾರಣ ಕುದುರೆ ಸವಾರಿಯ ಸೇವೆ ಇದ್ದರೂ ಕಾಲ್ನಡಿಗೆಯಲ್ಲಿ ಹತ್ತಿಳಿದುದರ ಅನುಭವದ ಆನಂದವೇ ವಿಭಿನ್ನ ಎನ್ನುತ್ತಾರೆ ಚಾರಣಗೈದವರೆಲ್ಲರು.
ಅಷ್ಟೇ ಅಲ್ಲದೆ ಕೊಡವ ಪೊಡಿಯ ತೊಟ್ಟು ತುಂಗನಾಥ ದೇವಾಲಯ ಪ್ರವೇಶಿಸಿದ ಅಪೂರ್ವ ಅನುಭವ ಪಡೆದ ಅವಿಸ್ಮರಣೀಯ ಕ್ಷಣಗಳನ್ನು ತಾವು ಕ್ಲಿಕ್ಕಿಸಿದ ಛಾಯಚಿತ್ರಗಳ ಮೂಲಕ ದಾಖಲಿಸಿಕೊಂಡು ಎಲ್ಲರು ಸಂಭ್ರಮಿಸಿದ್ದಾರೆ. ಇಲ್ಲಿ ಕಂಡು ಬಂದ ಮತ್ತೊಂದು ವಿಶೇಷ ವಿಷಯವೆಂದರೆ ಅರವತ್ತರ ವಯಸ್ಸನ್ನು ದಾಟಿದ ಕೊಡವತಿಯರು ಆ ಘನ ಗಿರಿಯ ತುತ್ತ ತುದಿಯನ್ನು ತಲುಪಿ ಭಾರತದ ಬಾವುಟವನ್ನು ಹಾರಿಸಿ ಸಂಭ್ರಮಿಸಿರುವುದು ರೋಮಾಂಚಕ ದೃಶ್ಯವಾಗಿ ದಾಖಲಾಗಿರುವುದು.
ಸುತ್ತಲು ಹಿಮಾವೃತ ಪರ್ವತಗಳು, ಕಣ್ಣಿಗೆ ಹಬ್ಬದಂತಿದ್ದ ಪ್ರಕೃತಿ ಸೌಂದರ್ಯ ಆದರೆ ಸುತ್ತಲು ಇದ್ದುದು ಪ್ರಪಾತ, ಕಡಿದಾದ ದಾರಿಯ ಚಾರಣ ಉಸಿರಾಡಲು ಆಮ್ಲಜನಕ ಕೊರತೆ ಇವೆಲ್ಲದರ ನಡುವೆ ಮೇ ಹನ್ನೆರಡರಂದು ಕೊಡಗಿನಿಂದ ಪ್ರಯಾಣ ಬೆಳೆಸಿದ ಹದಿನಾರು ಕೊಡವತಿ ಕಿರಿಯರು ಮತ್ತು ಹಿರಿಯರ ತಂಡ ಆಪರೇಷನ್ ಸಿಂಧೂರ ಯುದ್ಧ ಸನ್ನಿವೇಶ, ದೂರ ಪ್ರಯಾಣ ವಿರೋಧದ ನಡುವೆಯೂ ಯಶಸ್ವಿ ಚಾರಣ ಮಾಡಿ ತಮ್ಮ ಗುರಿ ತಲುಪಿ ದಿನಾಂಕ ಹದಿನೇಳರಂದು ಕ್ಷೇಮವಾಗಿ ತಮ್ಮ ತಾಯ್ನೆಲಕ್ಕೆ ಹಿಂತಿರುಗಿದ್ದಾರೆ. ಈ ನಡುವೆ ಪರ್ವತದ ತುತ್ತ ತುದಿಯಲ್ಲಿ ಇವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತ ಸಿಂಧೂರಕ್ಕೆ ಗೌರವ ಸಮರ್ಪಿಸಿ ವಿಶಿಷ್ಟ ದಾಖಲೆ ಬರೆದಿದ್ದಾರೆ.
ಕೊಡಗಿಗೆ ಹಿಂತಿರುಗಿದ ನಂತರ
ಇವರೆಲ್ಲರ ನೆನಪಿನ ಬುತ್ತಿಯಲ್ಲಿ ರಿಷಿಕೇಶದ ಗಂಗಾರತಿ ರಾರಾಜಿಸುತ್ತಿದೆ. ಎಲ್ಲರನ್ನು ಮಂತ್ರ ಮುಗ್ಧಗೊಳಿಸಿದ ಹಲವಾರು ಸಂದರ್ಭಗಳನ್ನು ಎಲ್ಲಾರು ಮತ್ತೆ ಮತ್ತೆ ಉಲಿಯುತ್ತಿದ್ದಾರೆ. ಇವರು ತಾವು ದೇವಪ್ರಯಾಗ ರುದ್ರಪ್ರಯಾಗದಲ್ಲಿ ಸಂದರ್ಶಿಸಿದ ಅದ್ಬುತ ಸ್ಥಳ ಮತ್ತು ಕ್ಷೇತ್ರಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಅಲಕಾನಂದ ಮತ್ತು ಭಾಗೀರಥಿ ದ್ವಿವರ್ಣ ಜಲ ಸಂಧಿಸುವ ನದಿ ಪಾತ್ರದಲ್ಲಿ ಅವರು ವೀಕ್ಷಿಸಿದ ಸಂಸ್ಕೃತ ವಿಶ್ವವಿದ್ಯಾಲಯ, ಮಾರ್ಗ ಮಧ್ಯದ ಅನೇಕ ಕಬ್ಬಿಣದ ಸೇತುವೆಗಳು, ಪರ್ವತಗಳಡಿ ಕೊರೆದ ಸುರಂಗ ಮಾರ್ಗ ಅಭಿವೃದ್ಧಿಯ ಉತ್ತುಂಗಕ್ಕೇರುತ್ತಿರುವ ಉತ್ತರಾಖಂಡವನ್ನು ಕೊಡಗಿನ ಸೌಕರ್ಯಗಳೊಂದಿಗೆ ತಾಳೆ ಹಾಕಿಕೊಳ್ಳುವಂತೆಯೂ ಮಾಡಿದೆ.
ಇಂತಹ ಅಪೂರ್ವ ಅವಕಾಶ ಒದಗಿಸಿ ಪ್ರತೀಕ್ಷಣ ಪ್ರತಿಯೊಬ್ಬರ ವಸತಿ ಊಟೋಪಚಾರದ ಹೊಣೆ ಹೊತ್ತು, ಆರೋಗ್ಯ ಕುರಿತು ಕಾಳಜಿ ವಹಿಸುತ್ತ ಇತರೆ ಜವಾಬ್ದಾರಿಗಳನ್ನೂ ವಹಿಸಿಕೊಂಡ ಉತ್ತರಾಖಂಡ ನಿವಾಸಿ ಗೌತಮ್ ಹಾಗೂ ಇಂತಹದೊಂದು ಕಾರ್ಯಕ್ರಮ ಆಯೋಜಿಸಿದ ಕಂಬೀರಂಡ ದಿವ್ಯ ಅವರಿಗೆ ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಹೃತ್ಪೂರ್ವಕ ಧನ್ಯವಾದಗಳನ್ನು ಈ ಮೂಲಕ ಸಮರ್ಪಿಸಿದ್ದಾರೆ.