ಮಡಿಕೇರಿ, ಡಿ.05: ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ, ರಾಷ್ಟೀಯ ತನಿಕಾ ದಳ ಇಂದು ಬೆಳ್ಳಂಬೆಳಗ್ಗೆ ಕೊಡಗಿನ ಹಲವು ಕಡೆ ದಾಳಿ ಮಾಡಿ, ಮಡಿಕೇರಿಯ ಮುಸ್ತಾಫಾ (ಚಿಲ್ಲಿ) ಹಾಗು ಸೋಮವಾರಪೇಟೆಯ ಹೊಸತೋಟ ನಿವಾಸಿ ಸೋಮವಾರಪೇಟೆಯ ಕರಿಮೆಣಸು ಕಾಫಿ ವ್ಯಾಪಾರೀ ಜುನೈದ್ ಅವರನ್ನು ಬಂಧಿಸಿದ್ದು, ಚೌಡ್ಲು ಗ್ರಾಮದ ತೌಶಿಕ್ ಮತ್ತು ಸುಂಟಿಕೊಪ್ಪದ ಮಾದಾಪುರ ರಸ್ತೆಯ ಮನೆಯೊಂದರ ಮೇಲೂ ದಾಳಿಮಾಡಿ ಸಾಕ್ಷಿಗಳಿಗಾಗಿ ತಡಕಾಡುತ್ತಿರುವ ವರದಿಯಾಗಿದೆ. ಇಂದು ಮುಂಜಾನೆ ಏಕ ಕಾಲಕ್ಕೆ ದಾಳಿ ನಡೆಸಿದ ಎನ್.ಐ.ಎ ಅಧಿಕಾರಿಗಳು, ಗಂಟೆಗಟ್ಟಲೆ ಮನೆಗಳಲ್ಲಿ ದಾಖಲೆಗಳ ಶೋಧ ಹಾಗೂ ವಿಚಾರಣೆ ನಡೆಸುತಿದ್ದು, ಸಮಗ್ರ ದಾಖಲಾತಿ ಕಲೆ ಹಾಕುತ್ತಿದ್ದಾರೆ.
ಹಿಂದೂಪರ ಕಾರ್ಯಕರ್ತ, ಬಿಜೆಪಿ ರಾಜ್ಯಾದ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಅವರ ಮಾಜೀ ಕಾರು ಚಾಲಕರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಬೆಳ್ಳಾರೆಯಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಯ ನಂತರ ಇಡೀ ಕರಾವಳಿ ಭಾಗವೇ ಹೊತ್ತಿ ಉರಿದು, ಸೇಡಿಗೆ ಸೇಡು ಎಂಬಂತ ಘಟನೆಗಳು ನಡೆದಿದ್ದವು.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಬಹುಪಾಲು ಆರೋಪಿಗಳು ಕೊಡಗು ಭಾಗದಲ್ಲೇ ತಲೆಮರೆಸಿಕೊಂಡಿರುವ ಬಗ್ಗೆ ಹಲವು ವಿಧದ ತನಿಖೆಗಳು ನಡೆಯುತಿದ್ದವು.