(ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ) ಬಾಳೋ ಬಾಳೊ ನಂಗಡ, ದೇವೋ ಬಾಳೋ ಮಾದೇವ, ದೇವೀ ಬಾಳೋ ಮಾದೇವಿ, ಪಟ್ಟೋ ಬಾಳೋ ಚೂರಿಯ…, ಕೂಡೆ ಬಾಳೋ ಚಣ್ಣೂರ, ಭೂಮಿ ಬಾಳೋ ಜಬ್ಬೂಮಿ, ಈ ಭೂಮಿರ ಮೀದಲ್, ಪೊಮ್ಮಾಲೆ ಕೊಡವುಲ್…, ನಾಡ್‌ಕೆಲ್ಲ ಒಯಿಂದದೋ, ಮಾಜಪ್ಪಯ್ಯ ಪೂಮಂದ್, ಪೂವೆಲಂಗೋ ಮಂದ್‌ಲ್, ಇಂದಿಯ ದಿನತ್‌ಲ್…, ಚೆಂಬೊದುಡಿ ಸದ್ದಾಪ, ಬಾಯೀ ತೋರೆ ಬಾಮುಟ್ಟೋ, ಎನ್ನತಾಂಡ ಮೊಳಿಲೆನ್ನ…, ಅಲ್ಲತಾದೇದೋ ಅಲ್ಲಲಾ, ಚಿನ್ನಿಯಾರ್ ತಿಂಗತ್, ಕಳಿ ಕಳೀ ನಟ್ಟಾನ, ಬಿರ್ಚಿಯಾರ್ ತಿಂಗತ್…, ಪೊಲಿಪೊಲೀ ಕೊಯ್ವಾಂಗ್, ಪುತ್ತರಿ ಕಳಿಪಾಂಗ್, ನಾಳ್ ಮೂರ್ತ ನೋಟಿತ್, ಒತ್ತೋರ್ಮೆ ಕೊಂಡಿತ್…, ಎಲ್ಲಾ ಕೋಪು ತೀತಿತ್, ಇಂದಿಯ ದಿನತ್‌ಲ್, ಈ ನಾಡ್ ನಡುವುಕ್, ಆಡಿ ಪಾಡೀ ಬಂದದೋ….
ಇಂದಿನಿಂದ ಕೊಡಗಿನ ಉದ್ದಗಲಕ್ಕೂ, ಇಂತ ಹಾಡುಗಳು, ದುಡಿ ಸದ್ದುಗಳ ಜೊತೆ ಜೊತೆಗೆ,
ನಾಡ್‌ಡ ಮಂದ್‌ಲ್ ಕೋಲ್‌ಕ್‌ಳ್ಂಜ ಪೊಯಿಲೇ ಪೊಯಿಲೇ…,
ಊರ್ ಪರಂಬುಲ್ ಕೋಲ್‌ಕ್‌ಳ್ಂಜ ಪೊಯಿಲೇ ಪೊಯಿಲೇ…,
ದೇವ ಪರಂಬುಲ್ ಕೋಲ್‌ಕ್‌ಳ್ಂಜ ಪೊಯಿಲೇ ಪೊಯಿಲೇ…,
ಮಾದೇವಪ್ಪಂಡ ಕೋಲಾಟ್ ಕೋಪು ಪೊಯಿಲೇ ಪೊಯಿಲೇ…
ಇಗ್ಗುತ್ತಾ ದೇವಂಡ ಕೋಲಾಟ್ ಕೋಪು ಪೊಯಿಲೇ ಪೊಯಿಲೇ…
ಹೀಗೇ ವರ್ಣರಂಜಿತ ಅರ್ಪತರೆಗಳು ಮಾರ್ದನಿಸುತ್ತವೆ. ಕಾರಣ ಕೊಡವ ಧಾರ್ಮಿಕ ಪರಂಪರೆಯ ಪ್ರಮುಖ ಆಚರಣೆಯಾದ, ಪುತ್ತರಿ ಪೊವುದ್ ಬರುತ್ತಿದೆ. ಪ್ರಕೃತಿ ಮಾತೆಯ ಆರಾಧಕರಾದ ಕೊಡವರ ಪುತ್ತರಿ ನಮ್ಮೆಯ ಆಚರಣೆ ಮತ್ತು ಕಟ್ಟುಪಾಡುಗಳು, ಪರಿಸರ ಸ್ನೇಹಿ, ಬುಡಕಟ್ಟು ಪದ್ದತಿಗೆ ಒಳಪಟ್ಟಿದ್ದರೂ, ಪುತ್ತರಿಯ ಆಚರಣೆಯಲ್ಲಿ ಪ್ರದೇಶವಾರು ವಿಭಿನ್ನತೆಯನ್ನು ನಾವು ಗಮನಿಸುತ್ತೇವೆ. ಈ ಕುರಿತು ಒಂದು ವಿಮರ್ಷೆ ಅಥವಾ ಪರಾಮರ್ಶೆಯನ್ನ ನಾವು ನೋಡುತ್ತಾ ಹೋಗೋಣ.
ಕೊಡಗಿನ ಆದೀಮ ಸಂಜಾತ ಮೂಲ ನಿವಾಸಿ ಜನಾಂಗವಾದ ಕೊಡವರು ಪ್ರಥಮತಃ ಮೂರ್ತಿ ಪೂಜಕರಲ್ಲ. ಈ ಸೃಷ್ಟಿಯ ಮೂಲವನ್ನು ಪ್ರಜ್ವಲಿಸುವ ಜ್ಯೋತಿಯನ್ನ ಮತ್ತು ಇಡೀ ಪ್ರಕೃತಿಯನ್ನು ತಾಯಿಯ ರೂಪದಲ್ಲಿ ಪೂಜಿಸುತ್ತಾ, ಆರಾಧಿಸುತ್ತಾ, ಆಚರಿಸುತ್ತಾ ಬಂದವರು ಕೊಡವರು. ಹಾಗಾಗಿಯೇ, ಕೊಡವರ ಕುಲದೇವಿಯಾದ ಮಾತೆ ಕಾವೇರಿಗೆ ಯಾವುದೇ ರೂಪವಿಲ್ಲದೆ, ಪ್ರಕೃತಿದತ್ತವಾದ ನೀರನ್ನೆ ತೀರ್ಥರೂಪದಲ್ಲಿ ದೇವಿಯಾಗಿ ಆರಾಧಿಸುತ್ತಾರೆ. ಕೊಡವರು ತಮ್ಮ ಮೂಲ ಪುರುಷರನ್ನ ಮದಲ ದೈವವಾಗಿ ಆರಾದಿಸುತ್ತಾರೆ. ಈ ಗುರುಕಾರೋಣರಿಗೆ ಕೂಡ ಯಾವುದೇ ರೂಪ ನೀಡದೇ ಪ್ರಕೃತಿದತ್ತವಾಗಿಯೇ ಆರಾಧೀಸುತ್ತಾರೆ. ಕೊಡವರ ಪ್ರಮುಖ ಆಚರಣೆಗಳಲ್ಲೂ, ಹಬ್ಬ ಹರಿದಿನಗಳಲ್ಲೂ ಪ್ರಕೃತಿಯೊಳಗಿನ ಸಂಬಂಧಗಳು, ಹಾಸುಹೊಕ್ಕಿವೆ.
ಕೊಡವರು ಪ್ರಮುಖವಾಗಿ ಆಚರಿಸುವ ಮೂರು ಹಬ್ಬಗಳಲ್ಲಿ ಪುತ್ತರಿಯೂ ಒಂದು. ಪುತ್ತರಿ ಆಚರಣೆಯ ಸಂಪ್ರದಾಯ, ನಡೆಗುಡಿಗಳು ಕೂಡ, ಪ್ರಕೃತಿಯೊಂದಿಗೆನ ನಿಕಟ ಸಂಬಂಧವನ್ನು ಪ್ರತಿಪಾದಿಸುತ್ತದೆ. ಇಡೀ ಕೊಡವ ಜನಾಂಗ ಮತ್ತು ಕೊಡಗಿನ ಹಲವು ನಿವಾಸಿಗಳು ಪುತ್ತರಿಯನ್ನು ಆಚರಿಸಿದರೂ, ಪುತ್ತರಿಯ ಮೂಲ ಆಚರಣೆ ಮತ್ತು ನಡೆನುಡಿಯ ಬಗ್ಗೆ ಇಂದಿಗೂ ಹಲವು ಗೊಂದಲಗಳಿವೆ. ನಾಡು ನಾಡುಗಳ ನಡುವೆ ಸಾಂಪ್ರದಾಯಿಕ ಭಿನ್ನಾಭಿಪ್ರಯ ಕಾಣಬಹುದಾಗಿದೆ.
ಮಳೆದೇವ, ಬೊಳೆದೇವಾ ಎಂದು ಆರಾಧಿಸುವ ಇಗ್ಗುತಪ್ಪನೇ ಪುತ್ತರಿ ಆಚರಣೆಗೆ ಮೂಲ ಎಂಬ ಅಭೀಪ್ರಾಯ ಬಹುಪಾಲು ಜರಲ್ಲಿದೆ. ಕೊಡಗಿನಲ್ಲಿ ಅಂದಿನ ಕಾಲಘಟ್ಟದಲ್ಲಿ ಭತ್ತ ಬೆಳೆಗೆ ಮಾತ್ರ ಪ್ರಾಶಸ್ತ್ಯ ನೀಡಲಾಗಿತ್ತು. ಕೊಡವರ ಎಲ್ಲಾ ಹಬ್ಬ, ಸಂಭ್ರಮ ಆಚರಣೆಗಳು ಗದ್ದೆ ಮತ್ತು ಭತ್ತ, ಪೈರುಗಳ ನಡುವೆಯೇ ಬೆಸೆದು ಕೊಂಡಿರುವುದು ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ಬೆಳೆದ ಭತ್ತವನ್ನು ಕೊಯ್ಲು ಮಾಡಿ ಮನೆ ತುಂಬಿಸಿ ಕೊಳ್ಳಲು, ಘಳಿಗೆ ಮೂಹೂರ್ತ ಇಲ್ಲವೆಂದು ಇಗ್ಗುತಪ್ಪನು, ಕೇರಳದಲ್ಲಿ ನೆಲೆ ನಿಂತಿರುವ ತನ್ನ ಅಣ್ಣನಾದ ಬೇಂದ್ರಕೋಲ್ ಅಪ್ಪಯ್ಯ(ರಾಜರಾಜೇಂದ್ರ)ನ ಬಳಿ ಹೋಗಿ ಕೇಳಲಾಗಿ, ಮಾರಾಜೇಂದ್ರಕೋಲಪ್ಪನು, ಓಣತಮ್ಮೆಯನ್ನ ಇಗ್ಗುತಪ್ಪನಲ್ಲಿಗೆ ಕತ್ತಿ ಕುತ್ತಿ ಕೊಟ್ಟು ಕಳಿಸಿದನೆಂಬ ನಂಬಿಕೆಯ ಆಧಾರದಲ್ಲಿ, ಅಂದಿನಿಂದ ಪ್ರತೀ ವರ್ಷವೂ ಓಣಂ ಹಬ್ಬ ಕಳೆದು 90ನೇ ದಿನಕ್ಕೆ ಕೊಡಗಿನಲ್ಲಿ ಪುತ್ತರಿ ನಡೆಯುತ್ತದೆ.
ಪುತ್ತರಿಗೆ ಇಗ್ಗುತಪ್ಪನೇ ಮೂಲ ಎಂಬುದು ಹಲವು ಜನಪದ ಕಥೆಗಳಲ್ಲಿ, ಹಾಡುಗಳಲ್ಲಿ, ಆಚರಣೆಗಳಲ್ಲಿ ಸ್ಪಷ್ಟವಾಗುತ್ತದೆ ಆದರೂ ಭತ ಬೆಳೆಗೂ ಇಗ್ಗುತಪ್ಪನಿಗೂ ಸಂಭಂದ ಏನೂ ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗೇ ಓಣತಮ್ಮೆಯೇ ಪುತ್ತರಿಗೆ ಕತ್ತಿ ಕುತ್ತಿ ಯಾಕೆ ತಂದಳು ಮತ್ತು ತರಬೇಕು ಎಂಬುದು ಇನ್ನೊಂದು ಸಂಶಯವೂ ಹಲವರಲ್ಲಿದೆ. ಉತ್ತರವನ್ನು ಹುಡುಕುತ್ತಾ ಲಭ್ಯ ದಾಖಲಾತಿಗಳು ಮತ್ತು ಜನಪದೀಯ ಹಿನ್ನಲೆಯನ್ನ ಗಮನಿಸುತ್ತಾ ಹೋದಾಗ ಇಗ್ಗುತಪ್ಪ ಸೇರಿದಂತೆ ಏಳು ಸಹೋದರ ದೇವತೆಗಳ ಮೂಲವನ್ನು ತಡಕ ಬೇಕಾಗುತ್ತದೆ.
ಈ ಏಳೂ ಶಕ್ತಿ ದೇವತೆಗಳು, ಏಳು ಕಡಲುಗಳ ಆಚೆ ಮಾಯಾವತಾರವನ್ನು ತಾಳಿ, ಹಕ್ಕಿಯ ಬೆನ್ನಮೇಲೆ ಕೂತು, ಇಂದಿನ ಮಲೆಯಾಳ(ಕೇರಳ)ದ ಕಣ್ಣೂರು ಜಿಲ್ಲೆಯಲ್ಲಿರುವ ಮಾಡಾಯಿ ಪರಂಬು ಎಂಬಲ್ಲಿಗೆ ಬಂದಿಳಿದರು ಎಂದು ಬಾಳೋ ಪಾಟ್ ಉಲ್ಲೇಖಿಸುತ್ತದೆ. ಈ ಎಲ್ಲಾ ದೇವತೆಗಳು ಬಂದು ಇಳಿದಂತ ಪ್ರದೇಶ, ಅಂದು ಕ್ರೋಢ ದೇಶಕ್ಕೆ ಸೇರಿತ್ತು ಎಂಬುದಕ್ಕೆ ಇಂದಿಗೂ ಆ ಭಾಗದ ಹಲವು ದೇವಾಲಯಗಳಲ್ಲಿ ತಕ್ಕಾಮೆಯನ್ನು ಕೊಡವ ಒಕ್ಕಗಳೇ ನಿರ್ವಹಿಸುವುದು ಸಾಕ್ಷೀಕರಿಸುತ್ತದೆ. ಹೀಗೆ ಎಲ್ಲಾ ದೇವಾನು ದೇವತೆಗಳು ಸ್ಥಾನ ನೆಲೆ ಪಡೆದು ಆಯಾ ವ್ಯಾಪ್ತಿಯ ಭಕ್ತರ ಬೇಕು ಬೇಡಿಕೆಯನ್ನು ಪೂರೈಸುತ್ತಾ ಬರುತ್ತಿದ್ದಾರೆ.
ಹೀಗೆ ಸ್ಥಾನ ನೋಡಿ ಬಂದ ಇಗ್ಗುತಪ್ಪ ತನ್ನ ಮೂವರು ಸಹೋದರರು, ಮತ್ತು ಒಬ್ಬ ತೆಂಗಿಯ ಒಡಗೂಡಿ ಪಾಡಿ ಇಗ್ಗುತ್ತ ಮಲೆಗೆ ಬರುವಾಗ ಅಲ್ಲಿಯ ಪ್ರಕೃತಿ ರಮಣೀಯ ಪರಿಸರ ಕಂಡು ಅಲ್ಲಿ ನೆಲೆ ನಿಲ್ಲುತಾನೆ. ಅದಕ್ಕೂ ಮೊದಲು ಆ ಪ್ರದೇಶದಲ್ಲಿ ಅಂದರೆ ಕೊಡಗಿನಲ್ಲಿ ಭತ್ತದ ಗದ್ದೆಗಳು, ದನಕರುಗಳು, ಬಾಳೆ ತೋಟಗಳು ಮತ್ತು ಕೊಡವ ಮನೆತನಗಳು ಇದ್ದವೂ ಎಂಬುದನ್ನ ಇಗ್ಗುತಪ್ಪನ ಪಾಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಆದರೆ ಭತ್ತ ಪೈರು ನಾಟಿ ಮಾಡಿ ಆದ ನಂತರ ಕೊಡವರು ಕೈಲ್‌ಪೊಳ್ದ್ ಮೂಲಕ ಆಯುಧ ಪೂಜೆಯನ್ನು ಮಾಡಿ, ಚಂಗ್ರಾಂದಿ ಕಳೆದು, ಭತ್ತ ಕೊಯ್ಲಿಗೆ ಬಂದಾಗ ಯಾವುದೇ ಸಂಭ್ರಮ, ಮುಹೂರ್ತ ಇಲ್ಲದೆಯೇ ಕೊಯ್ಲು ಮಾಡಿ ಮನೆ ತುಂಬಿಸಿಕೊಳ್ಳುತ್ತಿದ್ದರು. ಅದನ್ನು ಗಮಿಸಿದ ಇಗ್ಗುತಪ್ಪ ತನ್ನ ಭಕ್ತರ ಒಳಿತಿಗಾಗಿ ತನ್ನ ಅಣ್ಣನಾದ ಭೇಂದ್ರಕೋಲ್ ಅಪ್ಪಯ್ಯನ ಬಳಿ ತೆರಳಿ ಓಣತಮ್ಮೆಯನ್ನು ಕರೆತಂದ ಅಂದರೆ ಕದ್ ಕೊಯ್ಯುವ ಕತ್ತಿ ಮತ್ತು ತುಂಬಿಸಿಕೊಳ್ಳಲು ಕುತ್ತಿ, ಮತ್ತಿತರ ಪ್ರಾಕೃತಿಕ ಪರಿಕರಗಳನ್ನು ಮಾತ್ರ ಓಣತಮ್ಮೆ ತಂದಳು ಎನ್ನುವುದನ್ನ ಜನಪದ ಧೃಡೀಕರಿಸುತ್ತದೆ.
ಇದಕ್ಕೂ ಮೊದಲು ಪುತ್ತರಿ ಇರಲಿಲ್ಲವೇ ಎಂದು ನೋಡುತ್ತಾ ಹೋದರೆ, ಇಗ್ಗುತಪ್ಪ ಬರುವುದಕ್ಕೂ ಮೊದಲು ಪುತ್ತರಿ ಇತ್ತು, ಈ ಪುತ್ತರಿಯನ್ನು ಕ್‌ಗ್ಗಟ್ಟ್ ನಾಡಿನಲ್ಲಿ ನಿಶ್ಚಯಿಸಲಾಗುತಿತ್ತು ಎಂಬ ಕುರುಹುಗಳು ಸಿಗುತ್ತವೆ. ಇದಕ್ಕೆ ಈ ವಿಚಾರವನ್ನು ನಡಿಕೇರಿಯಂಡ ಚಿಣ್ಣಪ್ಪ ಅವರು ಪಟ್ಟೋಲೆ ಪಳಮೆಯಲ್ಲಿಯೂ ಉಲ್ಲೇಖವಿದೆ. ಮತ್ತು ಕ್‌ಗ್ಗಟ್ಟ್ ನಾಡಿನ ಜನ ಇಂದಿಗೂ ಕುಟ್ಟತ ಮಲೆ ಅರಣ್ಯದೊಳಕ್ಕೆ ಹೋಗಿ ಹಿರಿಯರಿಗೆ ಮೀದಿ ನೀರು ಇಡುವ ಮೂಲಕ ಪುತ್ತರಿಯನ್ನು ನಿಶ್ಚಯಿಸುತ್ತಾರೆ. ಇಗ್ಗುತಪ್ಪ ಕೊಡಗಿಗೆ ಬರುವ ಮೊದಲು ಕ್‌ಗ್ಗಟ್ಟ್ ನಾಡಿನಲ್ಲಿ ಪುತ್ತರಿ ನಿಶ್ಚಯಿಸಿ ವ್ಯಾಪ್ತಿಯ ನಾಡಿನವರು ಇಂದಿಗೂ ಕೂಡ ಹುಣ್ಣಿಮೆ ಮತ್ತು ರೋಹಿಣಿ ನಕ್ಷತ್ರಗಳ ಸಮಾಗಮದ ಹಗಲಿನಲ್ಲಿ ಕದ್ ತೆಗೆದು ಮನೆ ತುಂಬಿಸಿ ಕೊಳ್ಳುತ್ತಾರೆ.
ಉಳಿದಂತೆ ಮೇಂದಲೆ ಮತ್ತು ಏಳ್‌ನಾಡ್ ನಾಡಿನವರು ಇಗ್ಗುತಪ್ಪನ ಸನ್ನಿಧಿಯಲ್ಲಿ ನಿಷ್ಚಯಿಸುವ ಸಮಯದಲ್ಲಿ ಕದ್ ತೆಗೆಯುತ್ತಾರೆ. ತುಂಬು ಹುಣ್ಣಿಮೆಯ ರಾತ್ರಿ ರೋಹಿಣೆ ಅಥವಾ ಕೃತಿಕಾ ನಕ್ತ್ರದಲ್ಲಿ ಕದ್ ತೆಗೆಯುವ ಮುಹೂರ್ಥ ನಿಶ್ಚಯಿಸಲಾಗುತಿತ್ತು ಎಂದು ಪಟ್ಟೋಲೆ ಪಳಮೆ ಉಲ್ಲೇಖಿಸುತ್ತದೆ ಆದರೂ ಇತ್ತೀಚಿನ ವರ್ಷಗಳಲ್ಲಿ ರೋಹಿಣಿ ನಕ್ಷತ್ರವನ್ನು ಮಾತ್ರ ಅವಲಂಬಿಸಲಾಗುತ್ತದೆ.
ಪುತ್ತರಿ ಆಚರಣೆಯ ಸಂಭ್ರಮಕ್ಕಿಂತ ಈ ನಕ್ಷತ್ರ ಮತ್ತು ಸಮಯ ನಿಗಧಿಯ ವಿಚಾರದಲ್ಲಿಯೇ ಸಾಕಷ್ಟು ಗೊಂದಲಗಳು ಚರ್ಚೆಗಳು ನಡೆಯುತಿದ್ದು, ಕೆಲವರು ಇಗ್ಗುತಪ್ಪನೇ ಪುತ್ತರಿಯ ಆಧಾರ, ಅಲ್ಲಿ ಆದ ನಿಶ್ಚಯವೇ ಅಂತಿ ಎಂದರೆ ಕೆಲವರು ಕುಟ್ಟತ ಮಲೆಯ ತೀರ್ಮಾನವೇ ಶ್ರೇಷ್ಟ, ಇಗ್ಗುತಪ್ಪನಿಗೂ ಮೊದಲೆ ಅಲ್ಲಿ ಕದ್ ತೆಗೆಯುವ ಸಮಯ ನಿರ್ಧರಿಸಲಾಗುತಿತ್ತು ಮತ್ತು ಮಂದ್ ಮಾನಿಗಳು ನಡೆಯುತಿದ್ದವು ಎನ್ನುತ್ತಾರೆ. ಮತ್ತೆ ಹಲವರು ಕೊಡವರು ಎಂದೂ ರಾಶಿ ನಕ್ಷತ್ರಗಳ ಹಿಂದೆ ಹೋದವರಲ್ಲ, ನಮಗೆ ಸೂರ್ಯ ಚಂದ್ರ( ನ್ಯಾರ, ನೆಲ್ಚಿ) ಮಾತ್ರ ನಿರ್ಣಾಯಕ ಎಲ್ಲಾ ಕಾಲವನ್ನೂ ನಾವು ಪ್ರಕೃತಿಯ ಚಲನೆಗೆ ಅನುಸಾರ ನಡೆಸಿಕೊಂಡು ಬಂದವರೂ ಎನ್ನುತ್ತಾರೆ.
ಕ್‌ಗ್ಗಟ್ಟ್ ನಾಡಿಗೆ ಇಗ್ಗುತಪ್ಪನಿಗಿಂಗ ತಿರುನೆಲ್ಲಿ ಪೆಮ್ಮಯ್ಯನೇ ಮೂಲ, ಅವನ ಆಜ್ಞೆಯಂತೆ ನಾವು ಪುತ್ತರಿ ಆಚರಿಸುತ್ತೇವೆ ಎಂದು ವಾದಿಸುವವರೂ ಇದ್ದಾರೆ. ಅದರಿಂದಾಚೆಗೆ ಎಲ್ಲಾ ದೇವತೆಗಳ ಮೂಲ ಬೈತೂರಪ್ಪ, ಕೊಡವರಿಗೆ ಮೊದಲ ದೇವರು ಮಾದೇವ, ಮಾದೇವನೇ ಬೈತೂರಪ್ಪನಾಗಿ ನೆಲೆನಿಂತಿರುವಾಗ ಅವನ ಅಣತಿಯಂತೆ ಮಾತ್ರ ನಡೆಯಬೇಕು ಎನ್ನುವವರೂ ಇದ್ದಾರೆ. ಪೂರ್ವದಲ್ಲಿ ಕೊಡವರ ಮನೆ ಮನೆಯಲ್ಲೂ 64 ವಿಧ್ಯೆ, 108 ವಿಧ್ಯೆಗಳನ್ನೂ ಕಲಿತವರು ಇದ್ದರು, ಈ ವಿದ್ಯೆಯಿಂದ ಇಡೀ ಸೃಷ್ಟಿಯನ್ನ ನಿಯಂತತ್ರಿಸುವ ತಾಕತ್ತು ಕೊಡವರಿಗೆ ಇತ್ತು. ಹಾಗಾಗಿ ಇಂದು ಯಾರೋ ಬಂದು ನಮಗೆ ಶಾಸ್ತ್ರ ಹೇಳಿಕೊಡುವ ಅಗತ್ಯ ಇಲ್ಲ ಎನ್ನುವ ವಾದವೂ ಕೇಳಿಬರುತ್ತಿದೆ.
ಈ ಎಲ್ಲದರ ಹಿಂದಿನ ವಿಚಾರಗಳನ್ನು ಅವಲೋಕಿಸುತ್ತಾ ಹೋದರೆ, ಕೊಡಗು ಎನ್ನುವುದು ಕೇವಲ ಒಂದು ಭೂಪ್ರದೇಶ, ಆಡಳಿತ ಪ್ರದೇಶ ಮಾತ್ರ ಅಲ್ಲದೆ, ಇದೊಂದು ಭಾವನೆ, ಸಂಸ್ಕೃತಿ, ಸಂಪ್ರದಾಯ ಹಿನ್ನೆಲೆಯುಳ್ಳ, ಜಾನಪದೀಯ ಬುಡಕಟ್ಟು ಭಂಡಾರ.
ಒಂದಾನೊಂದು ಕಾಲದಲ್ಲಿ ಕೊಡಗು ವಿಶಾಲ ಕ್ರೋಡ ದೇಶವಾಗಿತ್ತು. ಆನಂತರದ ರಾಜಕೀಯ, ಪ್ರಾದೇಶಿಕ ಬದಲಾವಣೆಗಳಿಂದ ರಾಜ್ಯವಾಗಿ, ಆನಂತರದ ವೈಪರಿತ್ಯಗಳಿಂದ, ಸೀಮಿತ ಪ್ರದೇಶವಾಗಿ, ಸ್ವತಂತ್ರ ನಂತರ ಪ್ರಜಾಪ್ರಭುತ್ವ ವ್ಯವಸ್ತೆಯ ಪ್ರಾದೇಶಿಕ ವಿಂಗಡಣೆ ಅಡಿಯಲ್ಲಿ, ಕೊಡಗು ಕೇವಲ ಒಂದು ಜಿಲ್ಲೆಯಾಗಿ ಮಾರ್ಪಟ್ಟಿತು. ಆದರೆ ಕೊಡಗಿನ ಸಂಸ್ಕೃತಿ, ಸಂಪ್ರದಾಯ, ಕಟ್ಟುಪಾಡು ಆಚರಣೆಗಳು, ಮೂಲ ಬುಡಕಟ್ಟಿಗೆ ಅನುಸಾರವಾಗಿಯೇ ಬಹು ಪಾಲು ಇಂದಿಗೂ ನಡೆಯುತ್ತಿದೆ.
ಅಂದಿನ ವಿಸ್ತೃತ ಕ್ರೋಡ ದೇಶದಲ್ಲಿ ಸರಿಯಾದ ಸಂವಹನ ವ್ಯವಸ್ಥೆ ಇರಲಿಲ್ಲ. ಆ ಕಾರಣಕ್ಕಾಗಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಅವರಿಗೆ ಸರಿ ಹೊಂದುವಂತೆ ಆಚರಣೆಗಳು ನಡೆದವು, ಆನಂತರದ ಪ್ರದೇಶಿಕವಾಗಿ ಮತ್ತು ಜನಸಂಖ್ಯಾ ಆಧಾರದಲ್ಲಿ ಕ್ಷೀಣಿಸುತ್ತಾ ಬಂದ ಈ ಬುಡಕಟ್ಟು ಸಂಪ್ರದಾಯದ ಕಟ್ಟುಪಾಡುಗಳ ಆಚರಣೆಯಲ್ಲಿ, ಸಾಕಷ್ಟು ಗೊಂದಲಗಳು, ವಿಭಿನ್ನತೆಗಳನ್ನ ಪ್ರದೇಶವಾರು ಇಂದಿಗೂ ಗಮನಿಸಬಹುದು.
ಹಬ್ಬಗಳ ಜೊತೆಗೆ ದೇಶ ಕಟ್ಟ್ ಮತ್ತು ನಡೆನುಡಿಯಲ್ಲಿಯೂ ಅಷ್ಟೇ ಗೊಂದಲಗಳು ಕಾಣುತ್ತಿವೆ. ಪ್ರಮುಖವಾಗಿ ಕೊಡವರಿಗೆ ಆರು ದೇಶ ಕಟ್ಟುಗಳಿವೆ ಎನ್ನಲಾಗುತ್ತಿದೆಯಾದರೂ ಎಂದು ತಲೆಕಾವೇರಿ ಚಂಗ್ರಾಂದಿ ಮತ್ತು ಇಗ್ಗುತಪ್ಪನ ಪುತ್ತರಿ ಕಟ್ಟುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂಬ ಅಭೀಪ್ರಾಯ ಕೇಳಿ ಬರುತ್ತಿದೆ. ಇದರಲ್ಲೂ ಕೂಡ ಒಮ್ಮತವಿಲ್ಲದೆ ಪರ ವಿರೋದ ಚರ್ಚೆಗಳು ಕೇಳಿಬರುತ್ತಿವೆ. ದೇಶ ಕಜಟ್ಟ್ ಎಂದರೆ ಹೆಸರೇ ಹೇಳುವಂತೆ ಇಡೀ ಕ್ರೋಡ ದೇಶವೇ ಕಟ್ಟುಪಾಡಿಗೆ ನಿಲ್ಲಬೇಕು ಎಂಬ ಮನವಿಗಲು ಒಂದಡೆಯಾದರೆ ಚಂಗ್ರಂದಿಯ ಕಟ್ಟು ತಾವು ನಾಡಿಗೂ, ಪುತ್ತರಿ ಕಟ್ಟು ನಾಲ್‌ನಾಡಿಗೆ ಮಾತ್ರ ಸೀಮಿತ, ಇತರ ನಾಡುಗಳು ಪಾಲಿಸಬೇಕಿಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಅದರಿಂದಾಚೆಗೆ ದೇಶ ಕಟ್ಟುಪಾಡುಗಳು ಮತ್ತು ದೇಶದ ಬೇಕು ಬೇಡಗಳನ್ನು ಪುರಾತನ ಕಾಲದಿಂದಲೂ ನಿಶ್ಚಯಿಸಿದವರು ಎಂಟು ದೇಶತಕ್ಕರು. ಆದರೆ ಈಗ ಒಬ್ಬರೇ ದೇಶ ತಕ್ಕ ಇತರ ತಕ್ಕರ ಅಭಿಪ್ರಾಯ ಪಡೆಯದೆ ಹೇಗೆ ಕಟ್ಟುಪಾಡು ವಿಧಿಸುತ್ತಾರೆ ಎಂಬ ಪ್ರಶ್ನೆಯೂ ಇದೆ.
ಈ ಎಲ್ಲಾ ಗೊಂದಲ ಗೋಜಲುಗಳಿಗೆ ಪರಿಹಾರವಾಗಿ, ಒಮ್ಮೆಲೆ ಏಕಮೇವ ನಿರ್ಧಾರಿಸುವದಕ್ಕಿಂತ ಮೊದಲು ಮೂಲ ಸಂಪ್ರದಾಯದಂತೆ, ಎಂಟೂ ಜನ ದೇಶ ತಕ್ಕರು ಮತ್ತು ಇಂದು ಜನಾಂಗದ ಮುಖಂಡತ್ವವನ್ನು ವಹಿಸಿರುವ ಅಖಿಲ ಕೊಡವ ಸಮಾಜ, ಕೊಡವ ಸಮಾಜ ಒಕ್ಕೂಟಗಳು ಕೂತು ಸುದೀರ್ಘ ಸಾಧಕ ಬಾದಕಗಳ ಕುರಿತು ಚರ್ಚಿಸಿ, ನಂತರ ದೇಶಸಭೆ ಕರೆದು ಎಲ್ಲರ ಅಭಿಪ್ರಯಾ ಪಡೆದು ಒಮ್ಮತದ ತೀರ್ಮಾನಕ್ಕೆ ಬಂದು ನಿರ್ಧಾರ ಪ್ರಕಟಿಸಿದರೆ, ಕ್ರಮೇಣ ಬದಲಾವಣೆ ಸಾಧ್ಯವಾಗಬಹುದು. ಅಲ್ಲಿಯವರೆಗೂ ಮೂಲ ಸಂಪ್ರದಾಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಆಚರಣೆಗಳು ನಡೆಯಲಿ.
ಆಡುವಾ ಬಾಲಂಡ ಆಟ್‌ರ ಚೋದ್ ಪೊಯಿಲೇ ಪೊಯಿಲೇ…,
ಕೊಟ್ಟುವ ಬಾಲಂಡ ಪಾಟ್‌ರ ಚೋದ್ ಪೊಯಿಲೇ ಪೊಯಿಲೇ…,
ಆಟ್‌ಲೂ ಪಾಟ್‌ಲೂ ಎಲಂಗುವ ಮಂದ್ ಪೊಯಿಲೇ ಪೊಯಿಲೇ…,
ಇಂದನ್ನೆ ಎಕ್ಕಕೂ ಎಲಂಗಡೀ ಮಂದ್ ಪೊಯಿಲೇ ಪೊಯಿಲೇ…,
ಬಪ್ಪಕ ಪುತ್ತರಿ ಬಣ್ಣತೇ ಬಂದ ಪೊಯಿಲೇ ಪೊಯಿಲೇ…,
ಪೋಪಕ್ಕ ಪುತ್ತರಿ ಎಣ್ಣತೇ ಪೋನ ಪೊಯಿಲೇ ಪೊಯಿಲೇ…,
ದಮ್ಮಯ್ಯ ಪುತ್ತರಿ ಒಮ್ಮಲೂ ಪೋತೇ ಪೊಯಿಲೇ ಪೊಯಿಲೇ…,
ಎನ್ನುವ ಬಾಯಿತೊರೆ ಶಾಶ್ವತವಾಗಿ, ಸೂರ್ಯ ಚಂದ್ರರು ಇರುವವರೆಗೂ ಈ ಮಣ್ಣಿನಲ್ಲಿ ನಲಿಯುತ್ತಿರಲಿ ಎಂಬ ಹೆಬ್ಬಯಕೆಯೊಂದಿಗೆ,
ಬಾಳ್ ಬಾಳೆನ್ನಡ ಜಬ್ಬೂಮಿ ಬಾಳೊ
ಜಬ್ಬೂಮಿ ಮೀದಲ್ ಪೂಮಂದ್ ಬಾಳೊ
ಪೂಮಂದ್ ಮೀದಲ್ ದೇವಯ್ಯ ಬಾಳೊ
ದೇವಯ್ಯಂಡಾಜಾರ ಪಾಡ್‌ಚೋ ಎಂಗೋ
ಆಜಾರ ಪಾಡಿತ್ ಬೆಕ್ಕನ ಎಂಗೋ
ಲೇಲಾಲೇ ಲಾಲೇಲ್ಲ ಲೇಲೇಲೋ ಲೇಲ್ಲೋ…