
ಅಪಘಾತದಲ್ಲಿ ಇದ್ದೊಬ್ಬ ಮಗನ ಕಳೆದುಕೊಂಡ ತಂದೆಯ ಆರ್ಥನಾದದ ನುಡಿ…. ಇದು ಎಲ್ಲಾ ಪೋಷಕರು ಓದಲೇ ಬೇಕಾದ ವಿಚಾರ…,
- ಚಾಮೆರ ದಿನೇಶ್ಬೊಳ್ಯಪ್ಪ
ಇರೋನೊಬ್ಬ ಮಗ, ನಾನು ಪಟ್ಟ ಕಷ್ಟ ಅವನಿಗೆ ಬರಬಾರದು, ಇರೋನೊಬ್ಬ ಮಗ, ಅವನು ಕೇಳಿದ ಕೊಡಿಸದೆ ಮತ್ಯಾರಿಗೆ ಈ ದುಡಿಮೆ ಎಲ್ಲಾ, ಈಗ ಮಜಾ ಮಾಡದೆ ಇನ್ಯಾವಗ ಬಿಡಿ, ಮುಂದೆ ಇದ್ದಿದೇ ದುಡಿಮೆ, ಸಂಸಾರ ತಾಪತ್ರೆ ಎಲ್ಲಾ, ಈಗ ನಾವಿದ್ದೇವಲ್ಲ ಮುಂದೆ ನಮ್ಮನ್ನೂ ಆತ ಚೆನ್ನಾಗಿ ನೋಡಿಕೊಳ್ಳುತ್ತಾನೆ , ಈಗ ಆರಾಮಾಗಿರಲಿ ಅಂತ ಅತಿಕಾಳಜಿಯ ಪಾಲನೆಯಲ್ಲಿ ಮಗನನ್ನ ಬೆಳೆಸಿದೆ ಆದರೆ ಅದೇ ಅತಿ ಪ್ರೀತಿಯ ಕಾಳಜಿ, ಇಂದು ಆತ ಕೇವಲ 23 ವರ್ಷಕ್ಕೇ ನಮ್ಮನ್ನ ಬಿಟ್ಟು, ಎಂದೂ ಬಾರದ ಲೋಕಕ್ಕೆ ಹೋಗಿ ಬಿಟ್ಟ, ನನ್ನ ಮಗನೇನೋ ಹೋದ, ಆದರೆ ಇದು ಇತರ ಎಲ್ಲಾ ಪೋಷಕರಿಗೂ ಪಾಠವಾಗಬೇಕು. ಅದಕ್ಕಾಗಿ ಅಷ್ಟೇ… ಅಂದ ಆ ಅಪ್ಪನ ಮಾತಿನಲ್ಲಿ ದುಃಖಕ್ಕಿಂತಲೂ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶವಿತ್ತು ಆ ಪ್ರೇರಣೆಯಿಂದಲೇ ಈ ಲೇಖನ.
ಇವರು ಕಳೆದ ಕೆಲ ವರ್ಷಗಳ ಹಿಂದೆ ಅಚಾನಕ್ಕಾಗಿ ಸಂಪರ್ಕಕ್ಕೆ ಬಂದವರು, ಕೊಡಗು ಮೂಲದ, ಬೆಂಗಳೂರಿನಲ್ಲಿ ನೆಲೆಸಿರುವ ಹೆಸರಾಂತ ಉದ್ಯಮಿ ಆದರೂ ತಾನಾಯಿತು ತನ್ನ ಕೆಲಸ ಆಯಿತು ಅಂತ ಇದ್ದವರು, ಪರಿಚಯವಾದಾಗಿನಿಂದ ನಮ್ಮ ಬಾಂದವ್ಯ ಅತ್ಯಂತ ಗೌರವಪೂರ್ವಕವಾಗಿ ನಡೆಯುತ್ತಿದೆ, ಒಂದೆರಡೋ ಮೂರೋ ಭಾರೀ ನೇರ ಭೇಟಿಯಾಗಿದ್ದೇವೆ ಬಿಟ್ಟರೆ, ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ಕನಿಷ್ಟ ಅರ್ಧಘಂಟೆಯಾದರೂ ಹರಟುತ್ತೇವೆ. ಮಾತಿನಲ್ಲಿ ಗಂಭೀರತೆ ಇದ್ದರೂ ಅಷ್ಟೇ ಚೇಷ್ಟೆ ಕಾಲೆಳೆದಾಟವೂ ಇರುತ್ತದೆ. ವಯಸ್ಸಿನಲ್ಲಿ ತುಂಬಾ ಹಿರಿಯರಾದರೂ, ನಾನು ಆಗಾಗ ಕಿಚಾಯಿಸುತ್ತೇನೆ, ನಿನಗೇನು ಚಾಮೆ… ಅಂದು ಮತ್ತೆ ಯಾವುದೋ ಗಂಭೀರ ವಿಚಾರಕ್ಕೆ ಬರುತ್ತಾರೆ. ಇದಕ್ಕೆ ಕಾರಣ ಅವರು ನನ್ನ ಪತ್ನಿಯ ತವರೂರಿನವರು. ಆ ಕಾರಣಕ್ಕೂ ಸ್ವಲ್ಪ ಸಲಿಗೆ ಇದೆ, ಇತ್ತೀಚೆಗೆ ಮೈಸೂರಿನ ಒಂದು ಕಾರ್ಯಕ್ರಮದಲ್ಲಿ ಅವರ ಮನೆಯವರನ್ನು ಪರಿಚಯಿಸಿ, ಮಕ್ಕಳಿಗಂತೂ ಒಂದರ್ಧಘಂಟೆ ನಮ್ಮ ಒಡನಾಟದ ಬಗ್ಗೆ ಹೇಳಿದ್ದರು.
ಹೀಗಿದ್ದವರು ಕಳೆದೊಂದು ತಿಂಗಳಿನಿಂದ ಯಾವುದೇ ಸದ್ದು ಮಾಡಲಿಲ್ಲ, ಸದಾ ದೆಹಲಿ, ಮುಂಬೈ, ಕೇರಳ, ತಮಿಳುನಾಡು ಎಂದು ನಾನಾ ಕಡೆ ಹಾರಾಡುತ್ತಲೇ ಇರುವವರು ಸಾಮಾನ್ಯವಾಗಿಯೇ ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿರಬೇಕು ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಯಾಕೋ ವಾಟ್ಸಾಪ್ ಸ್ಟೇಟಸ್ ನೋಡುತಿದ್ದಾಗ, ಮಗನೊಂದಿಗರುವ ಫೋಟೋದಲ್ಲಿ “Spent the most painful month in our lives with grief by losing you my Son. ́Let our loss be a lesson for others atleast….ʼ” ಅಂತ ಬರೆದುಕೊಂಡಿದ್ದರು. ಇದೇನಾಯಿತು ಅಂತ ನಾನು, ಅವರ ಮನೆಯಲ್ಲಿ ಅಥವಾ ಬಳಗದಲ್ಲಿ ನನಗೆ ಯಾರೂ ಸಂಪರ್ಕಿತರಿಲ್ಲದ ಕಾರಣ, ಅವರಿಗೇ ನೇರ ಫೋನ್ ಮಾಡಿದರೆ, ಎಂದಿನಂತೆ ಹೇಳೋ ಚಾಮೆ ಎಂದರು, “ಏನಣ್ಣ ಸ್ಟೇಟಸ್ ಹಾಕಿದ್ದಿಯ ಹಂಗೆ” ಅಂದ್ರೆ, “ಅವನು ಹೋಗಿ ತಿಂಗಳಾಯ್ತಲ ಅದಕ್ಕೆ” ಅಂದರು. ಅರ್ಥನೇ ಆಗದ ನಾನು ಏನಣ್ಣ ಹೇಳ್ತಿದ್ದಿರಿ, ಏನಾಯ್ತು ಅಂದರೆ “ಮಗ ಆಕ್ಷಿಡೆಂಟಲಿ ತೀರ್ಕೊಂಡ ಕಣೊ ತಿಂಗಳಾಯಿತು” “ಅಂದು ಯಾವುದೋ ಪಾರ್ಟಿ ಮುಗಿಸಿ, ಬರುತಿದ್ದಾಗ ಬೈಕ್ ಅಪಘಾತವಾಗಿ ಕೆಳಬಿದ್ದವನೂ ಮೇಲೆ ಏಳಲೇ ಇಲ್ಲ. ನಮ್ಮ ಸುಂದರ ಸಂಸಾರದ ಕನಸು ಕಟ್ಟಿದ್ದವನು, ಬೆಳಕು ನೋಡುವುದರೊಳಗೇ ಕತ್ತಲೆಯಲ್ಲೆ ಕಳೆದೋದ” ಅಂದರು.
ಯಪ್ಪಾ ಇತ್ತೀಚೆಗಷ್ಟೆ ಮಗನಿಗೆ ಜಾಬ್ ಆಯ್ತು ಅಂದಿದ್ದು ನೆನಪಿತ್ತು, ಅಂದು ಮೈಸೂರಿನಲ್ಲಿ ಸಿಕ್ಕಾಗ ಒಂದು ಕುಟುಂಬವಾಗಿ ಸ್ನೇಹಿತರಂತೆ ಎಲ್ಲರೂ ಒಟ್ಟಿಗೇ ಕಾಲಕಳೆಯುತಿದ್ದ ಸಂಸಾರದಲ್ಲಿ, ಹಸನ್ಮುಖಿಯಾಗಿಯೇ ಇರುತಿದ್ದ ಮಗ ಇಲ್ಲ ಅಂದರೆ ನನಗೇ ಅರಗಿಸಿಕೊಳ್ಳಲಾಗಲಿಲ್ಲ. ಇನ್ನು ಅವರ ಪರಿಸ್ಥಿತಿ ಯೋಚಿಸೋದು ಕಷ್ಟ ಆಯಿತು. ನಾನೇ ಮಾತು ನಿಲ್ಲಿಸಿಬಿಟ್ಟೆ, ಆದರೆ ಅವರೇ ಮಾತು ಮುಂದುವರೆಸಿದರು. ʼಇದು ನಾನೇ ಮಾಡಿದ ಮಿಸ್ಟೇಕ್ ಚಾಮೆ, ಈಗ ಕಳ್ಕೊಂಡುಬಿಟ್ಟೆ ಅಂದರು.ʼ ಯಾಕೆ, ಏನಾಯಿತಣ್ಣ ಅಂದರೆ, ಅವರು ಮುಂದುವರೆಸಿದರು…,
“ನಾನು ನನ್ನ ಬಾಲ್ಯದಂತೆ ನನ್ನ ಮಕ್ಕಳಿಗೆ ಆಗಬಾರದು ಎಂಬ ಹೆಬ್ಬಯಕೆಯಲ್ಲಿಯೇ ಬೆಳೆಸಿದೆ, ಹುಟ್ಟಿದಾಗಿನಿಂದ ಇಲ್ಲಿತನಕ ಒಂದೇ ಒಂದು ಕೆಲಸ ಮಾಡಿಸಿಲ್ಲ, ಒಂದಿನ ಅರ್ದಲಿಟರ್ ಹಾಲು ತರಿಸಿಲ್ಲ, ಓಂದು ಕರ್ಚಿಪ್ ಒಗೆದಿಲ್ಲ, ಬೆಳಗ್ಗೆ ಏಳೊಕ್ ಮುಂಚೆ ಬೆಡ್ ಕಾಫಿ ಕುಡಿದು ಮತ್ತೊಂದಿಷ್ಟು ನಿದ್ರೆ ಮಾಡಿಯೇ ಏಳುತಿದ್ದ, ಬೇಕು ಅಂದಿದನ್ನ ತಡಮಾಡದೆ ಕೊಡಿಸುತಿದ್ದೆ, ಈಗ 23ವರ್ಷ ವಯಸ್ಸಾಯಿತು, ಆದರೂ ಕಷ್ಟ ಅಂದರೆ ಏನು ಅಂತಾನೇ ಗೊತ್ತಿರಲಿಲ್ಲ. ಓದು ಮುಗಿಸಿದ ನಂತರ ಒಂದೊಳ್ಳೇ ಕಂಪೆನಿಯಲ್ಲಿ ಕೆಲಸವೂ ಆಯಿತು. ಪ್ರತಿದಿನ ಗೆಳೆಯರು, ಪಾರ್ಟಿ ಅಂತ ಜೀವನವನ್ನ ವಿಜ್ರಂಬಿಸುತಿದ್ದ. ಇರೋನು ಒಬ್ಬ ಮಗ, ಹೇಗ್ ಬೇಕೋ ಹಾಗಿರಲಿ ಅಂತ ಅಂತ ಬಿಟ್ಟೆ. ಅದರ ಪ್ರತಿಫಲ ಈಗ ಅನುಭವಕ್ಕೆ ಬರ್ತಾ ಇದೆ. ನೋಡು, ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ನಮಗೆ ಆಟ ಪಾಟಕ್ಕಿಂತ ಹೆಚ್ಚಾಗಿ ಬದುಕಿನ ದಾರಿ ತೋರಿಸುತಿದ್ದರು, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕಿತ್ತು, ಪೇಟೆ ಪಟ್ಟಣಗಳ ಅನುಭವ ಆಗುತಿತ್ತು, ಹಣವಂತರೂ ಕೂಡ ಮಕ್ಕಳನ್ನ ಇತಿಮಿತಿಯಲ್ಲೇ ಬೆಳೆಸುತಿದ್ದರು. ಅರ್ದ ಜೀವನ ಅಲ್ಲೇ ಅರ್ಥವಾಗಿ ಬಿಡುತಿತ್ತು, ಮನೆ ತುಂಬಾ ಮಕ್ಕಳಿದ್ದರೂ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಪಾಟ ಮನೆಯಿಂದಲೇ ಬರುತಿತ್ತು. ಆದರಿವತ್ತು, ನಮ್ಮ ಪಾಡು ಹಾಗಲ್ಲ ಇರೋ ಒಬ್ಬ, ಇಬ್ಬರು ಮಕ್ಕಳನ್ನ ಅತಿ ಮುದ್ದು ಮಾಡುತ್ತೇವೆ, ಕೇಳಿದ್ದೆಲ್ಲ ಕೊಡುತ್ತೇವೆ, ಬಯಸಿದಂತೆ ಬಿಡುತ್ತೇವೆ. ಅದರ ಕೊನೆ ಫಲಿತಾಂಶ ಈಗ ನಮ್ಮ ಮಗನಿಗೆ ಆದಂತೆ ಇರುತ್ತದೆ. ಅದಕ್ಕಾಗಿ ನಾನು ಪ್ರತಿಯೊಬ್ಬ ಪೋಷಕರಿಗೂ ಮನವಿ ಮಾಡುತ್ತೇನೆ, “ಯಾರೂ ಕೂಡ ನಿಮ್ಮ ಮಕ್ಕಳನ್ನ ಕಷ್ಟ ಗೊತ್ತಿಲ್ಲದಂತೆ ಬೆಳಸುವುದು ಪ್ರೀತಿ ಎಂದು ಭಾವಿಸಬೇಡಿ, ನಿಜವಾದ ಪ್ರೀತಿ ಇರೋದು ಬದುಕಿನ ಜವಾಬ್ದಾರಿಗಳನ್ನ ಮತ್ತು ಅದನ್ನ ನಿಭಾಯಿಸುವ ರೀತಿಯನ್ನ ಕಲಿಸುವುದರಲ್ಲಿ” ನಾನು ಮತ್ತೊಮ್ಮ ಮನವಿ ಮಾಡುತ್ತೇನೆ, ಯಾವ ತಂದೆ ತಾಯಿ ಕೂಡ ಮಕ್ಕಳಿಗೆ ನಮ್ಮ ಕಷ್ಟ ಅರಿವಾಗದಂತೆ ಬೆಳೆಸೋ ಯೋಚನೆ ಮಾಡಬೇಡಿ, ನಮ್ಮ ನಿತ್ಯದ ಕಾಯಕದ ಅನುಭವದೊಂದಿಗೆ ಪ್ರಾಯೋಗಿಕವಾಗಿ ಮಕ್ಕಳನ್ನು ಬೆಳೆಸಿ. ಇಂದು ನಾನು 23ನೇ ವರ್ಷದ ಮಗನನ್ನ ಕಳೆದುಕೊಂಡಿರುವೆ ಮುಂದೆ ಯಾವ ತಂದೆ ತಾಯಿಯೂ ಇಂತದೊಂದು ಸನ್ನಿವೇಶ ಎದುರಿಸದಿರಲಿ.” ಎಂದು ನಿಟ್ಟುಸಿರು ಬಿಟ್ಟರು. ನಾನು ಮಾತಿಗಾಗಿ, ಅವರಿಗೆ ಸಮದಾನ ಹೇಳಲಿಕ್ಕಾಗಿ ತಡವರಿಸಿದೆ. ಅದನ್ನ ಅವರೇ ಅರ್ಥಮಾಡಿಕೊಂಡರೋ ಏನೋ, ಸರಿ ಚಾಮೆ, ಮತ್ಯಾವತ್ತಾದರು ಮಾಡುತ್ತೇನೆ ಎಂದು ಫೋನ್ ಇಟ್ಟರು.
ಅವರು ಹೇಳಿದ ಅಷ್ಟೂ ವಿಚಾರವನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಯೋಚಿಸ ಬೇಕಾದವರು ನಾವಾ…, ಅಲ್ಲ ಮಕ್ಕಳಾ ನಮ್ಮ ನಮ್ಮ ವಿವೇಚನೆಗೆ ಬಿಟ್ಟದು…
