ಬೆಂಗಳೂರ್, ಜು.24;(nadubadenews): ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಮೈಸೂರಿನ ಗಲ್ಲಿಗಳು ಹಾಗೂ ವೃತ್ತಗಳ ಇತಿಹಾಸದ ಕುರಿತು ಬರೆದ ಎರಡು ಪುಸ್ತಕ, ವೀರ ಸೇನಾನಿಗಳ ಸಾಸಹಗಾಥೆಯನ್ನು ಒಳಗೊಂಡ ಮತ್ತೊಂದು ಕೃತಿ ಸೇರಿದಂತೆ ಒಟ್ಟು ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಜುಲೈ 25 ರಂದು ನಗರದಲ್ಲಿ ನಡೆಯಲಿದೆ.
ಮೈಸೂರಿನ ಗಲ್ಲಿ ಗಲ್ಲಿಗೂ ಒಂದೊಂದು ಕಥೆ ಇದೆ. ಇಲ್ಲಿನ ರಸ್ತೆಗಳು ಕೇವಲ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲ. ಅವುಗಳ ಹಿಂದೆ ಬಹುದೊಡ್ಡ ಇತಿಹಾಸ, ತ್ಯಾಗ, ಬಲಿದಾನ, ಸಾಧನೆ, ಆದರ್ಶ ಇದೆ. ಪ್ರತಿಯೊಂದಕ್ಕೆ ಅದರದ್ದೇ ಆದ ಹೆಸರಿದೆ. ಆದರೆ, ಆ ಹೆಸರು ಯಾರದ್ದು ಎನ್ನುವುದು ಹಲವರಿಗೆ ತಿಳಿದಿಲ್ಲ. ಕೆಲವು ರಸ್ತೆ ಹಾಗೂ ವೃತ್ತಗಳ ಹೆಸರುಗಳೇ ಮರೆತು ಹೋಗಿವೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮೈಸೂರಿನ ರಸ್ತೆ, ವೃತ್ತಗಳ ಕುರಿತು ಐತಿಚಂಡ ರಮೇಶ್ ಉತ್ತಪ್ಪ ಅವರು ಅಧ್ಯಯನ ನಡೆಸಿ ‘‘ಮೈಸೂರಿನ ಗಲ್ಲಿಕಥೆಗಳು’’ ಹಾಗೂ ‘‘ಮೈಸೂರು ವೃತ್ತಗಳ ವೃತ್ತಾಂತ’’ ಕೃತಿಗಳನ್ನು ರಚಿಸಿದ್ದಾರೆ. ಈ ಎರಡೂ ಕೃತಿಗಳು ಮೈಸೂರಿನ ಇತಿಹಾಸದೊಂದಿಗೆ ಸ್ವಾರಸ್ಯಕರ ಮಾಹಿತಿ ಹೊಂದಿವೆ. ಒಂದೊಂದು ಹೆಸರಿನ ಹಿಂದಿನ ವಿಶೇಷತೆಯನ್ನು ದಾಖಲು ಮಾಡಲಾಗಿದೆ. ಮರೆತು ಹೋದವರನ್ನು ಯುವ ಪೀಳಿಗೆಗೆ ಪರಿಚಯ ಮಾಡುವ ಪ್ರಯತ್ನ ಇದಾಗಿದೆ. ಮಹಾರಾಜರ ಕಾಲದಿಂದಲೂ ಮೈಸೂರಿನ ರಸ್ತೆಗಳಿಗೆ, ಗಲ್ಲಿಗಳಿಗೆ, ವೃತ್ತಗಳಿಗೆ ಹೆಸರಿಡುವ ಸಂಪ್ರದಾಯ ಬೆಳೆದುಬಂದಿದೆ. ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳಿಗೆ ಹೆಸರುಗಳಿವೆ. ಅದರಲ್ಲಿಯೂ ಕೋಟೆ, ಮೊಹಲ್ಲಾಗಳಲ್ಲಿ ಹೆಸರನ್ನು ನೂರು ವರ್ಷಗಳ ಹಿಂದೆಯೇ ನಾಮಕರಣ ಮಾಡಿರುವುದು ವಿಶೇಷ. ಆ ಹೆಸರುಗಳ ವ್ಯಕ್ತಿಗಳ ಸಾಧನೆ, ತ್ಯಾಗ, ಬಲಿದಾನಗಳನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಇದಾಗಿದೆ.
ಮೈಸೂರಿನ ರಸ್ತೆಗಳ ಆರಂಭ, ಉದ್ದ, ವಿಸ್ತೀರ್ಣ ಮುಂತಾದ ಅಂಕಿ ಅಂಶಗಳನ್ನು ದಾಖಲು ಮಾಡುವ ಪ್ರಯತ್ನ ಇದಲ್ಲ. ಅದರ ಬದಲಿಗೆ ರಸ್ತೆಗಳ ಕಥೆ ಹೇಳುವ ಪ್ರಯತ್ನ. ಇತ್ತೀಚಿನ ಯುವ ಪೀಳಿಗೆಗೆ ಮೈಸೂರಿನ ಬಗ್ಗೆ ಆಸಕ್ತಿ, ಅಭಿಮಾನ ಮೂಡಿಸುವ ಪ್ರಯತ್ನ. ಇಡೀ ದೇಶದಲ್ಲಿಯೇ ಗಲ್ಲಿಗಳ ಹಾಗೂ ವೃತ್ತಗಳ ಕುರಿತು ಅಧ್ಯಯನ ನಡೆಸಿ ಬರೆದು ಮೊದಲ ಕೃತಿಗಳು ಎನ್ನುವ ಹೆಗ್ಗಳಿಕೆ ಅದನ್ನು ಪರಿಶೀಲಿಸಿದವರಿಂದ ಬಂದಿದೆ.
ಇದೊಂದಿಗೆ ಮತ್ತೊಂದು ಕೃತಿಯೂ ಪ್ರಕಟವಾಗುತ್ತಿದೆ. ‘‘ಸಿಂದೂರ, ಬ್ರೇವ್ ಹಾರ್ಟ್ಸ್ ಆಫ್ ಇಂಡಿಯನ್ ಆರ್ಮಿ’’. ಇದರಲ್ಲಿ ಆಪರೇಷನ್ ಆಪರೇಷನ್ ಸಿಂದೂರ ವಿವರಗಳಿಲ್ಲ. ಬದಲಿಗೆ ಸೇನೆಯ ಸಿಂದೂರದಂತೆ ಇದ್ದ, ಇರುವ ವೀರ ಸೇನಾನಿಗಳ ಹೋರಾಟದ ರೋಚಕ ಕಥೆಗಳಿವೆ. ಮಹಾವೀರ ಚಕ್ರ ಪಡೆದ ವೀರ ಕನ್ನಡಿಗ ಸೇನಾನಿಗಳ ಸಂದರ್ಶನ, ಅವರ ಸಾಹಸಗಾಥೆಗಳಿವೆ. ಇದು ಇಂದಿನ ಯುವ ಪೀಳಿಗೆಗೆ ಭಾರತೀಯ ಸೇನೆಯ ಕುರಿತು ಗೌರವ, ಹೆಮ್ಮೆ ಮೂಡಿಸುತ್ತದೆ ಎನ್ನುವ ನಂಬಿಕೆ ನಮ್ಮದು.
ಈ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ ಮೈಸೂರು ಕಲ್ಚರಲ್ ಅಸೋಸಿಯೇಷನ್, ವಿಸ್ಮಯ ಪ್ರಕಾಶನ ಹಾಗೂ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ 2025ರ ಜುಲೈ 25 ಶುಕ್ರವಾರ ನಡೆಯಲಿದೆ. ಮೈಸೂರಿನ ಅಶೋಕ ವೃತ್ತದ ಬಳಿ ಇರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಅಂದು ಬೆಳಗ್ಗೆ 10.15ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಹಾವೀರ ಚಕ್ರ ಪುರಸ್ಕೃತ ವೀರ ಸೇನಾನಿ ಲೆ.ಕ. ಪಿ.ಎಸ್. ಗಣಪತಿ (ಎಂವಿಸಿ) ಅವರೂ ಬರುತ್ತಿದ್ದಾರೆ. ಸುತ್ತೂರುಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಎ.ಪಿ.ನಾಗೇಶ್, ಮೂರು ಕೃತಿಗಳ ಲೇಖಕಕ ಐತಿಚಂಡ ರಮೇಶ್ ಉತ್ತಪ್ಪ, ವಿಸ್ಮಯ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಉಪಸ್ಥಿತರಿರುತ್ತಾರೆ.