Site icon nadubadenews.com

ನಾಳೆ ಮಡಿಕೇರಿಯಲ್ಲಿ ಹಸಿರು ಪ್ರವಾಹ, ರೈತ ಪರ ನಿಲುವು ಬರದಿದ್ದರೆ, ಕೊಡಗು ಬಂದ್‌ನೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಚಿಂತನೆ: ರೈತಸಂಘ, ರೈತ ಹೋರಾಟ ಸಮಿತಿಯ ನೇತೃತ್ವ

ನಾಳೆ ಮಡಿಕೇರಿಯಲ್ಲಿ ಹಸಿರು ಪ್ರವಾಹ, ರೈತ ಪರ ನಿಲುವು ಬರದಿದ್ದರೆ, ಕೊಡಗು ಬಂದ್‌ನೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಚಿಂತನೆ: ರೈತಸಂಘ, ರೈತ ಹೋರಾಟ ಸಮಿತಿಯ ನೇತೃತ್ವ
Spread the love
ನಾಳೆ ಮಡಿಕೇರಿಯಲ್ಲಿ ಹಸಿರು ಪ್ರವಾಹ, ರೈತ ಪರ ನಿಲುವು ಬರದಿದ್ದರೆ, ಕೊಡಗು ಬಂದ್‌ನೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಚಿಂತನೆ: ರೈತಸಂಘ, ರೈತ ಹೋರಾಟ ಸಮಿತಿಯ ನೇತೃತ್ವ

ಮಡಕೇರಿ, ಡಿ.19:  ನಾಳೆ ಮಡಿಕೇರಿ ನಗರದಲ್ಲಿ ಹಸಿರು ಪ್ರವಾಹ ಹರಿಯುವ ಭರದ ಸಿದ್ದತೆ ನಡೆಯುತ್ತಿದೆ.  ನಮ್ಮ ಭೂಮಿ ನಮ್ಮ ಹಕ್ಕು, ನಮ್ಮೆಲ್ಲರ ಬದುಕಿಗಾಗಿ ಈ ಹೋರಾಟ ಎಂಬ ಘೋಷವಾಕ್ಯದಲ್ಲಿ,  ಸುಮಾರು ನಾಲ್ಕರಿಂದ ಆರು ಸಾವಿರ ರೈತರು ಮಡಿಖೇರಿಯಲ್ಲಿ ಭಾರೀ ಪ್ರತಿಭಟನೆನಡೆಸಲಿದ್ದೇವೆ ಎಂದು ಸಂಗಟಕರು ತಿಳಿಸಿದ್ದಾರೆ.

ರೈತ ಸಂಘ ಮತ್ತು ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಈ ಹೋರಾಟಕ್ಕೆ ಈಗಾಗಲೆ ಹಲವು ಸಂಘಟನೆಗಳು, ಹಾಲೀ ಮಾಜೀ ಜನ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿಸದ್ದು, ಹೊರ ಜಿಲ್ಲೆಯಿಂದಲೂ ನೂರಾರು ರೈತರು  ಆಗಮಿಸುವ ನಿರೀಕ್ಷೆ ಇದ್ದು, ನಾಳೆ,  ದಿನಾಂಕ 20-12-2024ನೇ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಕೊಡಗು ಜಿಲ್ಲೆ, ಮಡಿಕೇರಿಯ ಫಿ.ಮಾ. ಕಾರ್ಯಪ್ಪ ವೃತ್ತದಿಂದ  ಕಾಲ್ನಡಿಗೆಯಲ್ಲಿ ಹೊರಡುವ ಮೆರವಣಿಗೆಯು, ಜನರಲ್‌ ತಿಮ್ಮಯ್ಯ ವೃತ್ತ,  ಮಂಗೇರಿರ ಮುತ್ತಣ್ಣ ವೃತ್ತಕ್ಕಾಗಿ ತೆರಳಿ ಹಳೆ ಬಸ್‌ ನಿಲ್ದಾಣದ ಅಜ್ಜಮಾಡ ದೇವಯ್ಯ ವೃತ್ತಕಾಗಿ ಮತ್ತೆ ಮಂಗೇರಿರ ಮುತ್ತಣ್ಣ ವೃತ್ತಕ್ಕಾಗಿ ಗಾಂಧಿ ಮೈಧಾನವನ್ನು ತಲುಪಿ, ನಂತರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಲಿದ್ದೇವೆ ಎಂದು, ರೈತ ಹೋರಾಟ ಸಮಿತಿಯ ಮುಖಂಡ ಚಕ್ರವರ್ತಿ ಸುರೇಶ್‌ ಅವರು ನಡುಬಾಡೆಗೆ ಮಾಹಿತಿ ನೀಡಿದ್ದಾರೆ.  

            ರೈತರ ಭವಿಷ್ಯದ ಪ್ರಶ್ನೆಯಾಗಿರುವ ಈ ಹೋರಾಟಕ್ಕೆ ಕೊಡಗು ರೈತ ಸಂಘ ಸಂಪೂರ್ಣ ಬೆಂಬಲನೀಡಿ, ಹೋರಾಟದ ಮುಂಚೂಣಿಯಲ್ಲಿ ನಿಲ್ಲಲಿದ್ದು, ಸಂಘದ ಸಾವಿರಾರು ಸದಸ್ಯರು ನಾಳೆ ಪಾಲ್ಗೊಳ್ಳಲಿದ್ದಾರೆ. ಮುಂದೆ ಅಗತ್ಯ ಬಿದ್ದರೆ ಮೂವತ್ತು ಜಿಲ್ಲೆಗಳ ರೈತರನ್ನ ಸೇರಿಸಿ ಹರತಾಳ ಮಾಡಲಾಗುವುದು, ರೈತರ ಮರಣಶಾಸನ  ಬರೆಯಲು ಹೊರಟಿರುವ ಸರ್ಕಾರಗಳ ವಿರುದ್ದ ಮುಂದಿನ ದಿನಗಳಲ್ಲಿ, ಕೊಡಗು ಬಂದ್‌ನೊಂದಿಗೆ, ಅಮರಣಾಂತ ಉಪವಾಸ ಹೋರಾಟಕ್ಕೂ ಕರೆ ನೀಡಲಾಗುವುದು ಎಂದು  ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ  ನಡುಬಾಡೆಗೆ ತಿಳಿಸಿದ್ದಾರೆ.

ರೈತರ ಜೀವಾಳವಾಗಿರುವ ಕೃಷಿ ಭೂಮಿಯನ್ನು, ಆವೈಜ್ಞಾನಿಕವಾಗಿ ಮಾಡಿರುವ ಸಿ & ಡಿ ಸರ್ವೆಯನ್ನು ರದ್ದುಗೊಳಿಸಿ, ಮರು ಸರ್ವೆ ಮಾಡಿ ರೈತ ವ್ಯವಸಾಯ ಮಾಡಿರುವ ಭೂಮಿಯನ್ನು ರೈತರ ಹೆಸರಿಗೆ ಮಂಜೂರು ಮಾಡಬೇಕು. ಯಾವುದೇ ಮಾಹಿತಿ ಇಲ್ಲದೆ ಮಾಡಿರುವ ಮೀಸಲು ಅರಣ್ಯ, ಸೆಕ್ಷನ್ 4/5 ಅನ್ನು ಕೈಬಿಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಸಿರು ನ್ಯಾಯಾಲಯಕ್ಕೆ ಒತ್ತಡ ಹಾಕಿ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವುದನ್ನು ತಪ್ಪಿಸಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆಯವರು ವಾಸ್ತವತೆ ಅರಿಯದೆ ಮಾಡಿರುವ ಡೀಮ್ಸ್ ಫಾರೆಸ್ಟ್ ಕಾಯ್ದೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕು ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿರಸ್ಕರಿಸಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದ ಹಾಗೆ ಕೇರಳ ಮಾದರಿಯಂತೆ ಜಾರಿ ಮಾಡಬೇಕು. ಊರುಉಡುವೆ, ದೇವರಕಾಡು, ಗೋಮಾಳ ಇವುಗಳನ್ನು ನಮ್ಮ ಪೂರ್ವಿಕರು, ಊರಿನ ಹಿತದೃಷ್ಟಿಯಿಂದ ಮೀಸಲು ಮಾಡಿರುವ ಭೂಮಿಯಾಗಿದ್ದು, ಅದನ್ನು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡಿಸದೆ, ಮೊದಲಿನಂತೆ ಗ್ರಾಮದ ಅಧೀನಕ್ಕೆ ಒಳಪಡಿಸಬೇಕು. ಈ ಆವೈಜ್ಞಾನಿಕ ಅರಣ್ಯ ಕಾಯ್ದೆಯಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 50, 53, 57 ಅರ್ಜಿಗಳಿಗೆ ಅನುಗುಣವಾಗಿ ರೈತರಿಗೆ ಯಾವುದೇ ಅಡೆತಡೆಗಳಿಲ್ಲದೆ ಹಕ್ಕು ಪತ್ರ ವಿತರಿಸಬೇಕು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದುರಸ್ಥಿ ಕಡತಗಳನ್ನು ಆದಷ್ಟು ಬೇಗ ದುರಸ್ಥಿ ಮಾಡಿಕೊಡಬೇಕು. ಬಡವರು ಕಟ್ಟಿರುವ ಮನೆಗಳಿಗೆ 94ಸಿ ಅನ್ನು ಮೊದಲಿನಂತೆ ದಾಖಲಾತಿ ವಿತರಿಸಬೇಕು. ರೈತರಿಗೆ 10 ಹೆಚ್. ಪಿ. ಪಂಪ್ ಸೆಟ್ಗೆ ಉಚಿತ ವಿದ್ಯುತ್‌ ನೀಡಬೇಕು. ಮಾನವ ಹಾಗೂ ವನ್ಯಜೀವಿಗಳ ಸಂಘರ್ಷದಲ್ಲಿ ನಮ್ಮ ಬದುಕುವ ಹಕ್ಕನ್ನು ಅರಣ್ಯ ಇಲಾಖೆಯ ಮೂಲಕ ಕಸಿದುಕೊಳ್ಳಬಾರದು. ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ ಸರ್ಕಾರವನ್ನು ಆಗ್ರಹಿಸಲಾಗುವುದು. ಸ್ಪಂದನೆ ದೊರೆಯದಿದ್ದರೆ ಮುಂದೆ ಅತೀ ಉಗ್ರ ಹೋರಾಟಕ್ಕೆ ಕರೆ ನೀಡುವುದರ ಮೂಲಕ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಚಕ್ರವರ್ತಿ ಸುರೇಶ್‌ ಅವರು ತಿಳಿಸಿದ್ದಾರೆ.

Exit mobile version