ಪೊನ್ನಂಪೇಟೆ,ಮೇ,12(Nadubade News): ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಅತ್ತೂರು ಕೊಲ್ಲಿ ಹಾಡಿ ಇತ್ತೀಚೆಗೆ ಅರಣ್ಯ ನಿವಾಸಿಗಳು ಹಾಗೂ ಅರಣ್ಯ ಇಲಾಖೆಯ ನಡುವೆ ಸೃಷ್ಟಿಯಾಗಿರುವ ವಿವಾದದ ಸ್ಥಳಕ್ಕೆ ವಿರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆವರು ಭೇಟಿ ನೀಡಿ ಪರಿಶೀಲಿಸಿದರು.
ಅರಣ್ಯ ವ್ಯಾಪ್ತಿ ನಿವಾಸಿಗಳು, ತಾವುಗಳು ಶತಮಾನಗಳಿಂದ ಇಲ್ಲಿ ವಾಸವಾಗಿದ್ದು ತಮಗೆ ಅರಣ್ಯ ರಕ್ಷಣೆ ಹಕ್ಕಿನಡಿ ಹಕ್ಕುಪತ್ರ ನೀಡಬೇಕೆಂದು ಬೇಡಿಕೆ ಇಟ್ಟರೆ, ಅರಣ್ಯಾಧಿಕಾರಿಗಳು ಸೂಕ್ತ ಕಾನೂನು ರೀತಿಯ ಪ್ರಕ್ರಿಯೆ ಆಗಬೇಕೆಂದು ವಾದ ಮಂಡಿಸಿದರು. ಎರಡೂ ಕಡೆಯವರ ವಾದವನ್ನು ಆಲಿಸಿದ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಪ್ರಕ್ರಿಯೆ ಪೂರ್ಣಗೊಳಿಸುವುದರೊಂದಿಗೆ ಅರಣ್ಯ ನಿವಾಸಿಗಳಿಗೆ ತೊಂದರೆ ಮಾಡಬಾರದು ಹಾಗೂ ಅವರ ದಿನನಿತ್ಯದ ಕೆಲಸಗಳಿಗೆ ಯಾವುದೇ ರೀತಿಯ ಅಡತಡೆಗಳ ಆಗಬಾರದು ಎಂದು ಸೂಚಿಸಿದರು.
ಅದೇ ರೀತಿ ಅರಣ್ಯ ನಿವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಎಲ್ಲರೂ ಕಾನೂನಾತ್ಮಕವಾಗಿ ಮಾಡಬೇಕು ಮತ್ತು ಹೊರಗಿನವರು ಬಂದು ಇವರ ಹೋರಾಟದ ಹಾದಿ ತಪ್ಪಿಸುವ ಕೆಲಸ ಆಗಬಾರದು ಎಂದು ಸಲಹೆ ನೀಡಿದರು. ತಾವು ಮುಖ್ಯಮಂತ್ರಿಗಳೊಂದಿಗೆ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಹೋರಾಟ ನಿರತರಿಗೆ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಕೆ ಬಾಡಗ ವಲಯ ಅಧ್ಯಕ್ಷರಾದ ಚಿಮ್ಮಣಮಾಡ ರವಿ, ಕಾಂಗ್ರೆಸ್ ಮುಖಂಡರು, ಅರಣ್ಯ ಇಲಾಖೆಯ ಅಧಿಕಾರಿಗಳು,ಐ ಟಿ ಡಿ ಪಿ ಇಲಾಖೆಯ ಅಧಿಕಾರಿಗಳು, ಹಾಡಿ ಮುಖಂಡರು, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.