ಕೇರಳದಲ್ಲಿ ಇಡ್ಲಿ ತಿಂದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಆ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಇಡ್ಲಿಯನ್ನು ತಿನ್ನಬೇಕಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ, ಇಡ್ಲಿ ವ್ಯಕ್ತಿಯ ಎದೆಯಲ್ಲಿ ಸಿಲುಕಿಕೊಂಡಿದ್ದು ಉಸಿರಾಡಲು ತೊಂದರೆಯಾಗಿ ನಿಧನರಾಗಿದ್ದಾರೆ. ಹಾಗಾದರೆ ಅತಿಯಾಗಿ ಅದರಲ್ಲಿಯೂ ವೇಗವಾಗಿ ತಿನ್ನುವುದರಿಂದ ಸಾವು ಬರುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಈ ಬಗ್ಗೆ ಸಫ್ದರ್ಜಂಗ್ ಆಸ್ಪತ್ರೆಯ ಡಾ. ಜುಗಲ್ ಕಿಶೋರ್ ಎಂಬುವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು “ಒಮ್ಮೆಲೇ ಹೆಚ್ಚು ಆಹಾರವನ್ನು ಸೇವಿಸುವುದು ಮಾರಕ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಅವಸರದಲ್ಲಿ ಆಹಾರವನ್ನು ಸೇವಿಸಿದಾಗ ಅಥವಾ ತಿನ್ನುವಾಗ ಹೆಚ್ಚು ಮಾತನಾಡಿದಾಗ, ಆಹಾರವು ಉಸಿರಾಟದ ನಾಳದಲ್ಲಿ ಸಿಲುಕುವ ಅಪಾಯವಿದೆ. ಏಕೆಂದರೆ ನೀವು ಆಹಾರವನ್ನು ನುಂಗಿದಾಗ, ಈ ಸಮಯದಲ್ಲಿ ಶ್ವಾಸನಾಳವು ತನ್ನನ್ನು ತಾನೇ ಮುಚ್ಚಿಕೊಳ್ಳುತ್ತದೆ, ಆಹಾರವು ಉಸಿರಾಟದ ನಾಳಕ್ಕೆ ಹೋಗುವುದಿಲ್ಲ, ಆಹಾರ ಕೊಳವೆಯ ಮೂಲಕ ಹೊಟ್ಟೆಗೆ ಹೋಗುತ್ತದೆ. ಆದರೆ ಒಬ್ಬ ವ್ಯಕ್ತಿಯು ಆಹಾರವನ್ನು ತ್ವರಿತವಾಗಿ ಸೇವಿಸಿದಾಗ, ಕೆಲವು ಸಂದರ್ಭಗಳಲ್ಲಿ ಶ್ವಾಸನಾಳ ಮುಚ್ಚಲು ಅವಕಾಶ ಸಿಗುವುದಿಲ್ಲ ಹಾಗಾಗಿ ಆಹಾರವು ಈ ಟ್ಯೂಬ್‌ನಲ್ಲಿ (ಗಾಳಿಯ ಪೈಪ್) ಸಿಲುಕಿಕೊಳ್ಳುತ್ತದೆ” ಎಂದಿದ್ದಾರೆ.
ಶ್ವಾಸನಾಳದಲ್ಲಿ ಆಹಾರವು ಸಿಲುಕಿಕೊಂಡಾಗ ಸಾವು ಹೇಗೆ ಸಂಭವಿಸುತ್ತದೆ?
ನಾವು ತಿಂದ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡಾಗ, ದೇಹದಲ್ಲಿನ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ. ಕಿಶೋರ್ ಹೇಳುತ್ತಾರೆ. ಏಕೆಂದರೆ ಆಹಾರವು ಸಿಕ್ಕಿಹಾಕಿಕೊಳ್ಳುವುದರಿಂದ ಉಸಿರಾಟದಲ್ಲಿ ತೊಂದರೆ ಉಂಟಾಗುತ್ತದೆ. ಒಂದರಿಂದ ಎರಡು ನಿಮಿಷಗಳ ಕಾಲ ಉಸಿರಾಟವಿಲ್ಲದಿದ್ದರೆ, ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದನ್ನು ಮೀರಿ ವಿಳಂಬವಾದರೆ, ಉಸಿರುಗಟ್ಟುವಿಕೆ ಪ್ರಾರಂಭವಾಗುತ್ತದೆ ಮತ್ತು ವ್ಯಕ್ತಿಯು ಸಾಯಬಹುದು. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಆಸ್ಪಿರೇಟ್ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಳ್ಳುವುದಿಲ್ಲ, ಆದರೆ ಒಬ್ಬ ವ್ಯಕ್ತಿಯು ಕೆಲವು ಸೆಕೆಂಡುಗಳಲ್ಲಿ ಸಾಕಷ್ಟು ಆಹಾರವನ್ನು ಒಟ್ಟಿಗೆ ಸೇವಿಸಿದಾಗ ಇದು ಸಂಭವಿಸುತ್ತದೆ ಎಂದು ಡಾ. ಕಿಶೋರ್ ವಿವರಿಸುತ್ತಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ಪೀಡ್ ಇಂಟಿಂಗ್ ಎಂದು ಕರೆಯಲಾಗುತ್ತದೆ. ಈ ರೀತಿ ತಿನ್ನುವುದು ಅಪಾಯಕಾರಿ. ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡು ಹೊರಗೆ ಬರಲು ಸಾಧ್ಯವಾಗದಿದ್ದರೆ, ಸಾವು ಸಂಭವಿಸುತ್ತದೆ. ಇಂತಹ ಘಟನೆಗಳು ಸಾಮಾನ್ಯವಾಗಿ ವೇಗವಾಗಿ ತಿನ್ನುವುದರಿಂದ ಅಥವಾ ಊಟ ಮಾಡುತ್ತ ಮಾತನಾಡುವುದು ಅಥವಾ ಹೆಚ್ಚು ನಗುವುದರಿಂದ ಉಂಟಾಗುತ್ತವೆ. ಅಲ್ಲದೆ ಈ ಸಮಸ್ಯೆ ಚಿಕ್ಕ ಮಕ್ಕಳಲ್ಲಿಯೂ ಕಂಡು ಬರುತ್ತದೆ.
ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು?
ಶ್ವಾಸನಾಳದಲ್ಲಿ ಆಹಾರ ಸಿಲುಕಿಕೊಂಡರೆ, ವ್ಯಕ್ತಿಗೆ ಮೊದಲು ಸ್ವಲ್ಪ ಬಿಕ್ಕಳಿಕೆ ಬರುತ್ತದೆ ನಂತರ ಉಸಿರಾಟದಲ್ಲಿ ತೊಂದರೆ ಉಂಟಾಗುತ್ತದೆ ಎಂದು ಡಾ. ಕಿಶೋರ್ ಹೇಳಿದ್ದಾರೆ. ಹಾಗಾಗಿ ನೀವು ಆಹಾರವನ್ನು ತ್ವರಿತವಾಗಿ ತಿನ್ನುತ್ತಿದ್ದರೆ ಮತ್ತು ಹಠಾತ್ ಬಿಕ್ಕಳಿಕೆ ಬಂದರೆ, ವಿಳಂಬ ಮಾಡದೆಯೇ ನೀವು ತಕ್ಷಣ ಕನಿಷ್ಠ 2 ಲೋಟ ನೀರನ್ನು ಕುಡಿಯಬೇಕು. ಇದಲ್ಲದೆ, ನೀವು ವ್ಯಕ್ತಿಯ ಬೆನ್ನನ್ನು ಹಗುರವಾದ ಕೈಯಿಂದ ತಟ್ಟಬಹುದು. ಇದು ಸಿಕ್ಕಿಬಿದ್ದ ಆಹಾರವನ್ನು ತೆಗೆಯಲು ಸಹಾಯ ಮಾಡುತ್ತದೆ. ನೀರಿನೊಂದಿಗೆ ಬೆರೆಸಿದ ಅಡಿಗೆ ಸೋಡಾವನ್ನು ಸಹ ನೀವು ಕುಡಿಯಬಹುದು. ಇದು ಪ್ರಯೋಜನಕಾರಿಯೂ ಹೌದು. ಇದರಿಂದ ಪರಿಹಾರ ಸಿಗದಿದ್ದರೆ, ವಿಳಂಬವಿಲ್ಲದೆ ಆಸ್ಪತ್ರೆಗೆ ಹೋಗಿ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ, ವಿಶೇಷವಾಗಿ ಇದು ಮಗುವಿಗೆ ಅಥವಾ ವಯಸ್ಸಾದವರಿಗೆ ಸಂಭವಿಸಿದರೆ, ಮನೆಯಲ್ಲಿ ಈ ಕೆಲಸಗಳನ್ನು ಮಾಡಿದ ತಕ್ಷಣ ಆಸ್ಪತ್ರೆಗೆ ಹೋಗುವುದನ್ನು ಮರೆಯಬೇಡಿ. ಎಂದು ವೈದ್ಯರು ಸಲಹೆ ಮಾಡಿದ್ದಾರೆ.