ಪ್ರೀತಿಯ ಬಂಧುಗಳೇ…, ತಮಗೆಲ್ಲರಿಗೂ ಸಕ್ಷೇಮ ನಮಸ್ಕಾರಗಳೊಂದಿಗೆ,
ನಡೆಯುವವನು ಎಡವುವನಲ್ಲದೆ ಕುಳಿತವರು ಎಡವುವರೇ…, ಎಂಬುದುಂದು ನಾಡ್ನುಡಿ ಇದೆ. ಹುಟ್ಟಿದ ಮಗುವಿನಿಂದ ಹಿಡಿದು ಆರಂಭಿಸಿದ ಕೆಲಸ ಕಾರ್ಯಗಳವರೆಗೂ, ಆರಂಭದಲ್ಲಿ ಎಷ್ಟೇ ಮುನ್ನಚ್ಚರಿಕೆ, ಅಗತ್ಯ ಕ್ರಮಗನ್ನು ಕೈಗೊಂಡಿದ್ದರೂ ಕೂಡ, ಜಾರಿಯೋ, ಎಡವಿಯೋ ಕೊಂಚ ಅಡಚಣೆ ಆಗಿಬಿಡುತ್ತದೆ. ಹಾಗೇ ನಡುಬಾಡೆ ಕೂಡ, ಕೊಡವ ಟಿ.ವಿ. ಚಾನೆಲ್ ಆಗಿ ಕಾರ್ಯಾರಂಭ ಮಾಡಲು ಎಲ್ಲಾ ತಾಂತ್ರಿಕ ಕಾರ್ಯಗಳನ್ನ ಸಿದ್ದತೆಗಳನ್ನ ನಡೆಸುತ್ತಲೇ ಇದೆ. ಇದರ ಜೊತೆಗೆ ಓದುಗರಿಗೆ ಅನುಕೂಲ ಆಗಲೆಂದು, ಕೊಡವ ಮತ್ತು ಕನ್ನಡ ಭಾಷೆಯಲ್ಲಿ ವೆಬ್ ಪೋರ್ಟಲ್ ಅನ್ನು ಪ್ರಾರಂಬಿಸಿದೆವು. ಇದು ಸ್ವಲ್ಪ ತರಾತುರಿಯಲ್ಲಿ ಆದ ತಯಾರಿ ಆದ್ದರಿಂದ, ಗೂಗಲ್ ಅಮ್ಮ ನಮ್ಮ ಕೆಲವು ನಡೆಗಳನ್ನು ಒಪ್ಪಲಿಲ್ಲ, ಸದ್ದಿಲ್ಲದೆ ಬಂದು ಒಂದಷ್ಟು ವಿವರಣೆ ಕೇಳಿ, ನೀ ಬಿಡಿಸಿ ಹೇಳು, ಅಲ್ಲಿವರೆಗೆ ನಾ ಒಲ್ಲೆ ಎಂದು ಧಮಕಿ ಹಾಕಿ, ನಮ್ಮ ಖಾತೆಗೆ ಬೀಗ ಹಾಕಿ, ಕೀಯನ್ನ ಸೊಂಟಕ್ಕೆ ಕಟ್ಟಿಕೊಂಡೇ ಹೋಗಿಬಿಟ್ಟಳು.
ಈ ಗೂಗಲಮ್ಮನ ಎದುರು ಅತ್ತೂ ಕರೆದು, ನಮ್ಮ ಉದ್ದೇಶ, ಕಾರ್ಯ ಯೋಜನೆಯನ್ನು ಸವಿವರವಾಗಿ ಹೇಳಿ, ಅರ್ಥಮಾಡಿಸಿ ಬರುವಷ್ಟರಲ್ಲಿ ಬರೋಬ್ಬರಿ ನಾಲ್ಕು ದಿನಗಳೇ ಕಳೆದು ಹೋದವು. ಅವಿರತ ಮತ್ತು ನಿರಂತರ ಪ್ರಯತ್ನದಿಂದ, ನಮ್ಮ ಗೂಗಲಮ್ಮ ಮನ ಬದಲಿಸಿ ವಿಜಯೀಭವ ಎಂದು ಆಶೀರ್ವದಿಸುವಷ್ಟರಲ್ಲಿ ನಿನ್ನೆ ಮದ್ಯರಾತ್ರಿಯೇ ಕಳೆದು ಹೋಗಿತ್ತು.
ಆದರೂ, ಛಲ ಬಿಡದ ತ್ರಿವಿಕ್ರಮನಂತೆ ಪ್ರಯತ್ನ ಮಾಡಿ, ಗೂಗಲಾಕೆಯ ಸಹಕಾರ, ನಿಮ್ಮೆಲ್ಲರ ಹಾರೈಕೆ, ಪ್ರೀತಿಯಿಂದ, ಮತ್ತೆ ಕೆಲವೊಂದಿಷ್ಟು ಮಾರ್ಪಾಡು, ಬದಲಾವಣೆಗಳೊಂದಿಗೆ ನಡುಬಾಡೆ ನ್ಯೂಸ್ ವೆಬ್ ಪೋರ್ಟಲ್ ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡುತ್ತಿದೆ. ಈಗಾಗಲೇ ಭಾರತ ಸರ್ಕಾರದ ನ್ಯೂಸ್ ಕೌನ್ಸಿಲ್‌ನಿಂದ “ಸ್ಕ್ಯಾಡ್ ಸರ್ಟಿಫಿಕೇಟ್” ಹೊಂದಿಕೊಂಡಿದ್ದು, ಅದಕ್ಕನುಗುಣವಾಗಿ ಪ್ರಸಾರ ಕಾರ್ಯ ನಡೆಯಲಿದೆ. ಈ ವೆಬ್ ನ್ಯೂಸ್, ಟಿ.ವಿ. ಚಾನೆಲ್ ಜೊತೆಗೆ ಮತ್ತೂ ಒಂದು ಮಾದ್ಯಮ ಅಂಗ ನಮ್ಮೊಂದಿಗೆ ಮುಂದಿನ ಕೆಲ ದಿನಗಳಲ್ಲಿ ಸೇರಿಕೊಳ್ಳಲಿದೆ.
ಬಹುಷಃ ನೀವು ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆ, ನಂಬಿಕೆಗಳು ಅಗಾಧವಾಗಿ, ಬೆಟ್ಟದಷ್ಟಿದೆ. ಆ ಎಲ್ಲವನ್ನೂ ಅರಿತು, ಜನರಿಗೆ ಏನು ಅಗತ್ಯ ಮತ್ತು ಅನಿವಾರ್ಯವೋ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ನಾವು ಕಟಿ ಬದ್ದರಾಗಿದ್ದೇವೆ. ಮುಂದೆ ನಮ್ಮ ನಡೆ ಮತ್ತು ನಾವು ಮಾಡುವ ಕಾರ್ಯಗಳು ನಿಮಗದನ್ನ ಪರಿಚಯಿಸಲಿವೆ.
ಅದು ಮುಗಿದ ಅಧ್ಯಾಯ ಎಂದು ಮೂಗುಮುರಿದ ಕಿರಾತಕರ, ಅದನ್ನ ಕೇಳಿ ಹುಸಿನಗೆಯಾಡಿದ ನಮ್ಮವರೂ ಎನಿಸಿಕೊಂಡವರ ಎದುರು, ಇಲ್ಲ ಎನೋ ಮಾಡುತಿದ್ದಾನೆ, ಖಂಡಿತ ಹಿಡಿದ ಕೆಲಸ ಕೈಬಿಡಲಾರ, ತಡವಾದರೂ ಮಾಡಿಯೇ ತೀರುತ್ತಾನೆ ಎಂದು ಅಲ್ಲಲ್ಲಿ, ಬೆಂಬಲಿಸಿ ಮಾತನಾಡಿ ಹರಸಿ ಹುರಿದುಂಬಿಸಿದ ಎಲ್ಲರಿಗೂ ಶಿರಭಾಗಿ ವಂದಿಸುತ್ತಾ, ನಿಮ್ಮ ನಿರೀಕ್ಷೆ, ಭರವಸೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ, ಕಾಯಾ ವಾಚಾ ಮನಸಾ ಕಾರ್ಯ ನಿರ್ವಹಿಸುತ್ತೇವೆಂದು, ಆದಿ ಕಾರೋಣ, ಅಜ್ಜಪ್ಪ, ಆದಿಮೂಲ ಸುಬ್ರಯ್ಯ ಹಾಗೂ ಮಾತಾಯಿ, ಮಾದೇವರ ಸಾಕ್ಷಿಯಾಗಿ ಪ್ರಮಾಣೀಕರಿಸಿ, ನಿಮ್ಮ ಸಹಕಾರದ ಭರವಸೆಯೊಂದಿಗೆ ನಮ್ಮ ಕಾರ್ಯಕ್ಕೆ ಮುಂದಡಿ ಇಡುತ್ತೇವೆ.
ಅಂದು, ಇಂದಿನಂತೆ, ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ, ದಯವಿಟ್ಟು ನಮ್ಮ ಪ್ರತೀ ಸುದ್ದಿ, ವಿಚಾರಗಳನ್ನು ನಿಮ್ಮ ಪ್ರತೀ ಸಂಪರ್ಕ, ಸಂಭಂದಿಕರಿಗೂ ಶೇರ್ ಮಾಡುವ ಮೂಲಕ, ಹೆಚ್ಚೆಚ್ಚು ಜನರಿಗೆ ತಲುಪಿಸಿದರೆ, ನಮಗೆ ಹತ್ತಾನೆ ಬಲ ಬರಲಿದೆ. ಹಾಗೇ ನಿಮ್ಮೂರಿನ, ಪಟ್ಟಣದ, ಪಕ್ಷದ, ಸಂಘ ಸಂಸ್ಥೆಯ, ದಾರ್ಮಿಕ ಕೇಂದ್ರಗಳ, ಸಾಧಕರ ಏನೇ ವಿಚಾರಗಳು, ಸುದ್ದಿಗಳು, ಸಮಸ್ಯೆಗಳು ಇದ್ದರೂ ನಮ್ಮ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಲು ಮರೆಯದಿರಿ.
ಸಮ ಸಮಾಜಕ್ಕಾಗಿ, ಸರ್ವ, ಸಮಸ್ಥರ ಧ್ವನಿಯಾಗಿ ನಡುಬಾಡೆ ನ್ಯೂಸ್…… ಇದು ಆದಿಯೂ ಅಲ್ಲ, ಅಂತ್ಯವೂ ಅಲ್ಲ, ಮುಂದೆ ಕಾದಿದೆ ಮತ್ತಷ್ಟು,ಮಗದಷ್ಟೂ….. ನೀವು ಬಯಸಿ, ಬರೆಸಿ, ಹಂಬಲಿಸಿ, ಬೆಂಬಲಿಸಿದಷ್ಟೂ, …..