
ಗರ್ವಾಲೆ; ಜು.08. (nadubadenews): ಗರ್ವಾಲೆ ಅಂಗನವಾಡಿಯ ಮೇಲೆ ಮರಬಿದ್ದು ಭಾಗಷಃ ಜಕಂಗೊಂಡಿದ್ದು, ಅಂಗನವಾಡಿ ಸಹಾಯಕಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡೆಯಲಿದ್ದ ಭಾರೀ ಅನಾಹುತವೊಂದು ಕೆಲವೇ ಕ್ಷಣದಲ್ಲಿ ತಪ್ಪಿದೆ.
ಗರ್ವಾಲೆ ಗ್ರಾಮ ಪಂಚಾಯಿತಿ ಬಳಿ ಇರುವ ಅಂಗನವಾಡಿಗೆ ಇಂದು ಬೆಳಿಗ್ಗೆ 9.30ರ ಸುಮಾರಿನಲ್ಲಿ ಮರಬಿದ್ದಿದ್ದು, ಆಗತಾನೆ ಒಳನುಗ್ಗಿದ್ದ ಅಂಗನವಾಡಿ ಸಹಾಯಕಿ ಶ್ರೀಮತಿ ರತಿ ಅವರ ತಲೆ, ಬೆನ್ನು ಸೇರಿದಂತೆ ದೇಹದ ಹಲವಾರು ಭಾಗಗಳಲ್ಲಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಂಗನವಾಡಿ ಶಿಕ್ಷಕಿ ಆಗತಾನೆ ಆಗಮಿಸುತಿದ್ದರಿಂದ ಇನ್ನೂ ಅಂಗನವಾಡಿಯ ಒಳಪ್ರವೇಶಿಸಿರಲಿಲ್ಲ, ಇಂದು ಅಂಗನವಾಡಿಯಲ್ಲಿ ಚುಚ್ಚುಮದ್ದು ಮತ್ತು ಪೌಷ್ಟಿಕ ಆಹಾರ ಸರಬರಾಜು ಕಾರ್ಯಕ್ರಮಗಳು ಇದ್ದ ಕಾರಣ ಸಾರ್ವಜನಿಕರು ಮಕ್ಕಳು ಇನ್ನಷ್ಟೆ ಆಗಮಿಸಬೇಕಿತ್ತು. ಯಾರೂ ಬಂದು ತಲುಪಿಲ್ಲದ ಕಾರಣ ನಡೆಯಲಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.