
ವಿರಾಜಪೇಟೆ, ಏ.24: ವಿರಾಜಪೇಟೆ ವಿಧಾನ ಸಭಾ ಕ್ಷೇತ್ರವನ್ನು ರಾಜ್ಯದ ನಂಬರ್ ಒನ್ ಕ್ಷೇತ್ರವಾಗಿ ಅಭಿವೃದ್ದಿ ಪಡಿಸುವುದು ನನ್ನ ಏಕಮೇವ ಗುರಿಯಾಗಿದ್ದು, ಇದಕ್ಕಾಗಿ ನನ್ನ ಎಲ್ಲಾ ಹಿತಾಶಕ್ತಿಯನ್ನು ಬದಿಗಿಟ್ಟು ಶ್ರಮಿಸುತಿದ್ದೇನೆ, ಜನತೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಹೇಳಿದರು.
ನಡುಬಾಡೆ ಸಂಸ್ಥೆಯು ಪ್ರಾರಂಬಿಸಿರುವ ನೂತನ ಕಾರ್ಯಕ್ರಮ ನಡುಬಾಡೆ ಸ್ಪಂದನ ಗೂಗಲ್ ಮೀಟ್ ಲೈವ್ನಲ್ಲಿ ಭಾಗವಹಿಸಿ, ಮನವಿ ಆಲಿಸುವ ಮೂಲಕ, ಜನತೆಯೊಂದಿಗೆ ನೇರವಾಗಿ ಮುಕ್ತಮಾತುಗಳನಾಡಿದ ಶಾಸಕರು, ನಿಮ್ಮ ಪ್ರತಿನಿಧಿಯಾಗಿ ನನಗೆ ನಿಮ್ಮ ಸೇವೆ ಮಾಡುವ ಭಾಗ್ಯವನ್ನು ನೀಡಿದ್ದಿರಿ. ಇದಕ್ಕೆ ನಾನು ಋಣಿಯಾಗಿದ್ದು, ಕ್ಷೇತ್ರದ ಅಭಿವೃದ್ದಿ ನನ್ನ ಆದ್ಯತೆಯಾಗಿದೆ. ನನ್ನೆಲ್ಲ ವಯುಕ್ತಿಕ ಹಿತಾಶಕ್ತಿಗಳನ್ನು ಬದಿಗೊತ್ತಿ ದುಡಿಯುತಿದ್ದೇನೆ. ಹತ್ತಾರು ವರ್ಷಗಳ ಸಮಸ್ಯೆಯನ್ನು ಒಮ್ಮೆಲೆ ಬಗೆಹರಿಸಲು ಕಷ್ಟ. ಜನತೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಳೆದ ಎರಡು ವರ್ಷದಲ್ಲಿ ನೂರಾರು ಕೋಟಿಯ ಅಭಿವೃದ್ದಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಮುಂದೆಯೂ ಸಾಕಷ್ಟು ಅನುದಾನ ಬಿಡುಗಡೆಯಾಗಲಿದೆ. ಆದರೂ ಜನತೆಯ ಮೂಲಭೂತ ವ್ಯವಸ್ತೆಯನ್ನು ತಲುಪಿಸಲು ಸಾಧ್ಯವಾಗುತಿಲ್ಲ ಎಂದರೆ, ಇದು ದಶಕಗಳ ಯಾತನೆ ಎಂದು ಮಾರ್ಮಿಕವಾಗಿ ನುಡಿದ ಶಾಸಕರು, ಈಗ ಜವಾಬ್ದಾರಿ ನನ್ನ ಮೇಲೆ ಇದ್ದು, ಹಂತ ಹಂತವಾಗಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದರು.
ನಡುಬಾಡೆ ಸಂಸ್ಥೆಯ ವಿನೂತನವಾದ ಈ ಕಾರ್ಯಕ್ರಮದಲ್ಲಿ ವಿರಾಜಪೇಟೆ ಮಾತ್ರವಲ್ಲದೆ, ಸೋಮವಾಪೇಟೆ, ಕುಶಾಲನಗರ, ಮಡಿಕೇರಿ ಭಾಗದ ಜನತೆಯೂ ತಮ್ಮ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ನೂರಾರು ಸಂಖ್ಯೆಯಲ್ಲಿ ಆನ್ಲೈನ್ ಮೂಲಕ ಸೇರಿದ್ದ ಸಾರ್ವಜನಿಕರು ತಮ್ಮ ಊರಿನ ಮೂಲಭೂತ ಸಮಸ್ಯೆಗಳ ಜೊತೆಗೆ ವಯುಕ್ತಿಕ ಸಮಸ್ಯೆಗಳತ್ತಲೂ ಶಾಸಕರ ಗಮನ ಸೆಳೆದರು. ಶಾಸಕರೂ ಅತ್ಯಂತ ತಾಳ್ಮೆಯಿಂದ ಸಮಸ್ಯೆಗಳನ್ನು ಆಲಿಸಿ, ಪ್ರತಿಯೊಬ್ಬರಿಗೂ ವ್ಯವಧಾನದಿಂದಲೇ ಉತ್ತರಿಸಿ, ತಮ್ಮ ಆಪ್ತ ಸಹಾಯಕರಿಗೆ ಎಲ್ಲವನ್ನೂ ಧಾಖಲಿಸಿ, ಅವಕಾಶಗಳ ಅಡಿಯಲ್ಲಿ ಆದ್ಯತೆ ನೀಡುವಂತೆ ಸೂಚಿಸಿದರು.
ಶಾಸಕರೊಂದಿಗ ಅವರ ಆಪ್ತ ಶಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು, ಎಲ್ಲರ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿಕೊಳ್ಳತಿದ್ದದ್ದು ಅವರ ಕಾರ್ಯಕ್ಷಮತೆ ಮತ್ತು ಶಾಸಕರ ಕರ್ತವ್ಯ ನಿಷ್ಟೆಯನ್ನು ಸಾಭೀತು ಪಡಿಸುತಿತ್ತು.
ಒತ್ತಡದ ನಡುವೆಯೂ ಭಾಗವಹಿಸಿದ ಶಾಸಕರು:- ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಶಾಸಕ ಪೊನ್ನಣ್ಣ ಅವರಿಗೆ, ಚಾಮರಾಜನಗರಕ್ಕೆ ಸಂಭಂದಿಸಿದ ವಿಚಾರದಲ್ಲಿ ಸಂಪುಟ ಸಭೆಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ದಾಖಲೆ ಸಿದ್ದಪಡಿಸುವ ತುರ್ತು ಕಾರ್ಯ ಇತ್ತು. ಬೆಳಿಗ್ಗೆ 10ಘಂಟೆಗೆ ಕಛೇರಿಗೆ ತೆರಳಲೇ ಬೇಕಾದ ಅನಿವಾರ್ಯತೆ ಇದ್ದರೂ, ಲೈವ್ನಲ್ಲಿ 9.45ರವರೆಗೂ ಜನತೆಯೊಂದಿಗೆ ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಮಾಡಿದ್ದು, ನೆರದಿದ್ದವರಿಗೆ ಮತ್ತಷ್ಟು ಭರವಸೆ ಮೂಡಿಸಿತು.
ನಡುಬಾಡೆ ಸ್ಪಂದನಕ್ಕೆ ಶ್ಲಾಘನೆ: ನಡುಬಾಡೆ ಸಂಸ್ಥೆಯ ಜನಪರ ಕಾಳಜಿ ಮತ್ತು ಜವಾಬ್ದಾರಿಯನ್ನು ಮುಕ್ತಕಂಟದಿಂದ ಶ್ಲಾಗಿಸಿದ ಶಾಸಕರು, ಜನತೆ ನಡುಬಾಡೆಯ ಮೂಲಕ ಸಲ್ಲಿಸುವ ಮನವಿಯನ್ನೂ ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದರು.
ಸಿಬ್ಬಂದಿಗಳೇ ಅಲ್ಲದೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅದ್ಯಕ್ಷರು, ಬ್ಲಾಕ್ ಅಧ್ಯಕ್ಷರುಗಳು, ವಲಯ ಅಧ್ಯಕ್ಷರೂ ಕೂಡ ಭಾಗವಹಿಸಿ, ಜನತೆಯ ಅಹ್ವಾಲುಗಳಿಗೆ ಸೂಕ್ತಾಗಿ ಸ್ಪಂದಿಸುವ ಮೂಲಕ ಸಂಘಟಿತ ಕಾರ್ಯದಲ್ಲಿ ಅಭಿವೃದ್ದಿಗೆ ಶಾಸಕರೊಂದಿಗೆ ಕೈ ಜೋಡಿಸಲಿದ್ದೇವೆ ಎಂದು ಭರಸೆ ಮೂಡಿಸಿದರು.