ಸಂಪಾದಕೀಯ: ಡಿ.05: (ಚಾಮೆರ ದಿಣೇಶ್ ಬೆಳ್ಯಪ್ಪ, ಸಂಪಾದಕ) ಲೋಕಸಭಾ ಚುನಾವಣೆಗಳು ಕಳೆದು ಬರೋಬ್ಬರಿ 06 ತಿಂಗಳುಗಳೇ ಆಗಿದೆ. ಕೊಡಗು ಮೈಸೂರು ಸಂಸದರಾಗಿ ಆಯ್ಕೆಯಾದ ಯದೂವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಅವರಿಗೆ ಕೊಡಗಿನಲ್ಲಿ ಅಧಿಕೃತ ಕಛೇರಿ ಇರಲೇ ಇಲ್ಲ. ಈ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ, ಸಂಸದರು, ಸ್ವಪಕ್ಷಿಯರಿಂದಲೇ ಪ್ರಶ್ನೆಗಳನ್ನು ಎದುರಿಸುವಂತಾಗಿತ್ತು. ಕೊನೆಗೂ ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಕಛೇರಿ ತೆರೆಯಲು ನಿರ್ಧರಿಸಿ ದಿನಾಂಕ; 08/12/2024ನೇ ಬಾನುವಾರ ಬೆಳಿಗ್ಗೆ ಸೇವಾರಂಭ ಮಾಡುವ ಪ್ರಕಟಣೆ ಅಧಿಕೃತವಾಗಿ ಹೊರ ಬಂದಿದೆ.
ಈಗ ಕಛೇರಿ ಮಾಡಿದರೆ ಅಲ್ಲಿ ಜನತೆಗೆ ಸ್ಪಂದಿಸುವವರು ಯಾರು, ಸಂಸದರು ಅಲ್ಲಿ ಇರಲಿದ್ದಾರೆಯೇ ಎಂಬ ಪ್ರಶ್ನೆ ಜನ ಸಾಮಾನ್ಯರದ್ದು. ಕೊಡಗು ಮೈಸೂರು ಸಂಸದರಿಗೆ ಒಟ್ಟು 08 ವಿಧಾನ ಸಭಾ ಕ್ಷೇತ್ರಗಳು ಬರಲಿವೆ. ಎಂಟೂ ಕ್ಷೇತ್ರಗಳು ವ್ಯಾಪ್ತಿಯಲ್ಲಿ ತುಂಬಾ ದೊಡ್ಡದಿರುವ ಕಾರಣ ಎಲ್ಲರನ್ನೂ ಒಂದೇ ಜಾಗದಲ್ಲಿ ಭೇಟಿಯಾಗುವುದು ಕಷ್ಟವೇ. ಆದರೆ ಜವಾಬ್ದಾರಿ ವಿಭಜನೆಯಿಂದ ಖಂಡಿತಾ ಜನ ಸಾಮಾನ್ಯರನ್ನು ಭೇಟಿಯಾಗಲು ಸಾಧ್ಯವಾಗಲಿದೆ. ದುರಂತ ಎಂದರೆ ಅನಾಥವಾಗಿರುವ ಕೊಡಗು ಎಲ್ಲರಿಗೂ ವಿಶ್ರಾಂತಿಯ ತಾಣವಾಗುತ್ತಿದೆಯೇ ಹೊರತು ಜನರಿಗೆ ಸ್ಪಂದಿಸುವ ಮನ ಯಾರಲ್ಲೂ ಇದ್ದಂತೆ ಕಾಣುತಿಲ್ಲ.
ಹಿಂದೆ ಕೊಡಗು ಮಂಗಳೂರು ಜಂಟಿ ಕ್ಷೇತ್ರ ಇದ್ದಾಗ, ಮಂಗಳೂರಿಗರೇ ಸಂಸರಾದರು, ಅವರನ್ನು ಭೇಟಿಯಾಗಲು ಮಂಗಳೂರಿಗೆ ಹೋಗಿ ಬರುವಷ್ಟರಲ್ಲಿ ದಿಗಳೇ ಕಳೆದು ಹೋಗುತಿತ್ತು. ಮತ್ತೆ ಮೈಸೂರಿಗೆ ಸೇರಿದ ನಂತರವೂ ಇದೇ ಕಥೆ. ಎಲ್ಲಾ ಸಂಸದರೂ ಕೊಡಗಿನಲ್ಲಿ ಕಛೇರಿ ತೆರೆದರಾದರೂ ಇಲ್ಲಿ ಕಾರ್ಯಭಾರ ಮಾಡಿದ್ದು ಕಾಣಲೇ ಇಲ್ಲ. ಆಗೋಮ್ಮೆ ಈಗೊಮ್ಮೆ ಅಥಿತಿಯಾಗಿಯೋ, ಸಭೆಗಳಿಗೋ ಬರುವ ಸಂಸದರು ಮಾದ್ಯಮಗಳಿಗೆ ಒಂದಷ್ಟು ಹೇಳಿಕೆ ನೀಡಿ ಹೋದರು ಬಿಟ್ಟರೆ, ಜನ ಸಾಮಾನ್ಯರಿಗೆ ಲಭ್ಯವಾಗಲೇ ಇಲ್ಲ.
ಹಾಲಿ ಸಂಸದರು ತಡವಾಗಿ ಆದರೂ ಕೊಡಗಿನಲ್ಲಿ ಕಛೇರಿ ತೆರೆಯುತಿದ್ದಾರೆ. ಈ ಕಛೇರಿ ಕಾಟಾಚಾರಕ್ಕೆ ಎಂಬಂತಾಗದೆ ಕನಿಷ್ಟ ತಿಂಗಳಿಗೆ ಒಂದು ಭಾರಿ ಆದರೂ ಬಂದು ಈ ಕಛೆರಿಯಲ್ಲಿ ಕೂರುವಂತಾಗಲಿ. ಜನಸಾಮಾನ್ಯರು ಇಲ್ಲಿಂದ ಮೈಸೂರಿನ ವರೆಗೂ ಹೋಗಿ ಅಲ್ಲಿ, ಸಂಸದರ ಸಮಯಕ್ಕೆ ಬಾಗಿಲ ಹೊರಗೆ ಕಾಯುವ ಬದಲು, ತಿಂಗಳಿಗೊಮ್ಮೆ ಕೊಡಗಿನ ಜನತೆಗೆ ಇಲ್ಲಿಯೇ ಲಭ್ಯವಾದರೆ, ಸಾಮಾನ್ಯ ಜನರಿಗೂ ಸಂಸದರಲ್ಲಿ ಅಳಲು ತೋಡಿಕೊಳ್ಳಲು ಅನುಕೂಲ ಆಗಲಿದೆ. ಈ ಸಂಸದರಾದರೂ ಕೊಡಗಿನ ಜನರ ಭಾವನೆಗಳಿಗೆ ಸ್ಪಂದಿಸಿ ಮಾದರಿ ಸಂಸದರಾಗಲಿ.
ಇನ್ನು ಉಸ್ತುವಾರಿ ಸಚಿವರ ಕಥೆ ನೋಡಿದರೆ ಕೊಡಗಿಗೆ ಬರುವ ಎಲ್ಲಾ ಸಚಿವರ ಕಥೆಯೂ ಉಸ್ತುವಾರಿ ಸಚಿವರು ಎನ್ನುವುದಕ್ಕಿಂತ ವಿಶ್ರಾಂತಿಗಿರುವ ಸಚಿವರು ಎಂದು ಬದಲಾಯಿಸುವುದೇ ಉತ್ತಮ. ದಿವಂಗತ ಎಂ.ಎಂ. ನಾಣಯ್ಯ ಅವರು ಧೀರ್ಘಾವದಿಗೆ ಕೊಡಗು ಉಸ್ತವಾರಿ ಸಚಿವರಾಗಿದ್ದದ್ದೇ ಕೊನೆ, ಆ ನಂತರ ಅಪ್ಪಚ್ಚು ರಂಜನ್ ಅವರು ಕೇವಲ 06 ತಿಂಗಳು ಉಸ್ತವಾರಿ ಸಚಿವರಾಗಿದ್ದು ಬಿಟ್ಟರೆ ಕೊಡಗಿನ ಸಚಿವರನ್ನು ಉಸ್ತವಾರಿ ಹೋಗಲಿ, ಸಂಪುಟದಲ್ಲೇ ಕಾಣಲಿಲ್ಲ. ಬರುವ ಎಲ್ಲಾ ಉಸ್ತವಾರಿ ಸಚಿವರೂ ಕೂಡ ಕೇವಲ, ರಾಷ್ಟ್ರೀಯ ಹಬ್ಬಗಳ ಗೌರವ ವಂದನೆ ಸ್ವೀಕರಿಸಲು ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ಬಿಟ್ಟರೆ, ಉಳಿದಂತೆ ಕೊಡಗಿಗೆ ಬರುವ ಅಥಿತಿಗಳೇ. ಬಂದು ಒಂದೆರಡು ದಿನ ಸುದರ್ಶನ ಅಥಿತಿ ಗೃಹದಲ್ಲೋ ಇಲ್ಲ ಖಾಸಗೀ ರೆಸಾರ್ಟ್ಗಳಲ್ಲಿಯೋ ಉಳಿದು ಹೋದರೆ ಮತ್ತೆ ಬರುವುದು ಮುಂದಿನ ಗೌರವ ವಂದನೆ ಸ್ವೀಕರಿಸಲಷ್ಟೆ. ಸಚಿವರ ಉಪಸ್ಥಿತಿ ಹೋಗಲಿ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯಲ್ಲಿ ಸರಿಯಾದ ಆಪ್ತ ಸಹಾಯಾಕರೇ ಲಭ್ಯರಿರೋದಿಲ್ಲ. ಇದು ಎಲ್ಲಾ ಸರ್ಕಾರದ ಅವಧಿಗಳ ಕಥೆಯೇ ಆದರೂ ಈಗಿನ ಉಸ್ತುವಾರಿ ಸಚಿವರೂ ಇದರಿಂದ ಹೊರತಾಗಿಲ್ಲ.
ಕನಿಷ್ಟ ಜಿಲ್ಲಾ ಕೇಂದ್ರದಲ್ಲಿ ತಿಂಗಳಿಗೆ ಒಂದು ಬಾರಿ ಬಂದು ಕುಳಿತರೆ ಜಿಲ್ಲೆಯ ಜನ ಸಾಮಾನ್ಯರ ಎಷ್ಟೋ ಸಮಸ್ಯೆಗಳಿಗೆ ತನ್ನಾಲೆ ಪರಿಹಾರ ಲಭಿಸುತ್ತದೆ. ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು ಜನರೊಂದಿಗೆ ಬೆರೆತಾಗ ಅಧಿಕಾರಿಗಳಿಗೂ ಜವಾಬ್ದಾರಿ ಬರುತ್ತದೆ, ಅವರೂ ಜನರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ.
ಈ ಎಲ್ಲಾ ಕಲ್ಪನೆಗಳು ಕೊಡಗಿನ ಪಾಲಿಗೆ ಕನಸಾಗಿಯೇ ಉಳಿದಿದ್ದು, ಮುಂದಿನ ದಿನಗಳಲ್ಲಾದರೂ, ಜನಪ್ರತಿನಿಧಿಗಳು ಜನರ ಭಾವನೆಗೆ ಸ್ಪಂದಿಸುವಂತಾಗಲಿ, ಕೊಡಗಿನ ಉಸ್ತುವಾರಿಗೆ ಕೊಡಗಿನ ಶಾಸಕರೇ ಆಯ್ಕೆಯಾಗಿ ಬರಲಿ.