ಮಡಿಕೇರಿ, ನಾ.30: ಕೊಡವ ಜನಾಂಗದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅಪಲೋಡ್ ಮಾಡಿದ್ದ ಭಾವಚಿತ್ರಕ್ಕೆ “ಬೆಳಗಾವಿ ಜಿಎಂಜಿ” ಎಂಬ ಫೇಸ್ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿ, ಹಂಚಿಕೆ ಮಾಡಿರುವ ಬೆಳಗಾವಿಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ದೂರು ಸ್ವೀಕರಿಸಿ, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸದರಿ ಪ್ರಕರಣದ ಆರೋಪಿಯ ಪತ್ತೆಗಾಗಿ ಶ್ರೀ ರವಿ. ಡಿಎಸ್ಪಿ, ಸೆನ್ ಪೊಲೀಸ್ ಠಾಣೆ, ಶ್ರೀ ರವೀಂದ್ರ, ಪಿಎಸ್ಐ. ಸೆನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು, ಸಾಮಾಜಿಕ ಜಾಲತಾಣ, ಫೇಸ್ಬುಕ್ನಲ್ಲಿ, ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ, ಖಾತೆದಾರ ಬೆಳಗಾವಿಯ ಜಿಲ್ಲೆಯ,
ಕಿತ್ತೂರು ನಿವಾಸಿ ಗಂಗಧಾರ ಜಮಾದಾರಕನಿ, (22) ಎಂಬಾತನನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ರೀತಿಯ ಸಂದೇಶ/ಭಾವಚಿತ್ರ/ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿರುವ ಪೋಲೀಸರು, ಕೊಡಗು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾವಹಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಸುಳ್ಳು ಸುದ್ದಿಯ ಪೋಸ್ಟ್ಗಳನ್ನು ಹರಿಬಿಟ್ಟು, ಅಪಪ್ರಚಾರ ಮಾಡುವ / ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಯಾವುದೇ ರೀತಿ ಅಕ್ರಮ ಚಟುವಟಿಕೆಗಳು ಕಂಡಲ್ಲಿ, ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಡಗು ಜಿಲ್ಲಾ ಪೋಲೀಸ್ ಇಲಾಖೆ ಅವರು ಕೋರಿದ್ದಾರೆ.