✍-ಚೆಪ್ಪುಡೀರ ಕಾರ್ಯಪ್ಪ
ಕೊಡಗಿನ ಹಾಕಿಯ ಇತಿಹಾಸದಲ್ಲಿ 1973ರ ಪ್ರತಿಷ್ಠಿತ ರಂಗಸ್ವಾಮಿ ಕಪ್ ಬಾಂಬೆಯಲ್ಲಿ ನಡೆಯಿತು. ಅಂದು ಬಹಳಷ್ಟು ಕೊಡಗಿನ ಹಾಕಿ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಿದರು. ಕೂರ್ಗ್ ಅಸೋಸಿಯೇಷನ್ ಬಾಂಬೆ ಎಲ್ಲಾ ಆಟಗಾರರನ್ನು ಕರೆಸಿ, ಅಂದು ಭೋಜನಕೂಟ ಏರ್ಪಡಿಸಿತ್ತು. ಅಂದು ತೆಗೆದ ಅದ್ಭುತ ಭಾವಚಿತ್ರ ಈ ಮೇಲಿನದ್ದು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೊಡಂದೇರ ನಂಜಪ್ಪ (ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ತಮ್ಮ), ಮನೆಯಪಂಡ ಮುತ್ತಣ್ಣ (ಎಂ.ಎಂ.ಸೋಮಯ್ಯ ಅವರ ತಂದೆ), ಮನೆಯಪಂಡ ಜಾಕಿ ರಾಜು ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಬಲದಿಂದ 2ನೇ) ಇವರೆಲ್ಲ ಅತಿಥಿಗಳಾಗಿ ಆಗಮಿಸಿದ್ದರು.
ಕೊಡಗಿನ ಆಟಗಾರರಾದ ಸರ್ವಿಸಸ್ ತಂಡದ ಮೊಳ್ಳೇರ ಪಿ.ಗಣೇಶ್( ಮಂಡಿಯೂರಿ ಕುಳಿತವರ ಸಾಲಿನಲ್ಲಿ ತೀವ್ರ ಎಡ), ಕೊಡಂದೇರ ಎಂ. ಕುಶ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 13ನೇ), ಅಮ್ಮಂಡ ಉತ್ತಯ್ಯ ವಾಸು( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 7ನೇ), ಹಾಗು ಮದ್ರಾಸ್ ತಂಡದ ಬಿ.ಪಿ.ಗೋವಿಂದ ( ಮಂಡಿಯೂರಿ ಕುಳಿತವರ ಸಾಲಿನಲ್ಲಿ ತೀವ್ರ ಬಲ), ಮಂಡೇಪಂಡ ಮೊಣ್ಣಪ್ಪ ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 5ನೇ), ಪೈಕೇರ ಕಾಳಯ್ಯ ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 14ನೇ), ರೈಲ್ವೆ ತಂಡದ ಕೂತಂಡ ಗಣಪತಿ ( ಮಂಡಿಯೂರಿ ಕುಳಿತವರ ಸಾಲಿನಲ್ಲಿ ಬಲದಿಂದ 2ನೇ), ಬಾಂಬೆ ತಂಡದ ಮುಕ್ಕಾಟಿರ ಅಪ್ಪಯ್ಯ(ತಮ್ಮಣ್ಣ)(( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 6ನೇ),ಮೈಸೂರು ತಂಡದ ಗೋಲ್ ಕೀಪರ್ ಬಲ್ಟಿಕಾಳಂಡ ರಘು ಮೇದಪ್ಪ ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 9ನೇ), ಬೊವೇರಂಡ ಕುಟ್ಟಪ್ಪ ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 11ನೇ), ಹಂಚಿನ ಮನೆ ಸಿದ್ದಯ್ಯ ರಾಮಕೃಷ್ಣ ಹಾಗೂ ಮಾಚಿಮಾಡ ಕುಮಾರ್ ಅಪ್ಪಚ್ಚು ( ಮಧ್ಯ ಸಾಲಿನಲ್ಲಿ ನಿಂತವರಲ್ಲಿ ಎಡದಿಂದ 8ನೇ) ಅಂದಿನ ಬ್ಯಾಂಕ್ ಆಫ್ ಬರೋಡಾದ ಉದ್ಯೋಗಿ ಇವರೆಲ್ಲರೂ ಆಗಮಿಸಿದ್ದರು. ಇಲ್ಲಿ ಕೆಳಗೆ ಕೂತ ಎಡದಿಂದ 6ನೇ ವ್ಯಕ್ತಿಯೇ ಮೂರು ಬಾರಿ ಒಲಂಪಿಯನ್ ಮನೆಯಪಂಡ ಸೋಮಯ್ಯ, ಆಗ ಅವರಿಗೆ ಕೇವಲ 13 ವರ್ಷಗಳು ಮಾತ್ರ.
Coorg XI Vs Rest of India ಪ್ರದರ್ಶನ ಪಂದ್ಯಾವಳಿ…
ಅಂದು ಕೂರ್ಗ್ ಅಸೋಸಿಯೇಷನ್ ಬಾಂಬೆ ಈ ಎಲ್ಲಾ ಆಟಗಾರರನ್ನು ಸೇರಿಸಿ Coorg XI Vs Rest of India ಪ್ರದರ್ಶನ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಆದರೆ ಸಮಯದ ಅಭಾವದಿಂದ ಅದನ್ನು ಮೊಟಕುಗೊಳಿಸಲಾಯಿತು. ಅಂದು Coorg XI ತಂಡ Rest of India ವಿರುದ್ಧ ಗೆಲ್ಲುವುದು ಖಚಿತವೆಂಬುದು ಕೊಡಗಿನ ಆಟಗಾರರ ಮಾತಾಗಿತ್ತು. ಅಂದು ಬಹುಶಃ ಈ ಪಂದ್ಯಾವಳಿ ನಡೆದಿದ್ದರೆ, ಕೊಡಗಿನ ಹಾಕಿಯ ಚರಿತ್ರೆಯೇ ಬದಲಾಗುತ್ತಿತ್ತೇನೋ, ಅಂತಹ ಘಟಾನುಘಟಿ ಕೊಡಗಿನ ಆಟಗಾರರು ರಂಗಸ್ವಾಮಿ ಕಪ್ ನಲ್ಲಿ ಮೇಲುಗೈ ಸಾಧಿಸಿದ್ದು, ಇಂದು ಇತಿಹಾಸದ ಪುಟದಲ್ಲಿ ಬಂಗಾರದ ಅಕ್ಷರದಲ್ಲಿ ಬರೆದ ನೆನಪು ಮಾತ್ರ, ಆದರೆ ಇಂದು ಇಂತಹ ಕೊಡಗಿನ ಹಾಕಿ ಆಟಗಾರರು ಭಾರತದಲ್ಲಿ ಕಾಣುವುದೇ ಬಹಳ ವಿರಳ.
ಸೆಮಿ ಫೈನಲ್ಸ್ ನಲ್ಲಿ ಎಂ.ಪಿ.ಗಣೇಶ್ ಅವರ ಅದ್ಭುತ ಗೋಲು…
ಎಂ.ಪಿ.ಗಣೇಶ್ ಅವರು ಪಂಜಾಬ್ ನ ವಿರುದ್ಧ ಎರಡು ಅದ್ಭುತ Zero Angle ಗೋಲುಗಳನ್ನು ಹೊಡೆದರು. ಅಂದು ಪಂಜಾಬ್ ತಂಡದ ಪರ ಚಾರ್ಲ್ಸ್ ಕಾರ್ನಿಲಸ್ ಗೋಲ್ ಕೀಪರ್ ಆಗಿದ್ದರು, ತದನಂತರ ಇವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಮೈಸೂರಿನ ರಾಜ್ಯ ತಂಡವು ಪಂಜಾಬ್ ನ ವಿರುದ್ಧ ಟೈ ಬ್ರೇಕರ್ ನಲ್ಲಿ ಸೋಲನ್ನು ಕಂಡಿತು. ಅಂದು ಮೈಸೂರಿನ ಗೋಲ್ ಕೀಪರ್ ಬಲ್ಟಿಕಾಳಂಡ ರಘು ಮೇದಪ್ಪ ಅವರ ಆರ್ಭಟ ಕ್ರೀಡಾ ಪ್ರೇಮಿಗಳನ್ನು ರಂಜಿಸಿತು. ಫೈನಲ್ಸ್ ನಲ್ಲಿ ಸರ್ವಿಸಸ್ ತಂಡವು ರೈಲ್ವೆಸ್ ವಿರುದ್ಧ ರಂಗಸ್ವಾಮಿ ಕಪ್ ನಲ್ಲಿ ಗೆಲುವನ್ನು ಸಾಧಿಸಿತು.
ಅಂದು ಸರ್ವಿಸಸ್ ಹಾಗೂ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಕೊಡಗಿನ ಹಾಕಿ ಆಟಗಾರರು ಪ್ರಾಬಲ್ಯತೆ ಮರೆದಿದ್ದರು, ಇಂದಿಗೆ ಅದು 52 ವರ್ಷಗಳು ಮುಗಿಯುತ್ತಾ ಬಂದಿದೆ, ಆದರೆ ಇಂದು ಏಕೆ ಈ ರೀತಿ ಬದಲಾವಣೆಯಾಗಿದೆ ಎಂಬುದನ್ನು ಕ್ರೀಡಾ ಪ್ರೇಮಿಗಳು ಚಿಂತಿಸಬೇಕಾಗಿದೆ.
ಕೊಡಗಿನ ಆಟಗಾರರು ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಬೇಕು, ಇದರ ಜವಾಬ್ದಾರಿಯನ್ನು ಹೊರುವವರು ಯಾರು ? ಇನ್ನು ಮುಂದಾದರು ಹಾಕಿಯ ಘತ ವೈಭವ ಮರಳಲಿ ಹಾಗೂ ಎಲ್ಲಾ ಹಿರಿಯ ಆಟಗಾರರು ಇದಕ್ಕೆ ಕೈಜೋಡಿಸಲಿ ಎಂಬುದು ಕ್ರೀಡಾ ಪ್ರೇಮಿಗಳ ಆಶಯ.