nadubadenews ಸಂಪಾದಕೀಯ, ಅ.13: ಕೊಡಗು ಜಿಲ್ಲೆಯಿಂದ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಶಾಸಕರ ಸಂಖ್ಯೆ ಐದು. ಆದರೆ ನಮಗೆ ಗೊತ್ತಿರೋ ಶಾಸಕರು ಮೂವರೆ. ಮತ್ತಿಬ್ಬರ ಹೆಸರನ್ನ ಯಾವುದಾದರೂ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹುಡುಕಬೇಕು. ಅದೂ ಕೇವಲ ಪ್ರೋಟೊಕಾಲ್‌ಗೆ ಮಾತ್ರ.
ಎಷ್ಟೋ ಜನಕ್ಕೆ ಕೊಡಗಿಗೆ ಐವರು ಶಾಸಕರು ಸಂಬಂಧ ಪಡುತ್ತಾರೆ ಎಂದರೆ, ಆಶ್ಚರ್ಯದಿಂದ ದುರುಗುಟ್ಟಿ ನೋಡುತ್ತಾರೆ. ಕಾರಣ ಆ ಇಬ್ಬರು ಯಾರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ, ಅವರ ಕಛೇರಿ ಇದಿಯಾ, ಇದ್ಯಾವುದರ ಅರಿವು ಯಾರಿಗೂ ಇಲ್ಲ. ಹಾಗಾದರೆ ಇವರು ನಿಗೂಢ ಶಾಸಕರೆ, ಅಥವಾ ನಿಮನಿರ್ದೇಶಿತ ಶಾಸಕರೇ ಅನ್ನೋ ಸಂಶಯವಾದರೆ, ಅದೂ ಅಲ್ಲ ಅವರೂ ಚುನಾಯಿತ ಶಾಸಕರೇ… ಅವರಿಗೂ ಎಲ್ಲಾ ರೀತಿಯ ಅಧಿಕಾರವೂ ಇದೆ. ಅನುದಾನವೂ ಇದೆ. ಹಾಗಾದರೆ ಅವರ್ಯಾರು ಯಾಕೆ ಕಾಣೋದಿಲ್ಲ ಕೇಳಿದರೆ, ಸ್ಪಷ್ಟ ಉತ್ತರ ನಾವು ಕೊಡಗಿನವರು ಮುಗ್ದರು ಎನ್ನೋದಕ್ಕಿಂತ ಮುಟ್ಟಾಳರೂ ಅಂದುಕೊಂಡು ಸಮಾಧಾನ ಮಾಡಿಕೊಂಡರಾಯಿತು.
ಹೌದು ಕೊಡಗಿನ ವಿಧಾನ ಸಭಾ ಶಾಸಕರು ಇಬ್ಬರಾದರೆ, ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ವಿಧಾನ ಪರಿಷತ್ ಶಾಸಕರು ಒಬ್ಬರು. ಮಗದಿಬ್ಬರಲ್ಲಿ ಒಬ್ಬರು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ, ಒಬ್ಬರು ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಶಾಸಕರು.
ಹಾಲಿ ವಿಧಾನ ಸಭಾ ಶಾಸಕರಾಗಿ, ಮಾನ್ಯ ಎ.ಎಸ್. ಪೊನ್ನಣ್ಣ ಮತ್ತು ಮಂಥರ್ ಗೌಡ ಅವರುಗಳು ಆಡಳಿತ ಪಕ್ಷದವರಾಗಿ, ಉತ್ಸಾಹದಿಂದ ಜನರೊಂದಿಗೆ ಓಡಾಡುತ್ತಿದ್ದರೆ, ಮತ್ತೊಬ್ಬರು ಎಂ.ಪಿ. ಸುಜಾ ಕುಶಾಲಪ್ಪ ಅವರು ವಿರೋಧ ಪಕ್ಷದ ಸದಸ್ಯರಾಗಿ ತಮ್ಮ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂವರನ್ನೂ ಜನ ಚೆನ್ನಾಗಿಯೇ ಬಲ್ಲರು.
ಮತ್ತಿಬ್ಬರು ನಿಗೂಢ ಶಾಸಕರಲ್ಲಿ ಒಬ್ಬರು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಜೆಡಿಎಸ್‌ನ ಭೋಜೇಗೌಡ, ಇವರು ಸತತ ಎರಡನೇ ಬಾರಿ ಶಾಸಕರಾದವರು, ಅಂದೊಮ್ಮೆ ಕೆಡಿಪಿ ಸಭೆಗೆ, ದಾರಿ ತಪ್ಪಿ ಬಂದವರಂತೆ ಬಂದು, ಪ್ರೋಟೋಕಾಲ್‌ನಲ್ಲಿ ನನ್ನ ಉಲ್ಲೇಖವಿಲ್ಲ ಅಂತ ಕೂಗಾಡಿದನ್ನು ನೆನಪಿಸಿ ಕೊಳ್ಳಬಹುದು. ಅದು ಬಿಟ್ಟರೆ ಇವರನ್ನು ಇಲ್ಲಿ ಕಾಣೋದು ಇವರ ಚುನಾವಣೆ ಸಂದರ್ಭದಲ್ಲಿ ಮಾತ್ರ.
ಇನ್ನು ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆ ಆಗಿರುವ ಬಿಜೆಪಿಯ ಶಾಸಕ ಧನಂಜಯ ಸರ್ಜಿ ಅವರ ಫೋಟೋವನ್ನ ಅವರದ್ದೇ ಚುನಾವಣೆಯಲ್ಲಿ ಮಾತ್ರ. ಅದಾದಮೇಲೆ ಅವರೇನಾದರೋ ಆಯ್ಕೆ ಮಾಡಿದ ಪದವೀಧರರಿಗೂ ಗೊತ್ತಿಲ್ಲ.
ಈ ಎರಡು ವಿಭಾಗದಲ್ಲಿ ಕೊಡಗನ್ನ ಶಾಸಕರಾಗಿ ಪ್ರತಿನಿಧಿಸಿದ್ದ ಡಿ.ಹೆಚ್. ಶಂಕರಮೂರ್ತಿಯವರು ಆಗಾಗ್ಗೆ ಕೊಡಗಿಗೆ ಭೇಟಿ ನೀಡುತ್ತಿದ್ದರು, ಅದು ಬಿಟ್ಟರೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಆಗೊಮ್ಮೆ, ಈಗೊಮ್ಮೆ ಬಂದು ಹೋದದ್ದು ಬಿಟ್ಟರೆ, ಈ ಶಾಸಕರು ಕೊಡಗಿಗೆ ಸಂಬಂಧ ಪಡುತ್ತಾರೆ ಅನ್ನೋ ಅರಿವು ಕೂಡ ನಮಗಿಲ್ಲ.
ಯಾವುದೇ ಒಬ್ಬ ಜನಪ್ರತಿನಿಧಿ, ತನ್ನ ಆಯ್ಕೆ ಮಾಡಿದವರಿಗೆ ಸ್ಪಂದಿಸಲು ಕನಿಷ್ಟ ತಿಂಗಳಿಗೊಮ್ಮೆ ಆದರೂ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಬೇಕು. ಆದರೆ ಈ ಇಬ್ಬರು ಮಹನೀಯರು ಐದು ವರ್ಷದಲ್ಲಿ ಒಮ್ಮೆಯೂ ಯಾವ ಸಭೆ ಸಮಾರಂಭಗಳಲ್ಲಿಯೂ ಕೂಡ ಕಾಣಲೊಲ್ಲರು. ಹೋಗಲಿ ಕನಿಷ್ಟ ಜಿಲ್ಲೆಯಲ್ಲಿ ಒಂದು ಕಛೇರಿ ಆದರೂ ಮಾಡಿದ್ದಾರಾ.. ಅದೂ ಇಲ್ಲ. ಹೋಗಲಿ ಜಿಲ್ಲೆಗೆ ಯಾವುದಾದರೂ ಅನುದಾನವಾದರೂ ಇವರು ಕೊಟ್ಟಿದ್ದಾರಾ… ಖಂಡಿತ ಸಾಧ್ಯವಿಲ್ಲ. ಹಾಗಾದರೆ ಇವರೇಕೆ ನಮಗೆ ಶಾಸಕರಾಗಿ ಬೇಕು, ಕೇಳಿದರೆ ಮತ್ತದೇ ಪಕ್ಷಗಳ ಪ್ರತಿಷ್ಟೆ.
ಘನತೆವೆತ್ತ ಪ್ರಜಾ ಪ್ರಭುತ್ವದ ಅಪ್ರಬುದ್ಧ ಪ್ರಭುಗಳಾದ ನಾವು, ಆಯ್ಕೆ ಮಾಡುವಾಗ, ನಮಗೆ ಯಾರಿಂದ ಉಪಯೋಗವಿದೆ, ಯಾರು ನಮ್ಮ ಕೈಗೆ ಸುಲಭವಾಗಿ ಸಿಗುತ್ತಾರೆ, ಸ್ಪಂದಿಸುತ್ತಾರೆ ಅನ್ನೋದಕ್ಕಿಂತ, ನಮ್ಮ ಹೆಮ್ಮೆಯ ಪಕ್ಷದ ಪ್ರತಿನಿಧಿ ಬೇಕು ಎಂಬ ಮುಠ್ಠಾಳತನದ ಆಯ್ಕೆಯ ಪ್ರತಿಫಲ ಇಂತ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ. ಮುಂದಿನ ದಿನಗಳಲ್ಲಾದರೂ ನಮ್ಮ ಆಯ್ಕೆ ಪಕ್ಷಗಳಾಚೆಗೆ, ನಮ್ಮತನದ ಸ್ಫಂದನೆಯತ್ತ ವಿವೇಚನೆಯಿಂದಿದ್ದರೆ, ಒಂದಷ್ಟು ಪ್ರಯೋಜನವಾದರೂ ಆಗಬಹುದು.