
ಕುಶಾಲನಗರ, ಜು.09;(nadubadenews): ಕುಶಾಲನಗರ ಅಭಿವೃದ್ದಿಗೆ ಪೂರಕವಾಗಿ ಸ್ಪಂದಿಸುವ ಮೂಲಕ, ಕಾರ್ಯಚಟುವಟಿಗೆಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೂಚಿಸಿದರು. ಕುಶಾಲನಗರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲೊಂಡು ಮಾತನಾಡಿದ ಶಾಸಕರು, ಜಿಲ್ಲೆಯ ಹೆಬ್ಬಾಗಿಲು, ಮತ್ತು ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಕುಶಾಲನಗರದ ಸರ್ವತೋಮುಖ ಅಭಿವೃದ್ದಿಗೆ ಸರ್ವರೂ ಶ್ರಮಿಸುವಂತೆ ಕರೆ ನೀಡಿದರು.
ಯುಜಿಡಿ ಕಾಮಗಾರಿ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಪುರಸಭೆಯಿಂದ ನಿರ್ವಹಣೆ ವೆಚ್ಚ ಕೋರಿದ ಒಳಚರಂಡಿ ಮಂಡಳಿ ಅಧಿಕಾರಿಗಳ ವಿರುದ್ದ ಸದಸ್ಯರು ತೀವ್ರ ಆಕ್ರೋಷ ವ್ಯಕ್ತಪಡಿಸಿದರು. ಮುಂದಿನ ಮೂರು ತಿಂಗಳಲ್ಲಿ ಯುಜಿಡಿ ಕಾಮಗಾರಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡುವಂತೆ ಶಾಸಕರು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ರಾಜಕಾಲುವೆಗಳ ಒತ್ತುವರಿ ಬಗ್ಗೆ ಸದಸ್ಯ ಖಲೀಮುಲ್ಲಾ ಸಭಾಧ್ಯಕ್ಷ ಶಾಸಕರ ಗಮನಕ್ಕೆ ತಂದರು. ಕಾಲುವೆಗಳನ್ನು ಒತ್ತುವರಿ ಮಾಡಿ ಲೇಔಟ್ ಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ಮಂತರ್ ಗೌಡ, ರಾಜಕಾಲುವೆಗಳ ಸರ್ವೆಗೆ ಸೂಚನೆ ನೀಡಿದರು. ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿಗೆ ಕೂಡಲೆ ಕ್ರಮವಹಿಸಲು ಲೋಕೋಪಯೋಗಿ ಅಭಿಯಂತರರಿಗೆ ಶಾಸಕರು ಸೂಚಿಸಿದರು. ಪೌರಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಕೆ, ಸ್ಮಶಾನಕ್ಕೆ ಜಾಗ ಗುರುತಿಸುವುದು, ಹಳೆ ಸೇತುವೆ ಸುಂದರೀಕರಣ, ನೂತನ ಪುರಸಭೆ ಕಟ್ಟಡ ಮಳೆಯಿಂದ ಸೀಪೇಜ್ ಬಾರದಂತೆ ಕ್ರಮವಹಿಸುವುದು, ಸಾರ್ವಜನಿಕ ಲೈಬ್ರರಿಗೆ ಜಾಗ ಒದಗಿಸುವ ಬಗ್ಗೆ ಚರ್ಚೆ ಸೇರಿದಂತೆ ಕೊಡಗು-ಮೈಸೂರು ಜಿಲ್ಲೆಯ ಗಡಿ ಆರಂಭದಲ್ಲಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ, ಪರಿಸರ ಪೂರಕ ಸೈನ್ ಬೋರ್ಡ್ಗಳ ಅಳವಡಿಕೆಗೆ, ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಏಕಬಳಕೆ ಪ್ಲಾಸ್ಟಿಕ್ ನಿಷೇದದ ಬಗ್ಗೆ ಗಮಹರಿಸಲು ಶಾಸಕರು ಸೂಚಿಸಿದರು.