ಶ್ರೀರಂಗಪಟ್ಟಣ, ನಡುಬಾಡೆ ನ್ಯೂಸ್, ಸೆ.30: : ಉತ್ತರದ ಗಂಗ ಆರತಿ ಮಾದರಿಯಲ್ಲಿ, ದಕ್ಷಿಣದ ಪಾಪನಾಶಿನಿ ಕಾವೇರಿಗೂ ಪ್ರಸಕ್ತ ದಸರಾ ಉತ್ಸವದಿಂದಲೇ ‘ಆರತಿ’ ಆರಂಭಿಸಲು ನಿರ್ಧರಿಸಿದ್ದು, ಅಕ್ಟೋಬರ್ .3 ರಿಂದ ಐದು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ‘ಪ್ರಾಯೋಗಿಕ ಕಾವೇರಿ ಆರತಿ’ ನಡೆಯಲಿದೆ.
ಗಂಗಾರತಿ ಮಾದರಿಯಲ್ಲೇ ಕಾವೇರಿ ನದಿಗೂ ಆರತಿ ಮಾಡುವ ಬಗ್ಗೆ ಉಪಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರೂ ಆಗಿರುವ, ಡಿ.ಕೆ. ಶಿವಕುಮಾರ್ ಅವರು ನಿರ್ಧಾರ ಮಾಡಿದ್ದರು.ಈ ನಿಟ್ಟಿನಲ್ಲಿ ಕಳೆದವಾರ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ತಂಡ ಮೂರು ದಿನಗಳ ಕಾಲ, ಹರಿದ್ವಾರ ಹಾಗೂ ವಾರಾಣಸಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು.
ಈ ವೇಳೆ ಗಂಗಾರತಿ ಟ್ರಸ್ಟ್ (ಗಂಗಾ ಮಹಾಸಭಾ) ಸದಸ್ಯರೊಂದಿಗೂ ಚರ್ಚಿಸಿದ್ದರು. ಕಾವೇರಿ ಆರತಿಯಗೆ, ಸಾಕಷ್ಟು ಪೂರ್ವ ತಯಾರಿಯ ಅಗತ್ಯವಿರುವುದರಿಂದ, ಈ ದಸರಾ ವೇಳೆಗೆ ಪ್ರಾಯೋಗಿಕವಾಗಿ ಕಾವೇರಿ ಆರತಿಯನ್ನು ಮಾಡಲು ನಿರ್ಧರಿಸಿದ್ದು, ಇದರಂತೆ ಅ.3ರಿಂದ 5 ದಿನಗಳ ಕಾಲ ಕಾವೇರಿ ಆರತಿಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.