
ಮಡಿಕೇರಿ,ಮೇ.22(Nadubade News): ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ವ್ಯಕ್ತಿಯೋರ್ವರನ್ನು ಕಾಡಾನೆ ಬಲಿ ಪಡೆದ ದುರ್ಘಟನೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಕಾಡಾನೆ ಸೆರೆಗೆ ಕೂಡಲೇ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಕೇತ್ ಪೂವಯ್ಯ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಮಾನವ ವನ್ಯಜೀವಿ ಸಂಘರ್ಷವಿದೆ, ಕಾಡಾನೆ ಹಾವಳಿಯಿಂದ ರಾಜ್ಯದಲ್ಲೇ ಅತಿಹೆಚ್ಚು ಜೀವಹಾನಿ ಕೊಡಗು ಜಿಲ್ಲೆಯಲ್ಲಿ ಆಗುತ್ತಿದೆ. ಕಾಡಿನಲ್ಲಿರುವ ಆನೆಗಳಿಂದ ಹೆಚ್ಚಾಗಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಸಮಸ್ಯೆಯಾಗುತ್ತಿದೆ.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಿಸಿದಂತೆ ಭದ್ರಾ ಸಾಫ್ಟ್ ಏರಿಯಾ ಪಟ್ಟಿಯಲ್ಲಿ ಕಾಡಾನೆಗಳಿಗೆ ಪುನರ್ವಸತಿ ಕಲ್ಪಿಸಲು 2ರಿಂದ 3 ವರ್ಷಗಳು ಬೇಕಾಗಬಹುದು,ಕಾಡಾನೆಗಳ ಪುನರ್ವಸತಿ ಕಲ್ಪಿಸಿದ್ದಲ್ಲಿ ಮುಂದಿನ 2 ವರ್ಷಗಳಲ್ಲಿ ಶೇ.90ರಷ್ಟು ಸಮಸ್ಯೆ ಕಡಿಮೆಯಾಗಲಿದೆ ಎಂದು ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಸಮಸ್ಯೆ ಪರಿಹಾರಕ್ಕೆ ಎಲ್ಲಾ ಪಕ್ಷಗಳು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ,ಗಣತಿ ಪ್ರಕಾರ ನಾಗರಹೊಳೆಯಲ್ಲಿ 2 ಸಾವಿರ ಕಾಡಾನೆಗಳಿದ್ದು, 563 ಹುಲಿಗಳು ಇವೆ. ಜನವಸತಿ ಪ್ರದೇಶದಲ್ಲಿರುವ ಎರಡು ಹುಲಿಗಳನ್ನು ಸೆರೆಹಿಡಿಯಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ದೊರೆತ್ತಿದ್ದರೂ ಸಹ ಅರಣ್ಯ ಇಲಾಖೆ ಕಾರ್ಯಗತಮಾಡದಿರುವ ಬಗ್ಗೆ ಸಂಕೇತ್ ಪೂವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಸಂಕೇತ್ ಪೂವಯ್ಯ ತಾಕೀತು ಮಾಡಿದರು.