Site icon nadubadenews.com

ಕಟ್ಟೆಮಾಡ್‌ನಲ್ಲಿ ನಡೆದ ಸಾಂಪ್ರದಾಯಿಕತೆಯ ಹಾಸ್ಯ ಪ್ರಸಂಗ: ಇದು ಶತಮಾನದ ಜೋಕು

ಕಟ್ಟೆಮಾಡ್‌ನಲ್ಲಿ ನಡೆದ ಸಾಂಪ್ರದಾಯಿಕತೆಯ ಹಾಸ್ಯ ಪ್ರಸಂಗ: ಇದು ಶತಮಾನದ ಜೋಕು
Spread the love
ಕಟ್ಟೆಮಾಡ್‌ನಲ್ಲಿ ನಡೆದ ಸಾಂಪ್ರದಾಯಿಕತೆಯ ಹಾಸ್ಯ ಪ್ರಸಂಗ: ಇದು ಶತಮಾನದ ಜೋಕು

ಕಳೆದ ಎರಡು ದಿನಗಳಿಂದ ಕೊಡಗಿನ ಮೂರ್ನಾಡು ಸಮೀಪದ ಕಟ್ಟೆಮಾಡು ಮಹಾ ಮೃತ್ಯುಂಜಯ ದೇವಸ್ಥಾನದ ಉತ್ಸವದಲ್ಲಿ ಉಡುಪಿನ ಬಗ್ಗೆ ವಿವಾದ ಎದ್ದು, ಇಂದು ತಾರಕದಲ್ಲಿ ವಾದ ವಿವಾದಗಳು ನಡೆಯುತ್ತಿವೆ.

            ಈ ಎಲ್ಲಾ ಗೊಂದಲಕ್ಕೆ ಮತ್ತು ವಿವಾದಕ್ಕೆ ಮೂಲ ಕಾರಣ ದೇವಸ್ಥಾನ ಸಮಿತಿಯ ಆಂತರಿಕ ನಿಯಮಾವಳಿ (ಬೈಲಾ). ಸಮಿತಿಯವರ ಹೇಳಿಕೆಯ ಪ್ರಕಾರ ಬೈಲಾದಲ್ಲಿ ಸಾಂಪ್ರದಾಯಿಕ ಉಡುಪಿಗೆ ಅವಕಾಶ ಇಲ್ಲ, ಹಾಗಾಗಿ ಕುಪ್ಯಚಾಲೆ ಧರಿಸಬಾರದು ಎಂಬುದು. ಇದೆಂತ ಮೂರ್ಖತನದ ಪರಮಾವಧಿ ಎಂದರೆ ಅವರು ತೊಟ್ಟಿದ್ದೂ ಕೂಡ ಸಾಂಪ್ರದಾಯಿಕ ಉಡುಪು ಎನ್ನುವ  ಪರಿಜ್ಞಾನ ಅವರಿಗೇ ಇಲ್ಲದ್ದು.

            ಯಾವ ಗುಂಪು ಕೇಸರಿ ಪಂಚೆ, ಬಿಳಿ ಅಂಗಿ, ಕೇಸರಿ ಶಲ್ಯ ಧರಿಸಿ ಬಂದು ಕೊಡವರ ಕುಪ್ಯ ಚಾಲೆಯನ್ನ ವಿರೋಧಿಸಿದರೋ, ಆ ಗುಂಪು ಧರಿಸಿದ್ದೂ ಕೂಡ ಹಿಂದೂ ಸಾಂಪ್ರದಾಯಿಕ ಉಡುಪು. ಅದರಲ್ಲೂ ತುಳುನಾಡು ಮತ್ತು ಮಲೆಯಾಳ ಭಾಗದ ಬಹುಪಾಲು ಜನ ನಿತ್ಯ ಅಥವಾ ಹಬ್ಬ ಹರಿದಿನಗಳಲ್ಲಿ ಧರಿಸುವ ಉಡುಪು ಅದು. ಆದರೆ ಈ ಕಟ್ಟೆಮಾಡಿನ ದೇವಸ್ಥಾನ ಸಮಿತಿ ಅದೇ ಸಾಂಪ್ರದಾಯಿಕ ಉಡುಪು ಧರಿಸಿ ಕುಪ್ಯಚಾಲೆಯನ್ನು ವಿರೋಧಿಸಿದ್ದು ಮಾತ್ರ ಶತಮಾನದ ಹಾಸ್ಯ ಪ್ರಸಂಗ.  ಅವರು ಆ ಉಡುಪನ್ನು ಬಿಚ್ಚಿ ಪಾಶಿಮಾತ್ಯ ಉಡುಪು ಧರಿಸಿ ಬಂದು, ಇಲ್ಲಿಯ ಬೈಲಾದಲ್ಲಿ ಸಾಂಪ್ರದಾಯಿಕ ಉಡುಪಿಗೆ ನಿಷೇಧವಿದೆ, ಕೊಡವರು ಕುಪ್ಯ ಹಾಕಬೇಡಿ ಎಂದಿದ್ದರೆ ಅದಕ್ಕೋಂದು ಅರ್ಥ ಆದರೂ ಇರುತಿತ್ತೇನೊ…

ಆದರೂ ಒಂದು ದೇವಾಲಯದಲ್ಲಿ ಸಾಂಪ್ರದಾಯಿಕ ಉಡುಪು ನಿಷೇಧಿಸಿದ ಇತಿಹಾಸದ ಮೊದಲ ದೇವಾಲಯ ಸಮಿತಿ ಕಟ್ಟೆಮಾಡ್‌ನ ಈ ದೇವಾಲಯ ಸಮಿತಿ. ಇದು ಖಂಡಿತವಾಗಿ ಇತಿಹಾಸದ ಪುಟದಲ್ಲಿ ಅಚ್ಚಳಿದ ದಾಖಲೆಯಾಗಲಿದೆ.

            ಇದೇ ಇಂದು ಈ ಮಟ್ಟಕ್ಕೆ ವಿವಾದ ಆಗಲು ಕಾರಣ ಕೂಡ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವುದಕ್ಕಿಂತ ತಾನು ಹೇಸಿಗೆ ತಿಂದು ಬೇರೆಯವರ ಮೂತಿಗೆ ಒರೆಸಿದಂತೆ ಆಯಿತು. ಇದಕ್ಕಿಂತ ಘೋರ ನಗೆಪಾಟಲು ಬೇರೊಂದಿಲ್ಲ ಬಿಡಿ.

            ಯಾವುದೇ ಧರ್ಮ, ಸಮುದಾಯ, ಜನಾಂಗವಿರಲಿ ಅವರ ದೇವಾಲಯಗಳಿಗೆ ಅಥವಾ ಧಾರ್ಮಿಕ ಕೇಂದ್ರಗಳಿಗೆ ಆಯಾ ಧಾರ್ಮಿಕ ಉಡುಪಿನಲ್ಲಿ ಪ್ರವೇಶ ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್‌ ಈ ಕಟ್ಟೆಮಾಡ್‌ನ ಮೃತ್ಯುಂಜಯ ದೇವಾಲಯ ಸಮಿತಿ ಮಾತ್ರ, ಯಾವುದೇ ಸಾಂಪ್ರದಾಯಿಕ ಉಡುಪು ಧರಿಸುವಂತಿಲ್ಲ ಅಂತ ನಿಲುವಳಿ ಮಾಡಿದೆಯಂತೆ.

            ಪ್ರಶ್ನೆ ಇರುವುದು ಈ ಸಮಿತಿಯ ಬೈಲಾವನ್ನು ಮಹಾಸಭೆ ಅಂಗೀಕಾರ ಮಾಡಿದೆಯಾದರೆ, ಆ ಮಹಾಸಭೆಯಲ್ಲಿ ಹಾಜರಿದ್ದವರು ಆಕ್ಷೇಪ ವ್ಯಕ್ತಪಡಿಸದೇ ಇದ್ದದ್ದೂ ಕೂಡ ಮತ್ತೊಂದು ಪ್ರಮಾದ. ಇದರ ಜೊತೆಗೆ ಈ ಬೈಲಾವನ್ನು ನಿಯಮಾನುಸಾರ ಪರಿಶೀಲನೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ಅಂಶವಿದ್ದರೂ ಅದನ್ನು ಅಂಗೀಕಾರ ಮಾಡಿದ್ದರೆ, ಉಪನೋಂದಣಾಧಿಕಾರಿಯ ಬಹುದೊಡ್ಡ ಕರ್ತವ್ಯಲೋಪ ಆಗಲಿದೆ.  ಒಂದುವೇಳೆ ಮಹಾಸಭೆಯಲ್ಲಿ ಅಂಗೀಕಾರವೇ ಆಗದೆ, ಇಲಾಖೆಯಿಂದಲೂ ಅನುಮೋದನೆ ಪಡೆಯದೇ ಇದ್ದರೆ, ಈ ಬೈಲಾದಲ್ಲಿ ಯಾವುದೇ ಹುರುಳಿಲ್ಲ ಮತ್ತು ಆ ಬೈಲಾಕ್ಕೆ ಮಾನ್ಯತೆಯೂ ದೊರೆಯಲಾರದು.

            ಒಟ್ಟಿನಲ್ಲಿ  ಆ ದೇವಾಲಯ ಸಮಿತಿ ಮಾಡಿದ ತಿಳಿಗೇಡಿತನದ ನಿರ್ಧಾರ, ಇಂದು ಕೊಡಗಿನ ಸಾಂಸ್ಕೃತಿಕ ಭಾವನೆಗಳಿಗೆ ಬೆಂಕಿ ಹಚ್ಚಿದೆ. ಆದರೂ ಇಂತ  ಕ್ಷುಲ್ಲಕ ಆಧಾರ ರಹಿತ ಕಾರಣಗಳನ್ನು, ಮತ್ತು ಭಾವನಾತ್ಮಕ ವಿಚಾರವನ್ನು, ಜನಾಂಗೀಯ ಆಧಾರದಲ್ಲಿ ಬೆಂಬಲಿಸುವುದು ಸಮರ್ಥಿಸುವುದು ಅತ್ಯಂತ ಖೇದಕರ ಹಾಗೂ ನಾಗರೀಕ ಸಮಾಜ ಸ್ವಾರ್ಥದ ಎದುರು ಸ್ವಾಸ್ಥ್ಯಹೀನಾವಾಗಿದೆ ಎಂಬುದನ್ನ ಸಾಬೀತು ಪಡಿಸಿದೆ.

ಹಿರಿಯರ ಸ್ಥಾನದಲ್ಲಿ ನಿಂತು ವಿವೇಚನೆಯಿಂದ ವರ್ತಿಸಬೇಕಾದ, ತಿಳಿ ಹೇಳಿ ಸರಿಮಾಡಬೇಕಾದ ಸಮುದಾಯ ಸಂಘಟನೆಗಳು, ಕೇವಲ ಪ್ರತಿಷ್ಟೆಗಾಗಿ ತಪ್ಪನ್ನೂ ಸಮರ್ಥಿಸಿಕೊಳ್ಳುವ ಹೇಳಿಕೆ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಎನ್ನುವುದಕ್ಕಿಂತ ಭಾರತೀಯ ಕಾನೂನು ಮತ್ತು ಸಂಪ್ರದಾಯದ ಅರಿವು ಇಲ್ಲದಿರುವುದು ಮತ್ತೊಂದು ವಿಪರ್ಯಾಸವೇ ಸರಿ.

Exit mobile version