ಸಮಸ್ಥರಿಗೂ ವಿಶ್ವ ಪ್ರವಾಸೋದ್ಯಮ ದಿನ ಶುಭಾಷಯಗಳು… ಆದರೆ ಈ ದಿನವನ್ನು ಆಚರಿಸುವ ನೈತಿಕ ಸ್ತೈರ್ಯ, ಆತ್ಮ ಸಾಕ್ಷಿ ಕೊಡಗಿನ ಜನಕ್ಕೆ ಇದೆಯಾ ಎನ್ನುವ ಮೊದ ಪ್ರಶ್ನೆಯನ್ನ ನಮಗೇ ಕೇಳಿಕೊಳ್ಳುತ್ತಾ, ಪ್ರವಾಸೋದ್ಯಮದ ಒಳಹೊರಗೆ ಅಲ್ಪ ಅಲೆದಾಡಿ ಬರೋಣ.
ಈ ಪ್ರವಾಸ ಎಂದರೇನೇ ಒಂತರಾ ಮೈರೋಮಾಂಚನ ಆಗುವ ವಿಚಾರ. ಅಭಾಲ ವೃದ್ದರಾದಿಯಾಗಿ ಎಲ್ಲರಿಗೂ ಪ್ರಾವಾಸ ಎಂದರೆ ಎಲ್ಲಿಲ್ಲದ ಸಂಭ್ರಮ ಪುಳಕ. ಅದರಲ್ಲೂ ಹಲವರಿಗೆ ಹೊಸ ಜಾಗಗಳನ್ನು ಸುತ್ತುವ, ಕೆಲವರಿಗೆ ಹೊಸ ತಿನಿಸುಗಳನ್ನು ತಿನ್ನುವ, ಮತ್ತೊಂದಷ್ಟು ಜನರಿಗೆ ಪರಿಸರ ಪ್ರಕೃತಿಯನ್ನು ಆರಾದಿಸಿ ಆಸ್ವಾಧಿಸುವ ಇರಾದೆ. ಅದು ಅವರವರ ಮನಸ್ಥಿತಿ ಮತ್ತು ಸುತ್ತಲ ಪರಿಸರಕ್ಕನುಗುಣವಾಗಿ ನಿರ್ಧರವಾಗುತ್ತವೆ ಎನ್ನಿ.
ಪ್ರಾವಾಸಿಗರಷ್ಟೇ ಹಂಬಲ, ಬಯಕೆ, ತುಡಿತ, ತಳಮಳ, ಸಂತೋಷಗಳು ಪ್ರವಾಸೋಧ್ಯಮ ಅವಲಂಬಿತ ಉದ್ಯಮಿಗಳಿಗೂ ಇರುತ್ತದೆ. ಅದು ಹೋಟೇಲ್, ರೆಸಾರ್ಟ್, ವಸತಿ ಊಟದಿಂದ ಹಿಡಿದು, ಸಣ್ಣ ಸಣ್ಣ ಬೊಂಬೆಗಳು, ಮಿಟಾಯಿ ಮಾರಟಗಾರರವರೆಗೂ ಪ್ರವಾಸಿಗರನ್ನ ಅವಲಂಬಿಸಿರುತ್ತದೆ.
ಈ ಎರಡೂ ವಿಭಾಗದ ಜನ ನಮ್ಮ ಕೊಡಗಿನಲ್ಲಿದ್ದಾರೆ, ಒಂದಷ್ಟು ಜನ ಕೊಡಗಿನಾಚೆಗಿನ ಪ್ರಾಕೃತಿಕ, ಪ್ರಾದೇಶಿಕ ಸವಿಯನ್ನು ಸವಿಯಲು ಹೊರಹೋದರೆ, ಮತ್ತೊಂದಿಷ್ಟು ಜನ ಕೊಡಗಿಗೆ ಬರುವ ಪ್ರವಾಸಿಗರ ಆತಿಥ್ಯಕ್ಕೆ ಮೊರೆ ಹೋಗಿದ್ದಾರೆ. ಹಾಗಾಗಿ ಇಲ್ಲಿ ಪ್ರವಾಸ ಅಥವ ಪ್ರವಾಸೋದ್ಯಮ ಎನ್ನುವ ಪದ ಮಾತ್ರ ಪ್ರಸ್ತುತವಾಗುತ್ತದೆ. ಯಾಕಂದರೆ ಕೊಡಗಿನಲ್ಲಿ ಇಂದಿಗೆ ಈ ಪದ ಬದುಕಿನ ಅವಿನಾಭಾವ ಅಂಗವಾಗಿ ಸೇರಿಕೊಂಡುಬಿಟ್ಟಿದೆ. ಅದರಲ್ಲೂ ಪ್ರವಾಸದ್ಯಮ ಎಂದರೆ ಕೊಡಗಿನ ಆರ್ಥಿಕ ಶಕ್ತಿ ಎನ್ನುವ ಮಟ್ಟಕ್ಕೆ ಇಂದು ಕೊಡಗು ಇದರೊಂದಿಗೆ ಬೆರೆತು ಹೋಗಿದೆ.
ಕೊಡಗು ಎನ್ನುವ ಹೆಸರೆ ಅತ್ಯದ್ಬುತ ಮತ್ತು ವಿಭಿನ್ನವಾದದ್ದು. ಇಲ್ಲಿಯ ಪರಿಸರ, ಸಂಸ್ಕೃತಿ, ಜನ ಜೀವನ, ಉಡುಗೆ ತೊಡುಗೆ, ಆಹಾರ ಪದ್ದತಿ ಎಲ್ಲವೂ ವಿಭಿನ್ನ ವಿಶಿಷ್ಟವೇ. ಅದಕ್ಕಾಗಿಯೇ ಕೊಡಗನ್ನ ಪ್ರವಾಸಿಗರು, ನಾನಾ ಹೆಸರುಗಳಿಂದ ವರ್ಣಿಸಿ ವೈಭವೀಕರಿಸುತ್ತಾರೆ. ಇಲ್ಲಿಯ ಪರಂಪರೆಯ ಹಿನ್ನಲೆಯಿಂದ ಕೊಡಗಿನ ನಿವಾಸಿಗಳು ಎನ್ನೋ ಕಾರಣಕ್ಕೆ ತುಸು ಹೆಚ್ಚೇ ಗೌರವವೂ ಲಭಿಸುತ್ತದೆ. ಆ ಕಾರಣಕ್ಕಾಗಿಯೇ ಕೊಡಗಿನ ಪ್ರವಾಸೋದ್ಯಮ ಮತ್ತು ಆಥಿತ್ಯಕ್ಕೆ ಜನ ಮನ ಸೋಲುತ್ತಾರೆ.
ಇಷ್ಟೇ ಆದರೆ ಈ ಬರಹದಲ್ಲಿ ಹುರುಳಿಲ್ಲ. ಇದರಿಂದಾಚೆಗೆ ಇಂದಿನ ಕೊಡಗಿನ ಪ್ರವಾಸೋಧ್ಯಮವನ್ನು ಬಗೆದು ನೋಡುತ್ತಾ ಹೋದರೆ, ಮುಂದಿನ ಭಯಾನಕ ಭವಿಷ್ಯ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಕೊಡಗು ಕೇವಲ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದರೆ, ಅಥವಾ ಇಲ್ಲಿಯ ಮೂಲದಿಂದಲೇ ಉದ್ಭವಿಸಿದ, ಹೋಂಸ್ಠೇ ಪದ್ದತಿಯಂತೆ ಇಲ್ಲಿನ ಪ್ರವಾಸೋದ್ಯಮ ನಡೆಯುತ್ತಿದ್ದರೆ, ವಿಚಾರ ಗಂಭೀರ ಎನಿಸುತ್ತಿರಲಿಲ್ಲವೇನೋ. ಆದರೆ ಇಂದಿನ ಕೊಡಗು ಪ್ರವಾಸೋಧ್ಯಮ ಈ ಎಲ್ಲಾ ಎಲ್ಲೆಗಳನ್ನು ಮೀರಿ ನಿಂತಿದೆ. ಮಲ್ಟಿ ನ್ಯಾಷನಲ್ ಕಂಪನಿಗಳಿಂದ ಹಿಡಿದು, ಬೃಹತ್ ಮತ್ತು ಭಾರೀ ಬಂಡವಾಳಷಾಹಿಗಳ ಹೂಡಿಕೆಯಿಂದ ಕೊಡಗಿನ ಮುಕುಟಮಣಿಯಾದ ಬೆಟ್ಟಗಳನ್ನೇ ಕೊರೆದು, ಬಿರಿದು, ರೆಸಾರ್ಟುಗಳನ್ನ ಕಟ್ಟಲಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಎಗ್ಗಿಲ್ಲದ ಪ್ರವಾಸಿಗರ ಆಗಮನ ಆಗುತ್ತಿದೆ. ಬೆಟ್ಟ ಗುಡ್ಡ, ದಟ್ಟ ಕಾಡಿನ ನಡುವೆ ಇಲ್ಲಿ ಏನೇನು ನಡೆಯುತ್ತದೆ ಅರಿಯದಾಗಿದೆ. ಯಾರು ಬಂದರು, ಎಷ್ಟು ಜನ ಬಂದರು, ಯಾವಾಗ ಬಂದು, ಯಾವಾತ್ತು ಹೋದರು, ಎನ್ನುವ ಸ್ಪಷ್ಟ ಲೆಕ್ಕವಿಲ್ಲದಾಗಿದೆ. ಬೃಹತ್ ರೆಸಾರ್ಟುಗಳ ನಡುವೆ ನಾಯಿಕೊಡೆಗಳಂತೆ ತಲೆ ಎತ್ತಿರುವ ಹೋಂಸ್ಟೇಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇವುಗಳಲ್ಲಿ ಸರ್ಕಾರಿ ನಿಯಮದಂತೆ ನೋಂದಾಯಿಸಿಕೊಂಡವರು ಒಂದಷ್ಟಾದರೆ, ನೋಂದಣಿಯೂ ಇಲ್ಲ, ದಾಖಲೆಯೂ ಇಲ್ಲದಂತೆ ನಡೆಯುತ್ತಿರುವ ಹೋಂಸ್ಟೇಗಳ ಸಂಖ್ಯೆ ತರ್ಕಕ್ಕೇ ನಿಲುಕುತಿಲ್ಲ.
ಕೊಡಗು ಮತ್ತದರ ಗತವೈಭವದ ಪರಂಪರೆಯನ್ನ ತಿಳಿಯದೆ, ಇಲ್ಲಿನ ದಾರ್ಮಿಕ ಮತ್ತು ಪ್ರಾಕೃತಿಕ ಹಿನ್ನಲೆ ಮುನ್ನಲೆಗಳನ್ನ ಅರಿಯದೆ, ಕೇವಲ ಮೋಜು, ಮಸ್ತಿಗಾಗಿ ಬರುವ ಪ್ರವಾಸಿಗರು, ಕೊಡಗಿನ ಉದರಕ್ಕೇ ನೇರಾವಾಗಿ ಕೈ ಹಾಕಿ ಬಗೆದು ತಿನ್ನುತಿದ್ದಾರೆ. ಪ್ರಾಕೃತಿಕ ತಾಣಗಳು, ದೇವಾಲಯಗಳು, ಪವಿತ್ರ ಕ್ಷೇತ್ರಗಳು ಎಂಬುದನ್ನೂ ಮರೆತು ತಮ್ಮ ಕ್ರೌರ್ಯವನ್ನ ಮೆರಯುತಿದ್ದಾರೆ. ಸ್ಥಳೀಯ ಪರಿಸರ ಹಾನಿಯ ಜೊತೆಗೆ, ಸ್ಥಳೀಯ ಮೂಲ ನಿವಾಸಿಗಳ ಮೇಲೆ ಹಲ್ಲೆಯೂ ಇಂದಿನ ದಿನಗಳಲ್ಲಿ ಮಾಮೂಲಿಯಾಗಿ ಹೋಗಿದೆ. ಇತ್ತ ಸ್ಥಳೀಯರ ಪರಿಸ್ಥಿತಿ, ತಮ್ಮ ಮೇಲೆ ಹಲ್ಲೆ ಮಾಡಲು ಬಂದ ಅಪರಿಚಿತರ ಮೇಲೆ ತಿರುಗಿ ದಾಳಿ ಮಾಡಿದರೆ ಪೋಲೀಸ್ ಕೋರ್ಟು ಎಂದು ಅಲೆದಾಡಿ ಸಾಯಾಬೇಕಾ, ಇಲ್ಲ ಹೊಡೆದರೆ ಒಂದೇಟು ಹೊಡೆದು ಹೋಗಲೀ ಎಂದು ಬಿಟ್ಟುಬಿಡಬೇಕಾ ಎಂಬ ಗೊಂದಲದಲ್ಲಿದ್ದರೆ. ಅತ್ತ ಹಲ್ಲೆಕೋರ ಪ್ರವಾಸಿಗರು ಸಾಹಸ ಮೆರೆದವರಂತೆ ಹಿಂತಿರುಗಿ ಹೋಗಿ, ರೀಲ್ಸೂ ಪೋಷ್ಟು ಅಂತ ಮತ್ತೆ ಮಜಾ ಮಾಡುತ್ತಿರುತ್ತಾರೆ.
ಮತ್ತೊಂದೆಡೆ ಕೆಲ ಸ್ಥಳೀಯ ಪುಂಡರೂ ಪ್ರವಾಸಿಗರ ಮೇಲೆ ಅಟ್ಟಹಾಸಗಯುತ್ತಾ, ದೌರ್ಜನ್ಯ ಮಾಡುವುದನ್ನೂ ಅಲ್ಲಗಳೆಯುವಂತಿಲ್ಲ ನಿಜ. ಆದರೆ ಇಲ್ಲಿ ಬರಿದಾಗಿ ಬಡವಾಗುತ್ತಿರುವುದು ಮಾತ್ರ ಈ ಪುಣ್ಯ ಕೊಡಗು. ಪ್ರಕೃತಿ ಸೌಂದರ್ಯವನ್ನೇ ತನ್ನ ಅಡಿಯಿಂದ ಮುಡಿಯವರೆಗೂ ಹೊದ್ದು. ಮೆದ್ದು, ಎದ್ದು ಬೀಗಿದ ಕೊಡಗು, ಇಂದು ಬರಡಾಗಿ ಬರಿದಾಗಿ, ಇನ್ನೇನು ಅಳಿದೇ ಹೋಗುತ್ತಿದೆ ಎನ್ನುವ ಪರಿಸ್ಥಿಗೆ ಬಂದು ಬಿಟ್ಟಿದೆ. ಇದಕೆಲ್ಲ ಕಾರಣ ಯಾರು ಎನ್ನುವುದೇ ಯಕ್ಷ ಪ್ರಶ್ನೆ.
ಪ್ರವಾಸೋದ್ಯಮದಿಂದ ಕೊಡಗಿನಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿದೆ ನಿಜ. ಕೆಲವೊಂದಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿರುವುದೂ ನಿಜ. ಆರ್ಥಿಕ ಚಟುವಟಿಕೆ ನಡೆಯುತ್ತಿರುವುದೂ ನಿಜ. ಆದರೆ ಅದರಿಂದಾಚೆಗೆ, ನಮ್ಮ ಹೆಮ್ಮೆಯ ಪ್ರೀತಿಯ ಕೊಡಗು ಅವೈಜ್ಞಾನಿಕ, ಮುಂದಾಲೋಚನೆ ಇಲ್ಲದ, ದುರಾಲೋಚನೆಯ, ಧನದಾಹಿ ವರ್ತನೆಯಿಂದ ಬರಿದು ಬೆಂಡಾಗಿದೆಯಲ್ಲ ಅದಕ್ಕೆ ಏನು ಮಾಡೋಣ..?
ಕಾರಣಗಳನ್ನ, ಸಾಧಕ, ಬಾದಕಗಳನ್ನು ನೋಡುತ್ತಾ ಹೋದರೆ, ಬರೆದಷ್ಟೂ ಮುಗಿಯದು. ಹಾಗಂತ ಇಡೀ ಕೊಡಗಿನಲ್ಲಿ ಪ್ರವಾಸೋಧ್ಯಮವನ್ನ ಒಮ್ಮೆಲೆ ನಿಲ್ಲಿಸಬೇಕಾ ಎಂದರೆ, ಅದಕ್ಕಿಂತ ಮುಟ್ಟಾಳತನ ಬೇರೊಂದಿಲ್ಲ. ಮತ್ತು ಆ ಪರಿಕಲ್ಪನೆ ಇಂದಿನ ಪರಿಸ್ಥಿತಿಯಲ್ಲಿ ಬಿಸಿಲ್‌ಗುದುರೆಯ ಸವಾರಿ ಆಗಿರುವುದೂ ಸುಳ್ಳಲ್ಲ.
ಆದರೆ ಸರ್ಕಾರ ಮತ್ತು ಪ್ರವಾಸೋಧ್ಯಮಿಗಳು ಮನಸ್ಸು ಮಾಡಿದರೆ ಖಂಡಿತಾ ಒಂದಿಷ್ಟು ಬದಲಾವಣೆಗಳನ್ನು, ಮತ್ತು ಪರಿಸರ ಸ್ನೇಹಿ ಪ್ರವಾಸೋಧ್ಮವನ್ನ ನಡೆಸಬಹುದು. ಇದರಿಂದ ಪರಿಸರದ ಜೊತೆಗೆ ಉದ್ಯೋಗ ಮತ್ತು ಉದ್ಯಮ ಎರಡನ್ನೂ ಅವ್ಯಾಹತವಾಗಿ, ಆಹ್ಲಾದಕರವಾಗಿ ನಡೆಸಬಹುದು.
ಜಿಲ್ಲೆಗೆ ಒಂದು ವಾರದಲ್ಲಿ ಎಷ್ಟು ಜನ ಬರಬಹುದು, ಮತ್ತು ಬರಬೇಕು ಎಂಬುದನ್ನ ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ನಿರ್ಧರಿಸಬೇಕು. ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಡಬೇಕು. ಕೊಡಗಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ವಸತಿ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವಾಗ ಜಿಲ್ಲಾಡಳಿತದ ಪಾಸ್ ಪಡೆಯುವುದನ್ನ ಕಡ್ಡಾಯ ಮಾಡಬೇಕು. ಪ್ರತೀ ಪ್ರವಾಸಿ ವೀಕ್ಷಣಾ ತಾಣಗಳಲ್ಲಿ ಕಡ್ಡಾಯ ಭದ್ರತಾ ಸಿಬ್ಬಂದಿಗಳನ್ನ ನಿಯೋಜನೆ ಮಾಡಬೇಕು. ಕನಿಷ್ಟ ಪ್ರತೀ 200 ಮೀಟರ್ ದೂರಕ್ಕೊಂದರಂತೆ ಸಿ.ಸಿ. ಕ್ಯಾಮರಾಗಳ ಅಳವಡಿಕೆಯಾಗಬೇಕು, ರಸ್ತೆ ಮತ್ತು ಪರಿಸರದ ನಡುವೆ ಕಸ ಹಾಕುವವರು, ಅನೈತಿಕ ಕಾರ್ಯ ಮಾಡುವವರು. ಮೋಜು ಮಸ್ಥಿ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟು, ಎಐ ಟೆಕ್ನಾಲಜಿಯ ಮೂಲಕ ಪ್ರತಿಯೊಂದನ್ನೂ ನಿರ್ವಹಿಸಬೇಕು. ಕೊಡಗಿನೊಳಗೆ ಬಂದ ಪ್ರವಾಸಿಗರು ಜಿಲ್ಲೆಯಿಂದ ಹೊರ ಹೋಗುವರೆಗೂ ಎ.ಐ ಮಾದರಿಯ ಕಣ್ಗಾವಲು ಇರಬೇಕು.
ಪ್ರವಾಸೋದ್ಯಮ ನಡೆಸುವವರು ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕು, ತಮ್ಮಲ್ಲಿ ಆತಿಥ್ಯಕ್ಕೆ ಬರುವ ಪ್ರತಿಯೊಬ್ಬರ ವಿವರವನ್ನು ಅಥಿತಿಗಳ ಎದುರೇ ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತಕ್ಕೆ ತಂತ್ರಜ್ಞಾನದ ಮೂಲಕ ರವಾನಿಸಬೇಕು. ಪ್ರವಾಸೋದ್ಯಮ ಕಡ್ಡಾಯವಾಗಿ ಇಲ್ಲಿನ ಪರಿಸರ ಮತ್ತು ಪ್ರಕೃತಿಗೆ ಪೂರಕಕವಾಗಿ ಮಾತ್ರ ನಡೆಯುಂತ ಕಡ್ಡಾಯ ನೀತಿಯನ್ನ ರೂಪಿಸಬೇಕು. ಹೀಗೆ ಮತ್ತೊಂದಿಷ್ಟು ಕ್ರಮಗಳನ್ನ ಅಳವಡಿಸಿಕೊಂಡರೆ, ಈ ಕೊಡಗು ಕೊಡಗಾಗಿಯೇ ಉಳಿಯಬಹುದು, ಬಹುಕಾಲದ ವರೆಗೂ ಒಂದಷ್ಟು ಜನಕ್ಕೆ ಬದುಕಿಗೆ ದಾರಿಯಾಗಬಹುದು. ಮತ್ತೊಂದಷ್ಟು ಜನಕ್ಕೆ ತಮ್ಮ ಆಸ್ವಾದಿಸುವ ಆನಂದಮಯ ತಾಣವೂ ಆಗಿ ಉಳಿಯಬಹುದು. ಈ ನಿಟ್ಟಿನಲ್ಲಿ ಸಂಭಂದಿಸಿದವರು ಚಿಂತಿಸಿದರೆ ಇಂದಿನ ವಿಶ್ವ ಪ್ರವಾಸೋದ್ಯಮ ದಿನಕ್ಕೊಂದು ಅರ್ಥ ಬರಬಹುದು. ಉಸಿರುಗಟ್ಟಿರುವ ಕೊಡಗಿನ ಪ್ರವಾಸೋದ್ಯಮ ಚೇತರಿಸಿ ಕಿರುನಗೆ ಬೀರಬಹುದು.