
ಚೆಂಬೆಬೆಳ್ಳೂರ್, ಜು.30; (nadubadenews): ವಿರಾಜಪೇಟೆ ವಲಯದ ಚೆಂಬೆಬೆಳ್ಳೂರ್ ಸುತ್ತ ಮುತ್ತ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಯೊಂದು, ದಿನ ನಿತ್ಯ ದಾಂದಲೆ ನಡೆಸುತಿದ್ದು, ಇತ್ತೀಚೆಗೆ ಬೆಳೆಗಾರ ಮಂಡೆಪಂಡ ರಿಶು ಕಾರ್ಯಪ್ಪ ಅವರ ಕಾಫಿ ತೋಟಕ್ಕೆ ನುಗ್ಗಿ ಸುಮಾರು 70ಕ್ಕೂ ಹೆಚ್ಚು ಫಸಲಿಗೆ ತಯಾರಾಗಿದ್ದ ಬಾಳೆಕಂದುಗಳನ್ನು ನಾಶಮಾಡಿದ್ದು, ಕಾಫಿ ಗಿಡಗಳೂ ಹಾನಿಗೊಳಗಾಗಿವೆ.
ಕಳೆದ ಹಲವು ತಿಂಗಳಿನಿಂದಲೇ ಒಂಟಿ ಕಾಡಾನೆಯು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಇಲ್ಲಿಂದ ಓಡಿಸಿದರೆ. ಒಂಟಿಯಂಗಡಿ ಅಮ್ಮತ್ತಿ ಭಾಗಕ್ಕೆ ತೆರಳುತ್ತದೆ ಅಲ್ಲಿಂದ ಓಡಿಸಿದರೆ ಮತ್ತೆ ಇಲ್ಲಿಗೆ ಬರುತ್ತದೆ. ಅತ್ತಿಂದಿತ್ತ ಓಡಿಸುವುದಲ್ಲದೆ ಶಾಸ್ವತವಾಗಿ ಅರಣ್ಯಕ್ಕೆ ಓಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಿಶುಕಾರ್ಯಪ್ಪ ಅವರು, ಅರಣ್ಯ ಇಲಾಖೆ ಕೂಡಲೆ ರೈತರಿಗೆ ಸೂಕ್ತ ಪರಿಹಾರ ನೀಡುವುದಲ್ಲದೆ, ಆನೆಯನ್ನು ತಕ್ಷಣ ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಸರ್ಕಾರವೇ ಹೊಣೆಯಾಗಬೇಕೆಂದು ಎಚ್ಚರಿದ್ದಾರೆ.