ಪೊನ್ನಂಪೇಟೆ, ಏ.22: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದ, ತೆರಾಲು ಭಾಗದಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯು ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಮಾನ್ಯ ಶಾಸಕರು, ಸೆರೆ ಕಾರ್ಯಚರಣೆಯ ನೇತೃತ್ವ ವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಶೀಘ್ರದಲ್ಲಿ ಈ ಕಾರ್ಯಾಚರಣೆಗೆ ಅಂತ್ಯ ಹಾಡಬೇಕು ಎಂದು , ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ವನ್ಯಜೀವಿ-ಮಾನವ ಸಂಘರ್ಷ ಶಾಶ್ವತವಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರವಾಗಿ ಕಾರ್ಯಸೂಚಿಗಳನ್ನು ರೂಪಿಸುತ್ತಿರುವ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇಂದು ಅರಣ್ಯ ಇಲಾಖೆ ವತಿಯಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾದ ಶ್ರೀ ಪ್ರಶಾಂತ್, ಬಿರುನಾಣಿ ವಲಯ ಅಧ್ಯಕ್ಷರಾದ ಪ್ರೀತಮ್, ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಉಪಸಿತರಿದ್ದರು.