
ಮಡಿಕೇರಿ, ಜು.31;(nadubadenews): ಕೊಡಗಿನ ಆಡಳಿತ ಸೌಧ, ಜಿಲ್ಲಾಡಳಿತಭವನದ ರಕ್ಷಣೆಗಾಗಿ ನಿರ್ಮಿಸಿದ್ದ, ಬಹುಕೋಟಿ ವೆಚ್ಚದ ತಡೆಗೋಡೆ ಕುಸಿಯುವ ಭೀತಿ ಎದುರಾಗಿದ್ದು, ಕೆಳಭಾಗದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಒಂದು ಕಾಲದಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದ, ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಬಹುದೊಡ್ಡ ಪ್ರಚಾರದ ಸರಕಾಗಿದ್ದ, ಕೊಡಗು ಜಿಲ್ಲಾಡಳಿತ ಭವನದ ಎದುರಿನ ಮಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ, ಜರ್ಮನ್ ಟೆಕ್ನಾಲಜಿಯಡಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ, ತಡೆಗೋಡೆಯು ಕುಸಿಯುವ ಭೀತಿ ಎದುರಾಗಿದ್ದು, ನಿರ್ಮಾಣವಾದಂದಿನಿಂದ ಇಂದಿನವರೆಗೂ ಕಟ್ಟಡದ ರಕ್ಷಣೆಗೆ ನಿರ್ಮಾಣಗೊಂಡ ತಡೆಗೋಡೆ ತನಗೇ ರಕ್ಷಣೆಯಿಲ್ಲದೆ ಪರಿತಪಿಸುತ್ತಿದೆ.
ಎಂದಿನಂತೆ ಈ ಭಾರಿಯೂ ಕೂಡ ತಡೆಗೋಡೆ ಬಿರುಕು ಬಿಟ್ಟಿದ್ದು, ಮಳೆ ಮತ್ತಷ್ಟು ಅಧಿಕವಾದರೆ ಕುಸಿದು ಬೀಳಬಹುದು ಎಂಬ ಆತಂಕ ಎದುರಾಗಿದೆ. ಮುಳಜಾಗೃತಾ ಕ್ರಮವಾಗಿ ಆ ವ್ಯಾಪ್ತಿಯ ಅಪಾಯದ ಅಂಚಿನಲ್ಲಿದ್ದ ನಿವಾಸಿಗಳನ್ನು ತಾತ್ಕಾಲಿಕ ಸ್ಥಳಾಂತರ ಮಾಡಲಾಗಿದ್ದು, ವಾಹನಗಳು ಎಚ್ಚರಿಕೆಯಿಂದ ಸಂಚರಿಸಲು ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಸೂಚನೆ ನೀಡಿದೆ. ಇಂದು ಜಿಲ್ಲಾಧಿಕಾರಿಗಳೂ ತಡೆಗೋಡೆಯ ಸ್ಥತಿಗತಿಯ ಕುರಿತು ಪರಿಶೀಲಿಸಿ ವಿವರ ಪಡೆದು ಅಗತ್ಯ ಮುಂಜಾಗೃತಾ ಕ್ರಮಕ್ಕೆ ಸೂಚಿಸಿದರು.
ಪ್ರತೀ ಮಳೆಗಾಲದಲ್ಲೂ ಜಿಲ್ಲೆಯ ನಿವಾಸಿಗಳ ಆಗು ಹೋಗು ಕಷ್ಟ ಕಾರ್ಪಣ್ಯಗಳಿಗೆ ಕಿವಿಯಾಗಿ, ಸಹಾಯ ಹಸ್ತ ನೀಡಬೇಕಾದ ಜಿಲ್ಲಾಡಳಿತದ ಬುಡವೇ ಹಲವು ವರ್ಷಗಳಿಂದ ಅಲುಗಾಡುತಿದ್ದರೂ, ಪೂರ್ಣಪ್ರಮಾಣದ ಮರು ನಿರ್ಮಾಣ ಅಥವಾ ಬದಲಿ ವ್ಯವಸ್ಥೆ ಮಾಡದ ಸರ್ಕಾರದ ಧೋರಣೆ ಪ್ರಶ್ನಾರ್ಹವಾಗಿದೆ.
ಹಿಂದಿನ ಸರ್ಕಾರ, ಶಾಸಕರು, ಸ್ಥಳೀಯ ಪ್ರತಿನಿಧಿಗಳು ಅಧಿಕಾರಿಗಳು ಎಲ್ಲರೂ ಬದಲಾಗಿ, ನೂತನ ಸರ್ಕಾರ, ನೂತನ ಶಾಸಕರು ಬಂದು ಮೂರು ವರ್ಷಗಳ ಹೊಸ್ತಿಲಿನಲ್ಲಿದ್ದರೂ ಯಾಕೆ ಪೂರ್ಣಪ್ರಮಾಣದ ನೂತನ ಕಾಮಗಾರಿ ಆಗಲಿಲ್ಲ, ಅಥವಾ ಹಿಂದಿನ ತಣಿಖೆಯಾಗಿ ಫಲಿತಾಂಶ ಯಾಕೆ ಬರಲಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಇದಕೆಲ್ಲ ಉತ್ತರ ತಡೆಗೋಡೆ ಕುಸಿದು ಬಿದ್ದು, ಮತ್ತೊಂದಷ್ಟು ಅನಾಹುತ ಆದಾಗಲೇ ದೊರುಕುವುದು ಎಂಬಂತೆ ಸಂಬಂಧಿಸಿದವರು, ಜಡ್ಡುಗಟ್ಟಿ ಕುಳಿತಂತಿದೆ