ನಡುಬಾಡೆನ್ಯೂಸ್: ಸಂಪಾದಕೀಯ: ಸೆ. 28: ಕರ್ನಾಟಕದ ನಾನಾ ಭಾಗಗಳಲ್ಲಿ, ಖಾಸಗಿ ಕಂಪನಿಗಳು, ವ್ಯಕ್ತಿಗಳು, ಬ್ಯಾಂಕುಗಳು, ಸಾರ್ವಜನಿಕ ವಲಯಗಳಲ್ಲಿ ಸಾವಿರಾರು ಜನ, ಶಸ್ತ್ ಸಜ್ಜಿತ ಭದ್ರತಾ ಸಿಬ್ಬಂದಿಗಳಾಗಿ(ಗನ್ ಮ್ಯಾನ್) ದುಡಿಯುತ್ತಿದ್ದಾರೆ. ಇತರರ ಭದ್ರತೆಯ ದೃಷ್ಟಿಯಿಂದ ಹಗಲಿರುಳು, ತಮ್ಮ ಜೀವ ಮತ್ತು ಜೀವನದ ಹಂಗು ತೊರೆದು ದುಡಿಯುತ್ತಿರುವ ಈ ಸಿಬ್ಬಂದಿಗಳಿಗೇ ಇಂದು ಅಭದ್ರತೆಯ ಭೂತ ಕಾಡುತ್ತಿದೆ. ಇದರಿಂದ ನೊಂದಿರುವ ಸಿಬ್ಬಂದಿಗಳು, ತಮ್ಮ ಸೇವಾ ಭದ್ರತೆಯ ಭವಿಷ್ಯಕ್ಕಾಗಿ ಸರ್ಕಾರದ ಕದ ತಟ್ಟಿ ಮೊರೆ ಇಡಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ನೂರಾರು ಸೆಕ್ಯುರಿಟಿ ಏಜೆನ್ಸಿಗಳು, ಸಿಬ್ಬಂದಿ ಮತ್ತು ಮಾಲಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಹಲವು ಏಜೆನ್ಸಿಗಳು ಸಿಬ್ಬಂದಿಗಳನ್ನು ಇನ್ನಿಲ್ಲದಂತೆ ಕಾಡುವ ಆರೋಪ ಕೇಳಿ ಬಂದಿದೆ.
ಸಮಸ್ಯೆಯ ಮೂಲ ಕಾರಣ ಉತ್ತರ ಭಾರತತದ ಸಿಬ್ಬಂದಿಗಳ ನೇಮಕ…
ಹಲವಾರು ಏಜೆನ್ಸಿಗಳು ಕಮೀಷನ್ ಆಸೆಗಾಗಿ, ಉತ್ತರ ಭಾರತದಿಂದ ಬರುವ ಕಾರ್ಮಿಕರನ್ನ, ಯಾವುದೇ ದಾಖಲೆಗಳ ಸಮರ್ಪಕ ಪರಿಶೀಲನೆ ಮಾಡದೆ, ಭದ್ರತಾ ಸಿಬ್ಬಂದಿಯಾಗಿ ನೇಮಿಸುತ್ತಾರೆ. ಇದರಿಂದಾಗಿ ಸ್ಥಳೀಯರು ಉದ್ಯೋಗ ಪಡೆಯುವುದೇ ದುಸ್ತರವಾಗಿದೆ. ಅದರಲ್ಲು ಸರಿಯಾದ ದಾಖಲೆ ಪರಿಶೀಲನೆ ಇಲ್ಲದೇ ಕೆಲಸಕ್ಕೆ ನೇಮಿಸಿಕೊಂಡಾಗ ಏನಾದರೂ ಅನಾಹುತವಾದರೆ ರಾಜ್ಯಕ್ಕೆ ಕೆಟ್ಟ ಹೆಸರು ಎನ್ನುವುದು ಕನ್ನಡಿಗರ ಅಳಲು. ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆ ತಾನೆ ಬಂಧನವಾದ ಉತ್ತರ ಭಾರತದ ಶಂಕಿತ ಉಗ್ರ. ಅಲ್ಲಿ ಉಗ್ರ ಕೃತ್ಯಗಳನ್ನ ನಡೆಸಿ, ಕರ್ನಾಟಕದಲ್ಲಿ ಬಂದು ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇಂತ ಇನ್ನೆಷ್ಟು ಕ್ರಿಮಿನಲ್ ಹಿನ್ನೆಲೆ ಇರುವವರು ರಾಜ್ಯದ ಆಶ್ರಯ ಪಡೆದಿರಬಹುದು. ಇಲ್ಲಿಯೂ ಇವರು ವಿದ್ವಂಸಕ ಕೃತ್ಯ ನಡೆಸಿದರೆ ರಾಜ್ಯದ ಕೀರ್ತಿಯ ಕಥೆ ಏನೂ ಎನ್ನುವುದು ಕರುನಾಡನ್ನ ಪ್ರೀತಿಸುವವರ ಅಳಲು.
ಇನ್ನು ಕಮಿಷನ್ ಆಸೆಗೆ ಬಿದ್ದಿರುವ ಹಲವು ಏಜೆನ್ಸಿಗಳು, ರಾಜ್ಯದ ಸಿಬ್ಬಂದಿಗಳಿಗೆ ನಾನಾ ರೀತಿಯ ಮಾನಸಿಕ ಕಿರುಕುಳ ನೀಡಿ ಅವರು ಕೆಲಸ ತೊರೆಯುವಂತೆ ಮಾಡುತ್ತಾರೆ. ಖಾಸಗಿ ಸಿಬ್ಬಂದಿಗಳಿಗೆ ಲಭ್ಯವಿರುವ ರಜೆ ನೀಡದೇ ಸತಾಯಿಸುತ್ತಾರೆ, ನಿಯಮಿತವಾಗಿ ಓ.ಟಿ.ಯನ್ನೂ ನೀಡುವುದಿಲ್ಲ. ಮಾಲೀಕರು ನೀಡುವ ಒಟ್ಟು ಸಂಬಳದಲ್ಲಿ ಕೆಲವು ಏಜೆನ್ಸಿಗಳು 40%ರಷ್ಟು ಕಮಿಷನ್ ಪಡೆಯುತ್ತಾರೆ. ಜೊತೆಗೆ ಕೆಲ ಮೇಲುಸ್ತುವಾರಿಗಳು, ತಮ್ಮ ಕೈಕೆಳಗಿನ ಸಿಬ್ಬಂದಿಗಳಿಂದ ಲಂಚ ಪಡೆಯುತ್ತಾರೆ. ನೀಡದವರನ್ನ ನಾನಾ ರೀತಿಯ ಮಾನಸಿಕ ಹಿಂಸೆ ನೀಡಿ ಕೆಲಸ ಬಿಡಿಸುತ್ತಾರೆ. ಕೆಲವು ಭಾಗಗಳಲ್ಲಿ ಉದ್ಯೋಗ ಪಡೆಯಬೇಕಾದರೆ, ಹತ್ತರಿಂದ ಹದಿನೈದು ಸಾವಿರದವರೆಗೂ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಹಲವು ಏಜೆನ್ಸಿಗಳು ಸರಿಯಾದ ಈ.ಎಸ್.ಐ. ಈ.ಪಿ.ಎಫ್. ಗಳನ್ನೂ ನೀಡದೆ ಸತಾಯಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ ರಜೆ ತೆಗೆದು ಕೊಂಡರೆ, ರಜೆ ಮುಗಿದು ಬರುವ ವರೆಗೆ ಆ ಜಾಗದಲ್ಲಿ ಬೇರೆ ಅನ್ಯ ರಾಜ್ಯದ ಸಿಬ್ಬಂದಿಯನ್ನು ನೇಮಿಸಿರುತ್ತಾರೆ. ಸ್ವಂತ ಅಪ್ಪ, ಅಮ್ಮ, ಮಕ್ಕಳ ಸಾವಿಗೂ ರಜೆ ನೀಡುತ್ತಿಲ್ಲ ಎಂಬ ನೋವು ಖಾಸಗಿ ಭದ್ರತಾ ಸಿಬ್ಬಂದಿಗಳನ್ನ ಕಾಡುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ, ತಮ್ಮ ಮಕ್ಕಳ ಭವಿಷ್ಯದ ಕನಸನ್ನ ಕಟ್ಟಿಕೊಂಡು, ರಾಜ್ಯದ ನಾನಾ ಮೂಲೆಗಳಿಂದ ಬೆಂಗಳೂರು ಸೇರಿದಂತೆ, ಇತರ ನಗರ ಪಟ್ಟಣಗಳಿಗೆ ಬಂದು, ಬಾಡಿಗೆ ಮನೆಯಲ್ಲಿ ಮನೆಮಂದಿ ಸಂಸಾರವನ್ನ ಇರಿಸಿ, ದುಡಿಯುವ ಆಧಾರಸ್ತಂಭವಾದ ಖಾಸಗಿ ಭದ್ರತಾ ಸಿಬ್ಬಂದಿಗಳ ಭವಿಷ್ಯ ಮುಂದೇನು ಎನ್ನುವ ಆತಂಕ, ಇಂದು ಕಾರ್ಯ ನಿರ್ವಹಿಸಿದ ಕಛೇರಿಯಲ್ಲಿ ನಾಳೆಯೂ ಕೆಲಸ ಇರಬಹುದಾ, ಇಲ್ಲಾ ರಾತ್ರೋ ರಾತ್ರಿ ಬದಲಿಸಿ ಬಿಡುತ್ತಾರ, ಅನ್ನೋ ಆತಂಕದಲ್ಲಿಯೆ ರಾತ್ರಿ ಕಳೆಯಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರದ ಮೊರೆ ಹೋಗಲು ಚಿಂತನೆ ನಡೆಯುತ್ತಿದೆ. ಕರ್ನಾಟಕದಲ್ಲಿ ಭದ್ರತಾ ಸಿಬ್ಬಂದಿಯ ಉದ್ಯೋಗವಾದರೂ ಕನ್ನಡಿಗರಿಗೆ ಆದ್ಯತೆ ಮತ್ತು ಸೀಮಿತವಾಗಬೇಕು. ತಮ್ಮ ಸೇವೆಗೆ ಸರಿಯಾದ ವೇತನ ಮತ್ತು ಸೆವಾ ಭದ್ರತೆ ದೊರೆಯಬೇಕು, ನಿವೃತ್ತಿಯ ನಂತರದ ಬದುಕಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕನಿಷ್ಟ ಇನ್ಶುರೆನ್ಸ್ ರೂಪದಲ್ಲಾದರೂ ಸಿಗಬೇಕು. ಈ.ಎಸ್.ಐ., ಈ.ಪಿ.ಎಫ್. ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು. ಕೆಲ ಏಜೇನ್ಸಿಗಳ ದಬ್ಬಾಳಿಕೆ, ಕಮಿಷನ್ ದಂಧೆಯನ್ನು ತಡೆದು, ವೇತನ ತಾರತಮ್ಯ ನಿಲ್ಲಿಸಬೇಕು. ಹೊರರಾಜ್ಯದ ಎಲ್ಲಾ ಭದ್ರತಾ ನೌಕರರ, ಆಯುಧ ಗುಣಮಟ್ಟ ಮತ್ತು ದಾಖಲಾತಿಯನ್ನು ಹಿರಿಯ ಪೋಲೀಸ್ ಅಧಿಕಾರಗಳ ನೇತೃತ್ವದಲ್ಲಿ ಪರಿಶೀಲಿಸಬೇಕು. ಯಾವುದೇ ಹೊರರಾಜ್ಯದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸುವ ಮೊದಲು ಪೋಲೀಸ್ ಪರಿಶೀಲನೆ ಕಡ್ಡಾಯ ಮಾಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳ ನೆಮ್ಮದಿಯ ನಾಳೆಗಳಿಗಾಗಿ, ಭದ್ರತೆಯನ್ನು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು, ಕರ್ನಾಟಕ ಮೂಲ್ ಖಾಸಗಿ ಭದ್ರತಾ ಸಿಬ್ಬಂಧಿಗಳು ನಿರ್ಧರಿಸಿದ್ದಾರಂತೆ. ಇವರ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿ, ಎಂಬುದು ನಮ್ಮದೂ ಹಾರೈಕೆ….