ಒಂದು ಕಾಲದಲ್ಲಿ ಕೊಡಗು ತನ್ನದೇ ಕಾರ್ಯ ವ್ಯಾಪ್ತಿಯನ್ನ ಹೊಂದಿದ್ದ ವಿಶಾಲ ಕ್ರೋಢ ದೇಶ, ಅಂದಿನಿಂದ ಇಂದಿನವರೆಗೂ ಜನಸಂಖ್ಯೆಯಲ್ಲಿ, ಬೌಗೋಳಿಕ ದಾಖಲೆಗಳಲ್ಲಿ ಏರಿಳಿತವನ್ನು ಕಂಡರೂ, ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯನ್ನು ಕಳೆದುಕೊಳ್ಳಲೇ ಇಲ್ಲ. ಇಂದಿಗೂ ಕೂಡ ಇಡೀ ವಿಶ್ವದ ಇತರ ಎಲ್ಲಾ ಪ್ರದೇಶ ಮತ್ತು ಸಂಸ್ಕೃತಿಯನ್ನು ಒಟ್ಟು ಗೂಡಿಸಿದರೆ ಕೊಡವ ಸಂಸ್ಕೃತಿ ಮೇರಿನಲ್ಲಿ ಎದ್ದು ನಿಲ್ಲಬಲ್ಲದು. ಈ ಸಂಸ್ಕೃತಿಯನ್ನ ಕಾಪಾಡಿ ಬೆಳೆಸಲು ನಾನಾ ಪಂಗಡ, ಪರಿಸರ, ಜನಾಂಗಗಳ ಕೊಡುಗೆಯೂ ಅಪಾರವಾದದ್ದು.
ಹೀಗೆ ಕೊಡವ ಸಂಸ್ಕೃತಿಯ ಆಚರಣೆಯಲ್ಲಿ ತನ್ನನ್ನ ತೊಡಗಿಸಿಕೊಂಡು ಕೊಡವ ಪದ್ದತಿ ಪರಂಪರೆಯನ್ನು ಮೈಗೂಡಿಸಿಕೊಂಡು ಬಂದ ಜನಾಂಗಗಳಲ್ಲಿ, ಕೊಡುಂಬಾಲೆ ಜನಾಂಗವು ಒಂದು ಕಾಲದಲ್ಲಿ ಕೊಡಗಿನಲ್ಲಿ ಕೊಡವರ ನಂತರ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಜನಾಂಗ. ಈ ಜನಾಂಗ, ನಂತರದ ಕಾಲಘಟ್ಟದಲ್ಲಿ ಪಾಲೇರಿ ರಾಜವಂಶದ ಆಡಳಿತದಲ್ಲಿ, ಅರಮನೆ ಚಾಕ್ರಿ ಮಾಡಿದಕ್ಕಾಗಿ, ಇವರನ್ನ ಅರಮನೆ ಪಾಲೆ ಎಂದು ಕರೆಯಲಾಯಿತು. ಅದೇ ಕಾಲಘಟ್ಟದಲ್ಲಿ, ಪಾಲೇರಿ ರಾಜಾಡಳಿತದಲ್ಲಿಯೇ ಇವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಯಿತು. ಇಂದಿಗೂ ಕೂಡ ಈ ಜನಾಂಗ ತನ್ನ ಮೂಲ ಹೆಸರನ್ನ ಮರೆತು ಅರಮನೆ ಪಾಲೆ ಎಂದೇ ಎಲ್ಲೆಡೆ, ದಾಖಲಾತಿಯಲ್ಲಿಯೂ ಗುರುತಿಸಿಕೊಂಡಿದೆ (ಈ ಜನಾಂಗದ ಮೂಲ ಮತ್ತು ಜನಾಂಗೀಯ ಇತಿಹಾಸವನ್ನು ಮುಂದೆ ಬೇರೊಂದು ಅಂಕಣದಲ್ಲಿ ಚರ್ಚೆಮಾಡೋಣ).
ಇಂದು ಈ ಕೊಡುಂಬಾಲೆ ಯಾನೆ ಅರಮನೆ ಪಾಲೆ ಜನಾಂಗದ ಒಟ್ಟು ಜನ ಸಂಖ್ಯೆ ಕೇವಲ 1600+ ಮಾತ್ರ. ಇನ್ನೇನು ಕೆಲವೇ ವರ್ಷಗಳಲ್ಲಿ ಅಳಿದು ಹೋಗಲಿದೆ ಎನ್ನುವಷ್ಟು ಕ್ಷೀಣಿಸಿರುವ ಈ ಜನಾಂಗದ ಎಳೆ ಪ್ರತಿಭೆಯೊಂದು, ಯಾವುದೇ ಪೂರ್ವಾಪರ ಹಿನ್ನಲೆ ಇಲ್ಲದೆ, ಪ್ರಭಾವಿಗಳ ಬೆಂಬಲವಿಲ್ಲದೆ ಕೇವಲ ತನ್ನ ಸ್ವ-ಸಾಮರ್ಥ್ಯದಿಂದ, ಇಂದು ತನ್ನ ಜನಾಂಗದ ಜೊತೆಗೆ, ಕೊಡಗಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಲು ಏರಿ ನಿಂತಿದೆ.
ಈ ಪ್ರತಿಭೆಯ ಸಾಧನೆಯ ಹಾದಿಯಲ್ಲಿ ಕಂಡು ಪುಟಿದೆದ್ದು ನಿಂತದ್ದು ಮಾತ್ರ, ಕ್ರೀಡಾಪಟುವಾಗಿ, ನಂತರ ಸೇನೆಗೆ ಆಯ್ಕೆಯಾದರೂ ಹೋಗಲು ಹಣವಿಲ್ಲದೆ ತನ್ನ ಕನಸ್ಸನ್ನ ಕೈಚೆಲ್ಲಿ ಕುಳಿತ ತನ್ನ ಅಪ್ಪನ ಎದೆಯೊಳಗಿನ ಕೊರಗು, ಅಪ್ಪನ ಸಾಧನೆಗೆ ಬೆಳಕಾಗಲೆಂದು ಹುಟ್ಟಿ ಬೆಳೆಯುತ್ತಿದ್ದ ಪುಟ್ಟ ತಮ್ಮ, ತನ್ನ ಕಣ್ಣೆದುರೇ ಸಾವನ್ನಪ್ಪಿದ್ದು.
ಇಷ್ಟೆಲ್ಲ ನೋವು, ಹತಾಶೆಗಳೊಂದಿಗೆ, ಮಡುಗಟ್ಟಿದ ಛಲದಲ್ಲಿ ಎದ್ದು, ಅರಳಿ ನಿಂತ ಈ ಸಾಧನೆಯ ಕುಡಿ, ಕೊಡಗಿನ ಮಡಿಕೇರಿ ತಾಲೂಕು, ಕುಂಜಿಲ ಕಕ್ಕಬ್ಬೆಯ ಪಾಲೆರ ದೇವಯ್ಯ ಮತ್ತು ಚಿತ್ರ ದಂಪತಿಯ ಉಳಿದಿರುವ ಏಕೈಕ ಪುತ್ರಿ, ಪಾಲೆರ ಶ್ರಾವ್ಯ ದೇವಯ್ಯ.
ಶ್ರಾವ್ಯ ಹುಟ್ಟಿದ್ದು 10/03/2006 ರಲ್ಲಿ. ಈಕೆಯ ಬಾಲ್ಯ ಎಲ್ಲರಂತೆ ಆಟ ಪಾಠಗಳಲ್ಲಿ ಮಾತ್ರ ಸೀಮಿತವಾಗಿರದೆ, ಅಪ್ಪನ ಕನಸು ಮತ್ತು ತಮ್ಮನ ಅಗಲಿಕೆಯ ನೋವನ್ನ ದೂರಾಗಿಸುವ ಜವಾಬ್ದಾರಿಯನ್ನು ಹೊತ್ತು ಕೊಂಡಳು.
ಶ್ರಾವ್ಯಾಳ ತಂದೆ ಪಾಲೆರ ದೇವಯ್ಯ, ರಾಜ್ಯ ಮಟ್ದದಲ್ಲಿ ಆಡಿದ ಹಾಕಿ ಆಟಗಾರ, ಜೊತೆಗೆ ನಾನಾ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪ್ರತಿಭೆ. ಮುಂದೆ ಭಾರತೀಯ ಸೇನೆಗೂ ಆಯ್ಕೆ ಆಗುತ್ತಾರೆ. ಆದರೆ ಮನೆಯ ಕಡು ಬಡತನದ ಪರಿಸ್ಥಿತಿ ಸೇನಾ ಸೇವೆಯ ಜೊತೆಗೆ, ತನ್ನ ಹೆಮ್ಮೆಯ ಹಾಕಿ ಆಟದ ಕನಸ್ಸನ್ನು ಕಿತ್ತುಕೊಳ್ಳುತ್ತದೆ. ಮುಂದೆ ಮದುವೆ, ಮಕ್ಕಳು ಆದ ಮೇಲೆ, ಮಕ್ಕಳಲ್ಲಿ ತನ್ನ ಕನಸನ್ನ ನನಸು ಮಾಡುವ ಹುಮ್ಮಸ್ಸಿನಲ್ಲಿ ದುಡಿಮೆಗೆ ಇಳಿಯುತ್ತಾರೆ.
ದೇವಯ್ಯ, ಚಿತ್ರ ದಂಪತಿಯ ಇಬ್ಬರು ಮಕ್ಕಳು ಶ್ರಾವ್ಯ ಮತ್ತವಳ ತಮ್ಮ ಶ್ರೇಯಸ್ಸ್. ಅಪ್ಪ ದೇವಯ್ಯರಿಗೆ ತನ್ನ ಮಗ ತನ್ನ ಕ್ರೀಡೆ ಮತ್ತು ಸೇನಾ ಕನಸನ್ನ ಈಡೇರಿಸಲೆಂದೇ ಹುಟ್ಟಿದವ, ಎಂಬ ಹಿರಿಮೆಯಿಂದ ಅಂದಿನಿಂದಲೇ ಕನಸ್ನನ್ನ ಕಟ್ಟಲು ಪ್ರಾರಂಭಿಸುತ್ತಾರೆ. ಆದರೆ ವಿಧಿಯಾಟವೇ ಬೇರೆ ಇತ್ತು. ಶ್ರಾವ್ಯ ಮತ್ತವಳ ತಮ್ಮ ಶಾಲೆಯಿಂದ ಬರುತಿದ್ದ ಬಸ್ಸಿನ ಚಾಲಕ ಅಂದು ಪಾನಪತ್ತನಾಗಿ ಮಾಡಿದ ನಿರ್ಲಕ್ಷ್ಯದಿಂದ, ಶ್ರಾವ್ಯಾಳ ತಮ್ಮ ಶ್ರೇಯಸ್ಸ್, ಕಕ್ಕಬ್ಬೆಯಲ್ಲಿ ತನ್ನದೇ ಶಾಲಾ ಬಸ್ಸಿನ ಚಕ್ರದಡಿ ಸಿಲುಕಿ ಜೀವ ಚೆಲ್ಲುತ್ತಾನೆ. ತಮ್ಮನ ಸಾವನ್ನ ಕಣ್ಣೆದುರಿಗೆ ಕಂಡ ಶ್ರಾವ್ಯ, ಮುಂದೆ ಅಪ್ಪನ ಕನಸ್ಸಿಗೆ ಹೆಗಲಾಗುತ್ತಾಳೆ. ಎಡೆಬಿಡದ ಪ್ರಯತ್ನದ ಫಲವಾಗಿ ಇಂದು ರಾಷ್ಟ್ರೀಯ ಜೂನಿಯರ್ ತಂಡದ ಗೋಲ್ ಕೀಪರ್ ಆಗಿ, ಇನ್ನೇನು ಭಾರತ ವನಿತೆಯರ ತಂಡಕ್ಕೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾಳೆ.
ಹಾಕಿ ಮಾತ್ರವಲ್ಲದೆ ಇತರ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲೂ ಎತ್ತಿದ ಕೈ, ಈ ಶ್ರಾವ್ಯಾಳ ಪ್ರಾಥಮಿಕ ಶಿಕ್ಷಣ, ಕಕ್ಕಬ್ಬೆಯ ಕೇಂದ್ರೀಯ ವಿದ್ಯಾ ಸಂಸ್ಥೆಯಲ್ಲಿ ಪ್ರಾರಂಭವಾಗುತ್ತದೆ. ಎರಡನೇ ತರಗತಿಯಲ್ಲಿರುವಾಗಲೇ ಚಿಂತನ ಇಂಟರ್ನ್ಯಾಷನಲ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆಯುವಲ್ಲಿಂದ ಪ್ರಾರಂಭವಾದ ಈಕೆಯ ಪದಕ ಬೇಟೆ, ಮೂರನೇ ತರಗತಿಯಿಂದ ಸೆನ್ಸೆಯಿಚಂದ್ರನ್ ಅವರ ಶಿಷ್ಯೆಯಾಗಿ ಕರಾಟೆಗೆ ಪಾದಾರ್ಪಣೆ ಮಾಡಿ, ಕರಾಟೆಯಲ್ಲಿ, ಜಿಲ್ಲೆ ಮತ್ತು ರಾಜ್ಯ ಮಟ್ಟದ ಟೂರ್ನಮೆಂಟ್ನ್ಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ, ರಾಷ್ಟ್ರ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದು, 2018ರಲ್ಲಿ ಕರಾಟೆ ಬ್ಲಾಕ್ ಬೆಲ್ಟ್ನ ಸಾಧನೆ ಮಾಡುತ್ತಾಳೆ. ಉದಿಯಂಡ ಲಲಿತ ಮತ್ತು ಅಂಜಪರವಂಡ ಪ್ರವೀಣ ಅವರ ಮಾರ್ಗದರ್ಶನದಲ್ಲಿ, ಇಂಡಿಯನ್ ಸ್ಕೌಟ್ ಗೈಡ್, ಮತ್ತು ವಿಧೂಷಿ ರೋಜಾ ಅವರ ಗರಡಿಯಲ್ಲಿ, ಭರತನಾಟ್ಯದಲ್ಲಿಯೂ ತೊಡಗಿಸಿಕೊಂಡ ಶ್ರಾವ್ಯ, ಶಾಲಾ ತಂಡದ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು, ಅನೇಕ ಪ್ರಶಸ್ತಿಗಳೊಂದಿಗೆ ಬೆಸ್ಟ್ ಸ್ಪೋರ್ಟ್ಸ್ ವುಮನ್ ಪ್ರಶಸ್ತಿಯನ್ನು ಪಡೆಯುತ್ತಾಳೆ. ಕಕ್ಕಬ್ಬೆಯ ಕೇಂದ್ರೀಯ ವಿದ್ಯಾಸಂಸ್ಥೆ ಈಕೆಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂಪೂರ್ಣ ಉಚಿತವಾಗಿ ನೀಡಿದ್ದು ಈಕೆಯ ಸಾಧನೆಗೆ ಪೂರಕವಾಗಿದೆ.
2019ರಲ್ಲಿ ಕೂಡಿಗೆ ಕ್ರೀಡಾ ಶಾಲೆಗೆ ಆಯ್ಕೆಯಾಗುವ ಈಕೆ, ಕ್ರೀಡಾ ಶಾಲೆಯ ಬಾಲಕಿಯರ ತಂಡದ ಗೋಲ್ ಕೀಪರ್ ಆಗಿ ಆಯ್ಕೆಯಾಗಿ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ, 2020/21ರಲ್ಲಿ ಬೆಂಗಳೂರಿನಲ್ಲಿ ನಡೆದ ಮಿನಿ ಒಲಂಪಿಕ್ ಹಾಕಿ ಟೂರ್ನಮೆಂಟ್ನಲ್ಲೂ ಭಾಗವಹಿಸುತ್ತಾಳೆ. 2020ರ ಸೌತ್ಝೋನ್ ಕರ್ನಾಟಕ ತಂಡದ ಗೋಲ್ ಕೀಪರ್ ಆಗಿ ಆಯ್ಕೆಯಾಗಿದಲ್ಲದೆ, ಆಲ್ ಇಂಡಿಯಾ ಇಂಟರ್ಝೋನ್ ಟೂರ್ನಮೆಂಟಿನಲ್ಲಿ ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಾಳೆ. 2021ರಲ್ಲಿ ಕ್ಕಕ್ಕಬ್ಬೆಯಲ್ಲಿ ನಡೆದ, ಅಂತರ ಗ್ರಾಮ ಪುರುಷರ ಹಾಕಿ ತಂಡದಲ್ಲಿ ಗೋಲ್ ಕೀಪರ್ ಆಗಿ, ಮುಳಿಯ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ ಪಡೆಯುತ್ತಾಳೆ. 2021ರಲ್ಲಿ ಬಾದಾಮಿಯಲ್ಲಿ ನಡೆದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಾಹಸ ಕ್ರೀಡೆಯಲ್ಲಿ ಕೊಡಗು ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದಾಳೆ. 2021ರಲ್ಲಿ ಮಣಿಪುರದಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ತಂಡದ ಭಾಗವಾಗಿದ್ದು, 2021ರಲ್ಲಿ ಕೇಂದ್ರ ಸರ್ಕಾರದ ಅಧೀನದ ಸಾಯಿ ಸ್ಪೋರ್ಟ್ಸ್ ಹಾಸ್ಟೆಲ್ಗೆ ಆಯ್ಕೆಯಾಗುತ್ತಾಳೆ. 2022ರಲ್ಲಿ ಅಂತರ್ ಕಾಲೇಜು ಹಾಕಿ ಟೂರ್ನಮೆಂಟ್ನಲ್ಲಿ, ಜಿಲ್ಲಾ ಮತ್ತು ರಾಜ್ಯ ತಂಡವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನ ಹಾಗೂ ಜೂನ್ 2023ರಲ್ಲಿ ಮಧ್ಯಪ್ರದೇಶದ ಗ್ವಾಲೀಯರ್ ಮತ್ತು ಒಡಿಸ್ಸಾದ ರೋರ್ಕೆಲಾದಲ್ಲಿ ನಡೆದ ಹಾಕಿ ಟೂರ್ನಮೆಂಟ್ನಲ್ಲಿ, ರಾಷ್ಟ್ರೀಯ ಜೂನಿಯರ್ ತಂಡವನ್ನು ಗೋಲ್ ಕೀಪರ್ ಆಗಿ ಪ್ರತಿನಿಧಿಸುತ್ತಾಳೆ. 2023 ಏಪ್ರಿಲ್ನಲ್ಲಿ, ದೆಹಲಿಯಲ್ಲಿ ನಡೆದ, ಖೇಲೋ ಇಂಡಿಯಾ ಹಾಕಿ ಕ್ಯಾಂಪಿಗೆ ಆಯ್ಕೆ ಮತ್ತು ಅದೇ ವರ್ಷ ಮಾರ್ಚ್ 19ರಂದು ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದ ಸೌತ್ಝೋನ್ ಹಾಕಿ ಟೂರ್ನಿಯಲ್ಲಿ ಛಾಂಪಿಯನ್ ಪಟ್ಟ ಪಡೆದ ತಂಡದ ಸದಸ್ಯೆಯಾಗಿದ್ದಳು ಶ್ರಾವ್ಯ.
ಮೂರು ಡಿಸೆಂಬರ್ 2023ರಲ್ಲಿ ಮೈಸೂರಿನಲ್ಲಿ ನಡೆದ, ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ಷಿಪ್ನಲ್ಲಿ, ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ ಮತ್ತು ತೃತಿಯ ಸ್ಥಾನ ಪಡೆಯುತ್ತಾಳೆ. 07/12/23ರಂದು ಗದಗ್ ನಲ್ಲಿ ನಡೆದ ರಾಜ್ಯ ಮಟ್ಟದ ಹಾಕಿ ಟೂರ್ನಮೆಂಟ್ನಲ್ಲಿ, ಛಾಂಪಿಯನ್ ಪಟ್ಟಕ್ಕೇರಿದ, ಕೊಡಗು ತಂಡದ ಗೋಲ್ ಕೀಪರ್ ಆಗಿ ಕಾರ್ಯ ನಿರ್ವಿಸುತ್ತಾಳೆ. 2024ರ ಜನವರಿಯಲ್ಲಿ ನಡೆದ ನ್ಯಾಷನಲ್ ಹಾಕಿ ಟೂರ್ನಮೆಂಟಿಗೆ, ಗೋಲ್ ಕೀಪರ್ ಆಗಿ ಆಯ್ಕೆಯಾಗುವ ಪಾಲೆರ ಶ್ರಾವ್ಯದೇವಯ್ಯ, 2024 ಸೆಪ್ಟೆಂಬರ್ನಲ್ಲಿ ಜಾರ್ಖಂಡ್ನ ರಾಂಚಿಯಲ್ಲಿ ನಡೆದ ನ್ಯಾಷನಲ್ ಹಾಕಿಗೆ, ಕರ್ನಾಟಕ ತಂಡಕ್ಕೆ ಆಯ್ಕೆಯಾಗುತ್ತಾಳೆ.
ಇವಿಷ್ಟೇ ಅಲ್ಲದೇ, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಥ್ರೋಬಾಲ್ ಆಟಗಾರ್ತಿಯಾಗಿರುವ ಪಾಲೆರ ಶ್ರಾವ್ಯ, ರಜಾ ದಿನಗಳಲ್ಲಿ ಪೋಷಕರೊಂದಿಗೆ ತನ್ನಿಷ್ಟದ ಕೃಷಿ ಕಾರ್ಯವನ್ನೂ ಮಾಡುತ್ತಾಳೆ. ತನ್ನ ದ್ವಿತೀಯ ಪಿಯುಸಿ ಶಿಕ್ಷಣವನ್ನು ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ, ಪ್ರಸ್ತುತ ತಮಿಳುನಾಡಿನ ತಿಪಟೂರಿನ, ಜಿವಿಜಿ ವಿಶ್ವವಿಧ್ಯನಿಲಯದಲ್ಲಿ, ಉಚಿತ ಪದವಿ ವ್ಯಾಸಂಗ ಮುಂದುವರೆಸಿದ್ದು, ಮುಂಬೈನ ಎನ್.ಸಿ.ಒ.ಇ(ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್)ನಲ್ಲಿ, ರಾಷ್ಟ್ರೀಯ ತರಬೇತುದಾರರಾದ, ಕಳಕಂಡ ರಶ್ಮಿಕುಶಾಲಪ್ಪ(ತಾಮನೆ: ಪಂದ್ಯಂಡ) ಹಾಗೂ ಪ್ರಮೋದ್ ಅವರ ಗರಡಿಯಲ್ಲಿ ತರಬೇತಿ ಪಡೆಯುತಿದ್ದಾಳೆ.
ಬಡತನ, ಅಸಾಯಕತೆ, ನೋವು, ಈ ಯಾವುದನ್ನೂ ಲೆಕ್ಕಿಸದೇ, ಜನಾಂಗೀಯ, ರಾಜಕೀಯ ಹಿನ್ನಲೆ, ಪ್ರಭಾವವಿಲ್ಲದೆ, ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿ ಅಪ್ಪ ಅಮ್ಮನ ಅವಿರತ ಶ್ರಮದ ಪ್ರತಿಫಲವಾಗಿ ಸಾಧನೆಯ ಮೆಟ್ಟಿಲೇರುತ್ತಿರುವ ಪಾಲೆರ ಶ್ರಾವ್ಯ ದೇವಯ್ಯ, ಕೊಡುಂಬಾಲೆ(ಅರಮನೆ ಪಾಲೆ) ಜನಾಂಗದಲ್ಲಿ ಬಹುಮುಖ ಪ್ರತಿಭೆಯನ್ನು ತೋರಿದ ಮತ್ತು ರಾಷ್ಟ್ರ ಮಟ್ಟಕ್ಕೆ ತಲುಪಿದ ಮೊಟ್ಟ ಮೊದಲ ಸಾಧಕಿ.
ಈಕೆಯ ಸಾಧನೆಯನ್ಜು ಗುರುತಿಸಿ, ಅರಮನೆ ಪಾಲೆ ಸಮಾಜ, ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ, ಡಾ. ಮಂಥರ್ಗೌಡ, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದ್ದಾರೆ.
ಮುಂದೆ ಮತ್ತಷ್ಟು, ಮಗದಷ್ಟು ಸಾಧನೆಗಳ ಮೂಲಕ ಭಾರತೀಯ ಹಾಕಿಯ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವ ಮೂಲಕ, ಅಳಿವಿನ ಅಂಚಿನಲ್ಲಿರುವ, ತನ್ನ ಜನಾಂಗಕ್ಕೆ, ಹಾಕಿಯ ತವರು, ಕ್ರೀಡಾ ಜಿಲ್ಲೆ ಎಂಬ ಹಿರಿಮೆಯನ್ನ ಹೊಂದಿರುವ ಕೊಡಗಿಗೂ, ತಾನು ಸಾಧಿಸಲಾಗದ ಕನಸ್ಸನ್ನ ಮಗಳ ರೂಪದಲ್ಲಿ ಈಡೇರಿಸಿಕೊಳ್ಳಲು ಹವಣಿಸುತ್ತಿರುವ ತಂದೆಯ ಹಂಬಲಕ್ಕೆ, ಅಪ್ಪನ ಸಾಧನೆಯ ಕನಸ್ಸಿನನಲ್ಲೇ ಕಮರಿಹೋದ ತಮ್ಮನ ಆತ್ಮಕ್ಕೆ, ಈ ಎಲ್ಲಾ ನೋವು ನಲಿವುಗಳನ್ನ ಮೂಕವಾಗಿ ಅನುಭವಿಸುತ್ತಿರುವ ತಾಯಿಯ ಸಾರ್ಥಕ ನಿಟ್ಟುಸಿರಿಗೆ, ಸಾಕ್ಷತ್ಕಾರವನ್ನು ನೀಡುವ ಶಕ್ತಿಯನ್ನು ಇಗ್ಗುತಪ್ಪ ಕಾವೇರಮ್ಮೆ ಕರುಣಿಸಲಿ ಎಂಬುದು ನಡುಬಾಡೆ ಬಳಗದ ನಿಷ್ಕಲ್ಮಶ ಹಾರೈಕೆ…