
ಮಡಿಕೇರಿ, ಏ. 25: ಹೊದ್ದೂರು ಆಮ್ಮಣಂಡ ಕುಟುಂಬದ ವತಿಯಿಂದ 11ನೇ ವರ್ಷದ ಅಮ್ಮಣಂಡ ಕಪ್ “ಐರಿ ಕೌಟುಂಬಿಕ ನಮ್ಮೆ 2025ಕ್ಕೆ ಚಾಲನೆ ನೀಡಲಾಯಿತು. ಅಮ್ಮಣಂಡ ಹಾಗೂ ಐರಿ ಜನಾಂಗ ಬಾಂಧವರು ಮೂರ್ನಾಡು ಕಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಬಾಚೆಟ್ಟರ ದಿ. ಲಾಲು ಮುದ್ದಯ್ಯ ಮೈದಾನ ಪ್ರವೇಶ ಮಾಡಿದರು. ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಪುರುಷರು ಹಾಗೂ ಮಹಿಳೆಯರು ವಾಲಗದೊಂದಿಗೆ ದುಡಿಕೊಟ್ಟ್, ತಳಿಯತಕ್ಕಿ ಬೊಳಚದೊಂದಿಗೆ ಹೆಜ್ಜೆ ಹಾಕುತ್ತಾ ಸ್ಥಳೀಯ ಮೈದಾನಕ್ಕೆ ಆಗಮಿಸಿದರು. ಅಮ್ಮಣಂಡ ಕುಟುಂಬದ ನಿಖಿಲ್ ನಿರಂಜನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕ್ರೀಡಾಕೂಟ ಹಬ್ಬವಾಗಿ ಆಚರಿಸುವಂತಾಗಲಿ
ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಸಂಪ್ರದಾಯ ಸಂಸ್ಕೃತಿಯ ಭಾಗವಾಗಿರುವ ಕ್ರಿಕೆಟ್ ಹಾಗೂ ಇತರೆ ಕ್ರೀಡೆಗಳನ್ನು ಕ್ರೀಡಾ ಹಬ್ಬವಾಗಿ ಆಚರಿಸುವಂತಾಗಲಿ. ಜನಾಂಗದೊಳಗಿನ ಒಗ್ಗಟ್ಟಿಗಾಗಿ ಸ್ಪರ್ಧೆ ಸಹಜವಾಗಿದ್ದರೂ ನಾವೆಲ್ಲರೂ ಒಂದೇ ಮನೆತನದವರೆಂಬ ಭಾವನೆಯಿಂದ ಒಂದಾಗಿ ಹಬ್ಬದ ರೀತಿಯಲ್ಲಿ ಕ್ರೀಡೆಯನ್ನು ಆಚರಿಸಿ ಸಂಭ್ರಮಿಸುವಂತಾಗಲಿ ಎಂದು ಶುಭ ಹಾರೈಸಿದರು.
ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬಿರ ಸರಸ್ವತಿ ಮಾತನಾಡುತ್ತಾ ಕುಟುಂಬದಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಗುಣಗಳನ್ನು ಕಲಿಸುವಂತಾಗಬೇಕು. ಹೆಣ್ಣು ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಾಣುವಂತಾಗಬೇಕು. ಕ್ರೀಡಾ ಕೂಟವನ್ನು ನಡೆಸುವಲ್ಲಿ ಜನಾಂಗ ಬಾಂಧವರ ಸಹಕಾರ ಅತ್ಯವಶ್ಯಕ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ವಹಿಸಿ ಮಾತನಾಡುತ್ತಾ ಜನಾಂಗದ ಒಗ್ಗಟ್ಟಿಗೆ ಕ್ರೀಡಾಕೂಟ ಅತ್ಯವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯೂ ಇಂಡಿಯಾ ಇನ್ಸೂರೆನ್ಸ್ ನಿವೃತ್ತ ಉದ್ಯೋಗಿ ಐರೀರ ಮನು ಅಯ್ಯಣ್ಣ, ನಿವೃತ್ತ ಎಎಸ್‌ಐ ಐಮಾಲಂಡ ಎ ಬಿದ್ದಪ್ಪ, ನಿವೃತ್ತ ಸಿಐಎಸ್ಎಫ್ ಸಬ್‌ಇನ್ಸ್‌ಪೆಕ್ಟರ್ ಬಾಳೆರ ಡಾಲು, ಅಮ್ಮಣಂಡ ಕುಟುಂಬದ ಹಿರಿಯರಾದ ಅಮ್ಮಣಂಡ ಸಾಬ ಮೊಣ್ಣಪ್ಪ, ಐಮಂಡ ಒಕ್ಕ ಪಟ್ಟೆದಾರ ‘ಐಮಂಡ ಭಾಸ್ಕರ್, ಐರಿ ಕ್ರಿಕೆಟ್ ಕಪ್‌ನ ಸ್ಥಾಪಕ ಅಧ್ಯಕ್ಷ ಐರೀರ ಜಾಬು ಪೂಣಚ್ಛ, ಕಾರ್ಯದರ್ಶಿ ಅಮ್ಮಣಂಡ ಯು, ಪೂಣಚ್ಚ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಮ್ಮಣಂಡ ದಿವ್ಯ ಚೇತನ, ಸಹನಾ ಸೋಮಣ್ಣ ಪ್ರಾರ್ಥಿಸಿದರು. ಮೂರ್ನಾಡು ವಿದ್ಯಾ ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕಿ ಸಹನಾ ಪೂಣಚ್ಛ ಸ್ವಾಗತಿಸಿದರು. ಅರಮೇರಿ ಎಸ್‌ಎಂಎಸ್ ಕಾಲೇಜಿನ ಉಪನ್ಯಾಸಕಿ ಅಮ್ಮಣಂಡ ನಿಶ್ಮಾ ನಿಖಿಲ್ ವಂದಿಸಿದರು. ಕೊಡವ ಭಾಷಿಕ ಸಮುದಾಯಗಳ ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಆಕಾಲಿಕವಾಗಿ ನಿಧನ ಹೊಂದಿದ್ದ ಅಮ್ಮಣಂಡ ಕುಟುಂಬದ ಸಂತೋಷ್ ತಿಮ್ಮಯ್ಯ ಅವರಿಗೆ ಸಂತಾಪ ಸೂಚಿಸಿ ಮೌನಾಚರಣೆ ಆಚರಿಸಲಾಯಿತು.
ಕ್ರಿಕೆಟ್ ನಲ್ಲಿ 5 ತಂಡಗಳ ಮುನ್ನಡೆ
ಮೊದಲ ದಿನ ಆರಂಭಗೊಂಡ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ 10 ತಂಡಗಳು ಸೆಣಸಾಟ ನಡೆಸಿದ್ದು, 5 ತಂಡಗಳು ಮುಂದಿನ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದೆ. ಇಂದು ಕ್ರಿಕೆಟ್‌ನೊಂದಿಗೆ ಸಾರ್ವಜನಿಕ ಪುರುಷ ಮಹಿಳೆಯರಿಗಾಗಿ ಹಗ್ಗಜಗ್ಗಾಟ ಹಾಗೂ ವಿವಿಧ ಕ್ರೀಡೆಗಳು ನಡೆಯಲಿವೆ ಎಂದು ಅಮ್ಮಣಂಡ ಕುಟುಂಬದ ನಿಖಿಲ್ ನಿರಂಜನ್ ಹಾಗೂ ದೀಪಕ್ ಪೂಣಚ್ಚ ತಿಳಿಸಿದ್ದಾರೆ.