ಸೋಮಾರಪೇಟೆ, ಡಿ.22: ಸೋಮವಾರಪೇಟೆ ಪಟ್ಟಣದ ಸಂಪಿಗೆ ಕಟ್ಟೆ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಯ ಮೇಲ್ಬಾಗದಲ್ಲಿ ಸಭೆ ಸಮಾರಂಭಗಳಿಗಾಗಿ ಮೀಸಲಾಗಿಟ್ಟ ಅಟಲ್ ಜೀ ಕನ್ನಡ ಭವನವನ್ನು ಇತರೆ ವಾಣಿಜ್ಯ ವಿಚಾರಗಳಿಗೆ ಈಗಾಗಲೇ ನೀಡುತ್ತಿರುವ ಪಟ್ಟಣ ಪಂಚಾಯತಿಯ ಕ್ರಮವನ್ನು ಖಂಡಿಸಿ ಕರನಾಟ ರಕ್ಷಣಾವೇದಿಕೆ(ನಾರಾಯಣಗೌಡ ಬಣ)ಯ ಜಿಲ್ಲಾಧ್ಯಕ್ಷ ದೀಪಕ್ ಅವರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
2019-20ನೇ ಸಾಲಿನಲ್ಲಿ ಶ್ರೀಮತಿ ನಳಿನಿಗಣೇಶ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಾನಪದ ಪರಿಷತ್ ಸಂಘಟನೆಯ ಮನವಿಯ ಮೇರೆಗೆ, ಈ ಸಭಾಂಗಣಕ್ಕೆ ಕನ್ನಡ ಭವನ ಎಂದು ನಾಮಕರಣ ಮಾಡಿ ಅಂದಿನ ಸಭೆ ನಿರ್ಣಯ ಮತ್ತು ಅಂಗೀಕಾರ ಮಾಡಲಾಗಿತ್ತು. ಇದು ಶ್ರೀಮತಿ ನಳಿನಿಗಣೇಶ್‌ರವರ ಸಾಮಾಜಿಕ ಕಾಳಜಿಗೆ ಮತ್ತು ಕನ್ನಡ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿತ್ತು. ಆದರೆ ಇಂದು ಕೆಲವು ಕನ್ನಡ ವಿರೋಧಿ ಶಕ್ತಿಗಳು ಈ ಸಭಾಭವನವನ್ನು ಪಟ್ಟಣ ಪಂಚಾಯಿತಿಗೆ ಹಣ ಮಾಡುವ ಉದ್ದೇಶದಿಂದ ವಾಣಿಜ್ಯ ಮಳಿಗೆಯಾಗಿ ಬದಲಾಯಿಸುತ್ತಿರುವುದು ದುರಂತವೇ ಸರಿ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ತಕ್ಷಣಕ್ಕೆ ದಿನಗಳಲ್ಲಿ ಈ ಸಭಾಂಗಣವನ್ನು ಸ್ವಚ್ಛ ಮತ್ತು ಸಂಪೂರ್ಣ ಅನುಕೂಲತೆಯನ್ನು ಕಲ್ಪಿಸಿ ಸಾರ್ವಜನಿಕ ಕಾರ್ಯಕ್ರಮಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು, ಇಲ್ಲವಾದರೆ ಸಂಘಟನೆಯ ವತಿಯಿಂದ ಪಟ್ಟಣ ಪಂಚಾಯಿತಿಯ ಮುಂದೆ ಆಹೋರಾತ್ರಿ ಧರಣಿ ಕೂರುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ನಗರಾಧ್ಯಕ್ಷರಾದ ಮಂಜುನಾಥ್, ಜಿಲ್ಲಾ ಸಂಚಾಲಕರಾದ ಶೇಖರ್ ತಾಕೇರಿ. ಸಾಮಾಜಿಕ ಜಾಲತಾಣದ ಸಂಚಾಲಕರಾದ ಮದನ್, ತಾಲ್ಲೂಕು ಸಂಚಾಲಕರಾದ ವಸಂತ್, ವಿಧ್ಯಾರ್ಥಿ ಘಟಕದ ಸಂಚಾಲಕರಾದ ಅಜಿತ್, ಪದಾಧಿಕಾರಿಗಳಾದ ಸುಮತಿ, ದಾಮೋದರ್, ಕಿರಣ್ ವೆಂಕಟೇಶ್ ಸೇರಿದಂತೆ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.