ಮಡಿಕೇರಿ ಮೇ,15(Nadubade News): ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ /ಸರಬರಾಜು ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಮಡಿಕೇರಿ ನಗರ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41)ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ.
ದಿನಾಂಕ 14-05-2025 ರಂದು ಮಡಿಕೇರಿ ಮಹದೇವಪೇಟೆಯ ಎ.ವಿ. ಶಾಲೆಯ ಕಡೆಯಿಂದ ಅಬ್ಬಿಫಾಲ್ಸ್‌ಗೆ ಹೋಗುವ ಜಂಕ್ಷನ್‌ನಲ್ಲಿ ಈತ ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ/ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೋಲೀಸರು ಈತನನ್ನು ಬಂಧಿಸಿ ಈತನಿಂದ 3.66 ಗ್ರಾಂ. ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಡಿಕೇರಿ ಡಿಎಸ್ಪಿ ಪಿ.ಎ. ಸೂರಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು, ಮಡಿಕೇರಿ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನ್ನಪೂರ್ಣ ಎಸ್. ಶಂಕರಗುಳ್ಳಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಪಿ ಶ್ಲಾಘನೆ : ಈ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.